ಮಾದಿಗರು ಗೊಂದಲಕ್ಕೆ ಒಳಗಾಗದಿರಲಿ

ಒಳಮೀಸಲಾತಿ

ProfileImg
17 Jan '24
5 min read


image

 

ಕೆಲವೇ ದಿನಗಳಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ "ಒಳ ಮೀಸಲಾತಿ"ಯ ಪ್ರಕರಣ/ ವಿಚಾರಣೆ ಪ್ರಾರಂಭಗೊಳ್ಳ ಲಿದೆ. ದೇಶದ ಅದರಲ್ಲೂ ರಾಜ್ಯದ ಮಾದಿಗ ಜಾತಿ/ ಸಮುದಾಯಗಳನ್ನು ರಾಜಕೀಯ ಪಕ್ಷಗಳು ಎಳೆದಾಡಿ, ಮಾಡುತ್ತಿರುವ ರಾಜಕೀಯ ಮೇಲಾಟಗಳು, ಗೊಂದಲ.... ಇತ್ಯಾದಿಗಳ ನಡುವೆ ವಾಸ್ತವ, ಸತ್ಯ , ತಿಳಿಯಪಡಿಸುವುದಕ್ಕಾಗಿ, ಈ ಸತ್ಯ ಲೇಖನ.

ಕಳೆದ 90ರ ದಶಕದಿಂದ ದೇಶದಾದ್ಯಂತ - ಕರ್ನಾಟಕ, ತೆಲಂಗಾಣ, ತಮಿಳುನಾಡು, ರಾಜಸ್ಥಾನ, ಬಿಹಾರ, ಉತ್ತರ ಪ್ರದೇಶ, ಪಂಜಾಬ್, ಹರಿಯಾಣ, ಮಹಾರಾಷ್ಟ್ರ ,.. ಹೀಗೆ ಹಲವು ರಾಜ್ಯಗಳಲ್ಲಿ ಮಾದಿಗ ಜಾತಿ / ಶೋಷಿತ ಸಮುದಾಯಗಳು / ಸಂಘಟನೆಗಳು

     " ಒಳ ಮೀಸಲಾತಿ"  

ನೀಡಬೇಕೆಂದು ಧ್ವನಿಗಳನ್ನು ಎತ್ತಿ , ಪ್ರತಿಭಟನೆ, ಮುಷ್ಕರ, ಸತ್ಯಾಗ್ರಹ, ಕಾಲ್ನಡಿಗೆ, ಜಾಥ, ಸಮಾವೇಶ.... ಹೀಗೆ ನಾನಾ ರೀತಿಗಳಲ್ಲಿ ಹೋರಾಟಗಳ ಮೂಲಕ, ರಾಜ್ಯ ಸರ್ಕಾರಗಳ ಮತ್ತು ಕೇಂದ್ರ ಸರ್ಕಾರವನ್ನು ನಿರಂತರವಾಗಿ ಅಗ್ರಹಿಸಿವೆ/ ಬೇಡಿವೆ.

(1) 1999ರಲ್ಲಿ ಆಂಧ್ರಪ್ರದೇಶದಲ್ಲಿ , "ಪರಿಶಿಷ್ಟ ಮೀಸಲಾತಿಯ ಪುನರ್ ವರ್ಗೀಕರಣ ಕಾಯ್ದೆ" ಯನ್ನು ಜಾರಿಗೆ ತಂದು "ಒಳ ಮೀಸಲಾತಿ" ಯನ್ನು ಘೋಷಣೆ ಮಾಡಲಾಯಿತು;

(2) ಶ್ರೀ ಇ.ವಿ ಚಿನ್ನಯ್ಯ, ಈ ಒಳ ಮೀಸಲಾತಿ ಕಾಯ್ದೆಯನ್ನು ಆಂಧ್ರಪ್ರದೇಶ ಹೈಕೋರ್ಟಿನಲ್ಲಿ ಪ್ರಶ್ನೆ ಮಾಡಿದರು. ರಾಜ್ಯ ಹೈಕೋರ್ಟ್ ಈ ಕಾಯ್ದೆಯನ್ನು ಎತ್ತಿ ಹಿಡಿದು, ಚಿನ್ನಯ ಅವರ ದಾವೇಯನ್ನು ವಜಾಗೊಳಿಸಿತು; ಇದನ್ನು

