Do you have a passion for writing?Join Ayra as a Writertoday and start earning.

ಕೇಶಿರಾಜನ 'ಶಬ್ದಮಣಿದರ್ಪಣ'

ಕನ್ನಡ ವ್ಯಾಕರಣ ಪರಂಪರೆ

ProfileImg
30 Jan '24
5 min read


image

ಕೇಶಿರಾಜನ  'ಶಬ್ದಮಣಿದರ್ಪಣ':

ಕರ್ತೃ - ಕೃತಿ ಪರಿಚಯ:

  ಕೇಶಿರಾಜ 'ಶಬ್ದಮಣಿ ದರ್ಪಣ' ವ್ಯಾಕರಣ ಗ್ರಂಥದ ಕರ್ತೃ. ಹಳಗನ್ನಡದ ಅತ್ಯಂತ ಪ್ರಮುಖ ವ್ಯಾಕರಣಕಾರರಲ್ಲ್ಲಿ ಒಬ್ಬನಾದ ಕೇಶಿರಾಜನ ಕಾಲ ಕ್ರಿ. ಶ. ಸು. 13ನೇ ಶತಮಾನದ ಮದ್ಯ ಭಾಗ. ಈತನ ತಂದೆ 'ಯೋಗಿಪ್ರವರ'ನೆಂದೇ ಸುಪ್ರಸಿದ್ದನಾಗಿದ್ದ ಮಲ್ಲಿಕಾರ್ಜುನ. ಈತ ಕನ್ನಡದ ಮೊತ್ತಮೊದಲ ಸಂಕಲನ ಕೃತಿ 'ಸೂಕ್ತಿಸುಧಾರ್ಣವ'ದ  ಕರ್ತೃ. ಕೇಶಿರಾಜನ ಅಜ್ಜ ಸುಮನೋಬಾಣ ಕವಿಯಗಿದ್ದ ಈತ ಯಾದವ ಕಟಾಕಾಚಾರ್ಯ ನೂ ಆಗಿದ್ದ. ಕೇಶಿರಾಜ - ಮಲ್ಲಿಕಾರ್ಜುನ ಈ ತಂದೆ - ಮಗ

ಇಬ್ಬರೂ ಕನ್ನಡ ಸಾಹಿತ್ಯದಲ್ಲಿ ತಮ್ಮದೇ ಆದ ವಿಶಿಷ್ಟ ಸ್ಥಾನ

ಪಡೆದ ಕೀರ್ತಿಶಾಲಿಗಳು. ಕೇಶಿರಾಜ ಮಹಾಕವಿ ಜನ್ನನ

ಸೋದರಳಿಯ. ಹೀಗೆ ಪಂಡಿತ ಪರಿಸರದಲ್ಲಿ ಬೆಳೆದು ಬಂದಒ ಬ್ಬ ಶ್ರೇಷ್ಠ ವೈಯಾಕಾರಣಿ ಈ ಕೇಶಿರಾಜ.

ಕೃತಿಗಳು :

  ಕೇಶಿರಾಜ ಒಟ್ಟು ಆರು ಕೃತಿಗಳನ್ನು ರಚಿಸಿರುವುದಾಗಿ ತಿಳಿದು ಬರುತ್ತದೆ. ಆದರೆ, ಶಬ್ದಮಣಿದರ್ಪಣ' ಒಂದನ್ನು ಬಿಟ್ಟರೆ ಆತನ ಉಳಿದ ಕೃತಿಗಳು  ನಮಗಿಂದು ಉಪಲಬ್ದವಿಲ್ಲ. 'ಜೋಳಪಾಲ ಚರಿತ್ರೆ', 'ಶ್ರೀಚಿತ್ರಮಾಲೆ', 'ಸುಭದ್ರಾಹರಣ','ಪ್ರಭೋಧಚಂದ್ರ' ಹಾಗೂ 'ಕಿರಾತ' - ಇವು ಕೇಶಿರಾಜನ ಇತರ ಕೃತಿಗಳೆಂದು ಹೇಳಲಾಗುತ್ತಿದೆ.

ಕೇಶಿರಾಜನ 'ಶಬ್ದಮಣಿದರ್ಪಣ':

  ಕೇಶಿರಾಜನ ಶಬ್ದಮಣಿದರ್ಪಣ' ಹಳಗನ್ನಡದಲ್ಲಿ ರಚಿತವಾದ ಒಂದು ಪ್ರಮುಖ ಪ್ರಾಚೀನ ವ್ಯಾಕರಣ ಗ್ರಂಥ. ಬಿ.ಟಿ.ಸಾಸನೂರು ಮತ್ತು ಡಾ|| ಎಂ.ಎಂ. ಕಲಬುರ್ಗಿಯವರು ಹೇಳುವಂತೆ, ಕೇಶಿ

ರಾಜನ 'ಶಬ್ದಮಣಿದರ್ಪಣ' ಕನ್ನಡ ವ್ಯಾಕರಣ ಸಾಹಿತ್ಯದ ಆಚಾರ್ಯ ಕೃತಿ. ಒಂದರ್ಥದಲ್ಲಿ ಇದು ಆತನ ಮಹಾಕಾವ್ಯ.

