ಗುಲಮೊಹರ್ ಗಿಡದ ಎಲೆಯ ತುದಿಯಿಂದ ಇಬ್ಬನಿಯ ಹನಿಗಳು ತೊಟ್ಟಿಕ್ಕುತ್ತಿದ್ದರೆ ಹೊದ್ದ ಕಂಬಳಿಯನ್ನು ಮುಖದವರೆಗೂ ಎಳೆದು ಬೆಳಗು ಸ್ವಲ್ಪ ಲೇಟಾಗಿ ಬರಲಿ ಎಂದು ನಸುಕಿನ ಕನಸು ಕೈ ಬೀಸಿ ಕರೆವ ಸಮಯ. ಸ್ಕೂಲ್ ಬಸ್ ಗೋಜಿಲ್ಲದೇ , ಹಾಲು-ಪೇಪರ‍್ನವನ ಹಂಗಿಲ್ಲದೆ ತರಕಾರಿಯವನ ತಕರಾರಿಲ್ಲದೇ ಮಲೆನಾಡ ಮನೆಗಳಲ್ಲಿ ಮುಸುಕು ಹಾಕಿ ಮಲಗಿದ್ದ ಪ್ರತೀ ಮಕ್ಕಳ ಮುಂಜಾವಿನ ನಿದ್ದೆ , ನೆಮ್ಮದಿಯ ದಿನಗಳು . ತಿಂಡಿಗಾಯಿತು ಎದ್ದು ಬಾ ಎಂದಾಗಲೇ ಹಾಕಿದ್ದ ಮುಸುಕು ಸರಿಸಿ ಕೊತಕೊತನೆ ಕುದಿಯುತಿದ್ದ ಹಂಡೆಯ ನೀರು ಮಗೆದು ಮುಖಕ್ಕೆ ಚಿಮುಕಿಸಿ ಬಟ್ಟೆಗೆ ಮುಖವರೆಸಿ ,ದೋಸೆ ಮಗಚುತ್ತಿದ್ದ ಅಮ್ಮನ ಹತ್ತಿರ ಪ್ಲೇಟ್ಗೆ ತುಪ್ಪ ಜೋನಿಬೆಲ್ಲ ಹಾಕಿಸಿ ಒಲೆ ಮುಂದೆ ಕೂತು ಬಿಸಿ ಬಿಸಿ ದೋಸೆ ಚಪ್ಪರಿಸಿ ಸ್ನಾನ ಮಾಡಿ ಬಿಸಾಕಿದ್ದ ಕೈಚೀಲ ಹೆಗಲಿಗೇರಿಸಿ ಶಾಲೆಗೆ ಓಡುವ ತವಕ.ಹಿತ್ತಲಿನ ತರಕಾರಿ, ಕೊಟ್ಟಿಗೆಯ ಹಸುವಿನ ಹಾಲು, ಸುರಿದುಕೊಳ್ಳಲು ಹಂಡೆಯ ಬಿಸಿನೀರು, ತಿಂದಷ್ಟು ಮುಗಿಯದ ಮಾವು-ಹಲಸು..ಬದುಕಿಗಿಷ್ಟು ಸಾಕು.
ಹರೆಯ ಹಾಗೆ ಉಳಿದುಬಿಡುತ್ತದೆಯೇ..ಬಾಳ ಹಾದಿ ಕಲ್ಲು ಮುಳ್ಳುಗಳ ಕ್ರಮಿಸಿ ಏರುಪೇರಿನ ಮೂಟೆ ಹೊತ್ತು ೪೦ ರ ಘಟ್ಟಕ್ಕೆ ತಂದು ನಿಲ್ಲಿಸುತ್ತದೆ.ಬಾಲ್ಯದ ನೆಮ್ಮದಿ, ಕಟ್ಟಿಕೊಂಡ ಕನಸುಗಳು, ಇಟ್ಟಿರುವ ಭರವಸೆಗಳು ಎಲ್ಲವೂ ದೂರ ಸರಿದು ವಾಸ್ತವಕ್ಕೆ ಕಾಲಿಡುವ ದಿನಗಳು.ಕಲ್ಪನೆಯ ಪೊರೆಯ ಕಳಚಿ ವಾಸ್ತವವ ಹೊದ್ದು ಬದುಕುವ ಕಾಲ.ಹಲವಾರು ದಿಕ್ಕುಗಳಿಂದ ಬದುಕನ್ನು ಅಳೆದು ತೂಗಿ ನಿಜವಾದ ಘಟ್ಟಕ್ಕೆ ಬಂದು ತಲುಪುವ ಮನಸ್ಥಿತಿ.ಜವಬ್ಧಾರಿಯು ಇನ್ನೂ ಒಂದು ಹಂತಕ್ಕೆ ಜಾಸ್ತಿಯಾಗುವುದು ಬಹುಷಃ ಈ ಅವಧಿಯಲ್ಲಿ.