ಶ್ರೀ ಇ.ವಿ ಚಿನ್ನಯ್ಯ ಇವರು ಸರ್ವೋಚ್ಚ ನ್ಯಾಯಾಲಯ ದಲ್ಲಿ ಪ್ರಶ್ನೆ ಮಾಡಿದರು. ನ್ಯಾಯಮೂರ್ತಿ ಸಂತೋಷ್ ಹೆಗಡೆ ನೇತೃತ್ವದ ಐವರ ಸಂವಿಧಾನ ಪೀಠ 2004ರಲ್ಲಿ ತೀರ್ಪು ಪ್ರಕಟಿಸಿ, ಪರಿಶಿಷ್ಟರನ್ನು ವರ್ಗೀಕರಿಸಲು ಸಾಧ್ಯವಿಲ್ಲ. ಮೀಸಲಾತಿ ವಿಚಾರ ಕೇಂದ್ರಕ್ಕೆ ಬಿಟ್ಟಿದ್ದು. ಒಳ ಮಿಸಲಾತಿ ಅಧಿಕಾರ ಕೇವಲ ಸಂಸತ್ ಗಿದೆ. ಯಾವುದೇ ರಾಜ್ಯ ಸರ್ಕಾರಗಳಿಗೆ ಇಲ್ಲ ಎಂದು ಆಂಧ್ರಪ್ರದೇಶದ ಒಳ ಮೀಸಲಾತಿ ಕಾಯ್ದೆಯನ್ನು ರದ್ದುಪಡಿಸಿತು;

(2) ಈ ತೀರ್ಪು ತರುವಾಯ, ಮಾದಿಗ ಮತ್ತು ಶೋಷಿತ ಸಮುದಾಯಗಳ ಹೋರಾಟ ಗಳು ದೇಶದಲ್ಲಿ ಹೆಚ್ಚಳಗೊಂಡವು. ಈ ಜನ ಅಭಿಪ್ರಾಯಕ್ಕೆ ಗೌರವ ಕೊಟ್ಟ ಶ್ರೀ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಭಾರತ ಸರ್ಕಾರ 2007ರಲ್ಲಿ ನ್ಯಾಯಮೂರ್ತಿ ಉಷಾ ಮೆಹೆರಾ ನೇತೃತ್ವದಲ್ಲಿ ಅಧ್ಯಯನಕ್ಕಾಗಿ ಆಯೋಗವೊಂದನ್ನು ರಚನೆ ಮಾಡಿತು. ಈ ಆಯೋಗ 2008ರಲ್ಲಿ ತನ್ನ ಅಧ್ಯಯನ ವರದಿ ನೀಡಿ, ಭಾರತ ಸಂವಿಧಾನ ಅನುಚ್ಛೇದ 341(3) ರಲ್ಲಿ ಹೊಸದಾಗಿ - "ಸಂವಿಧಾನದಡಿ ಪ್ರಕಟಪಡಿಸಿಕೊಂಡಿರುವ ಪರಿಶಿಷ್ಟ ಜಾತಿ ಪಟ್ಟಿ ಒಳಗಿನ ಜಾತಿಗಳಿಗೆ/ ಜಾತಿ ಸಮೂಹ ಗಳಿಗೆ ಒಳ ಮೀಸಲಾತಿ ಕಲ್ಪಿಸಲು ಉಪಬಂಧವನ್ನು ಮಾಡದಂತೆ ರಾಜ್ಯವನ್ನು ಪ್ರತಿಬಂದಿಸತಕ್ಕದ್ದಲ್ಲ" 

ಎಂಬ ಉಪಬಂಧ ಸೇರಿಸಿ, ಒಳಮಿಸಲಾತಿ ಅನುಷ್ಠಾನ ಮಾಡಲಿಕ್ಕೆ, ರಾಜ್ಯ ಸರ್ಕಾರಗಳಿಗೆ ಅವಕಾಶಗಳನ್ನು ಕಲ್ಪಿಸಬೇಕೆಂದು ಶಿಫಾರಸು ಮಾಡಿತು;

