ದೇವಶರ್ಮನ ಕತೆ

ದೇವಶರ್ಮನೆಂಬ ಬ್ರಾಹ್ಮಣನ ಕತೆ

ProfileImg
16 Jan '24
6 min read


image

8. ದೇವಶರ್ಮನ ಕಥೆ

  ಅಬೀಳವೆಂಬ ನಾಡಿನಲ್ಲಿ ಇಂದ್ರನ ಅಮರಾವತಿಗೆ ಸಮಾನವಾದ ಕ್ರೌಂಚಪುರವೆಂಬ ಪಟ್ಟಣವಿತ್ತು. ಆ ಪಟ್ಟಣದಲ್ಲಿ ದೇವಶರ್ಮನೆಂಬ ತಪಸ್ವಿಯಿದ್ದ. ಆತ ಉಗ್ರೋಗ್ರ ತಪಸ್ಸನ್ನು ಆಚರಿಸುತ್ತಲಿದ್ದ. ಸೋಮ-ಸೂರ್ಯ ಗ್ರಹಣಾದಿ ಪುಣ್ಯಕಾಲದಲ್ಲಿ ದೇವಶರ್ಮನಿಗೆ ಧಾರ್ಮಿಕ ಜನರು ಭಕ್ತಿಪೂರ್ವಕನಾಗಿ ಸುವರ್ಣ ದಾನವನ್ನು ಕೊಡುತ್ತಿದ್ದರು. ಹಲವು ಕಾಲಕ್ಕೆ ಆ ಸುವರ್ಣದಾನ ಅತ್ಯಧಿಕವಾಗಿ ಬೆಳೆಯಿತು. ದೇವಶರ್ಮ ಆ ಸುವರ್ಣದಾನವನ್ನು ಸರ್ವಪ್ರಯತ್ನಗಳಿಂದ ರಕ್ಷಿಸುತ್ತಿದ್ದ.

  ಆ ಕ್ರೌಂಚ ಪುರದಲ್ಲಿ ಆಷಾಡಭೂತಿಯೆಂಬ ಧೂರ್ತನಿದ್ದ. ಏನೂ ಇಲ್ಲದ ದರಿದ್ರನ್ನಾಗಿದ್ದ ಆತ ದ್ಯೂತವ್ಯಸನಿಯಾಗಿ ತಿರುಗಾಡುತ್ತಿದ್ದ. ಹೀಗಿರುವಾಗ ದೇವಶರ್ಮನಲ್ಲಿ ಅಪಾರ ಸಂಪತ್ತಿರುವ ಸಂಗತಿ ಆಷಾಡಭೂತಿಯ ಕಿವಿಗೆ ಬಿತ್ತು. ಸುದ್ದಿಯನ್ನು ಕೇಳಿದ ಆಷಾಡಭೂತಿ ದೇವಶರ್ಮನಲ್ಲಿಗೆ ಬಂದು ಸಾಷ್ಟಾಂಗ ನಮಸ್ಕಾರ ಮಾಡಿ,''ದೇವಾ! ನಾನು ನಿಮ್ಮ ವಿದ್ಯಾರ್ಥಿಯಾಗಿ ಬಂದಿದ್ದೇನೆ. ನನ್ನನ್ನು ವಿದ್ಯಾರ್ಥಿಯನ್ನಾಗಿ ಸ್ವೀಕರಿಸಬೇಕು'' ಎಂದು ಭಿನ್ನವಿಸಿಕೊಂಡ. ದೇವಶರ್ಮ ಆಷಾಡಭೂತಿಯನ್ನು ತನ್ನ ಶಿಷ್ಯನನ್ನಾಗಿ ಸ್ವೀಕರಿಸಿದ. ಆಷಾಡಭೂತಿ ದೇವಶರ್ಮನ ಸೇವೆ ಮಾಡತೊಡಗಿದ.

  ಹೀಗಿರುವಲ್ಲಿ ದೇವಶರ್ಮನಿಗೆ ತೀರ್ಥಯಾತ್ರೆ ಮಾಡಬೇಕೆಂಬ ಆಸೆಯಾಯಿತು. ಹಲವು ಕಾಲ ತೀರ್ಥಯಾತ್ರಾಸಕ್ತನಾಗಿ ತನಗೆ ಸಾಧ್ಯವಿದ್ದಷ್ಟು ದ್ರವ್ಯವನ್ನು ದಾನಮಾಡಬೇಕೆಂದು ನಿಶ್ಚಯಿಸಿದ. ಹೀಗೆ ನಿಶ್ಚಯಿಸಿಕೊಂಡ ದೇವಶರ್ಮ ಬಳಿಕ ದೇವರ ಪೆಟ್ಟಿಗೆಯಲ್ಲಿದ್ದ ದ್ರವ್ಯವನ್ನು ತುಂಬಿಕೊಂಡು ಆಷಾಡಭೂತಿಯೊಂದಿಗೆ ಕೌಂಚಪುರವನ್ನು ಬಿಟ್ಟು ಸ್ವಲ್ಪ ದೂರ ಬಂದ.