ಡಿ. ಎಲ್. ನರಸಿಂಹಚಾರ್ಯರಂತೂ "ಶಬ್ದಮಣಿ ದರ್ಪಣಂ  ಕಾವ್ಯವೂ ಹೌದು, ಶಾಸ್ತ್ರವೂ ಹೌದು; ಕಾವ್ಯಲೇಪನವನ್ನು ಪಡೆದಿರುವ ಶಾಸ್ತ್ರವೆಂದರೂ ಸರಿಯೇ.....ಕೇಶಿರಾಜನ ಮನಃಕ್ರೀಡೆ ಅದರಲ್ಲಿ ರಮ್ಯವಾಗಿ ರೂಪುಗೊಂಡಿದೆ'' ಎಂದು ಕೈವಾರಿಸಿದ್ದು ನಿಜಕ್ಕೂ ಸ್ತುತ್ಯಾರ್ಹವಾದುದು. ಇನ್ನೊಂದೆಡೆ ಅವರೇ ಹೇಳುವಂತೆ, ಕೇಶಿರಾಜನ ಸಹೃದಯತೆ ಮತ್ತು ಅಭಿ

ರುಚಿಗಳು ಅವನು ಕೊಟ್ಟಿರುವ ಪ್ರಯೋಗಗಳಲ್ಲಿ ಚೆನ್ನಾಗಿ

ಮೈಗೊಂಡಿವೆ. ಅವು ಅವನ ಭಾವುಕತನವನ್ನು, ರುಚಿ ಸಂಸ್ಕಾ

ರದ ಉನ್ನತಿಕೆಯನ್ನು ತೋರಿಸುತ್ತವೆ. ಇಂಥ ಪ್ರಯೋಗಗಳು ವ್ಯಾಕರಣದ ಅಭ್ಯಾಸಕ್ಕೂ ರಸದ ಲೇಪನವನ್ನು ಬಳಿಯುತ್ತವೆ. ಈ ಕವಿಮನಕ್ಕಿಂತ ಕೇಶಿರಾಜನ ಶಾಸ್ತ್ರೀಯ ಮನ ಹೆಚ್ಚು ಪ್ರಶಂಸನೀಯ. ಕನ್ನಡ ವ್ಯಾಕರಣ ಸಾಹಿತ್ಯದಲ್ಲಿ ಕೇಶಿರಾಜನ 'ಶಬ್ದಮಣಿದರ್ಪಣ'ಕ್ಕೆ ಸಂದ ಪ್ರಾಮುಖ್ಯತೆ, ಘನತೆ, ಗೌರವಗಳು ಇತರ ಕನ್ನಡ ವ್ಯಾಕರಣ ಗ್ರಂಥಗಳಿಗೆ ಸಂದಿಲ್ಲವೆಂದೇ

ಹೇಳಬೇಕಾಗುತ್ತದೆ.

  ಕನ್ನಡ ವ್ಯಾಕರಣ ಪರಂಪರೆ:

 ಕನ್ನಡ ವ್ಯಾಕರಣದಲ್ಲಿ ಎರಡು ಪ್ರಮುಖ ಪ್ರಕಾರಗಳುಂಟು.

ಅವೆಂದರೆ

1. ಹಳಗನ್ನಡ ವ್ಯಾಕರಣ

2. ಹೊಸಗನ್ನಡ ವ್ಯಾಕರಣ

 ಮೊದಲು ಹಳಗನ್ನಡ

ವ್ಯಾಕರಣ ಕುರಿತು

ವಿವೇಚಿಸೋಣ.

