ಭಾಷೆಯ ಸ್ವರೂಪ:
ಭಾಷೆ ಸ್ವರೂಪವನ್ನು ವಿವರಿಸುವುದು ತುಂಬಾ ಪ್ರಯಾಸದ ಕೆಲಸವೆಂಬುದು ಗೊತ್ತಿದ್ದ ಸಂಗತಿಯೇ. ಆದರೆ ಭಾಷೆಯ ಆಂತರಿಕ ಸ್ವರೂಪವನ್ನು ಕುರಿತು ವ್ಯಾಖ್ಯಾನಿಸಲಾಗದ್ದರೂ, ಅದರ ಹೊರಮೈ ಸ್ವರೂಪವನ್ನು ಕುರಿತಂತೆ ವಿವರಿಸಬಹುದು. ಭಾಷೆ ತನ್ನ ಸ್ವರೂಪವನ್ನು ಕುರಿತಂತೆ ಕೆಲ ಪ್ರಮುಖ ಲಕ್ಷಣಗಳನ್ನು ಹೊಂದಿದ್ದು, ಅವು ಇಂತಿವೆ.
1. ಭಾಷೆ ದೈವದತ್ತವಾದುದು:
'ಭಾಷೆ ದೈವದತ್ತವಾದುದು. ಅದು ಸರಸ್ವತಿಯ ಕೊಡುಗೆ' ಎಂಬುದು ನಮ್ಮ ಪ್ರಾಚೀನ ವ್ಯಾಕರಣಕಾರರ, ವಿದ್ವಾಂಸರ ಅಚಲವಾದ ನಂಬಿಕೆಯಾಗಿತ್ತು. ಆದರೆ 18 ನೆಯ ಶತಮಾನದಿಂದೀಚೆಗೆ ಆಧುನಿಕ ಭಾಷಾವಿಜ್ಞಾನಿಗಳು 'ಭಾಷೆ ದೈವದತ್ತವಲ್ಲ ; ಅದು ಮನುಷ್ಯ ಪ್ರಯತ್ನದ ಫಲ' ಎಂದು ತಮ್ಮ ವಾದವನ್ನು ಮಂಡಿಸಿದ್ದುಂಟು. ಮನುಷ್ಯನಿಗೆ ಭಾಷೆ ಆತನ ಧ್ವನ್ಯುತ್ಪಾದನಾಂಗಗಳ ಸಹಾಯದಿಂದ ಲಭ್ಯವಾಗಿದ್ದು, ಅದು ಆತನ ಪ್ರಯತ್ನದ ಫಲವಾಗಿದೆ. ಕಲಿಕೆಯಿಂದ ಆತ ಭಾಷೆಯನ್ನು ರೂಢಿಸಿಕೊಂಡಿದ್ದಾನೆ. ಭಾಷೆ ದೈವದತ್ತವಾಗಿದ್ದರೆ ಹುಟ್ಟಿನೊಡ ನೆಯೇ ಅದು ಬರಬೇಕಾಗಿತ್ತು. ಮಗು ಹುಟ್ಟುತ್ತಲೇ ಮಾತನಾಡುವುದಿಲ್ಲ. ಅದು ತನ್ನ ಸುತ್ತಮುತ್ತಲಿನ ಪರಿಸರದಿಂದ ಹಾಗೂ ತನ್ನ ಸ್ವಪ್ರಯತ್ನದಿಂದ ಭಾಷೆಯನ್ನು ಕಲಿಯುತ್ತದೆ. ಅಥವಾ ರೂಢಿಸಿಕೊಳ್ಳುತ್ತದೆ. ಭಾಷೆ ಎನ್ನುವುದೊಂದು ಕಲಿಕೆ ಹಾಗೂ ಅನುಕರಣೆಯ ಫಲವಾಗಿದೆ. ಮನುಷ್ಯ ತನ್ನ ಸುತ್ತಮುತ್ತಲಿನ ಪರಿಸರವನ್ನು ಅನುಕರಿಸಿಯೂ ಭಾಷೆಯನ್ನು ಕಲಿಯುತ್ತಾನೆ. ಆದರಿಂದ, ಭಾಷೆಯೆನ್ನುವುದು ದೈವದತ್ತವಲ್ಲ. ಅದು ಮನುಷ್ಯ ಪ್ರಯತ್ನದ ಫಲ ಎನ್ನುವುದು ಆಧುನಿಕ ಭಾಷಾವಿಜ್ಞಾನಿಗಳ ನಿಲವು.