  ದೇವಶರ್ಮ ಹೀಗೆ ತೀರ್ಥಯಾತ್ರಾರ್ಥವಾಗಿ ಬರುತ್ತಿರುವಾಗ ದಾರಿಯಲ್ಲಿ ಸದ್ಮವನವನ್ನೂ, ಅಲ್ಲಿದ್ದ ಸರೋವರಾವೊಂದನ್ನೂ ಕಂಡ. ಅಲ್ಲಿ ದೇವಪೂಜೆಯನ್ನು ಮಾಡಿಕೊಂಡು ಹೋಗಬೇಕೆಂದು ನಿಶ್ಚಯಿಸಿಕೊಂಡ ದೇವಶರ್ಮನು ಆಷಾಡಭೂತಿಯನ್ನು ಹಣದ ಪೆಟ್ಟಿಗೆಗೆ-ಕಾಪಿರಿಸಿ, ತಾನು ಸರೋವರಕ್ಕಿಳಿದ. ಕೈಕಾಲುಗಳನ್ನು ತೊಳೆದುಕೊಂಡು ಭಸ್ಮವನ್ನು ಧರಿಸಿ ದೇವತಾಸಮಾರಾಧನೆಗೆ ಕುಳಿತುಕೊಂಡ. ಶಿವನ ಪರಮಧ್ಯಾನದಲ್ಲಿ ತಪೋನಿರತನಾದ ದೇವಶರ್ಮ ಪರಮಾವಸ್ಥೆಗೆ ಸಂದ.

  ಇತ್ತ ಸಮಯ ಸಾಧಕನಾದ ಆಷಾಡಭೂತಿ ಸಮೀಪದಲ್ಲಿ ಯಾರೂ ಇಲ್ಲದ್ದನ್ನರಿತು, ಇದೇ ತನಗೆ ತಕ್ಕ ಸಮಯವೆಂದು ದೇವಶರ್ಮನ ಹಣದ ಪೆಟ್ಟಿಗೆಯನ್ನು ತೆಗೆದುಕೊಂಡು ಪರಾರಿಯಾದ. ಸ್ವಲ್ಪ ಸಮಯದ ನಂತರ ದೇವಶರ್ಮ ಪೂಜಾ ವಿಧಾನವನ್ನು ಪೂರ್ಣಗೊಳಿಸಿ ಸುತ್ತಲೂ ನೋಡಿದ. ಪಕ್ಕದಲ್ಲಿದ್ದ ಹಣದ ಪೆಟ್ಟಿಗೆಯನ್ನೂ, ಆಷಾಡಭೂತಿಯನ್ನೂ ಕಾಣದೆ ವಿಸ್ಮಯಚಿತ್ತನಾದ. ಅರ್ಥನಾಶದಿಂದ ವಿಕಳಚಿತ್ತನಾದ ದೇವಶರ್ಮ, 'ಹಲವು ಕಾಲದಿಂದ ಪಡೆದ ಅರ್ಥ ನಿರರ್ಥವಾಗಿ ಕೆಟ್ಟಿತು' ಎಂದು ಚಿಂತಾಕ್ರಾಂತನಾದ. ತನ್ನ ಸುವರ್ಣ ಪೆಟ್ಟಿಗೆಯನ್ನು ಕಪಟ ಶಿಷ್ಯ ಅಪಹರಿಸಿದ್ದು ತಿಳಿದು, ತನ್ನ ದುರ್ದೈವಕ್ಕಾಗಿ ದುಃಖಿಸಿದ. ಬಳಿಕ ತನ್ನಷ್ಟಕ್ಕೆ ತಾನೇ ಸಂತೈಸಿಕೊಂಡು ಇಂತೆಂದುಕೊಂಡ.

  “ಐಶ್ವರ ಪ್ರಾಪ್ತಾವಾದರೆ ಪರೋಪಕಾರವನ್ನು ಮಾಡಬೇಕು, ತಾನೂ ಉಣ್ಣ ಬೇಕು. ಆದರೆ ಆ ಐಶ್ವರವನ್ನು ಕೂಡಿಡಬಾರದು. ಏಕೆಂದರೆ, ಜೇನುನೊಣಗಳು ತುಪ್ಪವನ್ನ ಇರಿಸಿದರೆ, ಜನರು ಆ ಜೇನುನೊಣಗಳನ್ನು ಕೊಂದು ತುಪ್ಪವನ್ನು ಒಯ್ಯುತ್ತಾರೆ. ಹಾಗೆಯೇ, ಐಶ್ವರವನ್ನು ಕೂಡಿಟ್ಟರೆ ಪಾತಕರು ಕೂಡಿಟ್ಟವರನ್ನು ಕೊಂದು ಆ ಐಶ್ವರ್ಯವನ್ನು ಕೊಂಡೊಯ್ಯುತ್ತಾರೆ. ಹೀಗೆ ಶಸ್ತ್ರಾಭಿಪ್ರಾಯವಿದೆ. ಸರ್ವವೂ ದೃಷ್ಟಿವಶವದಲ್ಲದೆ, ನನ್ನದಲ್ಲವೆಂದು ಭಾವಿಸಿ ಖೇದವನ್ನು ಬಿಡಬೇಕು. ಎಲ್ಲವನ್ನೂ ನೋಡಿ ಸಂತೃಪ್ತಿಪಟ್ಟುಕೊಳ್ಳಬೇಕೇ ಹೊರತು, ನನ್ನ ವಶವಾಗಲೆಂದು ಬಯಸಿ ಖೇದವನ್ನು ಅನುಭವಿಸಬಾರದು!"