1. ಹಳಗನ್ನಡ ವ್ಯಾಕರಣ

  ಸಂಸ್ಕೃತ ವ್ಯಾಕರಣಕ್ಕೆ ಪಾಣಿನಿ ಅಗ್ರಗಣ್ಯನಾಗಿರುವಂತೆ, ಹಳಗನ್ನಡ ವ್ಯಾಕರಣಕ್ಕೆ ಕೇಶಿರಾಜ ಅಗ್ರಗಣ್ಯ. ಕನ್ನಡದಲ್ಲಿ ಕೇಶಿರಾಜನಿಗಿಂತ ಮೊದಲೇ ಕೆಲವು ವ್ಯಾಕರಣ ಗ್ರಂಥಗಳು ಸಿಕ್ಕುತ್ತವೆ. ಆದರೆ ಅವು ಕೇಶಿರಾಜನ 'ಶಬ್ದಮಣಿ ದರ್ಪಣ' ಏರಿದ ಮಟ್ಟಕ್ಕೆ ಏರಲಿಲ್ಲ. ಹೀಗೆಂದ ಮಾತ್ರಕ್ಕೆ ಕೇಶಿರಾಜನಕ್ಕಿಂತ ಹಿಂದಿನ ವೈಯಾಕರಣಿಗಳ ವ್ಯಾಕರಣ ಗ್ರಂಥಗಳು ಮುಖ್ಯವಾದುವಲ್ಲವೆಂದು ಅರ್ಥವಲ್ಲ.  ಅವು ಕೂಡ ಮುಖ್ಯವಾದವುಗಳೇ. ಆದರೆ ಕೇಶಿರಾಜನದು ಮಾತ್ರ ಸಮಗ್ರ ವ್ಯಾಕರಣ ನಿರೂಪಣೆ. ಅದಿರಲಿ, ಈಗ ಕನ್ನಡ ವ್ಯಾಕರಣ ಪರಂಪರೆ ಬೆಳೆದು ಬಂದ ದಾರಿಯನ್ನು ಗಮನಿಸಬಹುದು. 

  ಕನ್ನಡ ವ್ಯಾಕರಣದ ಮೇಲೆ ಸಂಸ್ಕೃತ ವ್ಯಾಕರಣದ ಗಾಢ ಪ್ರಭಾವವಿದೆ. ಸಂಸ್ಕೃತ ವ್ಯಾಕರಣಗಳ ಮಾದರಿಯನ್ನನುಸರಿಸಿ ಕನ್ನಡದಲ್ಲಿ ಅನೇಕ ವ್ಯಾಕರಣ ಗ್ರಂಥಗಳು ಹುಟ್ಟಿಕೊಂಡವು. ಆದ್ದರಿಂದ, ನಮ್ಮ ಪ್ರಾಚೀನ ಕನ್ನಡ ವ್ಯಾಕರಣಕ್ಕೆ  ಸಂಸ್ಕೃತ ವ್ಯಾಕರಣವೇ ಆಕರ. ಇದರ ಫಲವಾಗಿ ಕನ್ನಡ ವ್ಯಾಕರಣದ ಮೇಲೆ ಸಂಸ್ಕೃತ ವ್ಯಾಕರಣದ ಪ್ರಭಾವ ಆದದ್ದು ತೀರಾ ಸಹಜವಾಗಿಯೇ ಇದೆ. 

  ಕನ್ನಡ ವ್ಯಾಕರಣದ ಇತಿಹಾಸ ಪ್ರಾರಂಭವಾಗುವುದು ಕನ್ನಡದ ಮೊದಲ ಉಪಲಬ್ಧ 'ಕವಿರಾಜಮಾರ್ಗ'ದಿಂದ. ಕನ್ನಡ ಸಾಹಿತ್ಯ - ಭಾಷೆಗಳ ಇತಿಹಾಸದಲ್ಲಿ 'ಕವಿರಾಜಮಾರ್ಗ' ಒಂದು ಖಚಿತವಾದ ಘಟ್ಟ. 'ಕವಿರಾಜಮಾರ್ಗ' ಮೂಲತಹ ವ್ಯಾಕರಣಕ್ಕಾಗಿ ಸೃಷ್ಟಿಯಾದ ಕೃತಿ ಯೇನಲ್ಲ ; ಅಲಂಕಾರ ನಿರೂಪಣೆಗೆ ಸೃಷ್ಟಿಯಾದ ಒಂದು  ಅಲಂಕಾರ ಗ್ರಂಥ. ಆದರೆ ಕವಿರಾಜಮಾರ್ಗಕಾರ ಶ್ರೀವಿಜಯ ತನ್ನ 'ಕವಿರಾಜಮಾರ್ಗ'ದಲ್ಲಿ ಕನ್ನಡ ವ್ಯಾಕರಣ ಕುರಿತಂತೆ ಪ್ರಾಸಂಗಿಕವಾಗಿ ವಿವರಿಸಿದ್ದಾನೆ.  ನಮಗೀಗ ತಿಳಿದ ಮಟ್ಟಿಗೆ ಶ್ರೀವಿಜಯ ಕನ್ನಡ ವ್ಯಾಕರಣ ಕುರಿತಂತೆ ಪ್ರಸ್ತಾಪಿಸಿದ ಮೊಟ್ಟ ಮೊದಲಿಗ. ಇದಕ್ಕಿಂತ ಪೂರ್ವದಲ್ಲಿ ಕನ್ನಡ ವ್ಯಾಕರಣ ಸಂಪ್ರದಾಯವೊಂದು ಬೆಳೆದು ಬಂದಿತ್ತೆಂಬುದಕ್ಕೆ 'ಕವಿರಾಜ ಮಾರ್ಗ'ದಲ್ಲೇ ಉಲ್ಲೇಖ ಲಭಿಸುತ್ತದೆ. ಆದರೆ 'ಕವಿರಾಜಮಾರ್ಗ'ಕ್ಕಿಂತ ಮುಂಚೆ ರಚಿತವಾದ ಆ ಯಾವ ವ್ಯಾಕರಣ ಗ್ರ೦ಥಗಳೂ ನಮಗಿನ್ನೂ ಉಪಲಭ್ಯವಿಲ್ಲ. 'ಕವಿರಾಜ ಮಾರ್ಗ'ದ ನಂತರ ನಾಗವರ್ಮನ 'ಕರ್ಣಾಟಕ ಭಾಷಾ ಭೂಷಣ'ದ ವರೆಗಿನ ಕಾಲಾವಧಿಯಲ್ಲಿ ಅನೇಕ ಕನ್ನಡ ವ್ಯಾಕರಣಗಳು ರಚಿತವಾಗಿದ್ದವೆಂದು ತಿಳಿದುಬರುತ್ತದೆ. ಆದರೆ ದುರ್ದೈವದಿಂದ ಆ ಯಾವ ಕೃತಿಗಳೂ ನಮಗಿಂದು ಉಪಲಬ್ಧವಿಲ್ಲ. ಕನ್ನಡ ವ್ಯಾಕರಣ ಪರಂಪರೆಯಲ್ಲಿ 'ಕವಿರಾಜ ಮಾರ್ಗ'ದ ನಂತರ ನಮಗೆ ದೊರೆತ ವ್ಯಾಕರಣ ಗ್ರಂಥಗಳೆಂದರೆ ಕೇವಲ ನಾಲ್ಕೇ ನಾಲು. ಅವೆಂದರೆ-

1. ನಾಗವರ್ಮನ ‘ಕರ್ಣಾಟಕ ಭಾಷಾಭೂಷಣ’

2. ನಾಗವರ್ಮನ 'ಕಾವ್ಯಾವಲೋಕನ'ದ ಮೊದಲ ಭಾಗ 'ಶಬ್ದಸ್ಮೃತಿ".

3. ಕೇಶಿರಾಜನ ‘ಶಬ್ದಮದರ್ಪಣ’

4 . ಭಟ್ಟಾಕಳಂಕನ 'ಶಬ್ದಾನುಶಾಸನ'.

   ಇವು ನಾಲ್ಕು ಕನ್ನಡದ ಪ್ರಾಚೀನ ಅಥವಾ ಹಳಗನ್ನಡ ಉಪಲಬ್ಬ ವ್ಯಾಕರಣ ಗ್ರಂಥಗಳು.

ಕವಿರಾಜಮಾರ್ಗ (850): 

  ಈಗಾಗಲೇ ಹೇಳಿದಂತೆ, ಕನ್ನಡ ವ್ಯಾಕರಣದ ಇತಿಹಾಸ ಪ್ರಾರಂಭವಾಗುವುದು ಕನ್ನಡದ ಮೊದಲ ಉಪಲಬ್ಧ ಗ್ರಂಥ ಕವಿರಾಜ ಮಾರ್ಗ'ದಿಂದ.  ಕನ್ನಡ ಸಾಹಿತ್ಯ ಹಾಗೂ ಭಾಷೆಗಳ ಇತಿಹಾಸದಲ್ಲಿ 'ಕವಿರಾಜ ಮಾರ್ಗ' ಒಂದು ಖಚಿತವಾದ ಘಟ್ಟ. 

'ಕವಿರಾಜ ಮಾರ್ಗ' ಮೂಲತಃ ಒಂದು ಅಲಂಕಾರ ಗ್ರಂಥ; ಇದು ಅಲಂಕಾರಶಾಸ್ತ್ರಕ್ಕಾಗಿಯೇ ಮೀಸಲಾದ ಒಂದು ಪ್ರಸಿದ್ಧ ಗ್ರಂಥ. ಆದರೂ ಇದರಲ್ಲಿ ಪ್ರಾಸಂಗಿಕವಾಗಿ ವ್ಯಾಕರಣ ವಿಚಾರಗಳು ಬರುತ್ತವೆ. ಕವಿರಾಜ ಮಾರ್ಗದಲ್ಲಿ ಕನ್ನಡ ಭಾಷಾ ಸ್ವರೂಪದ