2. ಮಾನವಭಾಷೆ ಪ್ರಾಣಿಭಾಷೆಗಿಂತ ಭಿನ್ನವಾದುದು :
ಮಾನವನಿಗೆ ಪ್ರಪಂಚದಲ್ಲಿರುವ ಯಾವುದೇ ಭಾಷೆಯನ್ನು ಮಾತನಾಡಬಲ್ಲ ಒಂದು ವಿಶೇಷ ಶಕ್ತಿ ಇದೆ. ಮನುಷ್ಯ ಭಾಷೆಯಂತೆಯೇ ಪ್ರಾಣಿಗಳಿಗೂ ಸಹ ಸಂಕೇತಾತ್ಮಕವಾದ ಭಾಷೆ ಇದೆಯೆನ್ನುವುದಾದರೂ, ಅದು ತೀರಾ ಸಂಕುಚಿತವಾದುದು. ಕೇವಲ ಕೆಲವೇ ಕೆಲವು ಅನಿಸಿಕೆಗಳನ್ನು ಮಾತ್ರ ಈ ಪ್ರಾಣಿಭಾಷೆ ಅಭಿವ್ಯಕ್ತಿಸಬಲ್ಲುದು. ಪ್ರಾಣಿಗಳ ಸಂಕೇತಗಳು ಪರಿಮಿತವಾಗಿರುತ್ತವೆ. ಹಾಗೂ ಅವುಗಳ ಸಂಕೇತಗಳು ಅಸ್ಪಷ್ಟವಾದವು. ಮನುಷ್ಯಭಾಷೆಗೆ ಸಂಕೀರ್ಣವಾದ ಹಾಗೂ ಕ್ಲಿಷ್ಟವಾದ ಭಾವನೆ, ಅನಿಸಿಕೆ, ಮನದಿಂಗತವನ್ನು ಅಭಿವ್ಯಕ್ತಿಸಬಲ್ಲ ಸಾಮರ್ಥ್ಯವಿದೆ. ಮನುಷ್ಯನಿಗೆ ಈ ಸಾಮರ್ಥ್ಯ ಸಿದ್ಧಿಸಿದುದು ಆತ ತನ್ನ ಅಭಿವ್ಯಕ್ತಿಗಾಗಿ ಹೊರಡಿಸುವ ಮೌಖಿಕ ಧ್ವನಿಗಳಿಂದ. ಮನುಷ್ಯ ತನ್ನ ಧ್ವನ್ಯಾಂಗಗಳಿಂದ ಅಸಂಖ್ಯಾತ ಧ್ವನಿಗಳನ್ನು ಹೊರಡಿಸಬಲ್ಲ ಅಥವಾ ಉತ್ಪಾದಿಸಬಲ್ಲ. ಮನುಷ್ಯನಿಗಿರುವ ಈ ಸೌಲಭ್ಯ ಪ್ರಾಣಿಗಳಿಗಿಲ್ಲ. ಮನುಷ್ಯ ತನ್ನ ಅಭಿವ್ಯಕ್ತಿಗಾಗಿ ಧ್ವನಿಯುಕ್ತವಾದ ಭಾಷೆಯನ್ನು ಬಳಸುವುದರಿಂದಲೇ ಆತ ಪ್ರಾಣಿವರ್ಗದಿಂದ ಬೆರ್ಪಟ್ಟಿದ್ದಾನೆ. ಹೀಗೆ ಭಾಷೆ ಧ್ವನಿಸಂಕೇತಗಳ ಒಂದು ವ್ಯವಸ್ಥೆಯಾಗಿರುವುದು ಅದರ ಒಂದು ವಿಶಿಷ್ಟ ಸ್ವರೂಪವಾಗಿದೆ.
