"ಅಮ್ಮ ನಿನಗೇನು ಗೊತ್ತಾಗಲ್ಲ.. ಸ್ವಲ್ಪ ಸುಮ್ಮನೆ ಇದ್ದು ಬಿಡು." ಅದೆಷ್ಟು ಜೋರಾಗಿ ಮಾತನಾಡಿ ಬಯ್ಯದು ಹೋದ. ನನಗೇನು ತಿಳಿಯುವುದಿಲ್ಲವೇ.? ಕನ್ನಡಿಯ ಮುಂದೆ ನಿಂತು ಕುಳಿತು ನನ್ನ ನಾನೇ ಪ್ರಶ್ನೆ ಕೇಳಿಕೊಂಡಾಗ ನನ್ನ ಪ್ರತಿಬಿಂಬ ಕೂಡ ನೀನು ದಡ್ಡಿ ಎಂದು ಅನುಕಿಸುವ ಹಾಗಿತ್ತು.
ಹೌದು.!
ನಾನು ಜಗತ್ತಿನ ಜ್ಞಾನ ಇಲ್ಲದಿರುವ ಪೆದ್ದು ನಾನು. ನನ್ನ ಹೆಸರು ಅರುಂಧತಿ. ಅಕ್ಷರಗಳ ಜೊತೆಗೆ ಹೆಚ್ಚಾಗಿ ನಂಟಿಲ್ಲ. ಹುಟ್ಟಿದಾಗ ಅಪ್ಪ ಅಮ್ಮ ಹೆಣ್ಣು ಎನ್ನುವ ಕಾರಣಕ್ಕೆ ಹೊರಗಿನ ಜಗತ್ತಿಗೆ ನನ್ನ ಬಿಟ್ಟಿರಲಿಲ್ಲ ಹಾಗಂತ ಅವರೇನು ನನ್ನ ತಿರಸ್ಕಾರ ಮಾಡಲಿಲ್ಲ ಆದರೆ ಹೆಣ್ಣು ನಾಲ್ಕು ಗೋಡೆಯ ನಡುವೆ ಸೀಮಿತ ಎನ್ನುವಂತೆ ಬೆಳೆಸಿ ಬಿಟ್ಟರು. ನನಗಂತೂ ಮನೆ ಕೆಲಸ ಮನೆಯವರ ಒಡನಾಟ ಇಷ್ಟೇ ಪ್ರಪಂಚ ಎಂದು ಬೆಳೆದು ಬಿಟ್ಟಿದ್ದೆ. ಓದಿದ್ದು ಹೆಚ್ಚೆಂದರೆ ಐದನೆಯ ತರಗತಿಯವರೆಗೆ. ಓದಲು ಸ್ಪಷ್ಟವಾಗಿ ಬಾರದೇ ಹೋದರೂ ಅಕ್ಷರಗಳನ್ನ ಒಟ್ಟುಗೂಡಿಸಿ ಓದುವ ಸಣ್ಣ ಮಟ್ಟಿಗಿನ ಶಿಕ್ಷಣ ನನಗೆ ದೊರೆತದ್ದು ನನ್ನ ಪುಣ್ಯ. ವಯಸ್ಸಿಗೆ ಬಂದ ಮೇಲೆ ಅಪ್ಪ ಅಮ್ಮ ನನ್ನನ್ನ ಮನೆಯೊಳಗೆ ಬಂಧಿ ಮಾಡಿ ಬಿಟ್ಟರು. ಹೊರಗಡೆ ಅವರೊಂದಿಗೆ ಸುತ್ತಿದ್ದೆ ಜಾಸ್ತಿ. ಅಲ್ಲಿಂದ ಶುರುವಾದ ಈ ನಾಲ್ಕು ಗೋಡೆಯ ನಡುವಿನ ಸೆರೆಮನೆಯ ಸಹವಾಸ ಈಗಲೂ ಜೊತೆಯಾಗಿದೆ. ಹದಿನೆಂಟು ವಯಸ್ಸಿಗೆ ಸರಿಯಾಗಿ ದೂರದ ಪಟ್ಟಣಕ್ಕೆ ಮದುವೆ ಮಾಡಿ ಕೊಟ್ಟಿದ್ದರು. ಮನೆಯವರು ನೋಡಿ ಮಾಡಿದ ಮದುವೆ ನನ್ನದು. ನನ್ನ ಕರಿಮಣೆ ಒಡೆಯನ ಹೆಸರು ಶೇಖರ್. ಹೆಣ್ಣು ನೋಡಲು ಬಂದಾಗ ಅಪರಿಚಿತ ವ್ಯಕ್ತಿಯಾಗಿ ಇದ್ದವರು ಕನಸುಗಳ ಗೋಪುರದೊಳಗೆ ನನ್ನ ಜೀವನದ ಬಂಧುವಾಗಿ ಬಿಟ್ಟಿದ್ದರು. ಹೆಚ್ಚಾಗಿ ಮಾತುಗಳು ಆಡಿದ್ದು ಕಡಿಮೆಯೇ.. ಅಪರೂಪಕ್ಕೆ ಅವರೇ ಅಪ್ಪನ ಮೊಬೈಲಿಗೆ ಕರೆ ಮಾಡಿ ನನ್ನೊಂದಿಗೆ ಮಾತನಾಡುತ್ತ ಇದ್ದರು. ಆದರೆ ನನಗೆ ಹೇಳದ ಅಂಜಿಕೆ, ಮುಜುಗರ. ಸ್ವಲ್ಪವೇ ಸ್ವಲ್ಪ ಮಾತನಾಡುತ್ತಾ ಇದ್ದದ್ದು ಸುಳ್ಳಲ್ಲ. ಆದರೆ ಮನದಲ್ಲಿ ಆತನ ಜೊತೆಗೆ ಇನ್ನೂ ಎಂಬತ್ತು ವರ್ಷದ ಕನಸುಗಳನ್ನ ಕಟ್ಟಿ ಬಿಟ್ಟಿದ್ದೆ. ಮದುವೆಯಾಗಿ ಪಟ್ಟಣಕ್ಕೆ ಹೋದಾಗ ಅಲ್ಲಿನ ವಾತಾವರಣ ತಿರವೇ ಹೊಸತು ನನಗೆ. ಹೆಚ್ಚಾಗಿ ಏನು ತಿಳಿಯುತ್ತಾ ಇರಲಿಲ್ಲ. ನನ್ನ ಗಂಡ ನನಗೆ ಯಾವ ರೀತಿಯಲ್ಲಿ ಕಡಿಮೆ ಮಾಡಿರಲಿಲ್ಲ. ಅವರದ್ದು ಸಣ್ಣ ದಿನಸಿ ವ್ಯಾಪಾರದ ಅಂಗಡಿಯಿತ್ತು. ಸ್ವಲ್ಪ ಸ್ವಲ್ಪವೇ ಅವರೊಂದಿಗೆ ಹೊಂದಿಕೊಂಡು ಜೀವನ ಸಾಗಿಸುವಾಗ ನನ್ನ ಮಡಿಲಿಗೆ ಬಂದದ್ದು ಮುದ್ದಾದ ಗಂಡು ಮಗು. ಬಹಳವೇ ಸುಖಿ ಜೀವನ ನನ್ನದು ಎನ್ನುವುದರೊಳಗೆ ಜೀವನದಲ್ಲಿ ಬಿರುಗಾಳಿ ಬೀಸಿ ಬಿಟ್ಟಿತ್ತು. ನನ್ನ ಗಂಡ ಆಗಲೇ ಕುಡಿತದ ದಾಸನಾಗಿ ಬಿಟ್ಟಿದ್ದರು. ಜೊತೆಗೆ ಪರ ಸ್ತ್ರೀಯ ಸಹವಾಸ ಶುರುವಾದಾಗ ಜೀವನದ ಮೇಲೆ ನಂಬಿಕೆಯೇ ಕಳೆದು ಹೋಗಿತ್ತು. ಜಗತ್ತಿನ ಪರಿಚಯ ಇಲ್ಲದ ನನಗೆ ಈಗ ಮನೆ ನಡೆಯಲು ಅದೇ ಜಗತ್ತಿಗೆ ಕೆಲಸಕ್ಕೆ ಹೋಗಬೇಕು ಎನ್ನುವ ಅನಿವಾರ್ಯ ಶುರುವಾದಾಗ ಗಟ್ಟಿ ಮನಸ್ಸು ಮಾಡಿ ಮನೆಯಿಂದ ಆಚೆ ಹೆಜ್ಜೆ ಇಟ್ಟಿದ್ದೆ. ಆದರೆ ನನಗೆ ಗೊತ್ತಿರುವುದು ಮನೆಕೆಲಸ ಒಂದೇ. ಅದೇ ನನ್ನ ಮತ್ತೆ ನನ್ನ ಮಗನ ಜೀವನಕ್ಕೆ ದಾರಿಯಾಗಿ ಬಿಟ್ಟಿತ್ತು. ನನ್ನ ಗಂಡ ಮಾಡುವ ಕೆಲಸದಿಂದ ಬರುವ ಸಂಬಳ ಅವನ ಕುಡಿತದ ಜೊತೆಗೆ ವೈಶ್ಯೆಯ ಮನೆಗೆ ಸಾಕಾಗಿ ಬಿಡುತ್ತಿತ್ತು. ಇನ್ನೂ ತವರಿಗೆ ಹೋಗಿ ನನ್ನ ಕಷ್ಟ ಹೇಳಿಕೊಂಡರೆ ಮನೆಯಲ್ಲಿ ಹಿರಿಯರು ಕುಳಿತು ನನ್ನ ಗಂಡನಿಗೆ ಬುದ್ದಿ ಹೇಳುತ್ತಾ ಇದ್ದರೆ ಹೊರತು ಅವನಿಂದ ದೂರ ಬಂದು ಬಿಡು ಎಂದು ಒಮ್ಮೆಯೂ ಹೇಳುತ್ತಲೇ ಇರಲಿಲ್ಲ ಹೀಗಿರುವಾಗ ವಿಧಿಯಿಲ್ಲದೆ ಆತನೊಂದಿಗೆ ಜೀವನ ನಡೆಸಬೇಕಿತ್ತು. ಇನ್ನೂ ಕುಡಿದು ಬಂದು ಜಗಳ ಮಾಡುವ ಆತನ ಪರಿಯ ಕೇಳಲು ಆಗದು ಬಿಡಿ. ಇಷ್ಟೆಲ್ಲದರ ನಡುವೆ ಹೊರಗಡೆ ಮನೆ ಕೆಲಸಕ್ಕೆ ಹೋದಾಗ ಕೆಲ ಗಂಡಸರು ನೋಡುವ ಕೆಟ್ಟ ದೃಷ್ಟಿಯ ಜೊತೆಗೆ ಶ್ರೀಮಂತರು ಕೆಲಸದವರನ್ನು ನೋಡಿಕೊಳ್ಳುವ ಪರಿ ನಿಜಕ್ಕೂ ನರಕವೇ ಸರಿ.!
ಇಷ್ಟೆಲ್ಲಾ ಮುಗಿಯುವುದರೊಳಗೆ ಮತ್ತೊಂದು ದುರಂತ ಎಂದರೆ ಕುಡಿತದ ಚಟಕ್ಕೆ ದಾಸನಾಗಿ ಆರೋಗ್ಯ ಏರುಪೇರಾಗಿ ನನ್ನ ಗಂಡ ಕೊನೆಯುಸಿರು ಎಳೆದು ಬಿಟ್ಟಿದ್ದ. ಆಗ ನನ್ನ ಮಗನಿಗೆ ಹದಿನಾಲ್ಕು ವರ್ಷ ವಯಸ್ಸು. ಇರಲು ಒಂದು ಮನೆ ಇದ್ದಿದ್ದರಿಂದ ಅದೊಂದೇ ನೆಮ್ಮದಿ. ಇರುವ ದಿನಸಿ ಅಂಗಡಿಯನ್ನು ಮುಂದೆ ನಡೆಸಿಕೊಂಡು ಹೋಗಬೇಕು ಎಂದುಕೊಂಡು ಧೈರ್ಯ ತಂದುಕೊಂಡೆ. ಆದರೆ ಅಲ್ಲಿಯೂ ಬಹಳವೇ ಸೋಲು ಅನುಭವಿಸ ಬೇಕಾಗಿ ಬಿಟ್ಟಿತ್ತು. ವ್ಯಾಪಾರದ ಜ್ಞಾನ ಇಲ್ಲ. ಅಕ್ಷರದ ಜ್ಞಾನ ಇಲ್ಲ ಆದರೂ ಹೇಗೋ ಲೆಕ್ಕಾಚಾರದ ಬದುಕಲ್ಲಿ ಮಗನೊಂದಿಗೆ ದಿನಸಿಯ ಅಂಗಡಿಯ ಆಧಾರದಲ್ಲಿ ಜೀವನ ನಡೆಯುತ್ತಲಿತ್ತು. ಮಗನಿಗೆ ವಿದ್ಯೆ ನೀಡಲೇ ಬೇಕು ಎನ್ನುವ ಹಠ ಮಾತ್ರವೇ ನನ್ನಲ್ಲಿ ಇದ್ದದ್ದು. ನನ್ನಂತೆ ಅವ ಆಗದಿರಲಿ ಎನ್ನುವ ಆಸೆಯಲ್ಲಿ ಅವನಿಗೆ ನನ್ನ ಕೈಲಾದಷ್ಟು ಓದಿಸುವ ತಿರ್ಮಾನ ಮಾಡಿ ಸರ್ಕಾರಿ ಶಾಲೆಯಲ್ಲಿಯೇ ಪದವಿಯನ್ನು ಮುಗಿಸಿ ಬಿಟ್ಟಿದ್ದ. ಈಗ ಮುಂದೆ ಅದೇನೋ ದೊಡ್ಡ ಕಂಪನಿಯಲ್ಲಿ ಒಳ್ಳೆಯ ಕೆಲಸ ಗಿಟ್ಟಿಸಿಕೊಂಡು ಬಿಟ್ಟಿದ್ದ. ಆದರೆ ವಿಪರ್ಯಾಸ ಎಂದರೆ ಅವ ಬೆಳೆದಂತೆ ನನ್ನೊಂದಿಗೆ ಒಡನಾಟ ಕಡಿಮೆಯೇ ಮಾಡಿದ್ದ. ಅವನಿಗೆ ಈ ಪೆದ್ದು ಅಮ್ಮನೆಂದರೆ ನಿರ್ಲಕ್ಷ್ಯ. ನನ್ನೊಂದಿಗೆ ಇಲ್ಲೇ ಹತ್ತಿರ ದೇವಸ್ಥಾನಕ್ಕೆ ಬಾ ಎಂದರೂ ಬರುವುದಿಲ್ಲ. ಅವನ ಸ್ನೇಹಿತರ ಎದುರಿಗೆ ನನ್ನನ್ನ ಪರಿಚಯಿಸಲು ಕೂಡ ಅವನಿಗೆ ಮುಜುಗರ. ಏನಾದರೂ ಹೇಳಿದರೆ ಸಾಕು ನಿನಗೇನು ಗೊತ್ತಾಗಲ್ಲ ಸುಮ್ಮನಿದ್ದು ಬಿಡು ಎನ್ನುವ ವಾದ. ಬೆಳಿಗ್ಗೆ ಹೋದರೆ ಸಂಜೆ ಬರುತ್ತಾನೆ ಅಲ್ಲಿಯವರೆಗೂ ನಾನು ಒಬ್ಬಂಟಿ. ರಾತ್ರಿ ಎಂಟು ಗಂಟೆಗೆ ಬಂದರೂ ಮೊಬೈಲ್ ಹಿಡಿದು ಕುಳಿತರೆ ಮುಗಿಯಿತು. ಮನೆಯೊಳಗೆ ನಾನು ಇರುವುದು ಕೂಡ ಅವನಿಗೆ ನೆನಪಾಗುವುದಿಲ್ಲ. ಊಟ ತಿಂಡಿ ಏನಾದರೂ ಬೇಕಾದರೆ ಮಾತ್ರವೇ ನನ್ನ ನೆನಪು ಅವನಿಗೆ. ಒಂದು ದಿನವೂ ಹುಷಾರು ತಪ್ಪಿದಾಗ ಕಾಳಜಿ ಮಾಡಿಲ್ಲ ಬದಲಿಗೆ ದುಡ್ಡು ಕೊಟ್ಟು ಆಸ್ಪತ್ರೆಗೆ ಹೋಗಿ ಬಾ ಎಂದರೆ ಮುಗಿಯಿತು. ನಾನು ಊಟ ಮಾಡಿದೆಯೋ ಇಲ್ಲವೋ ಅದು ತಿಳಿದಿಲ್ಲ. ಮೊಬೈಲ್ ನೋಡಿ ನಗುವುದು ಸ್ನೇಹಿತರ ಜೊತೆಗೆ ಹರಟುವುದು ಇದೊಂದೇ ಅವನ ದಿನಚರಿ. ಅವರ ಜೊತೆಗೆ ಮಾತನಾಡುವ ಎರಡೇ ಮಾತುಗಳನ್ನ ನನ್ನೊಂದಿಗೆ ಮಾತನಾಡಬಹುದು ಅಲ್ಲವೇ?
ಅವನ ಮುಂದೆ ಹೋಗಿ ಮುಖ ನೋಡುತ್ತಾ ಕುಳಿತರೂ ಕೂಡ ಅವನಿಗೆ ಕಿರಿಕಿರಿ. ಇನ್ನೂ ಹೊರಗಡೆ ಸುತ್ತಾಡುವ ಪರಿಪಾಠ ನನಗಿಲ್ಲ. ಇತ್ತೀಚಿಗೆ ದಿನಸಿ ಅಂಗಡಿಯನ್ನು ಬಾಡಿಗೆಗೆ ಕೊಟ್ಟಿದ್ದರಿಂದ ನನಗೆ ಮಾಡಲು ಕೆಲಸಗಳು ಇಲ್ಲ. ಏನಾದರೂ ಹೇಳಿದರೆ ಟಿವಿ ಇದೆ ನೋಡು ಎಂದು ಬಿಡುತ್ತಾನೆ. ಆದರೆ ಆ ಪೆಟ್ಟಿಗೆಯ ಜೊತೆಗೆ ನನ್ನ ಭಾವನೆಗಳನ್ನ ಹಂಚಿಕೊಳ್ಳಲು ಆಗುವುದೇ?
ಇಷ್ಟೇ ನನ್ನ ಜೀವನ ಎಂದುಕೊಂಡು ಬದುಕಿದ್ದೆ ಆದರೆ ನನ್ನ ಮಗ ನನ್ನನ್ನ ಮರೆಯುವಷ್ಟು ವಿದ್ಯಾವಂತನಾಗಿ ಬಿಟ್ಟಿದ್ದಾನೆ ಎನ್ನುವುದು ಮಾತ್ರ ಇತ್ತೀಚಿಗೆ ತಿಳಿದು ಬಿಟ್ಟಿದ್ದು. ಹೇಳದೆ ಕೇಳದೆ ಮದುವೆಯಾಗಿ ಹೆಂಡತಿಯ ಜೊತೆಗೆ ಬಂದಾಗ ನಿಜಕ್ಕೂ ಗಾಬರಿಯಾಗಿ ಬಿಟ್ಟಿತ್ತು. ಅದೇನು ಶಾಸ್ತ್ರೋಕ್ತವಾಗಿ ಆದಂತಹ ಮದುವೆ ಅಲ್ಲ.