ಪರಿಶೀಲನೆ ಮತ್ತು ವ್ಯಾಕರಣಾಂಶಗಳ ಪ್ರಸ್ತಾವನೆಗೆ ಸ್ವಲ್ಪ ಮಟ್ಟಿಗೆ ಪ್ರಾಸಂಗಿಕವಾಗಿ ಸ್ಥಳ ದೊರೆತಿದೆ. ಶ್ರೀವಿಜಯ ತನ್ನ ಕೃತಿಯಲ್ಲಿ ವಿವರಿಸಿದ ವ್ಯಾಕರಣಾಂಶಗಳನ್ನು ನಾಗವರ್ಮ, ಕೇಶಿರಾಜ ಭಟ್ಟಾಕಳಂಕರು ತಪ್ಪದೆ ತಮ್ಮ ವ್ಯಾಕರಣ ಗ್ರಂಥಗಳಲ್ಲಿ

ನಮೂದಿಸಿದ್ದಾರೆ. 'ಪಳಗನ್ನಡಮಂ ಪೊಲಗಿಡಿಸಿ ನುಡಿವರ್' ಎಂದು ಆತ ಹೇಳಿದ್ದನ್ನು ಗಮನಿಸಿದರೆ, ಆತ ಕನ್ನಡದ ಅವಸ್ಥಾಭೇದಗಳನ್ನು ಗಮನವಿಟ್ಟು ನೋಡಿದ್ದನೆಂಬುದು ಸುಸ್ಪಷ್ಟ. ಕಾರಕ ವಿಷಯ, ವಚನ ವಿಚಾರ,

ಕ್ರಿಯಾವಿಶೇಷಣ ಪ್ರಯೋಗ, ವಿಶೇಷಣ ವಿಶೇಷ್ಯ ಪದಗಳ ಸಮಾಸ, ಅರಿಸಮಾಸ, ಸಮಸಂಸ್ಕೃತ -  ಈ ಮುಂತಾದ ಅನೇಕ ವ್ಯಾಕರಣ ವಿಷಯಗಳನ್ನು ಕುರಿತು ವಿವರಿಸುವಲ್ಲಿ ಶ್ರೀ ವಿಜಯ ಒಬ್ಬ ವೈಯಾಕರಣಿಯಾಗಿ ನಮಗೆ ಕಂಡುಬರುತ್ತಾನೆ.

೨. ನಾಗವರ್ಮನ 'ಶಬ್ದಸ್ಮೃತಿ' 

  'ಶಬ್ದಸ್ಮೃತಿ' ನಾಗವರ್ಮನ ಸ್ವತಂತ್ರ ಕೃತಿಯಲ್ಲ; ಆತನ 'ಕಾವ್ಯಾವಲೋಕನ'ದ ಮೊದಲ ಭಾಗ. ಕವಿರಾಜಮಾರ್ಗವನ್ನು ಬಿಟ್ಟರೆ,ಈಗ ನಮಗೆ ಉಪಲಬ್ಧವಿರುವ ಕನ್ನಡ ವ್ಯಾಕರಣದ ಒಂದು ಪ್ರತ್ಯೇಕ ಕೈಪಿಡಿಯೆಂದರೆ ನಾಗವರ್ಮನ 'ಶಬ್ದಸ್ಮೃತಿ'ಯೇ. ಇದಕ್ಕಿಂತ ಮೊದಲು ಕನ್ನಡದಲ್ಲಿ ವ್ಯಾಕರಣ ಗ್ರಂಥಗಳು ರಚಿತವಾಗಿದ್ದವೆಂದು ಹೇಳಬಹುದಾದರೂ ಅವು ಇನ್ನೂ ತನಕ ನಮಗೆ ಉಪಲಬ್ಧವಾಗಿಲ್ಲ. ಕನ್ನಡ ವ್ಯಾಕರಣವನ್ನು ತಕ್ಕಮಟ್ಟಿಗೆ ವಿಸ್ತಾರವಾಗಿ ವಿವರಿಸಿದ್ದೆಂದರೆ 'ಶಬ್ದಸ್ಮೃತಿ'ಯೇ. ಆದರೆ ಇದು

ನಾಗವರ್ಮನ ಅಲಂಕಾರ ಗ್ರಂಥವಾದ 'ಕಾವ್ಯಾವಲೋಕನ'ದ ಪ್ರಥಮ ಭಾಗವಾಗಿ ಬಂದಿದ್ದರೂ ಇದಕ್ಕೆ ಸ್ವತಂತ್ರ ಕೃತಿಯ ಅಸ್ತಿತ್ವವಿದೆ. ಇದರಲ್ಲಿ ಸಂಜ್ಞಾ, ಸಂಧಿ, ನಾಮ

ಸಮಾಸ, ತದ್ದಿತ, ಅಖ್ಯಾತ ಎಂಬ ಆರು ಪ್ರಕರಣಗಳಿದ್ದು, ಒಟ್ಟು ೯೬ ಸೂತ್ರಗಳಲ್ಲಿ ನಾಗವರ್ಮ ಇವುಗಳನ್ನು ಕುರಿತು ಪ್ರಸ್ತಾಪಿಸಿದ್ದಾನೆ. ಈ ೯೬ ಸೂತ್ರಗಳಲ್ಲಿ ನಾಗವರ್ಮನು ಕನ್ನಡ ವ್ಯಾಕರಣ ಪ್ರಕ್ರಿಯೆಗಳನ್ನು ಪೂರ್ವಕವಿ ಪ್ರಯೋಗಗಳ ಉದಾಹರಣೆಗಳೊಂದಿಗೆ ವಿವರಿಸಿದ್ದಾನೆ.

೩. ನಾಗವರ್ಮನ ‘ಕರ್ನಾಟಕ ಭಾಷಾಭೂಷಣ’ (1150)

  

  ನಾಗವರ್ಮ ಕನ್ನಡದ ಆದ್ಯವ್ಯಾಕರಣಕಾರ, ಕನ್ನಡ ವ್ಯಾಕರಣವನ್ನು ಪ್ರಪ್ರಥಮವಾಗಿ ಕನ್ನಡ ಹಾಗೂ ಸಂಸ್ಕೃತಗಳಲ್ಲಿ ರಚಿಸಿದ ಶ್ರೇಯಸ್ಸು ಈತನದು. ಸಂಸ್ಕೃತದಲ್ಲಿ ಕನ್ನಡದಲ್ಲಿ ಪ್ರಪ್ರಥಮವಾಗಿ ಸಮಗ್ರ ವ್ಯಾಕರಣ ಗ್ರಂಥವನ್ನು ರಚಿಸಿದ ಮೊದಲಿಗನೀತ. ಸಂಸ್ಕೃತದಲ್ಲಿ ರಚಿತವಾದ ಈತನ “ಕರ್ನಾಟಕ ಭಾಷಾಭೂಷಣ'' ಕನ್ನಡದ ಆದಿವ್ಯಾಕರಣ ಗ್ರಂಥ.

ನಾಗವರ್ಮನಿಂದ ಕನ್ನಡ ಭಾಷೆಯ ವ್ಯಾಕರಣವೊಂದು ಸಂಸ್ಕೃತದಲ್ಲಿ ಮೂಡಿ ಬಂದದ್ದು ಒಂದು ವಿಶೇಷ. ಈತನ ನಂತರ ಬಂದ ಕನ್ನಡ ವ್ಯಾಕರಣಕಾರರು ಒಂದಿಲ್ಲ ಒಂದು ರೀತಿಯಲ್ಲಿ ಈತನ ಪ್ರಭಾವಕ್ಕೆ ಒಳಗಾಗಿದ್ದಾರೆ. ಕೇಶಿರಾಜನಂತೂ ಸಾಕಷ್ಟು