3. ಭಾಷೆ ಒಂದು ಸಾಮಾಜಿಕ ಕ್ರಿಯೆ :
ಮನುಷ್ಯ ಮೂಲತ: ಸಂಘಜೀವಿ ; ಸಮಾಜಜೀವಿ. ಸಂಘ - ಸಮಾಜಗಳನ್ನು ಬಿಟ್ಟು ಆತ ಬದುಕಲಾರ. ಅಂತೆಯೇ, ಆತ ಸಾಮಾಜಿಕ ಕಟ್ಟುಪಾಡುಗಳಿಗೆ, ಅಲ್ಲಿನ ಹೊಣೆಗಳಿಗೆ, ಚೌಕಟ್ಟಿಗೆ ಬದ್ಧನಾಗಿ ಸಮಾಜ ಜೀವಿ ಎನಿಸುತ್ತಾನೆ. ಭಾಷೆ ಸಾಮಾಜಿಕ ಕ್ರಿಯೆ. ಇದು ಸಮಾಜ ಕೊಟ್ಟ ವರ. ಭಾಷೆಯ ಅಳಿವು-ಉಳಿವು ಅವನು ಬಾಳಿ ಬದುಕುವ ಸಮಾಜಕ್ಕೆ ಸೇರಿದುದು. ಮಾನವ ಭಾಷೆಯನ್ನು ತನ್ನ ಸಮಾಜದ ಏಳ್ಗೆbಗಾಗಿ, ತನ್ನ ಸಂಸ್ಕೃತಿಯ ವಿಕಾಸಕ್ಕಾಗಿ ಬಳಸುತ್ತಾನೆ. ಮಾತು ಕಲಿಯದ ಮುಗ್ಧಶಿಶುವನ್ನು ಸಮಾಜದಿಂದ ಬೇರೆ ಮಾಡಿದರೆ ಆ ಶಿಶುವಿಗೆ ಯಾವ ಭಾಷೆಯೂ ಬರುವದಿಲ್ಲ. ಪ್ರತಿಯೊಬ್ಬ ವ್ಯಕ್ತಿ ತನ್ನ ಅನುಭವ, ಆಲೋಚನೆಗಳನ್ನು ಮತ್ತು ಅನಿಸಿಕೆಗಳನ್ನು ಬೇರೊಬ್ಬರಿಗೆ ತಿಳಿಸಲು ಭಾಷೆಯನ್ನು ಬಳಸುತ್ತಾನೆ. ಮನುಷ್ಯ ತನ್ನ ಅಂತರಂಗದ ಭಾವನೆಗಳನ್ನು ಮತ್ತೊಬ್ಬರಿಗೆ ಹೇಳುವ ಅಗತ್ಯವೇ ಭಾಷಾ ಉಗಮಕ್ಕೆ ಕಾರಣವಾಯಿತು.
4. ಭಾಷೆ ಯಾರ ವಾಂಶಿಕ ಆಸ್ತಿಯೂ ಅಲ್ಲ :
ಮನುಷ್ಯನಿಗೆ ರೂಪ, ಗುಣ ಮುಂತಾದ ಲಕ್ಷಣಗಳು ವಾಂಶಿಕವಾಗಿ ಸಿಗುತ್ತವೆ. ಆದರೆ ಭಾಷೆಯನ್ನು ಆಸಕ್ತಿ ವಹಿಸಿ ಕಲಿಯಬೇಕಾಗುತ್ತದೆ. ಅದು ಆ ವ್ಯಕ್ತಿಯ ಕುಟುಂಬದಲ್ಲಿ ಬಹಳ ತಲೆಮಾರುಗಳಿಂದ ಬಳಕೆಗೆ ಬಂದಿರಬಹುದಾದರೂ, ಅದು ಯಾರೊಬ್ಬರ ಸೊತ್ತೂ ಅಲ್ಲ. ಅದು ಆನುವಾಂಶಿಕವಾಗಿ ಬಂದಿದ್ದರೂ ಮನುಷ್ಯ ಅದನ್ನು ಪ್ರಯತ್ನದಿಂದ ಕಲಿಯಬೇಕಾಗುತ್ತದೆ. ಭಾಷೆ ಒಟ್ಟು ಸಮಾಜದ ಆಸ್ತಿಯಾಗಿದೆಯೇ ಹೊರತು, ನಿರ್ದಿಷ್ಟ ಕುಟುಂಬದ ಆಸ್ತಿಯಲ್ಲ,
