ಕಲ್ಯಾಣಿಗೆ ಬಾಲ್ಯದಿಂದಲೇ ಪಿಟೀಲು ನುಡಿಸುವುದನ್ನು ಕಲಿಯಬೇಕೆಂಬ ಆಸೆ. ಆದರೆ ಅವರಿರುವುದು ಹಳ್ಳಿಯಾದ ಕಾರಣ ಅವಳಿಗೆ ಕಲಿಸುವವರಾರೂ ಇರಲಿಲ್ಲ. ಊರಿನ ದೇವಸ್ಥಾನದಲ್ಲಿ ಸಂಜೆಯ ಹೊತ್ತು ಕುಳಿತು ತನಗೆ ತಿಳಿದಂತೇ ನುಡಿಸುತ್ತಿದ್ದಳು.
ದಿನವೂ ಅಭ್ಯಾಸ ಮಾಡಿದ್ದರಿಂದಲೋ
ಅಥವಾ ಆಸಕ್ತಿ ಇದ್ದ ಕಾರಣಕ್ಕೋ ಅವಳು
ಅದರಲ್ಲಿಯೇ ಆನಂದವನ್ನು ಕಾಣುತ್ತಿದ್ದಳು. ಅದೇ ದೇವಸ್ಥಾನದ ಅರ್ಚಕರ ಮಗ ಆನಂದನಿಗೂ ಪಿಟೀಲು ವಾದನದಲ್ಲಿ ತುಂಬಾ ಆಸಕ್ತಿ.ಆದರೆ ಅವರ ತಂದೆ ಅವನ ಆಸೆಗೆ ತಣ್ಣೀರೆರಚಿದ್ದರು.
"ಚೆನ್ನಾಗಿ ಕಲಿತು ನೌಕರಿ ಮಾಡೋದು ಬಿಟ್ಟು ಆ ದರಿದ್ರ ಪಿಟೀಲು ಕೊಯ್ಯುವುದನ್ನು ಕಲೀತೀನಿ ಅಂತಿದ್ದೀಯಲ್ಲಾ....ಇನ್ನು ಮುಂದೆ ಯಾವತ್ತಾದ್ರೂ ನಿನ್ನ ಬಾಯಿಯಿಂದ ಆ ಶಬ್ದ ಕೇಳಿದ್ರೆ ನಿನ್ನ ಮೂಳೆ ಮುರೀತೀನಿ ನೋಡ್ತಿರು." ಎನ್ನುತ್ತಿದ್ದರು .
ಆನಂದ ಕಲಿಯುವುದರಲ್ಲಿಯೂ ಜಾಣ.ಶಾಲೆಯ ಪಾಠಗಳನ್ನು ಓದಿ ಸಮಯ ಸಿಕ್ಕಾಗಲೆಲ್ಲ ಆಗಾಗ ತಂದೆಯ ಕಣ್ಣು ತಪ್ಪಿಸಿ ಸಂಜೆ ದೇವಸ್ಥಾನಕ್ಕೆ ಬಂದು ಕಲ್ಯಾಣಿ ಪಿಟೀಲು ನುಡಿಸುವುದನ್ನು ಏಕಾಗ್ರತೆಯಿಂದ ನೋಡುತ್ತ ಕುಳಿತಿರುತ್ತಿದ್ದ. ಅವರಿಬ್ಬರಲ್ಲಿ ಅಷ್ಟೊಂದು ಆತ್ಮೀಯತೆಯೇನೂ ಇರಲಿಲ್ಲ.
ಹೀಗೆಯೇ ದಿನಗಳು ಕಳೆದು ಅವನ ಕಾಲೇಜು ಶಿಕ್ಷಣ ಮುಗಿದು ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಹೋಗಿದ್ದ.
ಮೊದಲು ಸಾಧಾರಣ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡು ಚಿಕ್ಕ ಬಾಡಿಗೆ ರೂಮೊಂದರಲ್ಲಿ ಇರತೊಡಗಿದ್ದ. ಆನಂದನ ಯೋಗವೋ ಏನೋ ಅವನಿದ್ದ ರೂಮಿನ ಪಕ್ಕದಲ್ಲೇ ಪಿಟೀಲು ಕಲಿಸುವವರೊಬ್ಬರು ವಾಸಿಸುತ್ತಿದ್ದರು. ಆನಂದ ಅವರ ಕೈಲಿ ತನಗೂ ಪಿಟೀಲು ಕಲಿಸುವಂತೇ ಹಠ ಹಿಡಿದ. ಕೆಲಸದಿಂದ ಬಂದ ಕೂಡಲೇ ಕಲಿಯಲು ಹೊರಡುತ್ತಿದ್ದ. ಒಂದು ತಿಂಗಳು ರೂಮಿನಲ್ಲಿ ಏನೂ ಮಾಡದೇ ಪಿಟೀಲು ಅಭ್ಯಾಸ ಮಾಡುತ್ತಿದ್ದು ರಾತ್ರಿ ಹನ್ನೊಂದು ಗಂಟೆಗೆ ಹೊಟೇಲ್ಲಿಗೆ ಹೋಗಿ ಊಟ ಮಾಡಿ ರೂಮಿಗೆ ಬಂದು ಮಲಗುತ್ತಿದ್ದ.
ಇವನ ಕೆಲಸದ ಜೊತೆಗೆ ಪಿಟೀಲು ಕಲಿಕೆ ಮುಂದುವರಿದಿತ್ತು. ಆರು ತಿಂಗಳು ಕಳೆದಿರಬಹುದು. ಅಷ್ಟರಲ್ಲೇ ಮನೆಯಲ್ಲಿ ಅವನ ತಾಯಿಗೆ ಇದ್ದಕ್ಕಿದ್ದಂತೆ ಫೆರಾಲಿಸೀಸ್ ಆಗಿದೆಯೆಂದು ಫೋನ್ ಬಂದಿತ್ತು. ಕೂಡಲೇ ಆನಂದ ಲಗೇಜ್ ಸಹಿತ ಮನೆಗೆ ಹೊರಟು ಬಂದಿದ್ದ.
ಅವನ ತಂದೆ ಅಮ್ಮನನ್ನು ಕೂಡಲೇ ಆಸ್ಪತ್ರೆಗೆ ಸೇರಿಸಿ ಟ್ರೀಟ್ ಮೆಂಟ್ ಕೊಡಿಸಿದ್ದರಿಂದ ಬಾಯಿ (ಮಾತು) ಕೈ ಎಲ್ಲಾ ಸರಿಯಾಗಿತ್ತು. ಕಾಲು ಮಾತ್ರ ಓಡಾಡಲು ತೊಂದರೆ ಕೊಡುತ್ತಿತ್ತು. ಎರಡು ತಿಂಗಳು ಆರೈಕೆ ಮಾಡಿದರೆ ಸರಿಯಾಗುತ್ತದೆ ಎಂದು ಡಾಕ್ಟರರು ಭರವಸೆ ಕೊಟ್ಟಿದ್ದರು. ನಾಟಿ ವೈದ್ಯರಿಗೆ ತೋರಿಸಿದಾಗ ತೈಲದ ಮಸಾಜ್ ಮಾಡಬೇಕೆಂದು ಹೇಳಿ ತೈಲವನ್ನು ಕೊಟ್ಟಿದ್ದರು.
ಆನಂದನೇ ತಾಯಿಯ ಕಾಲಿಗೆ ಮಸಾಜ್ ಮಾಡಿ ನಿದಾನವಾಗಿ ಬಚ್ಚಲು ಮನೆಯಲ್ಲಿ ಕುರ್ಚಿಯಲ್ಲಿ ಕುಳ್ಳಿರಿಸುತ್ತಿದ್ದ.
ಕಾಲಿಗೆ ಬಿಸಿನೀರಿನ ಶಾಖ ಕೊಟ್ಟು ನಂತರ ಸ್ನಾನ ಮಾಡಲು ನೀರು ಹದಗೊಳಿಸಿ ಅವರ ಪಕ್ಕದಲ್ಲೇ ಇಟ್ಟುಬಂದರೆ ಅವರು ಸ್ನಾನ ಮಾಡಿ ಕುಳಿತಲ್ಲೇ ಒಂದು ನೈಟಿಯನ್ನು ಹಾಕಿ ಕೊಳ್ಳುತ್ತಿದ್ದರು.
