ನನ್ನ ವಿದೇಶ ಪ್ರಯಾಣದ ತಯಾರಿ

ProfileImg
02 Feb '24
8 min read


image

ಮೊನ್ನೆ ಹೀಗೆ ಒಬ್ಬಳೇ ಕುಳಿತು ಕೊಂಡಾಗ ಹತ್ತು ಹನ್ನೆರಡು ವರ್ಷಗಳ ಹಿಂದಿನ ನೆನಪು ಕಣ್ಣ ಮುಂದೆ ತೇಲಿ ಬಂದಿತು.

ನನ್ನ ಮಗಳು ಮತ್ತು ಅಳಿಯ ಇಬ್ಬರೂ ಇರುವುದು ವಿದೇಶ ದಲ್ಲಿ . ಅವಳು ದಂತ ವೈದ್ಯೆ. ಅವಳ ಪತಿಯೂ ವೈದ್ಯರೇ. ಇಬ್ಬರೂ ವೈದ್ಯಕೀಯ ರಂಗದಲ್ಲಿಯೇ ಸೇವೆ ಸಲ್ಲಿಸುತ್ತಿದ್ದಾರೆ. ನನ್ನ ಮಗಳು ಚೊಚ್ಚಲ ಗರ್ಭಿಣಿಯಾಗಿದ್ದಳು. ಅವಳ ಹೆರಿಗೆಯ ಸಮಯದಲ್ಲಿ ನಾನು ಅಲ್ಲಿ ಇರಬೇಕಾಗಿದ್ದು ನನ್ನ ಕರ್ತವ್ಯ ವಾಗಿತ್ತು. ನನ್ನ ಉಳಿದ ಇಬ್ಬರು ಮಕ್ಕಳು ಇಲ್ಲಿಯೇ ಕಾಲೇಜು ವ್ಯಾಸಂಗ ಮಾಡುತ್ತಿದ್ದರಿಂದ ನನ್ನ ಪತಿ ಹಾಗೂ ನನ್ನ ಮಕ್ಕಳನ್ನು ಇಲ್ಲೇ ಬಿಟ್ಟು ನಾನು ಒಬ್ಬಳೇ ವಿದೇಶಕ್ಕೆ ಹೋಗಬೇಕಾಗಿತ್ತು. ನಾನು ಒಬ್ಬಳೇ ವಿಮಾನದಲ್ಲಿ ಹೇಗೆ ಹೋಗುವುದು ಎನ್ನುವದೇ ಒಂದು ಆತಂಕವಾಗಿತ್ತು. ನನಗೆ ದೇಶ ಸುತ್ತುವ ಆಸೆ ಕಡಿಮೆಯೇ. ಕೋಶ ಓದುವ ಆಸೆಗೆ ಮಾತ್ರ ಕೊನೆಯಿಲ್ಲ.
ಈ ಹೊತ್ತಿನಲ್ಲಿ ನನ್ನ ತಂದೆಯವರು ಹೇಳಿದ ಮಾತು ನೆನಪಿಗೆ ಬರುತ್ತದೆ. "ಕಾಶಿ ವಿಶ್ವನಾಥನನ್ನು ದರ್ಶನ ಮಾಡುವುದಕ್ಕಿಂತ ಅಂಗೈ ಯಲ್ಲಿನ ಲಿಂಗವೇ ಕಾಶಿ ವಿಶ್ವನಾಥ ಎಂದು ತಿಳಿಯಬೇಕು" , ಎಂದು ಹೇಳುತ್ತಿದ್ದರು.
ನಾನು ಅವರ ತರಹ ದೇಶ ಸುತ್ತುವ ಗೊಡವೆಯೇ ಬೇಡ ಎಂಬಂತೆ ಇದ್ದೆ. ಆದರೆ ಈಗ ಹೋಗಲೇಬೇಕಾದ ಅನಿವಾರ್ಯತೆ ಬಂದಿತ್ತು. ಅಂತೂ ಇಂತೂ ವಿದೇಶಕ್ಕೆ ಹೋಗುವುದು ದೃಢವಾಯಿತು. ನನ್ನ ಪತಿಯ ಸಮ್ಮತಿಯೊಂದಿಗೆ, ವಿಮಾನ ಪ್ರಯಾಣಕ್ಕೆ ಬೇಕಾದಂತಹ ಪಾಸಪೋರ್ಟ್, ವೀಸಾ ಇವೆಲ್ಲವನ್ನು ಮಾಡಲು ಪೂರ್ವ ತಯಾರಿ ಮಾಡಿಕೊಳ್ಳ ತೊಡಗಿದೆವು. ಎಲ್ಲ ಕಾಗದ ಪತ್ರ ಗಳ ಮತ್ತು ದಾಖಲೆಗಳ ಜೊತೆ ಅರ್ಜಿ ಭರ್ತಿ ಮಾಡಿ ಪಾಸಪೋರ್ಟ ಆಫೀಸಿಗೆ ಸಲ್ಲಿಸಿದೆವು.