5. ಭಾಷೆ ನಿರಂತರ ಪರಿವರ್ತನಶೀಲವಾದುದು:
ಪರಿವರ್ತನೆ ಭಾಷೆಯ ಜೀವಂತ ಲಕ್ಷಣ. ಅಂತೆಯೇ, ಭಾಷೆ ಸದಾ ಹರಿಯುತ್ತಿರುವ ಜೀವನದಿಯಾಗಿದೆ. ಕಾಲದಿಂದ ಕಾಲಕ್ಕೆ, ವ್ಯಕ್ತಿಯಿಂದ ವ್ಯಕ್ತಿಗೆ, ಸ್ಥಳದಿಂದ ಸ್ಥಳಕ್ಕೆ ಭಾಷೆ ಬದಲಾಗುತ್ತದೆ. ಈ ಪರಿವರ್ತನಾಶೀಲತೆ ಭಾಷೆಯ ಬೆಳವಣಿಗೆಗೆ ಪ್ರಮುಖವಾದುದು.ಇದರಿ೦ದಲೇ ಜಗತ್ತಿನಲ್ಲಿ ಇಂದು ಆರು ಸಾವಿರಕ್ಕೂ ಹೆಚ್ಚಿನ ಭಾಷೆಗಳು, ಹತ್ತು ಸಾವಿರಕ್ಕೂ
ಹೆಚ್ಚು ಉಪಭಾಷೆಗಳು ಕಾಣಿಸಿಕೊಂಡಿವೆ. ಭಾಷಾ ಪರಿವರ್ತನೆಗೆ ಭಾಷಿಕ ಮತ್ತು ಭಾಷಿಕೇತರ ಕಾರಣಗಳಿವೆ. ಇದಕ್ಕೆ ವ್ಯಕ್ತಿಯೊಬ್ಬನೇ ಕಾರಣವಲ್ಲ. ಇದಕ್ಕೆ ಅವನ ಸುತ್ತಮುತ್ತಲಿನ ವಿಭಿನ್ನ ಪರಿಸರವೂ ಕಾರಣವಾಗುತ್ತದೆ. ವ್ಯಕ್ತಿ, ಸಮಾಜ, ಸಂಸ್ಕೃತಿ ಮುಂತಾದ ಅನೇಕ ಅಂಶಗಳ ಪ್ರಭಾವದಿಂದ ಭಾಷೆ ನಿರಂತರವಾಗಿ ಪರಿವರ್ತನೆ ಹೊಂದುತ್ತದೆ.
6 ಭಾಷೆಗೆ ಅಂತಿಮ ಸ್ವರೂಪವೆಂಬುದಿಲ್ಲ:
ಜೀವಂತ ಭಾಷೆಗೆ ಇದೆ ಅಂತಿಮ ಸ್ವರೂಪ ಎಂದು ಹೇಳಲಾಗದು. ಭಾಷೆ ಎನ್ನುವುದು ಒಂದು ಚಲಾವಣೆಯ ನಾಣ್ಯ. ಮನುಷ್ಯ ಅದನ್ನು ಎಲ್ಲಿವರೆಗೆ ಬಳಸುತ್ತಿರುತ್ತಾನೋ ಅಲ್ಲಿಯವರೆಗೆ ಅದು ಚಲಾವಣೆಯಲ್ಲಿ ಇದ್ದೇ ಇರುತ್ತದೆ. ಹೀಗಾಗಿ ಭಾಷೆಯ ಸ್ವರೂಪಕ್ಕೆ ಅಂತಿಮ ಎನ್ನುವುದಿಲ್ಲ. ಅದರ ಬೆಳವಣಿಗೆಗೆ ಮುಕ್ತಾಯವೆಂಬುದಿಲ್ಲ.