ಮನೆಯಲ್ಲಿ ತಂದೆ ಮಗ ಇಬ್ಬರೂ ಏನಾದರೂ ಮಾಡಿಕೊಳ್ಳುವರು. ದೇವರ ನೈವೇದ್ಯಕ್ಕೆ ಮಾಡುವ ಅನ್ನ ಎರಡೂ ಹೊತ್ತಿನ ಊಟಕ್ಕೆ ಸಾಕಾಗುತ್ತಿತ್ತು.
ಈಗ ಅರ್ಚಕರಿಗೆ ಮಗನನ್ನು ಬೆಂಗಳೂರಿಗೆ ಕಳಿಸುವ ಬದಲಿಗೆ ಅರ್ಚಕ ವೃತ್ತಿಯನ್ನೇ ಕಲಿಸಬೇಕಿತ್ತೆಂದು ಅನಿಸತೊಡಗಿತ್ತು.
ಅದನ್ನೇ ಪತ್ನಿಯ ಮುಂದೆ ಒಂದೆರಡು ಬಾರಿ ಆಡಿಯೂ ತೋರಿಸಿದ್ದರು. ಆನಂದನ ತಾಯಿಗೂ ಮಗನನ್ನು ದೂರ ಕಳಿಸುವ ಮನಸ್ಸಿರಲಿಲ್ಲ.
ಆನಂದನಿಗೂ ಅದೇ ಸರಿ ಅನ್ನಿಸಿತ್ತೇನೋ...
ಅಪ್ಪನ ಜೊತೆ ತಾನೂ ದೇವಸ್ಥಾನಕ್ಕೆ ಪೂಜೆಗೆ ಹೋಗತೊಡಗಿದ್ದ.
ಅರ್ಚಕರು ತಮಗೆ ತಿಳಿದಷ್ಟನ್ನು ಮಗನಿಗೆ ಹೇಳಿಕೊಟ್ಟರು. ನಂತರ ಎಲ್ಲಾ ತರಹದ ಪೂಜಾ ವಿಧಿಗಳ ಪುಸ್ತಕಗಳನ್ನು ಓದಿ ಪೂಜಾ ವಿಧಾನಗಳನ್ನು ಆನಂದ ಕಲಿಯತೊಡಗಿದ್ದ. ಮಗನ ಈ ಆಸಕ್ತಿಯನ್ನು ನೋಡಿ ತಂದೆಗೆ ಈಗ ಸಮಾಧಾನವೇ ಆಗುತ್ತಿತ್ತು.
ಈಗಿನ ದಿನಗಳಲ್ಲಿ ಪೌರೋಹಿತ್ಯ ಮಾಡುವ ಗಂಡಿಗೆ ಹೆಣ್ಣು ಕೊಡುವವರು ಯಾರೂ ಸಿಗುತ್ತಿಲ್ಲವೆಂಬ ಚಿಂತೆಯೊಂದೇ ಅವರನ್ನು ಆಗಾಗ ಕಾಡುತ್ತಿತ್ತು.
ಅದರಲ್ಲೂ ಈಗ ಮನೆಯಲ್ಲಿ ಅವನ ತಾಯಿಗೆ ಅನಾರೋಗ್ಯ. ಅವರಿಂದ ಯಾವ ಕೆಲಸವೂ ಆಗುತ್ತಿರಲಿಲ್ಲ. ಈ ವಿಚಾರ
ಗೊತ್ತಿರುವ ಯಾರೂ ತಮ್ಮ ಮನೆಗೆ ಹೆಣ್ಣು ಕೊಡಲು ಒಪ್ಪುವುದಿಲ್ಲವೆಂಬ ಆತಂಕವಿತ್ತು ಅವರಿಗೆ.