ಸ್ವಲ್ಪ ದಿನಗಳ ನಂತರ ವೆರಿಫಿಕೇಶನ ಸಲುವಾಗಿ ಪೋಲಿಸರು ನಮ್ಮ ಮನೆಗೆ ಬಂದು, ಎಲ್ಲ ತರಹದ ಚೌಕಾಸಿ ಮಾಡಿದರು. ಪೋಲಿಸರನ್ನು ನೋಡಿದರೆ ಯಾರಿಗೆ ತಾನೇ ಭಯವಾಗುವದಿಲ್ಲ, ಅಂತಹದರಲ್ಲಿ ಅವರು ಮನೆಗೇ ಬಂದರೆ ಹೇಗಾಗಿರಬೇಡ !! ನಮ್ಮ ಸುತ್ತ ಮುತ್ತ ಮನೆಗಳು ಇರುವದರಿಂದ, ಎಲ್ಲರೂ ಹೊರಗೆ ಬಂದು ಏನಾಯಿತು ನಮ್ಮ ಮನೆಯಲ್ಲಿ ಅನ್ನುವ ತರಹ ಗಾಬರಿಯಿಂದ ನೋಡತೋಡಗಿದರು. ಪಾಸಪೋರ್ಟ ಸಲುವಾಗಿ ಚೌಕಾಸಿ ಮಾಡಲು ಬಂದಿದ್ದಾರೆಂದು ತಿಳಿದು ಸುಮ್ಮನಾದರು. ಪೋಲಿಸರು ಅಕ್ಕ ಪಕ್ಕ ಮನೆಯವರ ಹತ್ತಿರ ನಮ್ಮ ಬಗ್ಗೆ ವಿಚಾರಿಸಲಾಗಿ ಅವರಿಂದ ಬಂದ ಒಳ್ಳೆಯ ಅಭಿಪ್ರಾಯ ತಿಳಿದು ಒಂದಿಬ್ಬರ ಜನರಿಂದ ಸಾಕ್ಷ್ಯಿ ಸಹಿ ಮಾಡಿಸಿಕೊಂಡು ಹೋದರು.
ನಮ್ಮ ಮೇಲೆ ಯಾವುದೇ ತರಹ ಕ್ರಿಮಿನಲ್ ಕೇಸ್‌ಗಳು ಇರಬಾರದು ಎಂಬ ನಿಯಮಗಳಿವೆ. ಒಟ್ಟಾರೆ ಸತ್ಪ್ರಜೆಯಾಗಿರಬೇಕು. ಎಲ್ಲವೂ ಸರಿಯಾಗಿದ್ದರೆ ಮಾತ್ರ ಪಾಸಪೋರ್ಟ ಸಿಗುತ್ತದೆ. ಈಗೆಲ್ಲಾ ಪೋಲಿಸರು ಮನೆಗಳಿಗೆ ಹೋಗುವದಿಲ್ಲ. ಅರ್ಜಿದಾರರ ನ್ನೇ ಚೌಕಾಸಿ ಮಾಡಲು ಇಬ್ಬರು ಸಾಕ್ಷಿಗಳ ಜೊತೆ ಪೋಲಿಸ್ ಸ್ಟೇಶನ್ ಗೆ ಕರೆಯುತ್ತಾರೆ.
ಇದೆಲ್ಲ ಮುಗಿದ ಸ್ವಲ್ಪ ದಿನಗಳಲ್ಲಿ ಪಾಸಪೋರ್ಟ ಬಂದಿತು. ಆದರೆ ಅದರಲ್ಲಿ ನನ್ನ ಅಡ್ಡ ಹೆಸರಿನಲ್ಲಿ ಒಂದೇ ಒಂದು ಅಕ್ಷರ ತಪ್ಪಾಗಿತ್ತು. ನಮ್ಮ ಅಳಿಯಂದಿರು ಇಂತಹ ವಿಷಯದಲ್ಲಿ ಬಹಳ ಎಚ್ಚರಿಕೆಯಿಂದ ಇರುವಂತಹ ವ್ಯಕ್ತಿ. ನನಗೆ ಮುಂದೆ ವಿಮಾನ ನಿಲ್ದಾಣದಲ್ಲಿ ವೆರಿಫಿಕೇಶನ ಸಮಯದಲ್ಲಿ ಯಾವುದೇ ತರಹದ ತೊಂದರೆ ಆಗಬಾರದು. ಮೊದಲೇ ಒಬ್ಬಳೇ ಪ್ರಯಾಣ ಮಾಡುತ್ತಿದ್ದೇನೆ ಎಂದು, ಹೀಗಾಗಿ ಎರಡನೆಯ ಸಲ ಆವರ ಸಲಹೆಯ ಮೇರೆಗೆ ಮತ್ತೊಮ್ಮೆ ಅರ್ಜಿ ಹಾಕಲು ತಯಾರಿ ಮಾಡಿಕೊಂಡೆವು. ಎಲ್ಲ ವಿಧಾನವನ್ನೂ ಮೊದಲಿನಿಂದ ಪ್ರಾರಂಭ ಮಾಡಿದೆವು. ಸಾಕಪ್ಪ ಸಾಕು ಎನಿಸಿಬಿಟ್ಟಿತು.
ಎಲ್ಲ ಮುಗಿದ ಬಳಿಕ ಅಂತೂ ಇಂತೂ ಕೆಲ ದಿನಗಳ
ನಂತರ  ಪಾಸಪೋರ್ಟ   ಬಂದಿತು . ಆಗ ಸ್ವಲ್ಪ  ನೆಮ್ಮದಿಯಿಂದ  ಉಸಿರಾಡಿಸುವ ಹಾಗೆ ಆಯಿತು . 
       ಇನ್ನು  ಮುಂದೆ ವೀಸಾ ಸಲುವಾಗಿ ಅರ್ಜಿ  ಸಲ್ಲಿಸಬೇಕಿತ್ತು  . 
ಅದರ ಸಲುವಾಗಿ ,  ಬ್ಯಾಂಕ ಪಾಸಬುಕ್   , ಜನನ ಪ್ರಮಾಣ ಪತ್ರದ   ಮತ್ತು ನನ್ನ  ಪತಿಯ ಸಮ್ಮತಿ  ಪತ್ರ  ಮತ್ತು ನನ್ನದೊಂದು ಪತ್ರ  , ಅದರಲ್ಲಿ ನಮ್ಮ  ಸ್ವಂತ  ಮನೆ , ಆಸ್ತಿ , ಗಂಡ ಮತ್ತು ಮಕ್ಕಳು    ಎಲ್ಲವೂ  ಇಲ್ಲೇ  ಇದೆ ,  ನಾನು ಕೇವಲ ಆರು ತಿಂಗಳ  ವರೆಗೆ ಮಾತ್ರ  ವಿದೇಶದಲ್ಲಿ  ಇದ್ದು ಮರಳಿ ನಮ್ಮ  ದೇಶಕ್ಕೆ  ಬರುತ್ತೇನೆ   ಎಂದು  ಬರೆದು  ಸಹಿ ಹಾಕಬೇಕು .ಯಾಕೆಂದರೆ ನಾವು ವಿಸಿಟರ್  ವೀಸಾ  (Visitor  visa) ಆಧಾರದ  ಮೇಲೆ   ಹೋಗುತ್ತಿರುತ್ತೆವೆ . ಈ ತರಹದ ಕಾಗದ  ಪತ್ರಗಳ ದಾಖಲೆಗಳನ್ನು  ನಕಲು ಮಾಡಿ ನೋಟರಿ ಕಡೆಯಿಂದ   ಅಫಿಡವಿಟ್  ಮಾಡಿಸಿ  , ಮೂಲ ದಾಖಲೆಗಳ ಒಂದು ಸೆಟ್  ,  ನಕಲು ದಾಖಲೆಗಳ  ಒಂದು ಸೆಟ್  ಹೀಗೆ ಎರಡೆರಡು ಸೆಟ್ ಮಾಡಿ  ಅಚ್ಚು
ಕಟ್ಟಾಗಿ  ಜೋಡಿಸಿ ಅರ್ಜಿಯ ಜೊತೆ ಇವನ್ನೆಲ್ಲ ಲಗತ್ತಿಸಿ  ಇಟ್ಟುಕೊಂಡಿದ್ದೆವು . ಪಾಸಪೋರ್ಟನ್ನು ಮರೆಯದೇ ಇಟ್ಟುಕೊಳ್ಳಬೇಕು  . ಯಾಕೆಂದರೆ ಅದರ  ಒಳಗೆ  ವೀಸಾ ಅಪ್ರೂವ್ ಆದ ಸೀಲ್  ಹಾಕುತ್ತಾರೆ  . ನಮ್ಮ  ಅಳಿಯ ಇ-ಮೇಲ್  ಮುಖಾಂತರ  ಕಳಹಿಸಿದ ಸ್ಪಾನ್ಸರ್  ಶಿಪ್  ಕಾಗದ  ಪತ್ರಗಳು ಅದರೊಂದಿಗಿದ್ದವು .  ಎಲ್ಲ ಸೇರಿ  ಒಂದು ದೊಡ್ಡ ಫೈಲೇ ಆಗಿತ್ತು .  
   ವಿದೇಶಕ್ಕೆ  ತೆರಳುವ  ಮೊದಲು  ನಿಯಮಗಳಿಗೆ ಅನುಸಾರವಾಗಿ   ಇವನ್ನೆಲ್ಲ   ವೀಸಾ  ಕಚೇರಿಗೆ ಸಲ್ಲಿಸುವ ವಿಧಾನ  ಅತ್ಯಂತ   ಮುಖ್ಯವಾಗಿರುತ್ತದೆ .
        ಬೆಂಗಳೂರಿನ ವೀಸಾ ಕಚೇರಿಗೆ ಆನ್‌ಲೈನ್  ಮುಖಾಂತರ   ಅರ್ಜಿ ಸಲ್ಲಿಸಿ    ನಿಗದಿತ  ದಿನಾಂಕ  ವನ್ನು  ಕೇಳಿಕೊಂಡಿದ್ದೆವು .  
        ಮುಂದೆ  ಸ್ವಲ್ಪ ದಿನಗಳಲ್ಲಿ ವೀಸಾ  ಕಚೇರಿಯಿಂದ  ನಮಗೆ  ನಿಗದಿತ  ದಿನಾಂಕ  ಗೊತ್ತು ಪಡಿಸಿ ಆ ದಿನದಂದು   ನಮಗೆ ಬೆಂಗಳೂರಿನ  ವೀಸಾ ಕಚೇರಿಗೆ ಬರಲು ತಿಳಿಸಿದರು . 
        ಇಲ್ಲಿಂದ ಹೋಗುವಾಗ ಎಲ್ಲ  ಕಾಗದ ಪತ್ರಗಳ ದಾಖಲೆಗಳನ್ನು  ಮತ್ತು    ನಾಲ್ಕೈದು  ಫೋಟೋ  ಪ್ರತಿಗಳನ್ನು  ತೆಗೆದುಕೊಂಡು ಹೋಗಬೇಕಾಗಿತ್ತು . ನಾವು ಯಾವ ದೇಶಕ್ಕೆ  ಹೊರಟಿರುತ್ತೇವೊ ಆ ದೇಶದ ನಿಯಮಗಳ  ಅನ್ವಯ   ಫೋಟೊ  ಸ್ಟುಡಿಯೊಕ್ಕೆ  ಹೋಗಿ  ವೀಸಾ ಸಲುವಾಗಿ ಅಂತ ಹೇಳಿ ಅಷ್ಟೇ  ಅಳತೆಯ  ಫೋಟೊ ತೆಗೆಸಿಕೊಳ್ಳಬೇಕು .  ಅದೇ ಪ್ರಕಾರ  ನಾನು ಫೋಟೊ ತೆಗೆಸಿಕೊಂಡೆನು  . 
           ಆವರು ಗೊತ್ತು ಪಡಿಸಿದ ನಿಗದಿತ  ದಿವಸ ಬೆಂಗಳೂರಿಗೆ  ನನ್ನ  ಮಕ್ಕಳ ಜೊತೆ ಹೋದೆ  .  ಅಲ್ಲಿ ನಮ್ಮ  ಸಂಬಂಧಿಕರು ಯಾರು ಇರಲಿಲ್ಲ  . ಹಾಗಾಗಿ  ನನ್ನ  ಅಣ್ಣ ಅವರು ತಮಗೆ   ಪರಿಚಯದ  ಒಂದು ಅತಿಥಿ  ಗೃಹ ದಲ್ಲಿ  ಇರಲು ವ್ಯವಸ್ಥೆ ಮಾಡಿದ್ದರು . ಇಂತಹ ಅನೇಕ  ಪರಿಸ್ಥಿತಿಗಳಲ್ಲಿ  ನನ್ನ ಅಣ್ಣಂದಿರಿಂದ ಬಹಳ ಸಹಾಯವಾಗಿದೆ . ಅವರು ಮಾಡಿದ  ಉಪಕಾರಗಳನ್ನು ನಾನೆಂದೂ   ಸ್ಮರಿಸದೆ  ಇರಲಾರೆ . ಇದರಿಂದ ನಮಗೆ ತುಂಬಾ ಅನುಕೂಲವಾಯಿತು . 
          ಬೆಳಗಿನ  ಉಪಹಾರ  ಮಾಡಿ ವೀಸಾ ಕಚೇರಿಗೆ ಹೋದೆವು . ಹೊರಗಡೆ  ಕುರ್ಚಿ ಗಳ ಮೇಲೆ ಸ್ವಲ್ಪ  ಜನರು  ಫೈಲುಗಳೊಂದಿಗೆ  ಶಿಸ್ತಿನಿಂದ ತಮ್ಮ  ಸರದಿಗಾಗಿ ಕಾಯುತ್ತ  ಕುಳಿತಿದ್ದರು  .  ಅದೆಲ್ಲ  ನೋಡಲು  ಉದ್ಯೋಗಾಂಕ್ಷಿಗಳು ಇಂಟರ ವ್ಯೂವ   ಕೊಡಲು ಬಂದಂತೆ  ಅನಿಸಿತು . ವೀಸಾ ಸಲುವಾಗಿ  ಮೊದಲೇ ನಾವು  ಆನ್‌ಲೈನ್  ಮುಖಾಂತರ  ವೇಳೆಯನ್ನು  ನಿಗದಿಪಡಿಸಿದ್ದರಿಂದ   ಅದೇ ವೇಳೆಗೆ  ಒಳಗೆ ಕರೆದರು .  ನಮಗೂ ಸ್ವಲ್ಪ  ಆತಂಕ ಗೊಳಗಾದಂತೆ  ಭಾಸವಾಗತೊಡಗಿತು.  ಏನು ಪ್ರಶ್ನೆ  ಕೇಳುತ್ತಾರೊ ಎಂಬ  ಗೊಂದಲ ಶುರುವಾಯಿತು .
        ನಾಲ್ಕೈದು  ಅಧಿಕಾರಿಗಳು   ಸಾಲಾಗಿ   ತಮ್ಮ  ತಮ್ಮ  ಸೀಟಿನಲ್ಲಿ  ಆಸೀನರಾಗಿದ್ದರು . ನಮ್ಮ  ಫೈಲ  ನ್ನು  ಒಬ್ಬೊಬ್ಬರೇ ವೆರಿಫಿಕೇಶನ  ಮಾಡಿದರು . ಎಲ್ಲ ದಾಖಲೆಗಳು ಸರಿಯಾಗಿದ್ದವು .  ಆದರೆ  ನಾನು  ಇಲ್ಲಿಂದ  ತೆಗೆದುಕೊಂಡು ಹೋಗಿದ್ದ  ನನ್ನ  ಫೋಟೋಗಳು  ಸರಿಯಾಗಿಲ್ಲ  ಎಂದರು. ಅವರ ಪ್ರಕಾರ ಎಲ್ಲಾ ಸರಿಯಾಗಿರಬೇಕು . ಅಂದರೆ ಅವರ ನಿಯಮಾನುಸಾರ   ಪಾಸಪೋರ್ಟ   ಸೈಜ  ಫೋಟೋದಲ್ಲಿ ನನ್ನ  ಮುಖ ಇನ್ನೂ  ದೊಡ್ಡದಾಗಿ  ಕಾಣಿಸಬೇಕಾಗಿತ್ತಂತೆ . 