ಭಾಷೆಯ ಪ್ರಯೋಜನ:
ಮನುಷ್ಯ ಪ್ರಪಂಚದಲ್ಲಿ ಭಾಷೆಯ ಪ್ರಯೋಜನ ಅತ್ಯಪಾರವಾದುದು. ಭಾಷೆಯಿಂದ ಮನುಷ್ಯನಿಗೆ ಹಲವಾರು ಪ್ರಯೋಜನಗಳುಂಟು. ಮುಖ್ಯವಾಗಿ ಹೇಳಬೇಕೆಂದರೆ, ಮನುಷ್ಯನನ್ನು ಮನುಷ್ಯನನ್ನಾಗಿ ಮಾಡಿದ್ದೇ ಭಾಷೆ. ಮನುಷ್ಯ ಭಾಷೆಯನ್ನು ರೂಢಿಸಿಕೊಳ್ಳದ ಹೋಗಿದ್ದರೆ, ಆತನ್ನು ಪ್ರಾಣಿಗಳಂತೆ ಒಬ್ಬ ಮೂಕ ಪ್ರಾಣಿಯಾಗಿ ಬಿಡುತ್ತಿದ್ದ. ಆದರೆ ಭಾಷೆ ಮನುಷ್ಯನನ್ನು ಪ್ರಾಣಿವರ್ಗದಿಂದ ಬೆರ್ಪಡಿಸಿದೆ. ಇದು ಭಾಷೆಯಿಂದ ಮನುಷ್ಯನಿಗಾದ ಒಂದು ಬಹುದೊಡ್ಡ ಪ್ರಯೋಜನ. ಅಂತೆಯೇ, ಮನುಷ್ಯನ ಮಹತ್ವದ ಸಾಧನೆಗಳಲ್ಲಿ ಆತ ಭಾಷೆಯನ್ನು ಕಂಡುಕೊಂಡದ್ದೂ ಒಂದು.
ಮನುಷ್ಯನ ದಿನನಿತ್ಯದ ವ್ಯವಹಾರಕ್ಕೆ ಅತ್ಯವಶ್ಯವಾದ ಒಂದು ಅಂಗ ಭಾಷೆ. ಭಾಷೆ ಇಲ್ಲದೆ ಹೋದರೆ ಆತ ತನ್ನ ಮನಸ್ಸಿನ ಅಭಿಪ್ರಾಯವನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳಲು ಸಾಧ್ಯವಿಲ್ಲ. ಭಾಷೆ ಇಲ್ಲದೆ ಹೋದರೆ ಜೀವನವೇ ಇಲ್ಲ ಎಂಬಷ್ಟರ ಮಟ್ಟಿಗೆ ಭಾಷೆಯ ಮಹತ್ವವಿದೆ. " ಮಾನವ ಪ್ರಪಂಚದ ಆವಿಷ್ಕಾರಗಳಲ್ಲೆಲ್ಲಾ ಭಾಷೆಯ ಉಪಯೋಗ ಆವಿಷ್ಕಾರದಷ್ಟು
ಅದ್ಭುತವಾದದ್ದು, ಮಹತ್ವಪೂರ್ಣವಾದದ್ದು ಬೇರೊಂದಿಲ್ಲ ಎನ್ನುತ್ತಾನೆ ಚಾರ್ಲ್ಸ್ ಡಾರ್ವಿನ್. " ಭಾಷೆಯೆಂಬ ಜ್ಯೋತಿ ಜೀವನದುದ್ದಕ್ಕೂ ಬೆಳಗದೆ ಹೋಗಿದ್ದರೆ, ಇಡೀ ಲೋಕವೇ ಕತ್ತಲೆಯಿಂದ ತುಂಬಿ ಹೋಗುತ್ತಿತ್ತು" ಎಂದು ತುಂಬಾ ಅರ್ಥಪೂರ್ಣವಾಗಿ ಹೇಳುತ್ತಾನೆ ದಂಡಿ.