  ಹೀಗೆ ದೇವಶರ್ಮ ವಿಚಾರಿಸಿ ತನ್ನಷ್ಟಕ್ಕೆ ತಾನೇ ಸಮಾಧಾನ ಮಾಡಿಕೊಂಡು ಮುಂದೆ ಪ್ರಯಾಣ ಬೆಳೆಸಬೇಕೆನ್ನುವಷ್ಟರಲ್ಲಿ ಸರೋವರಕ್ಕೆ ನೀರು ಕುಡಿಯಲೆಂದು ಬಂದ ಟಗರುಗಳ ಕಾದಾಡತೊಡಗಿದವು. ದೇವಶರ್ಮ ಆ ಎರಡು ಟಗರುಗಳ ಹೋರಾಟವನ್ನು ನೋಡಿದ. ಅವೆರಡೂ ರೋಷಪರವಶವಾಗಿ ಸ್ವಲ್ಪ ದೂರ ಹಿಂದಕ್ಕೆ ಸರಿದು ಮತ್ತೆ ರಭಸದಿಂದ ಮುಂದಕ್ಕೆ ಬಂದು ಪರಸ್ಪರ ಹಣೆಯನ್ನು ಘಟ್ಟಿಸುತ್ತಿದ್ದವು. ಆ ರಭಸದ ಹೊಡೆತಕ್ಕೆ ಅವೆರಡರ ಹಣೆಯಿಂದ ರಕ್ತ ಸುರಿಯತೊಡಗಿತು. ಇದನ್ನು ಕಂಡ ನರಿಯೊಂದು ನಾಲಿಗೆ ಚಾಪಲ್ಯದಿಂದ ಓಡಿಬಂದು ಆ ರಕ್ತವನ್ನು ನೆಕ್ಕತೊಡಗಿತು. ಟಗರುಗಳೆರಡರ ಹೋರಾಟದಲ್ಲಿ ಈ ನರಿ ಸಿಕ್ಕಿಕೊಂಡರೆ ಸಾಯುವುದು ನಿಶ್ಚಿತವೆಂದು ದೇವಶರ್ಮ ಯೋಜಿಸುತ್ತಿರುವಷ್ಟರಲ್ಲೇ ಅದು ಸತ್ತೇ ಬಿಟ್ಟಿತು. ರಕ್ತಸ್ವಾದನೆಗಾಗಿ ಬಂದ ನರಿ ಎರಡು ಟಗರುಗಳ ಘರ್ಷಣೆಯಲ್ಲಿ ಸಿಕ್ಕು ಆನೆ ಮೆಟ್ಟಿದ ಸೋರೆಕಾಯಿಯಂತೆ ಜಿಗಿಜಿಗಿಯಾಗಿ ಸತ್ತು ಹೋಯಿತು. ವ್ಯರ್ಥ ಆಸೆಯಿಂದ ಸಿಕ್ಕು ಪ್ರಾಣ ಕಳೆದುಕೊಂಡ ಆ ಬಡಪಾಯಿ ನರಿಗಾಗಿ ದೇವಶರ್ಮ ಮನದಲ್ಲಿ ಮರುಗುತ್ತ ಮುಂದೆ ನಡೆದ. 