      ಅವರ ಕಚೇರಿಯಲ್ಲಿಯೇ ಮತ್ತೊಮ್ಮೆ  ನನ್ನ  ಫೋಟೋ ತೆಗೆಸಿ ಕೊಂಡು , ಅವುಗಳನ್ನು   ನಮ್ಮ  ಫೈಲ ಜೊತೆ ಲಗತ್ತಿಸಿ  ಅಲ್ಲಿದ್ದ  ಅಧಿಕಾರಿಗೆ  ಒಪ್ಪಿಸಿದೆವು . ವೀಸಾ ಫೀ ಯನ್ನು  ಕೌಂಟರನಲ್ಲಿ  ಭರ್ತಿ  ಮಾಡಿ ,ಎಲ್ಲವೂ ಸರಿಯಾಗಿ ಆಯಿತು ,  ಎಂದು  ನಿರಾಳವಾಗಿ ವಾಪಸ್ಸು  ಬಂದೆವು .  
          ಮುಂದೆ ಸ್ವಲ್ಪೇ  ದಿನಗಳಲ್ಲಿ ವೀಸಾನೂ ಬಂದಿತು . ಆರು ತಿಂಗಳ ವರೆಗೆ  ನಾನು ವಿದೇಶದಲ್ಲಿ  ಇರಬಹುದು ಎಂಬ  ಮುದ್ರೆ ಯೊಂದಿಗೆ  ಅಪ್ರೂವ್  ಆಗಿ ಬಂದಿತು . 
        ಒಂದೆಡೆ  ಮಗಳ ಹತ್ತಿರ  ಹೋಗುತ್ತೇನೆಂಬ  ಖುಷಿ , ಮತ್ತೊಂದೆಡೆ ಒಬ್ಬಳೇ  ವಿಮಾನ ದಲ್ಲಿ ಹೇಗೆ  ಹೋಗುವುದು  ಎಂಬ ಆತಂಕ . 
              ಹುಟ್ಟುವ  ಮಗುವಿಗಾಗಿ  ನನಗೆ  ತೋಚಿದಷ್ಟು ಬಟ್ಟೆಬರೆ  ತೆಗೆದುಕೊಂಡೆ  . ಕಾಟನ್ ಬಟ್ಟೆ ಯಿಂದ  ಚಿಕ್ಕ  ಚಿಕ್ಕ  ದುಬಟಿಗಳ ನ್ನು ಮತ್ತು ನ್ಯಾಪಿಗಳನ್ನು  ಹೊಲಿಸಿ ತಯಾರು ಮಾಡಿಕೊಂಡೆ . ಇಗೆಲ್ಲಾ ಮಗುವಿಗೆ ಡಿಸ್ಪೊಜೆಬಲ್  ನ್ಯಾಪಿನೇ   ಹಾಕುತ್ತಾರೆ . ಒಂದೇ ಸವನೆ ಆ ತರಹ ನ್ಯಾಪಿಗಳನ್ನು  ಹಾಕುವದರಿಂದ  ನ್ಯಾಪಿ  ರೈಷ  ಆಗಿ  ಮಗುವಿಗೆ ಬಹಳ ಹಿಂಸೆಯಾಗುತ್ತದೆ  . ಆದ್ದರಿಂದ  ಈ ತರಹದ ನ್ಯಾಪಿಗಳನ್ನು ಸ್ವಲ್ಪ   ತೆಗೆದಿಟ್ಟುಕೊಂಡಿದ್ದೆ .  ನಡುನಡುವೆ  ಇಂತಹ  ಬಟ್ಟೆಯ  ನ್ಯಾಪಿಗಳನ್ನು  ಉಪಯೋಗ  ಮಾಡುವದರಿಂದ ಮಗುವಿಗೆ ಆರಾಮ ಅನಿಸುತ್ತದೆ .  ಮೊದಲಿನ ಕಾಲದಲ್ಲಿ   ಇವುಗಳನ್ನೇ  ಉಪಯೋಗಿಸುತ್ತಿದ್ದರು . 
     ಬಾಣಂತಿ ಸಲುವಾಗಿ  ಬಜಿ ಬೇರಿನ  ಪುಡಿ , ಸಾಂಬ್ರಾಣಿ  ಪುಡಿ ,  ಇವಲ್ಲದೆ  , ಒಣಹಣ್ಣುಗಳು (Dry fruits) ಉತ್ತತ್ತಿ  ,  ಬೆಲ್ಲ  , ತುಪ್ಪ ಮತ್ತು ಅಂಟು   ಇವೆಲ್ಲಾ  ಸೇರಿಸಿ ಪೌಷ್ಟಿದಾಯಕ ಸಿಹಿ ಉಂಡೆಗಳನ್ನು  ಮಾಡಿಟ್ಟುಕೊಂಡಿದ್ದೆ  .ಇದಲ್ಲದೇ  ಮತ್ತೆ  ಕೆಲವು  ಬೇಕಾದಂತಹ  ಸಾಮಾನು  ತೆಗೆದುಕೊಂಡಿದ್ದೆ .