ಭಾಷೆ ಒಂದು ಅಪಾರವಾದ ಸಂಪತ್ತು. ಮನುಷ್ಯ ಅದನ್ನು ರೂಢಿಸಿಕೊಳ್ಳದಿದ್ದರೆ ಜೀವನದಲ್ಲಿ ಬಹುದೊಡ್ಡ ಸಂಪತ್ತನ್ನು ಕಳೆದುಕೊಂಡಂತೆಯೇ ಸರಿ. ಭಾಷೆ ಮನುಷ್ಯನ ವ್ಯಕ್ತಿತ್ವ ಹಾಗೂ ಭಾವನೆಗಳ ಅಭಿವ್ಯಕ್ತಿಗೆ ಒಂದು ಬಹು ಸಮರ್ಥವಾದ ಮಾಧ್ಯಮ. ಮನುಷ್ಯನ ವಿಚಾರಾಭಿವ್ಯಕ್ತಿಯ ಉಪಕರಣವಾಗಿ,ಸಾಧನವಾಗಿ ಕೆಲಸ ಮಾಡುವ ಭಾಷೆ ಮಾನವನ ಮನಸ್ಸಿನ ದರ್ಪಣವೆನ್ನಬಹುದು. ಭಾಷೆ ವಿಚಾರವಾಹಕವಾಗಿರುವಂತೆ ಪ್ರಚೋದವಾಹಕವೂ ಆಗಿದೆ.
ಮಾನವನ ಎಲ್ಲಾ ವ್ಯವಹಾರಗಳಿಗೂ ಭಾಷೆಯ ಅಗತ್ಯವಿದೆ. ಅಂತೆಯೇ, ಅದು ಮಾನವನ ಜೀವನದ ಒಂದು ಅನಿವಾರ್ಯ ಅಂಗವಾಗಿದೆ. ಮಾನವ ಜೀವನ ಸುಗಮವಾಗಿ ಸಾಗಲು ಭಾಷೆಯ ಅವಶ್ಯಕತೆ ಇದೆ. ಮನುಷ್ಯ ಸಂಘ ಹಾಗೂ ಸಮಾಜ ಜೀವಿಯಾಗಿರುವುದೇ ಈ ಭಾಷೆಯಿಂದ. ಮೊದಲು ಭಾಷೆಯನ್ನು ರೂಡಿಸಿಕೊಂಡ ಮಾನವ ಅನೇಕ ಸಂಘ- ಸಂಸ್ಥೆ ಹಾಗೂ ವರ್ಗಗಳನ್ನು ಕಟ್ಟಿಕೊಂಡಿರಲು ಸಾಕು. ಅಂತೆಯೇ,
ಮಾನವ ಸಮಾಜ ಹಲವಾರು ವರ್ಗಗಳ ನಡುವೆ ವ್ಯವಹಾರ ನಡೆಸಲು ಭಾಷೆ ನೆರವಿಗೆ ಬರುತ್ತದೆ. ಹೀಗೆ ವಿಭಿನ್ನ ಸಂಘ ಸಂಸ್ಥೆಗಳನ್ನು ವರ್ಗಾದಿಗಳನ್ನು ಒಂದುಗೂಡಿಸುವ ಸಾಮರ್ಥ್ಯವೂ ಭಾಷೆಗೆ ಲಭ್ಯವಾಗಿದೆ. ವಿವಿಧ ದೇಶಗಳ ನಡುವೆ ಸಂಪರ್ಕ, ಸ್ನೇಹ, ಸೌಹಾರ್ದ ಸ್ಥಾಪಿಸಿಕೊಳ್ಳಲು ಭಾಷೆ ಒಂದು ತುಂಬಾ ಮಹತ್ವದ ಸಾಧನವಾಗಿದೆ. ಪ್ರಪಂಚದ ಅನೇಕ ರಾಷ್ಟ್ರ ರಾಷ್ಟ್ರಗಳ ನಡುವೆ ಆರ್ಥಿಕ, ರಾಜಕೀಯ, ಸಾಮಾಜಿಕ,
ಸಂಸ್ಕೃತಿ, ವಾಣಿಜ್ಯ ಮುಂತಾದ ವಿಷಯಗಳಲ್ಲಿ ಸಂಪರ್ಕ ಬೆಳೆಸಲು ಭಾಷೆ ನೆರವಾಗುತ್ತದೆ.
Lokayya Shivalingayya Kadadevarmath Education: M.A.In Kannada [1984-85] Karnataka University Dharwad Experience: Writing & DTP Published: Publication of about 60-70 works.
0 Followers
0 Following