ಹರನನ್ನರಸಿ

ಅಮರನಾಥ್ ಯಾತ್ರೆಯ ಅನುಭವದ ಚುಟುಕುಗಳು

ProfileImg
14 Oct '23
4 min read


image

ಅರಿಯದ ವಯಸ್ಸಿನಲ್ಲಿ ಶಿವ ಎಂಬ ಹೆಸರೊಂದು ಬಿಟ್ಟರೆ  ಅಮರನಾಥ ಎಂಬುದು ಶಿವನ ಇನ್ನೊಂದು ರೂಪ  ಎಂಬ ಅರಿವು ಇರಲಿಲ್ಲ ನನಗೆ. ಶಿವ ಕೈಲಾಸದಲ್ಲಿ ಇರುವನೆಂಬ ಕಥೆಗಳನ್ನು ಅಮ್ಮ ಬಾಲ್ಯದಲ್ಲಿ ಹೇಳಿದ ನೆನಪು. ಭೂಲೋಕದಲ್ಲೂ ಕೈಲಾಸ ಪರ್ವತ ಇರುವುದು ಶಿವನು ಅಮರನಾಥನ ರೂಪದಲ್ಲಿ ನೆಲೆಸಿಹನು ಅವನನ್ನು ಕಾಣುವುದು ಸುಲಭದ ವಿಷಯವಲ್ಲ ಎಂಬ ವಿಚಾರ ತಿಳಿಯಿತು. 40 ರಿಂದ 50 ರ ಆಸುಪಾಸಿನಲ್ಲಿ ದೇಹದಲ್ಲಿ ಶಕ್ತಿ ಇದ್ದಾಗ ಹೋಗುವುದು ಸೂಕ್ತ ಸಮಯ ಎನಿಸಿತು. ಜೀವನದ ಜಂಜಾಟದ ಮದ್ಯೆ ಬೇರೆ ಬೇರೆ ಪ್ರವಾಸಿ ಸ್ಥಳಗಳಿಗೆ ಭೇಟಿ ಕೊಟ್ಟರು ಯಾತ್ರೆಗೆಂದು ಪ್ರತ್ಯೇಕವಾಗಿ ಹೋಗುವ ಅವಕಾಶ ದೊರಕಿರಲಿಲ್ಲ. ಕೆಲವೊಂದು ಜವಾಬ್ದಾರಿಗಳು ಇದ್ದರೂ ಅದನ್ನೆಲ್ಲ ಪಕ್ಕಕ್ಕಿಟ್ಟು ಅಮರನಾಥನ ದರ್ಶನ ಮಾಡಲೇಬೇಕೆಂಬ ಹುಮ್ಮಸ್ಸಿನಲ್ಲಿ ಸಂಬಂಧಿಕರ ಜೊತೆಯಾದಿಯಾಗಿ ಬೆಂಗಳೂರಿನಿಂದ ಯಾತ್ರೆಗೆ ಹೊರೆಟೆನು. ಭಾರತದ ಮೇಲ್ಭಾಗದ ತುತ್ತ ತುದಿಯ ಕಾಶ್ಮೀರಕ್ಕೆ ತಲುಪಲು ಟ್ರೈನ್ ಅಲ್ಲಿ 24  ರಿಂದ 30 ಗಂಟೆಗಳ ಅವಧಿ ಆದ್ದರಿಂದ ವಿಮಾನದಲ್ಲಿ ಪ್ರಯಾಣ ಬೆಳೆಸಿದೆವು. ಕೆಲವೊಂದು ಪ್ರವಾಸಿ ಸ್ಥಳಗಳನ್ನು ವೀಕ್ಷಿಸಿ ಅಲ್ಲಿಂದ ಅಮರನಾಥನಿರುವ ಸ್ಥಳಕ್ಕೆ ಹೋಗಲು ನಿರ್ಧಾರ ಕೈಗೊಂಡಿದ್ದೆವು ಅಲ್ಲಿ ಹೋಗಲು ನಮ್ಮಿಚ್ಛೆಯಂತೆ ನೇರ ಮಾರ್ಗವು ಅಸಾಧ್ಯ. ಅದಕ್ಕಾಗಿ ಆರೋಗ್ಯ ತಪಾಸಣೆ ಅತ್ಯಾವಶ್ಯಕ. ಹೊರಡುವ ಮುನ್ನವೇ ಅರೋಗ್ಯ ಸುಧಾರಣೆಯ ಪತ್ರಕ್ಕೆ ಸರ್ಕಾರಿ ವೈದ್ಯರ ಸಹಿಯ ಅನುಮತಿ ಪತ್ರವನ್ನು ಸಲ್ಲಿಸಬೇಕೆಂಬ ನಿಯಮವು ಇತ್ತು. ಇದಕ್ಕೂ ಮೀರಿ ಅಲ್ಲಿನ ಸರ್ಕಾರದ ಅನುಮತಿ ಇಲ್ಲದೆ ನೇರವಾಗಿ ಹೋಗುವಂತಿಲ್ಲ. ಅಲ್ಲಿನ ಹವಾಮಾನಕ್ಕೆ ನಮ್ಮ ದೇಹ ಒಗ್ಗುವ ಹಾಗಿದ್ದರೆ ಮಾತ್ರ ಧರ್ಶನಕ್ಕೆ ಹೋಗಲು ಸಾದ್ಯ. ಏಕೆಂದರೆ ಅಲ್ಲಿ ಆಮ್ಲಜನಕದ ತೊಂದರೆ ಬರವುದು ಸಹಜ. ಎಲ್ಲ ಕಡೆ ಹಿಮಹೆಪ್ಪುಕಟ್ಟಿರುವ ದೃಶ್ಯಗಳು ಸಾಮಾನ್ಯ. ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವುದು ಸುಲಭದ ವಿಷಯವಲ್ಲ. ಇದು ಈ ಪ್ರಯಾಣಕ್ಕೆ ಹೋಗಲು ಇರುವ ನಿಯಮಗಳು. ಪ್ರಯಾಣದ ಹಾದಿ ಸುದೀರ್ಘ. ಕಡಿದಾದ ಬೆಟ್ಟದ ಮೇಲೆ ಹೋಗಲು ನುರಿತ ಚಾಲಕನಿಗಷ್ಟೇ ವಾಹನ ಚಲಾಹಿಸಲು ಸಾದ್ಯ ಪ್ರತೀ 100 ಮೀಟರ್ ಹಂತರದಲ್ಲಿ  ಒಬ್ಬೊಬ್ಬ ಸೈನಿಕನ ದರ್ಶನ. ಒಬ್ಬೊಬ್ಬ ಸೈನಿಕನೂ ಪ್ರಾಣ ಒತ್ತೆ ಇಟ್ಟು ಸುರಕ್ಷಿತವಾಗಿ ಗುರಿ ತಲುಪುವವರೆಗೂ ನಮ್ಮನ್ನು ಸುರಕ್ಷೆ ಮಾಡುವುದು ನಿಜಕ್ಕೂ ಹೆಮ್ಮೆಪಡುವ ವಿಚಾರ. ಅನುಮತಿ ದೊರೆತ ನಂತರವೂ ನಮ್ಮ ವಾಹನ ಹೋಗುವವರೆಗೂ ಹಿಂದೆ ಅಲ್ಲಿನ ಸರ್ಕಾರದ ವಾಹನವು ನಮ್ಮನ್ನು ಸುರಕ್ಷಿತವಾಗಿ  ಬೆಟ್ಟದ ತಪ್ಪಲಿನವರೆಗೂ  ಬೆಂಗಾವಲಾಗಿ ಬರುವುದು ನಿಜಕ್ಕೂ ಆಶ್ಚರ್ಯದ ಸಂಗತಿ. ಕಾಶ್ಮೀರವನ್ನು ಸುರಕ್ಷಿತವಾಗಿ ಉಳಿಸಲು ಒಬ್ಬೊಬ್ಬ ಸೈನಿಕನು  ಹಗಲು ರಾತ್ರಿ ದೇಶದ ಹಿತ ದೃಷ್ಟಿಗಾಗಿ ದುಡಿಯುವುದು ನಮ್ಮೆಲ್ಲರ ಪುಣ್ಯ