         ನನಗೆ ವಿಮಾನದಲ್ಲಿ ಒಬ್ಬಳೇ  ಪ್ರಯಾಣ  ಮಾಡಲು  ಸ್ವಲ್ಪ  ಆತಂಕಪಡುತ್ತೇನೆ   ಎನ್ನುವದು ನನ್ನ  ಅಳಿಯ ಮತ್ತು  ಮಗಳಿಗೆ ಗೊತ್ತಿತ್ತು  . ಹೀಗಾಗಿ ಅವರು ವಿದೇಶದಲ್ಲಿದ್ದ ತಮ್ಮ ಸ್ನೇಹಿತರ  ಬಳಗಕ್ಕೆಲ್ಲ  ಫೋನಿನ  ಮುಖಾಂತರ  ವಿಚಾರಿಸಿ ,ಅವರಲ್ಲಿ  ಒಬ್ಬ  ಸ್ನೇಹಿತ  ದಂಪತಿಗಳು ಭಾರತ ದಿಂದ ಮರಳಿ ತಮ್ಮ  ದೇಶಕ್ಕೆ  ಹೋಗುವ ದಿನಾಂಕವನ್ನು ತಿಳಿದುಕೊಂಡು  , ನನ್ನ ಸಲುವಾಗಿ  ಅದೇ  ದಿನಾಂಕದಂದು ,  ಅದೇ ವಿಮಾನದಲ್ಲಿ ,   ಟಿಕೆಟನ್ನು  ಬುಕ್ ಮಾಡಿ ಸೀಟು ಕಾಯ್ದಿರಿಸಿದ್ದರು . ಅವರು ಜೊತೆಗಿದ್ದರೆ  ನನಗೂ ಸ್ವಲ್ಪ  ಆತಂಕ ಕಡಿಮೆ ಆಗುತ್ತದೆ ಎಂಬ ಯೋಚನೆಯಿಂದ  ..ಹೀಗಾಗಿ  ಅವರ ಕಾಳಜಿಗೊಂದು   ಹ್ಯಾಟಸ್ ಆಫ್ (hats off ) ಹೇಳಲೇಬೇಕು.
      ವಿದೇಶಕ್ಕೆ  ಹೋದ  ನಂತರ  ಅವರ ಮನೆಯ  ದೂರದರ್ಶನ (ಟಿ . ವಿ .) ದಲ್ಲಿ ಕನ್ನಡ   ಚಾನೆಲ್  ಬರುವದಿಲ್ಲವೆಂದು  ತಿಳಿದು , ಇಲ್ಲಿಂದಲೇ ಹಳೇಯ  ಕನ್ನಡ  ಚಿತ್ರ ಗೀತೆಗಳ ಮತ್ತು  ಭಾವಗೀತೆಗಳ   ಸಿ . ಡಿ . ಒಂದನ್ನು ಮಾಡಿಸಿಕೊಂಡು ತರಲು  ನನಗೆ ಹೇಳಿದ್ದರು  . ಅಲ್ಲಿ  ನನಗೆ  ಬೇಕಾದಾಗ  ಆ ಹಾಡುಗಳನ್ನು  ಕೇಳಬಹುದು ಎಂಬುದು ಅವರ  ಅಭಿಪ್ರಾಯ  ವಾಗಿತ್ತು  . ನನಗೆ ಹಳೆಯ ಚಿತ್ರ  ಗೀತೆಗಳೆಂದರೆ  ಬಹಳ ಇಷ್ಟವೆಂದು 
ಅವರಿಗೆ ಗೊತ್ತಿತ್ತು  . ಆ ಪ್ರಕಾರ   ನಾನು ಒಂದು ಸಿ . ಡಿ . ರೆಡಿ ಮಾಡಿಟ್ಟುಕೊಂಡೆ . ಇದಲ್ಲದೇ  ನನಗೆ ಚಿಕ್ಕ ವಯಸ್ಸಿನಿಂದ  ಓದುವ ಹವ್ಯಾಸ  ವಿರುವದರಿಂದ  ಕೆಲವು  ಪುಸ್ತಕ ಗಳನ್ನು  ತೆಗೆದುಕೊಂಡು ಬರಲು ಸೂಚಿಸಿದ್ದರು  . ಹೀಗಾಗಿ  ಶಿವರಾಮ  ಕಾರಂತರ  ,"ಮರಳಿ ಮಣ್ಣಿಗೆ" ,  " ಮೂಕಜ್ಜಿಯ ಕನಸುಗಳು ,  "ಎಸ್ . ಷಡಕ್ಷರಿ ಅವರ " ಕ್ಷಣ ಹೊತ್ತು  ಅಣಿಮುತ್ತು" ಹೀಗೆ  ಮತ್ತೆ  ಕೆಲವು ಕನ್ನಡದ ಕಥೆ , ಕಾದಂಬರಿಗಳನ್ನು  ತೆಗೆದಿಟ್ಟುಕೊಂಡೆ.