ಆನಂದ ಮಾತ್ರ ಇದಾವುದನ್ನೂ ಯೋಚಿಸದೇ ಎಲ್ಲ ಕೆಲಸಗಳನ್ನೂ ಬೇಸರವಿಲ್ಲದೇ ಮಾಡುತ್ತಿದ್ದ. ಇದಲ್ಲದೇ ಕರೆದ ಕಡೆಯಲ್ಲೆಲ್ಲ ಪೌರೋಹಿತ್ಯಕ್ಕೆ ತಂದೆಯನ್ನೂ ಕರೆದುಕೊಂಡು ಹೋಗುತ್ತಿದ್ದ. ಇದರಿಂದ ಸಾಕಷ್ಟು ಹಣ ಸಂಪಾದನೆಯೂ ಆಗುತ್ತಿತ್ತು.
ಮೊದಮೊದಲು ತಾಯಿಯನ್ನು ಬಿಟ್ಟು ಹೋಗುವುದು ಸಮಸ್ಯೆಯಾಗುತ್ತಿತ್ತು.
ಹಾಗಾಗಿ ಬೇರೆ ಕಡೆ ಪೌರೋಹಿತ್ಯಕ್ಕೆ ಕರೆದರೆ ಹೋಗಲು ಒಪ್ಪುತ್ತಿರಲಿಲ್ಲ.
ಒಂದೊಂದು ದಿನ ಕಲ್ಯಾಣಿ ದೇವಸ್ಥಾನಕ್ಕೆ ಬಂದವಳು ಅರ್ಚಕರ ಪತ್ನಿಗೆ ಏನಾದರೂ ಸಹಾಯ ಮಾಡುತ್ತಿದ್ದಳು.
ಒಮ್ಮೆ ಅರ್ಚಕರು ಒಂದು ದಿನದ ಮಟ್ಟಿಗೆ ಮನೆಯನ್ನು ನೋಡಿಕೊಳ್ಳಲು ಕಲ್ಯಾಣಿಯನ್ನು ಕೇಳಿದ್ದರು.ಕಲ್ಯಾಣಿ ಒಪ್ಪಿಕೊಂಡು ಅವರು ಮನೆಗೆ ಬರುವ ತನಕ ಅವರನ್ನು ನೋಡಿಕೊಂಡಿದ್ದಳು. ಆ ದಿನ ಅವರಿಗೆ ತಾನೇ ಸ್ನಾನ ಮಾಡಿಸಿ ಸೀರೆಯನ್ನೇ ಉಡಿಸಿದ್ದಳು. ಅರ್ಚಕರು ಬರುವಾಗ ಕುರ್ಚಿಯ ಮೇಲೆ ಸೀರೆಯುಟ್ಟು ಕುಳಿತ ಪತ್ನಿಯನ್ನು ನೋಡಿ ಸಂತೋಷದಿಂದ ಹತ್ತಿರ ಬಂದು ಪ್ರೀತಿಯಿಂದ ಅವರ ತಲೆಸವರಿದ್ದರು.
ಅದರ ನಂತರ "ಬೇರೆ ಕಡೆಯಲ್ಲಿ ಪೌರೋಹಿತ್ಯಕ್ಕೆ ಕರೆದರೆ ನೀವು ಹೋಗಿಬನ್ನಿ ನನ್ನ ಸಹಾಯಕ್ಕೆ ಕಲ್ಯಾಣಿಗೆ ಹೇಳುತ್ತೇನೆ." ಎಂದು ಆನಂದನ ತಾಯಿ ಹೇಳಿದ್ದರು.
ಅಂದಿನಿಂದ ಕಲ್ಯಾಣಿ ಪ್ರತೀದಿನ ಬಂದು ಅವರಿಗೆ ಸ್ನಾನ ಮಾಡಿಸಿ ಸೀರೆ ಉಡಿಸಿ ಹೋಗುತ್ತಿದ್ದಳು. ತೈಲದ ಮಸಾಜನ್ನು ಆನಂದನೇ ಮಾಡುತ್ತಿದ್ದ. ಈಗೀಗ ಅವರಿಂದ ಸ್ವಲ್ಪಹೊತ್ತು ನಿಂತುಕೊಳ್ಳಲು ಆಗುತ್ತಿತ್ತು. ವೀಲ್ ಚೇರ್ ನಲ್ಲಿ ಬಾತ್ ರೂಮಿಗೆ ಹೋಗಿ ಬರತೊಡಗಿದ್ದರು. ಅಡುಗೆಯಲ್ಲೂ ಗಂಡನಿಗೆ ಸಣ್ಣಪುಟ್ಟ ಸಹಾಯ ಮಾಡುತ್ತಿದ್ದರು.