  ಅಲ್ಲಿಂದ ತೀರ್ಥಯಾತ್ರೆ ಮುಂದುವರಿಸಿದ ದೇವಶರ್ಮನಿಗೆ ಮುಂದೆ ಸ್ವಲ್ಪ ದೂರದಲ್ಲಿ ಊರೊಂದು ಕಾಣಿಸಿತು. ದೇವಶರ್ಮ ಆ ಊರಿಗೆ ಬರುವಷ್ಟರಲ್ಲಿ ಆಗಲೇ ಸಂಜೆಯ ಸಮಯವಾಗಿತ್ತು. ಸೂರ್ಯ ಅಸ್ತಗಿರಿಯಲ್ಲಿ ಮುಳುಗಿದ. ತಪಸ್ವಿ ದೇವಶರ್ಮ ಬಳಲಿ ಏದುಸಿರು ಬಿಡುತ್ತ ಸುಯ್ಯುತ್ತ ಊರತ್ತ ಬರುತ್ತಿದ್ದ. ಬೇತಾಳನ ಬಸಿರಿನಂತೆ ಬೆನ್ನುಹತ್ತಿದ ಹೊಟ್ಟೆಯನ್ನಿಟ್ಟುಕೊಂಡು ನಿಟ್ಟಿಸಿರು ಬಿಡುತ್ತ ಬರುತ್ತಿದ್ದ ವೃದ್ಧ ತಾಪಸ ದೇವಶರ್ಮನನ್ನು ಕಂಡು ಆ ಊರಿನವರಿಗೆ ಕರುಣೆಮುಂಟಾಯಿತು. ಅಲ್ಲಿ ನೇಕಾರನೊಬ್ಬ ದೇವಶರ್ಮ ತಾಪಸಿಯನ್ನು ಕಂಡು ಆತನ್ನನ್ನು ತನ್ನ ಮನಗೆ ಕರೆದೊಯ್ದು ಪರಮ ಭಕ್ತಿಯಿಂದ ದಾರಿಶ್ರಮವನ್ನು ಆರಿಸಿದ. ಬಳಿಕ ತನ್ನ ಹೆಂಡತಿಯನ್ನು ಕರೆದು, "ಈ ತಪೋಧವನಿಗೆ ವಿರಮಿಸಲು ಯೋಗ್ಯ ಸ್ಥಳವನ್ನು ಮಾಡಿಕೊಡು" ಎಂದು ಹೇಳಿ, ತಾನು ಸರ್ವಾಭರಣ ಭೂಷಿತನಾಗಿ ಕೆಲವು ಸಮಾನಶೀಲ ವ್ಯಸನ ಸಹಾಯಕರೊಂದಿಗೆ ಮದ್ಯಪಾನ ಕ್ರೀಡೆಗೆ ಹೊರಟು ಹೋದ.

  ಹೀಗೆ ನೇಕಾರ ದೇವವರ್ಮನಿಗೆ ಅಶ್ರಯಕೊಟ್ಟು ಮದ್ಯಪಾನಕ್ಕೆಂದು ತನ್ನ ರಸಿಕ ಮಿತ್ರರೊಂದಿಗೆ ಅತ್ತ ಹೊರಟು ಹೋದಮೇಲೆ, ಇತ್ತ ಆತನ ಪತ್ನಿ ತನ್ನ ಪ್ರಿಯತಮನನ್ನು ಕೂಡಲು ರಹಸ್ಮಸ್ಥಳವೊಂದಕ್ಕೆ ಹೊರಡಲು ಸಿದ್ದಳಾದಳು. ಚಂದ್ರೋಯದ ಪೂರ್ವದಲ್ಲೇ ರಹಸ್ಯಸ್ಥಳಕ್ಕೆ ತನ್ನ ಪ್ರಿಯತಮನನ್ನು ಕರೆತರುವಂತೆ ನೆರೆಯ ನಾವಿದನ ಪತ್ನಿಯನ್ನು ದೂತಿಯಾ ಗಿ ಕಳಿಸಿದಳು.ಬಳಿಕ ನೇಕಾರನ ಹೆಂಡತಿ ಅಲಂಕರಿಸಿಕೊಂಡು, ಹೂ ಮುಡಿದು ತನ್ನ ವಿಟನನ್ನು ಕೂಡಲು ಆತುರದಿಂದ ಧಾವಿಸಿದಳು. ಆದರೆ ದಾರಿಯಲ್ಲಿ ಕುಡಿದು ಉನ್ಮತ್ತನಾಗಿ ಅಸಂಬದ್ಧವಾಗಿ ಒದರಾಡುತ್ತ, ತೂರಾಡುತ್ತ ಬರುತ್ತಿದ್ದ ತನ್ನ ಪತಿಯನ್ನು ಕಂಡು ಹೆದರಿ ಹಿಂದಿಗಿ ಮನೆಗೆ ಓಡಿಬಂದಳು. ತನ್ನ ಶೃಂಗಾರದ ವೇಷವನ್ನು ಬದಲಿಸಿ ಮೊದಲಿನಂತಾದಳು. ಆದರೆ, ಶೃಂಗರಿಸಿಕೊಂಡು ಹೋಗುತ್ತಿದ್ದ ಪತ್ನಿಯನ್ನು ಕಂಡ ನೇಕಾರ ಸಂಶಯಗ್ರಸ್ತನಾಗಿ ಹಿಂಬಾಲಿಸಿ ಬಂದು, ಆ ಚಾರಿಣಿ ಪತ್ನಿಯನ್ನು ರೋಷದಿಂದ ಮೈಯೆಲ್ಲ ಜರ್ಝರಿತವಾಗುವಂತೆ ಹೊಡೆದ. ಬಳಿಕ ಬಲವಾದ ಹಗ್ಗದಿಂದ ಆಕೆಯನ್ನು ಕಂಬಕ್ಕೆ ಬಿಗಿದು, ತಾನು ಮತ್ತೆ ಮತ್ತಿನಲ್ಲಿ ಹೋಗಿ ಮಲಗಿ ನಿದ್ರಾವಶನಾದ.