ಬದಲಿಗೆ ಯಾವುದೋ ಕಚೇರಿಯಲ್ಲಿ ಎರಡು ಸಹಿ ಮಾಡಿದರೆ ಮದುವೆ ಮುಗಿದಂತೆ ಲೆಕ್ಕವಂತೆ. ಅಲ್ಲಿ ಸಹಿ ಮಾಡಿ ನನ್ನ ಸೊಸೆಯನ್ನು ಕರೆದುಕೊಂಡು ಬಂದಿದ್ದ. ಸೊಸೆ ಮೊದಲು ಸ್ವಲ್ಪವಾದರೂ ನಗುತ್ತ ಮಾತನಾಡುತ್ತಾ ಇದ್ದಳು. ಆದರೆ ದಿನಕಳೆದಂತೆ ಅವಳಿಗೂ ನಾನೆಂದರೆ ನಿರ್ಲಕ್ಷ್ಯ. ಅವನೊಂದಿಗೆ ಅವಳು ಕೆಲಸಕ್ಕೆ ಹೋಗುತ್ತಾಳೆ. ನಾನು ಮನೆಯೊಳಗೆ ಖಾಲಿ ಕುಳಿತು ತಿನ್ನುವವಳು ಎನ್ನುವ ಭಾವ ಇಬ್ಬರಲ್ಲಿಯೂ. ಬೆಳಿಗ್ಗೆ ಎಂಟು ಗಂಟೆಗೆ ಕೋಣೆಯಿಂದ ಆಚೆ ಬಂದರೆ ತಿಂಡಿ ತಿಂದು ಒಟ್ಟಿಗೆ ಕೆಲಸಕ್ಕೆ ಹೋಗುತ್ತಾರೆ ಮತ್ತೆ ಸಂಜೆ ಎಂಟು ಗಂಟೆಗೆ ಮನೆಗೆ ಬಂದು ಕೋಣೆ ಸೇರಿಕೊಂಡರೆ ಊಟಕ್ಕೆ ಕರೆದಾಗ ಆಚೆ ಬಂದು ಊಟ ಮಾಡಿ ಹೋಗುತ್ತಾರೆ. ನಡುವೆ ಹೆಚ್ಚು ಎಂದರೆ ನಾಲ್ಕೈದು ಮಾತುಗಳ ವಿನಿಮಯ. ಇಬ್ಬರೂ ಹೆಚ್ಚಾಗಿ ಕೆಲಸ ಕೆಲಸ ಎಂದು ಮುಳುಗಿ ಬಿಟ್ಟಾಗ ನನ್ನ ಕಡೆಗೆ ಅವರಿಗೆ ಗಮನ ಕೊಡಲು ಆಗದು ಬಿಡಿ. ಮನೆಯಲ್ಲಿ ಒಬ್ಬಳು ಮುದುಕಿ ಇದ್ದಾಳೆ ಎನ್ನುವುದು ನೆನಪಿಲ್ಲ.
ಈಗ ಮಗ ಈ ಪುಟ್ಟ ಮನೆಯನ್ನು ಮಾರಿ ಅದೇನೋ ದೊಡ್ಡ ಕಟ್ಟಡದಲ್ಲಿ ಮನೆ ತೆಗೆದುಕೊಳ್ಳಬೇಕು ಎಂದು ಹೇಳಿದ್ದ. ನನಗೆ ಅದು ಸಮ್ಮತ ಎನಿಸಲಿಲ್ಲ. ಇದ್ದ ಮನೆ ಮಾರುವುದು ಬೇಡವೆಂದು ಹೇಳಿದ್ದಕ್ಕೆ ಬಯ್ಯದು ಬಿಟ್ಟ. ನನಗೆ ಅವ ಹುಟ್ಟಿ ಬೆಳೆದ ಮನೆಯೊಳಗೆ ಅವನ ತುಂಟಾಟದ ನೆನಪುಗಳು ಇವೆ. ಆದರೆ ಅವನಿಗೆ ಅದೆಲ್ಲ ಲೆಕ್ಕಕ್ಕೆ ಇಲ್ಲ. ಏನಾದರೂ ಹೇಳುವಂತೆ ಇಲ್ಲ. ಹೇಳಿದರೆ ನಿನಗೇನು ಗೊತ್ತು ಹೊರಗಿನ ಜಗತ್ತು ಎನ್ನುವ ಮಾತು ಬೇರೆ. ಅವನು ಓದು ಕಂಡಿರಬಹುದು ಆದರೆ ನನ್ನಷ್ಟು ಜೀವನದ ಅನುಭವ ಅವನಿಗೆ ಇದೆಯೇ? ಎಷ್ಟೇ ಆದರೂ ವಯಸ್ಸಾಗಿ ಬಿಟ್ಟಿದೆ. ಅವರಿಗೆ ನನ್ನ ಮಾತುಗಳ ಬಗ್ಗೆ ಸಣ್ಣ ಗೌರವ ಕೂಡ ಇಲ್ಲ. ಸೊಸೆಯ ಆಡಂಬರದ ಜೀವನ ಹಿಡಿಸದೆ ಒಂದೆರಡು ಮಾತು ಹೇಳಿದ್ದಕ್ಕೆ ನಾನು ಅವಳನ್ನ ಕಟ್ಟಿ ಹಾಕುವೆ ಎನ್ನುವ ಆರೋಪ. ತಿಳಿಸಿ ಬುದ್ದಿ ಹೇಳಲು ಹೊರಟರೆ ಮನೆ ಬಿಟ್ಟು ಗಂಡನನ್ನ ಕರೆದುಕೊಂಡು ದೂರ ಹೋಗುವೆ ಎನ್ನುವ ಬೆದರಿಕೆ. ಇದ್ದೊಬ್ಬ ಮಗನನ್ನ ದೂರ ಮಾಡಿಕೊಂಡು ನನಗಂತೂ ಬದುಕಲು ಆಗದು. ಅದಕ್ಕೆ ಇತ್ತೀಚಿಗೆ ಮೌನವಾಗಿ ಬಿಟ್ಟಿರುವೆ. ಮಾತುಗಳು ಅಂತೂ ಅಪರೂಪ. ಹೆಚ್ಚೆಂದರೆ ದಿನಕ್ಕೆ ಒಂದತ್ತು ಮಾತುಗಳು ನನ್ನೊಂದಿಗೆ ಮಾತನಾಡುತ್ತಾರೆ. ಅದನ್ನು ಬಿಟ್ಟರೆ ಮತ್ತೇನೂ ಇಲ್ಲ. ನಾನು ಈ ನಾಲ್ಕು ಗೋಡೆಯ ನಡುವೆ ಅಷ್ಟೇ ಜೀವನ. ನಾನೇನು ಅವರಿಗೆ ಹೆಚ್ಚಿಗೆ ಕೇಳಲ್ಲ. ಮಗ ಹುಟ್ಟಿದಾಗಿನಿಂದ ಅವನೊಬ್ಬನೇ ನನ್ನ ಪ್ರಪಂಚ. ಕಾಳಜಿ ಮಾಡುತ್ತಾನೆ ಆದರೆ ಅದು ಕೈಗೆ ದುಡ್ಡು ಕೊಟ್ಟು. ಅವನ ಪ್ರಕಾರ ಮನೆಗೆ ಬೇಕಾದದ್ದು ತಂದು, ಆಸ್ಪತ್ರೆಗೆ ತೋರಿಸಲು ದುಡ್ಡು ಕೊಟ್ಟರೆ ಕಾಳಜಿ ಮಾಡಿದಂತೆ. ಪ್ರೀತಿ ತೋರಿದಂತೆ. ಆದರೆ ನನಗೆ ಇದು ಯಾವುದೂ ಬೇಕಿಲ್ಲ. ಹುಷಾರು ಇಲ್ಲದಿದ್ದಾಗ ಅವ ಆಸ್ಪತ್ರೆಗೆ ಕರೆದುಕೊಂಡು ಹೋಗದೆ ಇದ್ದರೂ ಚಿಂತೆಯಿಲ್ಲ ನನ್ನ ಪಕ್ಕ ಕುಳಿತು ಅಮ್ಮ ಹೇಗಿದ್ದೀಯ ಎಂದು ಪ್ರಶ್ನೆ ಮಾಡಿದರೆ ಸಾಕು. ಅವ ಮೂರು ಹೊತ್ತು ಸಾಕಾಗುವಷ್ಟು ಊಟ ಕೊಡದೆ ಹೋದರೂ ಚಿಂತೆಯಿಲ್ಲ ದಿನಕ್ಕೆ ಒಂದೇ ಒಂದು ಬಾರಿ ಅಮ್ಮ ನೀನು ಊಟ ಮಾಡಿದ್ಯಾ ಎಂದು ಕೇಳಿದರೆ ಸಾಕು. ಅವರೇನು ಗಂಡ ಹೆಂಡತಿಯ ಜೊತೆಗೆ ನನ್ನ ಕರೆದುಕೊಂಡು ಸುತ್ತಾಡಬೇಕಿಲ್ಲ. ದಿನಕ್ಕೆ ಅರ್ಧ ಗಂಟೆ ನನ್ನೊಂದಿಗೆ ನಗುತ್ತ ಮಾತನಾಡಿದರೆ ಸಾಕು. ನನಗೆ ಅವನೇ ಪ್ರಪಂಚ ಆದರೆ ಅವನ ಪ್ರಪಂಚದೊಳಗೆ ನಾನೊಬ್ಬಳು ಓದು ಬರಹ ಗೊತ್ತಿಲ್ಲದಿರುವ ಹೆಣ್ಣು. ಇನ್ನೂ ಮಗನಿಗೆ ನಾನು ಬೇಡ ಎಂದ ಮೇಲೆ ಸೊಸೆ ನನ್ನ ಮಾತು ಕೇಳುತ್ತಾಳೆ ಎನ್ನುವ ಭರವಸೆ ಇಟ್ಟುಕೊಳ್ಳುವುದು ದೂರದ ಮಾತು ಬಿಡಿ. ಇವರೆಲ್ಲ ದುಡ್ಡಿನ ಬೆನ್ನಟ್ಟಿ ಹೊರಟ ಯುವಜನಾಂಗ. ಆದರೆ ದುಡ್ಡಿನ ಬೆನ್ನಟ್ಟಿ ಸಂಬಂಧಗಳ ಬೆಲೆಯನ್ನು ಮರೆತು ಬಿಟ್ಟಿದ್ದಾರೆ ಎನ್ನುವುದೇ ವಿಷಾದ. ನನ್ನ ಅಂತರಾಳದ ಮಾತುಗಳನ್ನ ಹೇಳಿಕೊಳ್ಳಲು ಯಾರು ಇಲ್ಲ. ಕೇಳಲು ಯಾರು ಇಲ್ಲ. ಕೋಪ ಬಂದಾಗ ನನ್ನ ನಾನೇ ಬಯ್ಯದುಕೊಳ್ಳಬೇಕು. ನಾನೇ ಅಳಬೇಕು.. ಇನ್ನೆಷ್ಟು ದಿನ ಇರುತ್ತೇನೆ ಗೊತ್ತಿಲ್ಲ. ಆದರೆ ಇದ್ದಷ್ಟು ದಿನ ನಾನೊಂದು ಮೌನದ ಪೆಟ್ಟಿಗೆ ಈ ನಾಲ್ಕು ಗೋಡೆಯ ಒಳಗಡೆ. ಇದುವೇ ನನ್ನಯ ಅಂತರಾಳ. ಯಾರಿಗೂ ಅರ್ಥವಾಗದೆ ಉಳಿದ ಅಂತರಾಳ. ನನ್ನ ಮನದ ಮಾತಿಗೆ ಮೌನದ ನಿಟ್ಟುಸಿರಿನ ಪದಗಳ ಅಂತರಾಳ.!