ಸಂಜೆಯ ಹೊತ್ತು ಕಲ್ಯಾಣಿ ಪಿಟೀಲು ನುಡಿಸುವುದು ನಡೆದೇ ಇತ್ತು. ಒಮ್ಮೊಮ್ಮೆ ಆನಂದನೂ ಬರುತ್ತಿದ್ದ. ತಾನು ಕಲಿತಿದ್ದನ್ನು ಕಲ್ಯಾಣಿಗೂ ಕಲಿಸುತ್ತಿದ್ದ. ಹೀಗಾಗಿ ಇಬ್ಬರಿಗೂ ಅಭ್ಯಾಸವಾಗಿತ್ತು. ಹಾಗಾಗಿ ನವರಾತ್ರಿಯ ಸಮಯದಲ್ಲಿ ಇವರದೇ ದೇವಸ್ಥಾನದಲ್ಲಿ ಒಂದೆರಡು ದಿನ ಪ್ರೋಗ್ರಾಂ ಇಟ್ಟುಕೊಂಡಿದ್ದೂ ಆಯಿತು.
ಇದನ್ನು ನೋಡಿದ ಅರ್ಚಕರಿಗೆ ಆಶ್ಚರ್ಯದ ಜೊತೆಗೆ ಸಂತೋಷದಿಂದ ಮನಸ್ಸು ತುಂಬಿಬಂದಿತ್ತು. ಕಲ್ಯಾಣಿ ಮತ್ತು ಆನಂದರ ಮನಸ್ಸಿಗೂ ಅದೇನೋ ಸಂತೋಷ.
ಆದರೆ ಅವರಿಬ್ಬರಲ್ಲಿ ಪಿಟೀಲು ಸ್ನೇಹವೊಂದನ್ನು ಬಿಟ್ಟರೆ ಅದಕ್ಕೂ ಹೆಚ್ಚಿನ ಆತ್ಮೀಯತೆಯೇನೂ ಇರಲಿಲ್ಲ.
ತಮ್ಮ ಮಗ ಆನಂದ ಮತ್ತು ಕಲ್ಯಾಣಿಯ ಅಭಿರುಚಿಗಳು ಒಂದೇ ಆದ ಕಾರಣ ಅರ್ಚಕರ ಮನಸ್ಸಿಗೆ ಒಂದು ಯೋಚನೆ ಬಂದಿತ್ತಾದರೂ ಸಧ್ಯಕ್ಕೆ ಸುಮ್ಮನಿದ್ದರು.
ಕಲ್ಯಾಣಿ ದಿನವೂ ಅರ್ಚಕರ ಪತ್ನಿಯ ಸೇವೆಯನ್ನು ನಿಸ್ವಾರ್ಥ ಭಾವನೆಯಿಂದ ಮಾಡುತ್ತಿದ್ದಳು. ಅವರೂ ಬಡವರೇ. ಅವಳಿಗೆ ತಂದೆ ತಾಯಿ ಇರಲಿಲ್ಲ. ಅಣ್ಣ ಕಮಲಾಕರನಿಗಿಂತ ಕಲ್ಯಾಣಿ ಐದು ವರ್ಷ ಚಿಕ್ಕವಳು. ಕಮಲಾಕರ ಯಾವುದೋ
ಒಂದು ಚಿಕ್ಕ ಕೆಲಸದಲ್ಲಿದ್ದ. ಅವನಿಗೆ ಇಪ್ಪತ್ತೊಂದನೆಯ ವಯಸ್ಸಿಗೇ ಮದುವೆಯಾಗಿತ್ತು.ಮದುವೆಯಾಗಿ ಎರಡು ವರ್ಷವಾಗಿತ್ತು. ಅವಳ ಅತ್ತಿಗೆ ಕಲ್ಯಾಣಿಯ
ಸ್ವಾತಂತ್ರ್ಯಕ್ಕೆ ಅಡ್ಡಿ ಬರದಿದ್ದುದು ತನ್ನ ಅದೃಷ್ಟವೆಂದೇ ಕಲ್ಯಾಣಿ ಭಾವಿಸಿದ್ದಳು.