ದುರುಳರಿಂದ ಒಬ್ಬ ಸಾಮಾನ್ಯ ಮನುಷ್ಯನ ಜೀವಕ್ಕೂ ಅಷ್ಟೊಂದು ಪ್ರಾಮುಖ್ಯತೆ ಕೊಡುವುದು ನಿಜವಾಗಲೂ ನಮ್ಮ ದೇಶದ ಹೆಮ್ಮೆಪಡುವ ವಿಚಾರವೇ ಸರಿ. ಬೆಟ್ಟದ ತಪ್ಪಲಿನವರೆಗೂ ನಮ್ಮನ್ನು ಸೇರಿಸಿ ಆ ವಾಹನವು ಹಿಂದಿರುಗುವುದು. ಒಂದು ತಪ್ಪಲಿನ ಶಿಬಿರಗಳಲ್ಲಿ ನಮ್ಮ ತಂಗುದಾಣ. ಅಲ್ಲಿಂದ ಮತ್ತೊಂದು ಬೆಟ್ಟಕ್ಕೆ ಹತ್ತಲು  ಹೆಲಿಕಾಫ್ಟರ್ ವ್ಯವಸ್ಥೆ ಇರುವುದೇನೊ ಸಂತೋಷದ ವಿಚಾರ. ಮೊದಲೆಲ್ಲ ಕೆಳಗಿನಿಂದ ಮೇಲಿನವರೆಗೂ ಜೋಲಿ, ಕಾಲ್ನಡಿಗೆ ಇಲ್ಲವೆ ಕುದುರೆಗಳಲ್ಲಿ ಹೋಗಬೇಕಿತ್ತು. ಈಗ ಅರ್ಧ ಬೆಟ್ಟದವರೆಗೆ ಹೆಲಿಕಾಫ್ಟರ್ ವ್ಯವಸ್ಥೆಯನ್ನು ಮಾಡಿದ್ದಾರೆ. ಅದರೆ ನಿಸರ್ಗದ ತಾಪಮನ  ಅನುಗುಣವಾಗಿದ್ದರೆ  ಸುಲಭವಾಗಿ 10 ನಿಮಿಷದ ಅವಧಿಯಲ್ಲಿ  ಇನ್ನೊಂದು  ಪರ್ವತಕ್ಕೆ ಹೋಗಲು ಸಾದ್ಯ ಅಲ್ಲಿಂದ ಮತ್ತೊಂದು ಪರ್ವತವನ್ನು ಹತ್ತಲು ಯಾವುದೇ ವಾಹನದ ವ್ಯವಸ್ಥೆ ಇರುವುದಿಲ್ಲ ಕುದುರೆ ಸವಾರಿ, ಕಾಲುನಡಿಗೆ, ಇಲ್ಲವೆ ಡೋಲಿಯಲ್ಲಿ ಕೂರಿಸಿಕೊಂಡು ಹೋಗುವ ಮಾರ್ಗ ಮಾತ್ರ ಇರುವುದು. ಮೊದಲ ಹಂತದವರೆಗೂ. ಸುರಕ್ಭಿತವಾಗಿ ಸೇರಿ ತಲುಪಿದೆವು ಹೆಲಿಕಾಫ್ಟರ್ ಮೂಲಕ. ಅಲ್ಲಿ ಮತ್ತೊಂದು ತಂಗುದಾಣ ಶಿಬಿರ ನಮಗಾಗಿ. ಮಇಕೊರೆವ ಚಳಿ ಆಗಾಗ ಬೀಳುವ ಮಳೆ, ಶಿಬಿರದಿಂದ ಶಾಚಾಲಯಕ್ಕೇ ಹೋಗಲು ದೂರದ ನಡಿಗೆ. ಸಕಲ ಸವಲತ್ತುಗಳು ಸಿಗಲಸಾದ್ಯ. ಶ್ರೀಮಂತ ಬಡವ ಭೇದ ಇಲ್ಲದೆ ಎಲ್ಲರೂ ಉಳಿಯಲು ಒಂದೇ ತರಹದ ಶಿಬಿರಗಳು. ಎಲ್ಲರ ಸಹಾಯಕ್ಕಾಗಿ ನೇಮಕರಾಗಿರುವ ಸೈನಿಕರು. ಉಚಿತವಾಗಿ ಊಟದ ವ್ಯವಸ್ಥೆ.ಆದರೂ ಶಿಬಿರದಿಂದ ಹೊರಗೆ ಹೋದರೆ ಅಲ್ಲಿಂದ ಊಟದ ಅಂಗಳಕ್ಕೆ ಹೋಗಲು  ಸರಿಯಾದ ಸುಸಜ್ಜಿತ ಸಮತಟ್ಟಾದ ನೆಲವು ಇಲ್ಲದೆ ಇರುವುದರಿಂದ ಬರಿಗಾಲಲ್ಲಿ ಹೋಗಲು ಕಷ್ಟಕರವೇ.  