ಉದಾಹರಣೆಗಳನ್ನು ನಾಗವರ್ಮನ ಕೃತಿಗಳಿಂದ ಎತ್ತಿಕೊಂಡಿದ್ದಾನೆ. ಕನ್ನಡ-ಸಂಸ್ಕೃತಗಳ

ಉಭಯಭಾಷಾ ಪ೦ಡಿತನಾದದ್ದರಿಂದಲೇ ನಾಗವರ್ಮ ಸಹಜವಾಗಿಯೇ ಕನ್ನಡ ವ್ಯಾಕರಣವನ್ನು ಸಂಸ್ಕೃತದ ಪಡಿಯಚ್ಚಿನಲ್ಲಿ ಎರಕ ಹೊಯ್ಯಲು ಸರ್ವಸಮರ್ಥನಾದನು. ಕನ್ನಡ ವ್ಯಾಕರಣವನ್ನು ಸಂಸ್ಕೃತದ ಪಡಿಯಚ್ಚಿನಲ್ಲಿ ಎರಕ ಹೊಯ್ಯುವ ಈ ಪರಂಪರೆ ನಾಗವರ್ಮನಿಂದ ಮೊದಲುಗೊಂಡು ೧೯ ನೆಯ ಶತಮಾನದವರೆಗೆ ಮುನ್ನಡೆಯಿತು. ನಾಗವರ್ಮನ ವ್ಯಾಕರಣ ಕೃತಿಗಳು ಮುಂಬಂದ ಅನೇಕ ವ್ಯಾಕರಣಕಾರರಿಗೆ ಸ್ಫೂರ್ತಿಯನ್ನು ನೀಡಿದವು. ಭಟ್ಟಾಕಳಂಕ ನಾಗವರ್ಮನಿಂದ ಸ್ಪೂರ್ತಿ ಪಡೆದು ಸಂಸ್ಕೃತದಲ್ಲಿ 'ಶಬ್ದಾನುಶಾಸನ'ವೆಂಬ ಕನ್ನಡ ವ್ಯಾಕರಣ ಗ್ರಂಥವನ್ನು ರಚಿಸಿದ. ನಂತರ ಬಂದ ಕೇಶಿರಾಜನ 'ಶಬ್ದಮಣಿ ದರ್ಪಣ'ದ ಮೇಲೂ ನಾಗವರ್ಮನ ವ್ಯಾಕರಣ ಕೃತಿಗಳು ಪ್ರಭಾವ ಬೀರಿವೆ. ಒಟ್ಟು 10 ಅಧ್ಯಾಯ ಹಾಗೂ 280 ಸೂತ್ರಗಳಿಂದ ಕೂಡಿದ ನಾಗವರ್ಮನ 'ಕರ್ನಾಟಕ ಭಾಷಾಭೂಷಣ',  ಸಂಸ್ಕೃತ ವ್ಯಾಕರಣಗಳ ಸೂತ್ರ ಪದ್ದತಿಯನ್ನು ಅನುಸರಿಸಿ ರಚಿತವಾಗಿದೆ. ನಾಗವರ್ಮನ 'ಕರ್ನಾಟಕ ಭಾಷಾಭೂಷಣ' ಆತನ 'ಶಬ್ದಸ್ಮೃತಿ'ಗಿಂತ ಸ್ವಲ್ಪ ಮಟ್ಟಿಗೆ ಹೆಚ್ಚಿನ ವಿವರಣೆಯನ್ನು ಒಳಗೊಂಡಿದೆ.

  4. ಕೇಶಿರಾಜನ ಶಬ್ದಮಣಿದರ್ಪಣ (1300)

  ಶಬ್ದಮಣಿ ದರ್ಪಣ ಕನ್ನಡ ವ್ಯಾಕರಣ ಕ್ಷೇತ್ರದ ಒಂದು ಅತ್ಯಮೂಲ್ಯ ಗ್ರಂಥ. ಕನ್ನಡ ವ್ಯಾಕರಣ ಸಾಹಿತ್ಯಕ್ಕೆ ಕೇಶಿರಾಜನಿಂದ ಸಂದ ಒಂದು ಅತ್ಯಮೂಲ್ಯವಾದ ಕೊಡುಗೆ ಇದು. 'ಶಬ್ದಮಣಿದರ್ಪಣ'ದಷ್ಟು ಬಹು ಪ್ರಸಿದ್ಧವಾದ ಪ್ರಾಚೀನ  ವ್ಯಾಕರಣ ಗ್ರಂಥ ಇನ್ನೊಂದಿಲ್ಲ. ದ್ರಾವಿಡ ಭಾಷೆಗಳಲ್ಲಿ ರಚಿತವಾದ ಪ್ರಾಚೀನ ವ್ಯಾಕರಣ ಗ್ರಂಥಗಳಲ್ಲೇ ಇದು ಅತ್ಯಂತ ಪ್ರಮುಖವಾದುದು; ಮಹತ್ತರವಾದುದು. ದ್ರಾವಿಡ

ಭಾಷೆಗಳ ವ್ಯಾಕರಣ ಗ್ರಂಥಗಳಲ್ಲಿ ಶಬ್ದಮಣಿ ದರ್ಪಣ ಒಂದು ವಿಶೇಷ ಸ್ಥಾನವನ್ನು ಪಡೆದಿದೆ. 'ಶಬ್ದಮಣಿ ದರ್ಪಣ'ದ ಮೇಲೆ ಸಾಕಷ್ಟು ಸರಳ ನಿರೂಪಣಾ ಕೃತಿಗಳೂ ವ್ಯಾಖ್ಯಾನಗಳೂ ಬಂದಿವೆ. ಗ್ರಂಥದ ಮಹತ್ವಪೂರ್ಣವಾದ ಅಂತಃಸತ್ವವೇ ಇದಕ್ಕೆ ಪ್ರಮುಖ ಕಾರಣ.'ಶಬ್ದಮಣಿ ದರ್ಪಣ' ಕನ್ನಡದ ಅಭೂತ ಪೂರ್ವವೂ ಅತ್ಯಂತ ಮಹತ್ವಪೂರ್ಣವೂ ಆದ ಒಂದು ವ್ಯಾಕರಣ ಗ್ರಂಥ. ಕೇಶಿರಾಜ ಸಂಸ್ಕೃತದ ಚೌಕಟ್ಟಿನಲ್ಲೇ ತನ್ನ ಕೃತಿಯನ್ನು ರಚಿಸಿದ್ದರೂ ತನ್ನ ಕಾಲದ ಕನ್ನಡದ ಬೆಳವಣಿಗೆಯತ್ತ ವಿಶೇಷ ಗಮನ ಹರಿಸಿದ್ದಾನೆ. ಆತ ತನ್ನ ಪೂರ್ವ ಹಾಗೂ ಸಮಕಾಲೀನ ಭಾಷೆಯ ಬಳಕೆ ಹಾಗೂ ಪ್ರಯೋಗಗಳನ್ನು ಬಹು 