  ಮರಳಿ ಬಂದ ನಾವಿದನ ಪತ್ನಿ ನೇಕಾರ ನಿದ್ರಾವಶನಾದದ್ದನ್ನರಿತು ಮೆಲ್ಲನೆ ಬಂದು ನೋಡುತ್ತಾಳೆ, ನೇಕಾರನ ಪತ್ನಿ ಕಂಬಕ್ಕೆ ಬಿಗಿಸಿಕೊಂಡಿದ್ದಾಳೆ ! ಆಕೆಯ ಈ ಅವಸ್ಥೆಯನ್ನು ಕಂಡು ಕ್ಷಣಕಾಲ ಬೆರಗಾದ ನಾವಿದನ ಪತ್ನಿ ವಿಟನು ರಹಸ್ಯ ಸ್ಥಳದಲ್ಲಿ ಅವಳಿಗಾಗಿ ಕಾಯುತ್ತಿರುವುದನ್ನು ತಿಳಿಸಿದಳು. ಆದರೆ ನೇಕಾರನ ಪತ್ನಿ ಇಂತಹ ಪರಿಸ್ಥಿತಿಯಲ್ಲಿ ಹೇಗೆ ಹೋಗುವುದೆಂದು ಚಿಂತೆ ವ್ಯಕ್ತಪಡಿಸಿದಳು. ಆಗ ನಾವಿದನ ಪತ್ನಿ ತನ್ನನ್ನು ಕಂಬಕ್ಕೆ ಬಿಗಿದು ಹೊರಟು ಹೋಗವಂತೆ ನೇಕಾರನ ಪತ್ನಿಗೆ ಸೂಚಿಸಿದಳು. ನೇಕಾರನ ಪತ್ನಿ ಅದರಂತೆ ಮಾಡಿ ತನ್ನ ವಿಟನನ್ನು ಕೂಡಲು ಹೊರಟು ಹೋದಳು. ನಾವಿದನ ಪತ್ನಿ ತಾನು ಹಗ್ಗದಿಂದ ಕಟ್ಟಿ ಕೊಂಡು ಆಕೆಯನ್ನು ಬಂಧನದಿಂದ ಬಿಡಿಸಿ ವಿಟನನ್ನು ಕೂಡಲು ಅವಕಾಶ ಮಾಡಿಕೊಟ್ಟಳು.

  ಇದಾದ ಸ್ವಲ್ಪ ಹೊತ್ತಿನಲ್ಲಿ ನೇಕಾರ ಎಚ್ಚತ್ತು ದೂತಿಯನ್ನೇ ತನ್ನ ಪತ್ನಿ ಎಂದು ಭಾವಿಸಿ, "ನಿನ್ನ ಮಿಂಡನು ಯಾರು ?" ಎಂದು ಬೆದರಿಸಿ ಕೇಳಿದ. ಆದರೆ ದೂತಿ ಸ್ವರ ಭೇದಭಯದಿಂದ ಹೆದರಿ ಏನೂ ಹೇಳದೆ ಸುಮ್ಮನಿದ್ದಳು. ನೇಕಾರನು ಮತ್ತೊಮ್ಮೆ ಮೊದ ನಂತೆ ಗದರಿಸಿ ಕೇಳಿದರೂ ನಾವಿದನ ಪತ್ನಿ ಮೊದಲಿನಂತೆಯೇ ಉತ್ತರಿಸದೆ ಸುಮ್ಮನಿದ್ದಳು.ನೇಕಾರನ ಕೋಪ ಮಿತಿಮಿರಿತು. ಹರಿತವಾದ ಬಾಕನ್ನು ತಂದು ಆವೇಶದಿಂದ ದೂತಿಯ ಮೂಗನ್ನು ಕೊಯ್ದು ಮತ್ತೆ ನಿದ್ರಾಪರವಶನಾದ.

  ಇತ್ತ ದೇವಶರ್ಮ ಹಸಿವಿನಿಂದ ಕ್ಷೀಣಕಂಠನಾಗಿ ನಿದ್ರೆಬಾರದೆ ಚಾರಿತ್ರ್ಯವನ್ನು ಕುರಿತು ಚಿಂತಿಸತೊಡಗಿದ.    