ಮುಂದೆ ಇದ್ದದ್ದೇ ಸಾಹಸದ ರೋಚಕದ ಕಥೆ. ಬೆಳಗಿನ ಸೂರ್ಯನ ಆಗಮನವಾದರೆ ಎಲ್ಲವು ಸುರಕ್ಷಿತ. ಮೋಡ ಕವಿದರೆ ಶಿಬಿರದಲ್ಲೇ ಮತ್ತೊಂದು ಉದಯದವರೆಗೆ ತಂಗಲೇಬೇಕಾದ ಅನಿವಾರ್ಯತೆ. ಅಮರನಾಥನ ದರ್ಶನಕ್ಕೆ ಮೇಲೆ ಹೋಗಲು ಮಣ್ಣಿನಾ ಕಡಿದಾದ ದಾರಿ 
ಎಡಕ್ಕೆ ಪ್ರಪಾತ, ಬಲಕ್ಕೆ ಮಣ್ಣು ಕುಸಿತ, ದಾರಿ ಕಡಿದಾದರು ಹೋಗುವವರ ದಿಂಡು ನೂರಾರು ಕುದುರೆ ಸವಾರರೊಂದೆಡೆ ಡೋಲಿಯಲಿ ಕೂರಿಸಿ ನಡೆವವರೊಂದೆಡೆ, ಕೋಲಿನಾಸರೆಯಲ್ಲಿ ನಡೆವವರದ್ದು ಅದೇ ಮಾರ್ಗವೇ. ಎಲ್ಲರ ಪಯಣದ ಹಾದಿಯು ಒಂದೆ ಕಡೆಗೆ, ಅದುವೇ ಹರನ ಬಳಿಗೆ. ಹಿಮದ ಚಳಿಗೆ ಕೈಕಾಲು ಸ್ವಾಧೀನ ಕಳೆದುಕೊಂಡಂತಾ ಅನುಭವ ಹೇಳಲಸಾದ್ಯ, ಇದೆಲ್ಲದರ ನಡುವೆ ಅಮರನಾಥನ ಗುಹೆಯನ್ನು ಕಾಣುವಾ ಹಂಬಲವು ಮನದೊಳಗೆ, ಗುಹೆಯಲ್ಲಿ ಮಂಜಿನ ರೂಪದಿ ಉದ್ಬವಿಸುವ ಲಿಂಗದ ಮೂರ್ತಿಯು ವರ್ಷದ ಒಂದುವರೆ ತಿಂಗಳ ಅವಧಿಯಲ್ಲಿ ದರ್ಶನವ ಕೊಡುವ ಹರನು ಕಾಣಸಿಗನು ಎಲ್ಲರಿಗೂ. ಲಿಂಗವನ್ನು ಎದುರಲ್ಲಿ ಕಂಡು ರೋಮಾಂಚನವಾದವರ ಮನದಾಳದ ಮಾತುಗಳ ಕೇಳಿದ ಅನುಭವಗಳು ಅದೆಷ್ಟೋ. ಹರನನ್ನು ಕಾಣುವಾ ತವಕದಿ ಬೆಟ್ಟದಾ ಕುಸಿತದಲ್ಲಿ ಮಣ್ಣಲ್ಲಿ ಹೂತು ಹುತಾತ್ಮರಾದವರ ಲೆಕ್ಕ ಇಡಲಾಗದು. ಉಸಿರಾಡಲು ಸಾಧ್ಯವಾಗದೆ ಉಸಿರು ಬಿಟ್ಟವರೆಷ್ಟೋ, ಹಿಂದಿರುಗಿ ಬಂದವರು ಆಮ್ಲಜನಕದ ತೊಂದರೆಗೆ ಆಸ್ಪತ್ರೆ ಸೇರಿ ಕೊನೆ ಉಸಿರು ಎಳೆದವರೆಷ್ಟೋ. ಬದುಕಿ ಉಳಿದವರಲ್ಲಿ ಸಮಾಧಾನದ ಉಸಿರು ಬಿಟ್ಟವರೆಷ್ಟೋ. ಆದರೂ ಅವನನ್ನು ಕಾಣಲು ತವಕಿಸುವ ಮನಸ್ಸುಗಳು ಮಾತ್ರ ಆದೆಷ್ಟೋ. ಇಂದ್ರದೇವನ ಕರುಣೆ ಇದ್ದರಷ್ಟೇ ದರ್ಶನದ ಭಾಗ್ಯ. ಆವನೊಮ್ಮೆ ಮುನಿದರೆ ಪರ್ವತದ ತಪ್ಪಲಿನ ತಾತ್ಕಾಲಿಕ ಟೆಂಟ್ ಒಂದೇ ಎಲ್ಲರ ತಾಣ. ಕೆಸರಿನ ನಡುವೆಯೇ ಅಲೆದಾಟ. ಕೆಸರಲ್ಲಿ ಜಾರಿದರೆ  ಮೈ ಮೂಳೆ ಮುರಿಯುವ ಭಯದಿ  ಕುಳಿತವರ ನೋಡಲಾಗದು ಅವರ ಮನದ ಪರದಾಟ.  ಊಟ ತಿಂಡಿಯ ಸೇವೆ ಮಾಡಲೆಂದೇ ಬಂದು ನೆಲೆಸುವರು ಸೇವಕರು. ರುಚಿಯಾದ ಭೋಜನ ಸಿಗದಿದ್ದರೂ ಹೊಟ್ಟೆ ತುಂಬಿಸಿಕೊಳ್ಲಲು ಒಂದಿಲ್ಲೊಂದು ಭಕ್ಷ್ಯವನು ನೀಡಿ ಸತ್ಕರಿಸುವರು ಯಾತ್ರಿಕರನ್ನು. ಸೂರ್ಯ ದೇವನ ಕರುಣೆ ಇದ್ದರಷ್ಟೇ ಬೆಟ್ಟದ ಪ್ರಯಾಣಕ್ಕೆ ಅನುಮತಿ ವರುಣ ದೇವನ ಆಹ್ವಾನವಾದರೆ ಟೆಂಟ್ ಅಲ್ಲಿ ಉಳಿಯಲೇ ಬೇಕಾದ ಸ್ಥಿತಿ.  ಸೈನಿಕರ ಅನುಮತಿ ಇಲ್ಲದೆ ಎಲ್ಲಿಯು ಹೋಗಲಾಗದ ಪರಿಸ್ಥಿತಿ. ಬೆಟ್ಟದಿಂದ ಹೊರ ಬರಲಾಗದ ಆತಂಕದ ಸ್ಥಿತಿ. ಕ್ಷಣ ಕ್ಷಣಕ್ಕೂ ಭಯದ ಛಾಪು ಮನದೊಳಗೆ. ಹೊರ ಹೋಗಲು ಭಗವಂತನ ಬೇಡುವುದೊಂದೆ ಆ ಕ್ಷಣದ ಸ್ಥಿತಿಗತಿ. ಹಗಲು ರಾತ್ರಿ ರಕ್ಷಣೆ ನೀಡುವ ಪ್ರತಿಯೊಬ್ಬ ಸೈನಿಕನು ದೇವರೆನಿಸುವರು ಆ ಕ್ಷಣದಿ. ಅಂತಹ ಸ್ಥಳಕ್ಕೆ ಬೇಟಿಕೊಟ್ಟ ನನ್ನಂತ ನಾಸ್ತಿಕಳ ಮನದಲ್ಲಿ ಮೂಡುವ ಕೊನೆ ಪ್ರಶ್ನೆ, ಎಲ್ಲವನ್ನು ಜಯಿಸಲು ಶಕ್ತಿಯನ್ನು ಕೊಟ್ಟವನು ಭಗವಂತನೇ?.ಬದುಕಿ ಬಂದ ನಾನೆ ಪುಣ್ಯವಂತಳೆ?
 ನಂಬಿದರೆ ರಕ್ಷಿಸುವ ಕಾಣದ ಕೈ ಒಂದೇ ಅದು ಭಗವಂತನೆ.

ಮನ.
ಮಮತಾ ನಂದೀಶ್

Category:Travel



ProfileImg

Written by Mamatha Nandish

Mamatha