ಹಿಂದಿನ ದಿನಗಳ ಉತ್ತರ ಸಿಗುವುದೂ ಈ ಅವಧಿಯಲ್ಲಿಯೇ.ಇಂದಿನ ದಾರಿ ಹೊಸತು.ಇಲ್ಲಿ ಕನಸುಗಳಿಗೆ ಜಾಗವಿಲ್ಲ.ಭರವಸೆಗಳಿಗೆ ಬೆಲೆಯಿಲ್ಲ.ಸಮಯದ ಹಿಂದೆ ಓಡುತ್ತಿರುವುದಷ್ಟೆ.ಬದುಕು ಜವಬ್ಧಾರಿಯ ಮೂಟೆ ಹೊತ್ತ ನಾಗಾಲೋಟದ ಕುದುರೆ.ಹಬ್ಬ ಹಬ್ಬಕೂ ಮದರಂಗಿಯಾಗಲೀ ಹೊಸಬಟ್ಟೆಯಾಗಲೀ ಬೇಕೆನಿಸುವುದಿಲ್ಲ.ತೀರಾ ಬೇಕೆನಿಸುವುದು ಹೇರ್ ಕಲರ್ ..ತೀರಾ ಅಜ್ಜಿಯಂತಾಗಬಾರದಲ್ಲ ಅದಕ್ಕೆ. ಮಕ್ಕಳಿಗಾಗಿ ಹಣ ಕೂಡಿಡು,ಒಡವೆ ಎತ್ತಿಡು, ಮನೆ ಮಾಡು ಈ ತರಹದ ಆಲೋಚನೆಗಳು ಬರುತ್ತವೆಯೇ ಹೊರತೂ ಮನದ ಮೂಲೆಯ ನವಿಲು ಕುಣಿಯುವ ಕಾಲ ಸರಿದುಹೋಯಿತು.
ಅವಿಭಕ್ತ ಕುಟುಂಬದಲ್ಲಿ ಬೆಳೆದಿದ್ದೇ ತಿಳಿಯುವುದಿಲ್ಲ..ಯಾವುದೇ ಜವಬ್ಧಾರಿಯಿಲ್ಲದೇ ದಿನಗಳು ಕಳೆದು ಬಿಡುವವು.ಬೆಳಿಗ್ಗೆ ಎದ್ದರೆ ಮುಗಿಯಿತು.ಗಡಿಯಾರದ ಮುಳ್ಳಿನ ಹಿಂದೆಯೇ ಬದುಕು. ಹಿಂದಿನಂತೆ ರಂಗೋಲಿ ಹಾಕುವುದಕ್ಕಾಗಲೀ ಮಲ್ಲಿಗೆಯ ದಂಡೆ ಮುಡಿಯುವುದಕ್ಕಾಗಲೀ, ಮನೆ ಮಂದಿಯೆಲ್ಲಾ ಕುಳಿತು ಕ್ರಿಕೇಟ್ ನೋಡುವುದಕ್ಕಾಗಲಿ ,ಪದಬಂಧ ತುಂಬುವುದಕ್ಕಾಗಲೀ ಸಮಯವಿಲ್ಲ.ಬಾಲ್ಯದ ದಿನಗಳಲ್ಲಿ ಮೇಯಲು ಹೋದ ದನಕರುಗಳು ಸಂಜೆ ಕೊಟ್ಟಿಗೆ ಸೇರಿದರೂ ಆಟ ಮುಗಿಯುತ್ತಿರಲಿಲ್ಲ.ಆದರೆ ಇಂದಿನ ಮಕ್ಕಳಿಗೆ ಅವುಗಳ ಕಲ್ಪನೆಯೂ ಇಲ್ಲ.
ದಾರಿಬದಿಯ ಅಂಗಡಿಯಲ್ಲಿ ಖಾರ ಹಚ್ಚಿಟ್ಟ ಮಾವಿನಕಾಯಿ, ನಿಂಬೇಹಣ್ಣಿನ ಪೆಪ್ಪರಮೆಂಟು, ಕಡಲೇ ಮಿಠಾಯಿ ನೋಡಿ ಆಸೆ ಪಟ್ಟ ಕಾಲವೊಂದಿತ್ತು.ಆಗ ಹತ್ತು ಪೈಸೆ ಅಪ್ಪನಿಂದ ಕೇಳಲು ಅಷ್ಟೇ ಭಯವಿತ್ತು.ಇಂದಿನ ಮಕ್ಕಳಿಗೆ ಕೊಡಿಸಿದಷ್ಟೂ ಕಡಿಮೆಯೇ.ಈಗ ಕಾರು ಬಂಗಲೆ ಇರಬಹುದು..ನೆಮ್ಮದಿಯ ದಿನಗಳಿಲ್ಲ.ಸರಿದುಹೋದ ನೆನಪುಗಳಷ್ಟೆ..ನೆನಪುಗಳು ಮಾಗಿ ಮಲ್ಲಿಗೆಯಂತೆ.. ಕೆಲವು ಕಂಪ ಸೂಸಿದರೆ...ಕೆಲವು ಮಾಗಿ ಎಲೆಯಂತೆ ಚದುರಿದಂತೆ...!!!!!
ಸೌಮ್ಯ ಜಂಬೆ
ಮೈಸೂರು