ಸೂಕ್ಷ್ಮವಾಗಿ ಗಮನಿಸಿ ವ್ಯಾಕರಣ ನಿಯಮಗಳನ್ನು ಸೂತ್ರ ರೂಪದಲ್ಲಿ ನೀಡಿದ್ದು ಒಂದು ವಿಶೇಷವೇ.

4. ಭಟ್ಟಾಕಳಂಕನ 'ಶಬ್ದಾನುಶಾಸನ' (1600)

 ಭಟ್ಟಾಕಳಂಕನ 'ಶಬ್ದಾನುಶಾಸನ' ಕನ್ನಡ ವ್ಯಾಕರಣವನ್ನು ಸಂಸ್ಕೃತದಲ್ಲಿ ವಿವರಿಸುವ ಇನ್ನೊಂದು ಪ್ರಾಚೀನ ವ್ಯಾಕರಣ ಗ್ರಂಥ. ನಾಗವರ್ಮನ 'ಕರ್ನಾಟಕ ಭಾಷಾಭೂಷಣ'ದಿಂದ ಪ್ರಭಾವಿತನಾದ ಭಟ್ಟಾಕಳಂಕ  ಸಂಸ್ಕೃತ ಭಾಷೆಯ ಬಿಗಿಯಾದ ಸೂತ್ರರೂಪದಲ್ಲಿ ಕನ್ನಡ ವ್ಯಾಕರಣವನ್ನು ವಿವರಿಸಿದ್ದಾನೆ. ಅಂತೆ ಯೇ ಈ ಗ್ರಂಥ ಪಂಡಿತಮಾನ್ಯ ವ್ಯಾಕರಣಗ್ರಂಥವಾಗಿದ್ದು, ಜನಸಾಮಾನ್ಯರಿಗೆ ಕಬ್ಬಿಣದ ಕಡಲೆಯಾಗಿದೆ. ನಾಲ್ಕು ಪಾದ ಹಾಗೂ 592 ಸೂತ್ರಗಳಿಂದ ಕೂಡಿದ ಈ ವ್ಯಾಕರಣ ಗ್ರಂಥಕ್ಕೆ ಸಂಸ್ಕೃತದಲ್ಲಿ ರಚಿತವಾದ ಸ್ವಕೀಯ 'ಭಾಷಾ ಮಂಜರಿ'ಎಂಬ ವೃತ್ತಿ ಹಾಗೂ 'ಮಂಜರಿ ಮಕರಂದ' ಎಂಬ  ವ್ಯಾಖ್ಯಾನವೂ ಇದೆ. ಭಟ್ಟಾಕಳಂಕ ಈ ಗ್ರಂಥದ ಪ್ರತಿಪಾದನೆ ಕ್ರಮದಲ್ಲಿ ಪ್ರಾಚೀನ ಕನ್ನಡ ವ್ಯಾಕರಣಕಾರರನ್ನು ಅನುಸರಿಸಿದ್ದಾನೆ. ಆದರೂ ಪ್ರತಿಪಾದನಾ ಕ್ರಮದಲ್ಲಿ ತನ್ನ ಸ್ವಂತೆಕೆಯನ್ನೂ, ಸಂಸ್ಕೃತ ವ್ಯಾಕರಣಕಾರರ ಪದ್ಧತಿಯನ್ನೂ,ಪ್ರೌಢಿಯನ್ನೂ ಮೆರೆದಿದ್ದಾನೆ.

    •                        *                            *                   *

 

  

 

Category : Stories


ProfileImg

Written by LS KADADEVARMATH

Lokayya Shivalingayya Kadadevarmath Education: M.A.In Kannada [1984-85] Karnataka University Dharwad Experience: Writing & DTP Published: Publication of about 60-70 works.