ಬಿಡುವಿನ  ಸಮಯದಲ್ಲಿ   ಓದಲು. ಮತ್ತೊಂದು  ಅವರು ಕೊಟ್ಟ  ಮಹತ್ವದ ಸಲಹೆ ಏನೆಂದರೆ  , ಒಂದು ಚಿಕ್ಕ  ಡೈರಿ  ಯಲ್ಲಿ ಮಗಳ ಮತ್ತು  ಅಳಿಯ ಇಬ್ಬರ  ಫೋನ  ನಂಬರಗಳಲ್ಲದೆ ಅವುಗಳ  ಜೊತೆ ಇಲ್ಲಿನ  ಮನೆಯ ಸದಸ್ಯರ ಫೋನ   ನಂಬರಗಳನ್ನು  ಬರೆದಿಟ್ಟು ಕೊಳ್ಳಲು ಹೇಳಿದ್ದರು  .  ಯಾಕೆಂದರೆ  ಆಕಸ್ಮಾತ್ತಾಗಿ  ಫೋನು ಕಳೆದುಹೋದರೆ  ..ಡೈರಿಯಲ್ಲಿದ್ದ ನಂಬರಗಳನ್ನು  ನೋಡಿ ವಿಮಾನ  ನಿಲ್ದಾಣದಲ್ಲಿ  ಫೋನ ಮಾಡಲು ಬರುತ್ತದೆ ಎಂಬ  ಮುಂಜಾಗ್ರತೆ ಕ್ರಮವೆಂದು ಇದನ್ನೆಲ್ಲ  ಹೇಳಿದ್ದರು . ಇಲ್ಲವಾದಲ್ಲಿ   ಗಲಿಬಿಲಿ ಗೊಳಗಾಗಬೇಕಾದ ಪ್ರಸಂಗ  ಬರುವ ಸಾಧ್ಯತೆ ಇರುತ್ತದೆ  . ವಿದೇಶಕ್ಕೆ ಹೋಗುವದಕ್ಕಿಂತ  ಮೊದಲು  ಅವಶ್ಯಕತೆಗೆ ಬೇಕಾಗುವಷ್ಟು  ದುಡ್ಡನ್ನು(ನಮ್ಮ ದೇಶದ  ಕರೆನ್ಸಿ)  ವಿದೇಶದ ಕರೆನ್ಸಿಯಾಗಿ ಬದಲಾಯಿಸಿಕೊಂಡು  ಇಟ್ಟುಕೊಳ್ಳಬೇಕಾಗುತ್ತದೆ .
       ಈ  ತರಹದ ವಿಚಾರ  ಮಾಡುವುದರಲ್ಲಿ  ಆಗಲಿ , ಕಾಳಜಿ  ಮಾಡುವುದರಲ್ಲಿ  ಆಗಲಿ , ಅಳಿಯ ಮತ್ತು  ಮಗಳು ಇಬ್ಬರೂ  ಒಂದೇನೆ .  ಪ್ರತಿಯೊಂದರಲ್ಲಿಯೂ ಮುಂದಾಲೋಚನೆ ಮಾಡುವ ವರು  .
           ನನಗೆ  ಯಾರಾದರೂ ಇಂಗ್ಲೀಷ್ ಭಾಷೆ ಮಾತನಾಡಿದರೆ  ಎಲ್ಲವೂ  ತಿಳಿಯುತ್ತಿತ್ತು .  ಆದರೆ ಇಂಗ್ಲೀಷನಲ್ಲಿ   ಸರಾಗವಾಗಿ ಮಾತನಾಡಲು ಬರುತ್ತಿದ್ದಿಲ್ಲ  . ಆ ಭಾಷೆಯ  ಮೇಲೆ  ಅಷ್ಟು  ಹಿಡಿತವಿ ದ್ದಿಲ್ಲ.
               "ಕನ್ನಡದಲ್ಲಿ  ಬಹಿರ್ಮುಖಿ , ಇಂಗ್ಲೀಷಿನಲ್ಲಿ  ಅಂತರ್ಮುಖಿ  ." ಅನ್ನುವ  ತರಹ ನನ್ನ  ಸ್ಥಿತಿ  ಇತ್ತು  . ಹಾಗಾಗಿ ವಿಮಾನದಲ್ಲಿ  , ವಿಮಾನ  ನಿಲ್ದಾಣದಲ್ಲಿ  ಇಂಗ್ಲೀಷ್ ಭಾಷೆಯೇ ಹೆಚ್ಚಾಗಿ  ಬಳಕೆಯಲ್ಲಿರುವದು  ಸರ್ವೇ ಸಾಮಾನ್ಯ  . ಅದರಲ್ಲೂ  ವಿದೇಶಿಯರು ಮಾತನಾಡುವ  ಇಂಗ್ಲೀಷ್  ಭಾಷೆಯ  ಶೈಲಿಯೇ ಬೇರೆ , ಏನೂ ಅರ್ಥ ವಾಗುವದಿಲ್ಲ  .
           ಹೀಗಾಗಿ  ನನ್ನ   ಮಗಳು ಒಂದೆರಡು ಪುಟಗಳಲ್ಲಿ  ಎಲ್ಲಾ  ವಿವರಣೆ ಸಹಿತ  ಸಲಹೆ ಸೂಚನೆಗಳನ್ನು ಬರೆದು ಇ-ಮೇಲ್  ಮುಖಾಂತರ  ನನಗೆ  ವಿದೇಶಕ್ಕೆ  ಹೋಗುವದಕ್ಕಿಂತ  ಮುಂಚೆಯೇ ಕಳುಹಿಸಿದ್ದಳು  . ಕಂಪ್ಯೂಟರ್  ಸೆಂಟರ್ ಗೆ ಹೋಗಿ  ನಾವು ಅದರ  ಪ್ರಿಂಟ್  ಔಟ್‌ ತೆಗೆದುಕೊಂಡೆವು.