ಬೆಳಗಿನ ಸಮಯದಲ್ಲಿ ಅರ್ಚಕರ ಪತ್ನಿಗೆ ಸ್ನಾನ ಮಾಡಲು ಸೀರೆ ಉಡಲು ಸಹಾಯ ಮಾಡುತ್ತಿದ್ದ ಕಲ್ಯಾಣಿ ಅವರಿಗೂ ಈಗೀಗ ಆಪ್ತಳಾಗಿದ್ದಳು.
ಒಂದು ದಿನ ಆನಂದ ತಮ್ಮದೇ ದೇವಸ್ಥಾನದ ಪೂಜೆಗೆಂದು ಹೋಗಿದ್ದ. ಕಲ್ಯಾಣಿ ಅಮ್ಮನಿಗೆ ಸ್ನಾನ ಮಾಡಿಸಿ ಮನೆಗೆ ಹೊರಟಿದ್ದಳು. ಆಗ ಅರ್ಚಕರು ಕಲ್ಯಾಣಿಯನ್ನು ಕರೆದು "ಮಗೂ ನಮ್ಮ ಮನೆಗೆ ನೀನು ಬೆಳಕಾಗಿ ಬರುತ್ತೀಯಾ..?" ಎಂದು ನೇರವಾಗಿ ಕೇಳಿದ್ದರು. ಕಲ್ಯಾಣಿಗೆ ಮಾತೇ ಹೊರಡದೇ ಸುಮ್ಮನಿದ್ದು ಹಾಗೆಯೇ ಮನೆಗೆ ಬಂದಿದ್ದಳು.
ಸಂಜೆ ಕಲ್ಯಾಣಿ ದೇವಸ್ಥಾನಕ್ಕೆ ಹೋದಾಗ ಆನಂದ ಏನೋ ಯೋಚಿಸುತ್ತ ಕುಳಿತಿರುವುದನ್ನು ನೋಡಿದರೂ ಅವನನ್ನು ಮಾತನಾಡಿಸುವ ಗೋಜಿಗೆ ಹೋಗದೇ ತನ್ನ ಪಿಟೀಲು ಕೈಗೆತ್ತಿಕೊಂಡು ಕುಳಿತಳು.
ಕಲ್ಯಾಣಿ ಪಿಟೀಲು ನುಡಿಸುವುದನ್ನು ತನ್ಮಯನಾಗಿ ನೋಡುತ್ತ ಕುಳಿತ ಆನಂದ.
ಅವನ ಮನಸ್ಸಿಗೂ ಕಲ್ಯಾಣಿಯ ಗುಣ ನಡತೆ ಇಷ್ಟವಾಗಿತ್ತು. ಆದರೆ ಅವಳ ಮನಸ್ಸಿನಲ್ಲಿ ಏನಿದೆಯೋ. ಅವಳಿಗೂ ನೌಕರಿಯಲ್ಲಿರುವ ಗಂಡನೇ ಬೇಕೆಂಬ ಆಸೆಯಿದ್ದರೆ....ಎಂದು ತನ್ನ ಯೋಚನೆಯಿಂದ ಹಿಂದಕ್ಕೆ ಬಂದು ಮತ್ತೆ ಅವಳನ್ನೇ ನೋಡುತ್ತ ಕುಳಿತ.
ತಮ್ಮ ಮನೆಗೆ ಸಹಾಯ ಮಾಡುತ್ತಿದ್ದಾಳೆಂಬ ಕಾರಣದಿಂದ ಅವಳನ್ನು ತಾನು ಮದುವೆಯಾಗಲು ಬಯಸುವುದು ತಪ್ಪು.