(3)ಈ ವರದಿ ಸ್ವೀಕರಿಸಿದ ತರುವಾಯ, ಶ್ರೀ ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರ್ಕಾರ ವರದಿ ಸಂಬಂಧ ಕ್ರಮ ಕೈಗೊಳ್ಳುವ ಮುನ್ನ, ದೇಶದ ಎಲ್ಲಾ ರಾಜ್ಯ ಸರ್ಕಾರಗಳಿಗೆ ಅಕ್ಟೋಬರ್ 2011ರಲ್ಲಿ ಪತ್ರಗಳನ್ನು ಬರೆದು, ಒಳ ಮೀಸಲಾತಿ ಅಗತ್ಯತೆ ಬಗ್ಗೆ ಅಭಿಪ್ರಾಯ ಸಂಗ್ರಹಿಸಿತು. ಕರ್ನಾಟಕ ಸರ್ಕಾರ ಕೂಡ 21.01.2012 ರಂದು ಒಳ ಮೀಸಲಾತಿ ಪರವಾಗಿ ಅಭಿಪ್ರಾಯವನ್ನು ನೀಡಿದೆ. ಈವರೆಗೆ 20 ರಾಜ್ಯ ಸರ್ಕಾರಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳು ತಮ್ಮ ಅಭಿಪ್ರಾಯಗಳನ್ನು ನೀಡಿವೆ.

(4)ಈ ಮಧ್ಯೆ , ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರ ಕಳೆದುಕೊಂಡು, 2014ರಲ್ಲಿ ಶ್ರೀ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿತು. ಆ ಅವಧಿಯಿಂದ ಈ ಅವಧಿಯವರೆಗೂ ಒಳ ಮೀಸಲಾತಿಗಾಗಿ ಸಂವಿಧಾನ ತಿದ್ದುಪಡಿ ಆಗಲಿಲ್ಲ.

(5) ಈ ಬೆಳವಣಿಗೆಗಳ ಮಧ್ಯೆ , ಪಂಜಾಬ್ ಮತ್ತು ಹರಿಯಾಣ ರಾಜ್ಯ ಸರ್ಕಾರಗಳು, 1975 ರಲ್ಲಿಯೇ ಅನುಷ್ಠಾನ ಮಾಡಿದ್ದ ಒಳ ಮೀಸಲಾತಿ ಯನ್ನು ಶ್ರೀ ಇ.ವಿ.ಚಿನ್ನಯ್ಯ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪನ್ನು ಆಧಾರವಾಗಿರಿಸಿ ಕೊಂಡು, ಶ್ರೀ ದವಿಂದರ್ ಸಿಂಗ್ ಎಂಬುವರು ಸರ್ವೋಚ್ಚ ನ್ಯಾಯಾಲಯ ದಲ್ಲಿ ಪ್ರಶ್ನೆ ಮಾಡಿದರು. 2020ರಲ್ಲಿ ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠ, ಪಂಜಾಬ್ ಮತ್ತು ಹರಿಯಾಣ ರಾಜ್ಯಗಳು ಜಾರಿಗೆ ತಂದಿದ್ದ ಒಳ ಮೀಸಲಾತಿ ಕ್ರಮಗಳನ್ನು ಎತ್ತಿ ಹಿಡಿಯಿತು; ನ್ಯಾಯಮೂರ್ತಿ ಸಂತೋಷ ಹೆಗಡೆ ಅವರ ತೀರ್ಪನ್ನು ಒಪ್ಪಲಿಲ್ಲ. 

(6) ಶ್ರೀ ಇ.ವಿ ಚಿನ್ನಯ್ಯ ಮತ್ತು ಶ್ರೀ ದವಿಂದರ್ ಸಿಂಗ್ ಎರಡು ಪ್ರಕರಣಗಳಲ್ಲಿ ಸರ್ವೋಚ್ಚ ನ್ಯಾಯಾಲಯದ ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಸಂವಿಧಾನ ಪೀಠಗಳ ತೀರ್ಪುಗಳು ಒಂದಕ್ಕೊಂದು ತದ್ವಿರುದ್ಧವಾಗಿದ್ದ ಕಾರಣ, ಸರ್ವೋಚ್ಚ ನ್ಯಾಯಾಲಯ ಈಗ 7 ನ್ಯಾಯಮೂರ್ತಿ ಗಳನ್ನು ಒಳಗೊಂಡ ಹೆಚ್ಚುವರಿ ಪೀಠವನ್ನು ರಚನೆ ಮಾಡಿದೆ. ಈ ಪೀಠವು ಒಳ ಮೀಸಲಾತಿಯ ಬಗ್ಗೆ ದಿನಾಂಕ 17-1-2024 ರಿಂದ (ಅಂದಾಜು) ವಿಚಾರಣೆ ಪ್ರಾರಂಭಿಸಲಿದೆ.

"ಕರ್ನಾಟಕ ರಾಜ್ಯದಲ್ಲಿ ಒಳ ಮೀಸಲಾತಿಯ ಪಯಣ" 

(1) ಕರ್ನಾಟಕ ರಾಜ್ಯದಲ್ಲಿ 90ರ ದಶಕದಿಂದ ಮಾದಿಗ ಜಾತಿಯವರು /ಸಂಘಟನೆಗಳು ನಡೆಸಿದ ಹಲವು ಹೋರಾಟಗಳ ಫಲವಾಗಿ, 2004ರಲ್ಲಿ ಅಂದಿನ ಮುಖ್ಯಮಂತ್ರಿ ಶ್ರೀ ಎಸ್ ಎಂ ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರ, ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗ ವನ್ನು ನೇಮಕ ಮಾಡಿತು. ಈ ಆಯೋಗವು ಸುಮಾರು ವರ್ಷಗಳ ಅವಧಿ ಅಧ್ಯಯನ ನಡೆಸಿ,ದಿನಾಂಕ14-07-2008 ರಂದು, ಅಂದಿನ ಮುಖ್ಯಮಂತ್ರಿ ಶ್ರೀ ಸದಾನಂದ ಗೌಡ ನೇತೃತ್ವ ಬಿಜೆಪಿ ಸರ್ಕಾರಕ್ಕೆ ವರದಿ ಸಲ್ಲಿಸಿತು; (ಈ ವರದಿ ಸ್ವೀಕಾರ ನಂತರ ಯಾವುದೇ ಸರ್ಕಾರಗಳು ಈ ಬಗ್ಗೆ ಗಮನಹರಿಸಲಿಲ್ಲ. ಈ ಬಗ್ಗೆ ಮಾದಿಗ ಸಮುದಾಯ ರಾಜ್ಯದ ಉದ್ದಗಲಕ್ಕೂ ಹೋರಾಟ ಮಾಡಿದೆ)

(2) 2022 ರಲ್ಲಿ ಶ್ರೀ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ, ಶ್ರೀ ಮಾಧುಸ್ವಾಮಿ, ಕಾನೂನು ಸಚಿವರ ನೇತೃತ್ವದಲ್ಲಿ ಕ್ಯಾಬಿನೆಟ್ ಉಪ ಸಮಿತಿ ಒಂದನ್ನು ರಚನೆ ಮಾಡಿತು. ಈ ಸಮಿತಿಯು ಅಧ್ಯಯನ ಮಾಡಿ , ತನ್ನ ವರದಿಯನ್ನು ಸರ್ಕಾರಕ್ಕೆ ನೀಡಿತು. ಈ ವರದಿಯ ಶಿಫಾರಸಿನಂತೆ ದಿನಾಂಕ 27.03.2023 ರಂದು ಶ್ರೀ ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ, ಸರ್ಕಾರಿ ಆದೇಶವನ್ನು ಹೊರಡಿಸಿ ಮಾದಿಗ ಜಾತಿಯವರಿಗೆ ಶೇ.6; ಹೊಲಯ ಜಾತಿಯವರಿಗೆ ಶೇ. 5.5; ಭೋವಿ ಮತ್ತು ಲಂಬಾಣಿ ಜಾತಿಯವರಿಗೆ ಶೇ. 4.5; ಮತ್ತು ಇನ್ನುಳಿದ ಜಾತಿಗಳಿಗೆ ಶೇ.1 ರಷ್ಟು ..ಹೀಗೆ ಒಟ್ಟು ಶೇ. 17 ಪ್ರಮಾಣದ ಮೀಸಲಾತಿಯನ್ನು ನಿಗದಿ ಪಡಿಸಿ ಆದೇಶಿಸಿತು. ಈ ಒಳ ಮೀಸಲಾತಿಯ ಹಂಚಿಕೆ ಆದೇಶ ಕಾಗದದಲ್ಲಿಯೇ ಉಳಿದಿದೆ. ಅನುಷ್ಠಾನಕ್ಕೆ ಬಂದಿಲ್ಲ.