        ಅದರಲ್ಲಿ  ಬೆಂಗಳೂರಿನ  ಕೆಂಪೇಗೌಡ  ವಿಮಾನ  ನಿಲ್ದಾಣದಿಂದ  ಹಿಡಿದು ಲಂಡನ್‌ನ  "ಹಿಥ್ರೋ  " ವಿಮಾನ  ನಿಲ್ದಾಣದ  ವರೆಗೆ , ನಾನು ಎಲ್ಲಿ  ಯಾವ  ತರಹ  ಇರಬೇಕು , ನಾನು ಯಾವ  ಪ್ರಶ್ನೆಗೆ ಏನು  ಉತ್ತರ  ಕೊಡಬೇಕು  .ಇಮಿ ಗ್ರೇಶನ್ನನಲ್ಲಿ  ಏನಾದರೂ ತಪಾಸಣೆ ಮಾಡಿದರೆ ನಾನು ಯಾವ ರೀತಿ  ಸ್ಪಂದಿಸಬೇಕು , ಮೇನ್ ಲಗ್ಗೆಜನಲ್ಲಿ ಏನೇನು  ಇಡಬೇಕು . ಹ್ಯಾಂಡ್ ಕ್ಯಾರಿಯಲ್ಲಿ  ಏನೇನು ಸಾಮಾನುಗಳನ್ನು  ಇಟ್ಟುಕೊಳ್ಳಬೇಕು  ಎನ್ನುವದನ್ನೆಲ್ಲ  ಬರೆದು ಕಳುಹಿಸಿದ್ದಳು  . 
      ವಾಶರೂಮ್ ಸಹ ಯಾವ  ತರಹ  ಇರುತ್ತೆ , ಹೇಗೆ ಬಾಗಿಲ  ತೆಗೆಯುವ ಪದ್ದತಿ  ಇರುತ್ತದೆ  . ಹಳೆಯ ಕಾಲದ  ಕೆಲವೊಂದು ಅಂಗಡಿಗಳ  ಬಾಗಿಲಗಳು ಕಟ್ಟಿಗೆಯ  ಫಳಿಯಿಂದ ಮಾಡಿರುತ್ತಿದ್ದರು .  ಅವುಗಳನ್ನು  ಒಂದೇ ಕಡೆಯಿಂದ  ಸರಿಸುತ್ತ ಬರುವ ತರಹ ಇರುತ್ತಿದ್ದವು  .  ಇಗಲೂ ಸಹಿತ  ಕೆಲವು ಅಂಗಡಿಗಳಿಗೆ  ಇದೇ ಮಾದರಿಯ  ಶಟರ್ಸ ಇರುತ್ತವೆ . ಅವುಗಳನ್ನು  ಒಂದೇ ಬದಿಯಿಂದ  ಸರಿಸುತ್ತಾ ಬರುತ್ತಾರೆ  . ಆದೇ ತರಹ ವಾಶರೂಮ್ ನ ಬಾಗಿಲು ತೆರೆಯಬೇಕು , ಎಂದು  ಉದಾಹರಣೆ ಸಹಿತ  ತಿಳಿಸಿದ್ದಳು  .
          ವಾಶರೂಮ್  ಹೊರಗಡೆಯಿಂದ ಹಸಿರು ಲೈಟ ತೋರಿಸಿದಾಗ  ಒಳಗೆ ಯಾರು ಇಲ್ಲಂತ (Open)  ತಿಳಿದುಕೊಳ್ಳಬೇಕು .  ಕೆಂಪು ಲೈಟ ತೋರಿಸಿದಾಗ ಒಳಗೆ  ಯಾರೋ ಇರುವರು (Occupied) ಎಂದು ತಿಳಿದುಕೊಳ್ಳಬೇಕು .  ಈ  ತರಹದ ಸಣ್ಣ  ಸಣ್ಣ  ವಿಚಾರಗಳನ್ನು ಅದ ರಲ್ಲಿ ತಿಳಿಸಿದ್ದಳು. 
     ಲಂಡನ್ನಿನ  "ಹಿಥ್ರೋ" ವಿಮಾನ ನಿಲ್ದಾಣ ಬಂದಕೂಡಲೇ ಅವಳ ಪತಿ ನಮಗಾಗಿ ಅಲ್ಲಿ  ಕಾಯುತ್ತಿರುತ್ತಾರೆ . ಎಂದು ಹೇಳಿ ಪತ್ರವನ್ನು  ಮುಗಿಸಿದ್ದಳು . 
       ಅವಳ  ಯೋಚನಾ ಲಹರಿಗೆ , ಬುದ್ಧಿಶಕ್ತಿಗೆ ಏನು ಹೇಳಬೇಕೆಂದು  ತಿಳಿಯದೇ ಮೂಕವಿಸ್ಮಿತಳಾದೆ. 
      ಹೇಗಿದೆ ನನ್ನ  ವಿದೇಶ  ಪ್ರಯಾಣದ  ತಯಾರಿ !! ವಿದೇಶಕ್ಕೆ  ಹೋದ ಮೇಲಿನ  ಅನುಭವವನ್ನು  ಮುಂದಿನ  ಲೇಖನದಲ್ಲಿ   ಹಂಚಿಕೊಳ್ಳುವ  ಪ್ರಯತ್ನ  ಮಾಡುತ್ತೇನೆ  

Category:Personal Experience



ProfileImg

Written by Shobha Siddannavar

0 Followers

0 Following