ಕಲ್ಯಾಣಿ ತನ್ನ ಮನಸ್ಸಿಗೊಪ್ಪುವ ಗಂಡನ್ನು ಮದುವೆಯಾಗಿ ಎಲ್ಲಾದರೂ ಸುಖವಾಗಿರಲೆಂದು ಅವನ ಮನಸ್ಸು ಹಾರೈಸಿತ್ತು. ಅವನ ನೋಟದಲ್ಲಿ ತನ್ನ ತಾಯಿಯ ಸೇವೆ ಮಾಡುತ್ತಿದ್ದ ಕಲ್ಯಾಣಿಯ ಬಗ್ಗೆ ಕೃತಜ್ಞತೆ ಮಾತ್ರ ತುಂಬಿತ್ತು.
ಅಕಸ್ಮಾತ್ತಾಗಿ ಕಲ್ಯಾಣಿ ಆನಂದನನ್ನು ನೋಡಿದಾಗ ಅವಳ ಕಣ್ಣಿನಲ್ಲಿ ಆನಂದನಿಗೆ ಪ್ರೇಮದ ಕಿರಣವೊಂದು ಗೋಚರಿಸಿದಂತೇ ಭಾಸವಾಗಿತ್ತು. ಆದರೆ ಅದು ನಿಜವೋ
ಕೇವಲ ತನ್ನ ಭ್ರಮೆಯೋ ಎಂದು ಗೊತ್ತಾಗದೇ ಅವಳನ್ನೇ ನೋಡುತ್ತ ಕುಳಿತ.
ಇದೀಗ ಇಬ್ಬರ ಕಣ್ಣುಗಳೂ ಬೆರೆತು ಪರಸ್ಪರ ಮಾತಾಡಿಕೊಂಡವು. ಇಬ್ಬರ ಮನಸ್ಸಿಗೂ ಅರ್ಥವಾಗದ ಭಾಷೆಯೊಂದು ನಾಲ್ಕೂ ಕಣ್ಣುಗಳಿಗೆ ಅರ್ಥವಾಗಿತ್ತೇನೋ. ಕಲ್ಯಾಣಿಯ ಕಣ್ಣಿನ ರೆಪ್ಪೆಗಳು ನಾಚಿಕೆಯಿಂದ ಬಾಗಿದ್ದವು.
ಅವಳ ಕಣ್ಣಿನ ಭಾಷೆ ಆನಂದನ ಹೃದಯಕ್ಕೂ ಅರ್ಥವಾಗಿತ್ತು. ರೋಗಿ ಬಯಸಿದ್ದೂ ಒಂದೇ ವೈದ್ಯರು ಹೇಳಿದ್ದೂ ಒಂದೇ ಎನ್ನುವಂತೇ ಇಬ್ಬರ ಮನಸ್ಸೂ ಪ್ರೇಮಗೀತೆ ಹಾಡಿತ್ತು.
ಆನಂದನಿಗೆ ಅವನ ತಂದೆ ಕಲ್ಯಾಣಿಯೊಂದಿಗೆ ತಾನು ಕೇಳಿದ ವಿಚಾರವನ್ನು ಇದುವರೆಗೂ ತಿಳಿಸಿರಲಿಲ್ಲ.ಅವರಿಗೂ ಕಲ್ಯಾಣಿಯ ಅಭಿಪ್ರಾಯದ ಬಗ್ಗೆ ಅನುಮಾನವಿತ್ತು.
ಆದರೆ ಯಾರನ್ನೂ ಕೇಳದೇ ಈ ಕ್ಷಣದಲ್ಲಿ ದೇವರ ಪವಿತ್ರ ಸ್ಥಳದಲ್ಲಿ ಕಲ್ಯಾಣಿ ಎಂಬ ದೇವತೆ ಆನಂದನ ಮನದಲ್ಲಿ ಸ್ಥಿರವಾಗಿ ನಿಂತು ಮನೆ ಮಾಡಿಬಿಟ್ಟಿದ್ದಳು.
ಮುಕ್ತಾಯ.....
0 Followers
0 Following