(3) ಕರ್ನಾಟಕ ಸರ್ಕಾರ ಜಾರಿಗೊಳಿಸಿದ ಒಳ ಮೀಸಲಾತಿಯ ಹಂಚಿಕೆಯ ಆದೇಶದ ಪ್ರತಿಯನ್ನು ಕೇಂದ್ರ ಸರ್ಕಾರಕ್ಕೆ ದಿನಾಂಕ 28-3-2023 / 31-3-2023 ಗಳಂದು ಕಳುಹಿಸಿದೆ. ಈ ಪತ್ರಗಳಿಗೆ ಪ್ರತಿಕ್ರಿಯೆಯಾಗಿ, ಕೇಂದ್ರ ಸರ್ಕಾರ ದಿನಾಂಕ 8-6-2023 ರಂದು ರಾಜ್ಯ ಸರ್ಕಾರಕ್ಕೆ ವಾಪಸ್ ಪತ್ರ ಬರೆದು, ಪರಿಶಿಷ್ಟ ಜಾತಿ ಒಳಗಿನ ಒಳ ಮೀಸಲಾತಿ ವಿಷಯಗಳು ಸರ್ವೋಚ್ಚ ನ್ಯಾಯಾಲಯದಲ್ಲಿ ಬಾಕಿ ಇವೆ. ಈ ಕಾರಣದಿಂದ ಒಳ ಮೀಸಲಾತಿ ವಿಷಯದಲ್ಲಿ ಯಾವುದೇ ಕ್ರಮ ಕೈಗೊಳ್ಳುವುದು ಸಬ್ಜುಡೀಸ್ (Sub-judice) ಆಗುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ತಿಳಿಸಿದೆ. 

(4) ಮುಂದುವರೆದು, ದಿನಾಂಕ 26-7-2023ರಂದು ಬಿಜೆಪಿ ಪಕ್ಷದ ಸಂಸದರಾದ ಶ್ರೀ GVL ನರಸಿಂಹರಾವ್ ಇವರು ಒಳ ಮೀಸಲಾತಿ ಬಗ್ಗೆ ರಾಜ್ಯಸಭೆಯಲ್ಲಿ ಕೇಳಿದ ಪ್ರಶ್ನೆಗೆ, ಕೇಂದ್ರ ಸಚಿವರಾದ ಶ್ರೀ ನಾರಾಯಣಸ್ವಾಮಿ ಇವರು ಉತ್ತರ ನೀಡಿ, ಭಾರತ ಸಂವಿಧಾನದಲ್ಲಿ ಈಗಿರುವ ಅವಕಾಶಗಳ ಪ್ರಕಾರ ಒಳ ಮೀಸಲಾತಿ ಕಲ್ಪಿಸಲು ಸಾಧ್ಯವಿಲ್ಲ ಎಂದು ಉತ್ತರಿಸಿರುತ್ತಾರೆ.

(5) ರಾಜ್ಯದಲ್ಲಿ ಪ್ರಸ್ತುತ ಶ್ರೀ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ಕೇಂದ್ರ ಸರ್ಕಾರಕ್ಕೆ ದಿನಾಂಕ 23-11-2023 ರಂದು ಪತ್ರ ಬರೆದು, ರಾಜ್ಯದ ಪರಿಶಿಷ್ಟ ಜಾತಿ ಪಟ್ಟಿ ಒಳಗಿನ ಜಾತಿಗಳಿಗೆ ಒಳ ಮೀಸಲಾತಿ ಜಾರಿಗೊಳಿಸಲು ಭಾರತ ಸಂವಿಧಾನಕ್ಕೆ ತಿದ್ದುಪಡಿ ತರಲ್ಲೂ ವಿನಂತಿಸಿದೆ. ಸಂಸದರಾದ ಶ್ರೀ ಮುನಿಸ್ವಾಮಿ ಲೋಕಸಭೆಯಲ್ಲಿ ದಿನಾಂಕ 5-12-2023 ರಂದು ಕೇಳಿದ ಪ್ರಶ್ನೆಗೆ, ಕೇಂದ್ರ ಮಂತ್ರಿ ಡಾ: ವೀರೇಂದ್ರ ಕುಮಾರ್ ಇವರು ಉತ್ತರ ನೀಡಿ, ಮೇಲಿನ ಸಿದ್ದರಾಮಯ್ಯ ಸರ್ಕಾರದ ಪತ್ರ ಮತ್ತು ಕೋರಿಕೆಗಳನ್ನು ಖಾತ್ರಿಪಡಿಸಿರುತ್ತಾರೆ. 