  ಚಂದ್ರೋದಯವಾಗುತ್ತಿದಂತೆಯೇ ನೇಕಾರನ ಪತ್ನಿ ತನ್ನ ವಿಟನೊಂದಿಗೆ ಸ್ಟೇಚ್ಛೆಯಿಂದ ರತಿಸುಖವನ್ನು ಅನುಭವಿಸಿ ಅವಸರದಿಂದ ತನ್ನ ಮನೆಗೆ ಹಿಂತಿರುಗಿದಳು. ನಾವಿದನ ಪತ್ನಿಯ ದುರ್ಗತಿಯನ್ನರಿತು ಒಂದು ಉಪಾಯವನ್ನು ಹೂಡಿದಳು. ದೂತೆಯ ಕಟ್ಟು ಬಿಚ್ಚಿ ಮೊದಲಿನಂತೆ ತಾನು ಬಂಧಿತಳಾಗಿ ಅವಳನ್ನು ಕಳುಹಿಸಿಕೊಟ್ಟಳು. ಸ್ವಲ್ಪ ಹೊತ್ತಿನ ಬಳಿಕ ಮತ್ತೆ ಎಚ್ಚೆತ್ತ ನೇಕಾರ ನಿಜವನ್ನು ಹೇಳದಿದ್ದರೆ ಈ ಸಲ ಕಿವಿಯನ್ನು ಕೊಯ್ದು ಹಾಕುವುದಾಗಿ ಗದರಿಸಿದ ಆಗ ಹೊಸದೊಂದು ಉಪಾಯವನ್ನು ಹೂಡಿದ ನೇಕಾರನ ಪತ್ನಿ, "ನಾನು ಓರ್ವ ತಂದೆ ತಾಯಿಗಳಿಗೆ ಹುಟ್ಟಿ ದವಳಾಗಿದ್ದರೆ, ಪತಿವೃತೆಯಾಗಿದ್ದರೆ, ಮನೆದೈವಗಳು ನನಗೆ ರಕ್ಷಕರಾಗಿದ್ದರೆ ನನ್ನ ವಿಕೃತ ಮೂಗು ಮೊದಲಿನಂತಾಗಲಿ, ಕಟ್ಟುಗಳು ಬಿಚ್ಚಿಕೊಳ್ಳಲಿ. ಇಲ್ಲದಿದ್ದರೆ ನಾನು ಮಹಾಸಾದ್ವಿಯ ಅಲ್ಲ !''ಎಂದು ಪತಿಯೆದುರು ಪ್ರತಿಜ್ಞೆ ಮಾಡಿದಳು. ನೇಕಾರನಿಗೂ ತನ್ನ ಹೆಂಡತಿಯ ಮಾತನ್ನು ಪರೀಕ್ಷಿಸಿ ನೋಡಬೇಕೆನ್ನಿಸಿತು. ಹುಲ್ಲಿನ ಬೆಳಕು ಹಿಡಿದು ಪತ್ನಿಯನ್ನು ದಿಟ್ಟಿಸಿದ. ಪತ್ನಿ ಮೊದಲಿನಂತೆ ಸುಂದರಿಯಾಗಿದ್ದಳು. ಇದನ್ನು ಕಂಡು ಮೂಕವಿಸ್ಮಿತನಾದ ನೇಕಾರ ಆಕೆಯನ್ನು ಬಂಧನದಿಂದ ಬಿಡಿಸಿ ಮಂಚಕ್ಕೆ ಸೆಳೆತಂದು ಸರಸಸಲ್ಲಾಪಗಳಿಂದ ಸಂತೋಷಗೊಳಿಸಿದ; ಆ ಧೂರ್ತಗೆ ಮತ್ತೆ ಶರಣಾಗತನಾದ !

  ಇವೆಲ್ಲ ದೃಶ್ಯವನ್ನು ಕಣ್ಣಾರೆ ಕಂಡ ದೇವಶರ್ಮ ಅಚ್ಚರಿಗೊಂಡು ತನ್ನ ಮನಸ್ಸಿನಲ್ಲಿ ಚಾರಿತ್ರ್ಯವನ್ನು ಕುರಿತು ಮತ್ತೆ ಬಗೆಬಗೆಯಾಗಿ ಚಿಂತಿಸತೊಡಗಿದ : 

  ವ್ಯಭಿಚಾರಿಯರು ಯಾವ ತೆರದಿಂದಲಾದರೂ ಎಂಥವರನ್ನೂ ನಂಬಿಸುತ್ತಾರೆ. ಸೋಗಲಾಡಿಯರನ್ನು ಅದೆಷ್ಟು ವಿಧದಲ್ಲಿ ವಿಚಾರಿಸಿ ನೋಡಿದರೂ ಅವರನ್ನು ನಂಬಲಿಕ್ಕಾಗದು. ಇಂಥವರಿಲ್ಲದೆ ಬಾಳಲು ಸಾಧ್ಯವೆಂಬುದನ್ನು ಬಲ್ಲವನೇ ದೇವನಲ್ಲವೇ !''

  ಹೀಗೆ ಮನದಲ್ಲಿ ವಿಚಾರಿಸಿ ಆಶ್ಚರ್ಯಪಟ್ಟ ದೇವಶರ್ಮ ಬಗೆಬಗೆಯಾಗಿ ಯೋಜಿಸುತ್ತಲೇ ಬಹುಕಷ್ಟದಿಂದ ಆ ರಾತ್ರಿ ಕಳೆದ.