ಪರಿಹಾರ ಮಾರ್ಗಗಳು:

1) ನ್ಯಾಯಾಂಗ ಮಾರ್ಗ - ಸರ್ವೋಚ್ಚ ನ್ಯಾಯಾಲಯ ದಲ್ಲಿ 7 ನ್ಯಾಯಮೂರ್ತಿಗಳ ನ್ಯಾಯಾಧೀಶರ ಪೀಠ 17.01.2024 (ಅಂದಾಜು) ರಿಂದ ವಿಚಾರಣೆ ಆರಂಭಿಸಿ, ಆ ತರುವಾಯ ಒಳ ಮೀಸಲಾತಿ ಪರವಾಗಿ ತೀರ್ಪು ಬಂದರೆ ಮಾತ್ರ , ರಾಜ್ಯ ಸರ್ಕಾರಗಳು ಒಳ ಮೀಸಲಾತಿ ಅನುಷ್ಠಾನಗೊಳಿಸಬಹುದು. (ಒಂದು ವೇಳೆ ಆ ತೀರ್ಪನ್ನು ಪುನಃ ಯಾರಾದರೂ ಪ್ರಶ್ನಿಸಿ, 9 ನ್ಯಾಯಮೂರ್ತಿಗಳ ಪೀಠಕ್ಕೆ ಮನವಿ ಮಾಡಿದರೆ, ಆ ಪೀಠಗಳ ಸ್ಥಾಪನೆ, ವಿಚಾರಣೆ, ತೀರ್ಪು.. ಹೀಗೆ ಮತ್ತಷ್ಟು ವಿಳಂಬಗೊಳ್ಳುವ ಸಾಧ್ಯತೆಗಳಿವೆ)

(2) ಶಾಸಕಾಂಗದ ಮಾರ್ಗ - ನ್ಯಾಯಮೂರ್ತಿ ಉಷಾ ಮೆಹರಾ ವರದಿ ಆಧರಿಸಿ, ದೇಶದ ಸಂಸತ್ (ಪ್ರಸ್ತುತ ಬಿಜೆಪಿ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಬಹುಮತ ಹೊಂದಿರುವ ಕಾರಣ) ಭಾರತ ಸಂವಿಧಾನದ ಅನುಚ್ಛೇದ 341(3) ಕಲಂಗೆ ತಿದ್ದುಪಡಿ ಪ್ರಸ್ತಾವಿಸಿ, ಹೊಸದಾಗಿ (ಈಗಾಗಲೇ ಮೇಲೆ ಉಲ್ಲೇಖಿಸಿದಂತೆ) ಉಪಬಂಧ ಕಲ್ಪಿಸಿ, ರಾಜ್ಯ ಸರ್ಕಾರಗಳಿಗೆ ಒಳ ಮೀಸಲಾತಿ ಜಾರಿ ಮಾಡುವುದಕ್ಕೆ ಅವಕಾಶ ನೀಡಿದರೆ, ಆಗ ಕರ್ನಾಟಕ ಒಳಗೊಂಡಂತೆ ಅಗತ್ಯವಿರುವ ರಾಜ್ಯಗಳು ಒಳ ಮೀಸಲಾತಿ ಅನುಷ್ಠಾನಗೊಳಿಸಬಹುದು. (ಬಿಜೆಪಿ / ಸಂಸತ್ / ಸರ್ವೋಚ್ಚ ನ್ಯಾಯಾಲಯ ಶೇ. 10 ಮೀಸಲಾತಿಯನ್ನು EWSನವರಿಗೆ ನೀಡಿದ ಮಾದರಿ ಮತ್ತು ವೇಗದಲ್ಲಿ)

ಇವಿಷ್ಟೇ , "ಒಳ ಮೀಸಲಾತಿ"ಗೆ ಸಂವಿಧಾನ / ಕಾನೂನು / ವಾಸ್ತವ / ಅವಕಾಶಗಳು. ಯಾವುದೇ ರಾಜಕೀಯ ಪಕ್ಷಗಳ , ರಾಜಕಾರಣಿಗಳ, ಮೂರ್ಖರ ಮಾತುಗಳನ್ನು , ರಾಜಕೀಯ ಮೇಲಾಟಗಳನ್ನು ಕೇಳಿ ಗೊಂದಲಕ್ಕೆ ಒಳಗಾಗದಿರಲಿ.

 -ಎಸ್.ಮೂರ್ತಿ, ಲೇಖಕರು ಹಾಗೂ ಮಾಜಿ ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ

Category:Personal Experience



ProfileImg

Written by Balappa m kuppi