  ಇತ್ತ ನೇಕಾರನಿಂದ ತನ್ನ ಮೂಗನ್ನು ಕೊಯಿಸಿಕೊಂಡು ತನ್ನ ಮನೆ ಸೇರಿದ ನಾವಿದನ ಪತ್ನಿಗೆ ಚಿಂತೆಗಿಟ್ಟುಕೊಂಡಿತು. "ಈ ಕತ್ತರಿಸಿಕೊಂಡ ಮೂಗನ್ನೂ ಹೇಗೆ ಮುಚ್ಚಿಡಲಿ?"ಎಂದು ಆಕೆ ಚಿಂತಿಸತೊಡಗಿದಳು.ಅರಸನ ಆಜ್ಞೆಯಂತೆ ನಾವಿದ ಬೆಳಿಗ್ಗೆ ಬೇಗನೆ ಅರಮನೆಗೆ ಹೋಗಬೇಕಾಗಿ ಬಂತು. ಆಗ ಧೂತೆ ಒಂದು ಉಪಾಯವನ್ನು ಹೂಡಿದಳು. ತನ್ನ ಪತಿ ನಾವಿದನ ಕತ್ತಿಯನ್ನು ಜೋರಾಗಿ ಕಲ್ಲ ಮೇಲೆ ಈಡಾಡಿ ಮುಕ್ಕು ಮುರಿದಳು. ಇದನ್ನು ಕಂಡು ವಿಪರೀತ ಕೋಪಗೊಂಡ ನಾವಿದ ಹೆಂಡತಿಯನ್ನು ಬಲವಾಗಿ ಹೊಡೆದ. ಆಗ ನಾವಿದನ ಪತ್ನಿ ತನ್ನ ಮೂಗೇ ಹೋಯಿತೆಂದು ಕೂಗಿಕೊಂಡಳು. ದೂತೆಯ ಈ ಹುಯ್ಯಲನ್ನು ಕೇಳಿ ರಾಜಪುರುಷರು ಓಡಿ ಬಂದು ಮೈಯಲ್ಲಿ ಬಾಸುಂಡೆ ಏಳುವಂತೆ ನಾವಿದನನ್ನು ಚೆನ್ನಾಗಿ ಬಾರಿಸಿದರು. ಬಳಿಕ ಆತನನ್ನು ಬಂಧಿಸಿ ತಂದು ಹರಿದ ಮೂಗಿನ ದೂತೆಯೊಂದಿಗೆ ನ್ಯಾಯಸ್ಥಾನದೆದುರಲ್ಲಿ ನಿಲ್ಲಿಸಿದರು. "ನ್ಯಾಯಮೂರ್ತಿಗಳು ಪರಾಂಬರಿಸಬೇಕು. ನಿರಪರಾಧಿಯಾದ ಈ ಸ್ತ್ರೀರತ್ನವನ್ನು ಈ ನಾವಿದನು ಭಂಗಗೊಳಿಸಿದ್ದಾನೆ. ಆಕೆಯ ಮೂಗನ್ನು ಕತ್ತರಿಸಿ ಹಾಕಿದ್ದಾನೆ. ಆದ್ದರಿಂದ ಈತನಿಗೆ ತಕ್ಕ ಶಿಕ್ಷೆಯನ್ನು ವಿಧಿಸಬೇಕು" ಎಂದು ರಾಜಾಪುರುಷರು ವರದಿ ಸಲ್ಲಿಸಿದರು.

  ನ್ಯಾಯಾಲಯದಲ್ಲಿ ನ್ಯಾಯವಿಚಾರಣೆ ನಡೆಯಿತು. ನ್ಯಾಯಾಧೀಶರು ನಾವಿದನನ್ನು ಕುರಿತು, "ನಿನ್ನ ಹೆಂಡತಿಯ ಮೂಗನ್ನು ಕೊಯ್ದು ಭಂಗಗೊಳಿಸಿದ್ದೇಕೆ ? ಈಕೆ ಪರಪುರುಷರನ್ನು ಇಚ್ಛಿಸಿದಳೆ? ಅಥವಾ ಪ್ರಾಣಾಪಹಾರಕ್ಕೇನಾದರೂ ಯತ್ನಿಸಿದಳೆ ? ಈಕೆಯ ಅಪವಾದವಾದರೂ ಏನು ? ಹೇಳು"ಎಂದು ಕೇಳಿದರು. ಬಲವಾದ ಹೊಡೆತದ ನೋವಿನಿಂದ ತತ್ತರಿಸಿಸುತ್ತಿದ್ದ ನಾವಿದ ಬಾಯಿ ಬಿಡಲಿಲ್ಲ. ಆತ ತೆಪ್ಪಗಾದನ್ನು ಕಂಡ ನ್ಯಾಯಾಧೀಶರು ರಾಜಪುರುಷರ ವರದಿ ಸತ್ಯವಾಗಿದೆ.ಈತ ಅಪರಾಧವೆಸಗಿದ್ದು ನಿಜ. ನಿರ್ದೋಷಿಯಾದ ಹಂಗಸಿನ ರೂಪವನ್ನು ಭಂಗಗೊಳಿಸಿದ್ದಕ್ಕೆ ಈತ ವಧ್ಯೆನು. ಈತನನ್ನು ಶೂಲಕ್ಕೆ ಏರಿಸಿರಿ!" ಎಂದು ತೀರ್ಪು ಕೊಟ್ಟರು.

  ಧೂತರು ವಧ್ಯೆಸ್ಥಾನಕ್ಕೆ ನಾವಿದನನ್ನು ಕರೆದೊಯ್ಯುತ್ತಿರುವಾಗ ತೀರ್ಥಯಾತ್ರೆಗೆ ಹೊರಟ ದೇವಶರ್ಮನು ಎದುರಾದ. ಹಿರಿದಾಗಿ ನೆರೆದಿದ್ದ ಜನಸಮೂಹವನ್ನು ಕಂಡು ಕೌತುಕಗೊಂಡ ದೇವಶರ್ಮನ ಇದೆನೆಂಬುದನ್ನು ನೋಡಬೇಕೆಂದುಕೊಂಡು ಸಮೀಪಕ್ಕೆ ಬಂದು ನೋಡುತ್ತಾನೆ, ನಿರಪರಾಧಿಯಾದ ನಾವಿದನನ್ನು ಶೂಲಕ್ಕೇರಿಸಲು ಕರೆದೊಯ್ಯುತ್ತಿದ್ದಾರೆ ! ದೇವಶರ್ಮನಿಗೆ ತುಂಬಾ ಅಚ್ಚರಿಯಾಯಿತು. ಆಗವನು ತನ್ನ ಮನದಲ್ಲಿ ಇಂತೆಂದುಕೊಂಡ :

  "ಟಗರು ಕಾದಾಡುವಲ್ಲಿ ನರಿ ನಡುವೆ ಸಿಕ್ಕು ಸತ್ತಿತು. ಆಷಾಢ ಭೂತಿಯಿಂದ ನನ್ನ ಹಣ ಹೋಯಿತು. ನೇಕಾರನ ಕೈಯಲ್ಲಿ ದೂತೆ ವ್ಯರ್ಥ ಮೂಗು ಕೊಯ್ಯಿಸಿಕೊಂಡಳು. ಈ ಮೂವರು ತಮ್ಮಿಂದ ತಾವೇ ಅನರ್ಥಗಳನ್ನು ಮಾಡಿಕೊಂಡರು".

  ತನ್ನ ಮನದಲ್ಲಿ ಹೀಗೆ ವಿಚಾರಿಸಿಕೊಂಡ ದೇವಶರ್ಮನು ಬಳಿಕ ಧರ್ಮಾಧಿಕಾರಿಗಳ ಬಳಿಗೆ ಬಂದು, “ಅನ್ಯಾಯವಾಗಿ ಈ ಬಡಪಾಯಿ ನಾವಿದನನ್ನು ವಧಿಸಬೇಡಿ. ಈತನದು ಯಾವ ತಪ್ಪಿಲ್ಲ. ದಯವಿಟ್ಟು ನಾನು ಹೇಳಿದ್ದನ್ನು ನಂಬಿ'' ಎಂದು ಹೇಳಿದ. ಆಗ ನ್ಯಾಯಾಧೀಶರು, "ತಪಸ್ವಿ! ಈ ಬಗ್ಗೆ ತಮ್ಮ ಸಮಾಚಾರವೇನು ?" ಎಂದು ದೇವಶರ್ಮನನ್ನು ಕೇಳಿದರು. ಆಗ ದೇವಶರ್ಮನು ಈ ಮೂವರ ಕಥಾವೃತ್ತಾಂತವನ್ನು ವಿವರವಾಗಿ ನ್ಯಾಯಾಧೀಶರಿಗೆ ಅರಿಕೆ ಮಾಡಿಕೊಂಡ. ಇದನ್ನು ಕೇಳಿ ಮೂಕ ವಿಸ್ಮಿತವಾದ ನ್ಯಾಯಸಭೆ ನಾವಿದನನ್ನು ಬಿಡುಗಡೆ ಮಾಡಿತು. ಮತ್ತೆ ಪರಸ್ಪರ ಸಮಾಲೋಚಿಸಿ ನಾವಿದನ ಪತ್ನಿಗಾದ ರೂಪಭಂಗ ಸಮಂಜಸವೆಂದು ತೀರ್ಮಾನಿಸಿದರು. ಆಕೆ ತನ್ನ ಕರ್ಮಫಲವಾಗಿ ಮೂಗುಕೊಯ್ಯಕೊಂಡಿದ್ದಾಳೆಂದು ಭಾವಿಸಲಾಯಿತು. ರಾಜದಂಡ ಆಕೆಗೆ ಕಿವಿ ಕತ್ತರಿಸುವಂತೆ ವಿಧಿಸಿತು.

  ಈ ಆವಾಂತರದಲ್ಲಿ ದೇವಶರ್ಮನಿಗೆ ಧನಹಾನಿಯುಂಟಾದ ಕ್ಲೇಶ ಮರತು ಹೋಯಿತು. ಆತ ತೀರ್ಥಯಾತ್ರೆ ಮುಗಿಸಿ ಮರಳಿ ತನ್ನ ಕ್ರಾಂತಪುರಕ್ಕೆ ಬಂದ".

  ಹೀಗೆ ದವನಕ ಕರಟಕನಿಗೆ 'ದೇವಶರ್ಮನ ಕಥೆ' ಯನ್ನು ಹೇಳಿದ.

Category:Stories



ProfileImg

Written by LS KADADEVARMATH

Lokayya Shivalingayya Kadadevarmath Education: M.A.In Kannada [1984-85] Karnataka University Dharwad Experience: Writing & DTP Published: Publication of about 60-70 works.