ಮಾನಸಿಕ ಅಸ್ವಸ್ಥತೆ

ProfileImg
25 Feb '24
7 min read


image

"ಆರೋಗ್ಯವೇ ಭಾಗ್ಯ”, "ಆರೋಗ್ಯವೇ ಸಂಪತ್ತು" ಈ ತರಹದ ನಾಣ್ಣುಡಿಗಳು ನಮ್ಮಲ್ಲಿ ಎಷ್ಟು ಇಲ್ಲ!! ಆರೋಗ್ಯ ಎಂದರೇನು ? "ಆರೋಗ್ಯವೆಂದರೆ ಕೇವಲ ದೈಹಿಕ ಸ್ವಾಸ್ಥ್ಯವಲ್ಲ, ಮಾನಸಿಕವಾಗಿಯೂ ಸ್ವಾಸ್ಥ್ಯವಿದ್ದಲ್ಲಿ ಮಾತ್ರ ಒಳ್ಳೆ ಆರೋಗ್ಯ" ಎಂದು ಪರಿಗಣಿಸಲಾಗುತ್ತದೆ.

ವಿಶ್ವ ಆರೋಗ್ಯ ಸಂಸ್ಥೆಯ ಹೇಳಿಕೆಯ ಪ್ರಕಾರ ಒಂದು ಜೀವಿಯ ದೇಹ - ಮನಸ್ಸು ಸಂಪೂರ್ಣ ಸಮತೋಲನದಲ್ಲಿರುವ ಸ್ಥಿತಿಯನ್ನು ಆರೋಗ್ಯ ಎಂದು ಕರೆಯಬಹುದು. ಸಾವಿರಕೊಬ್ಬ ಮನುಷ್ಯ ಆರೋಗ್ಯದಿಂದ ಇರಬಹುದು. ಅದು ವಿರಳವೇ!

ದೈಹಿಕ ಕಾಯಿಲೆಗಳಿಗಿಂತ ಮಾನಸಿಕ ಕಾಯಿಲೆಯು ಬಹಳ ಪ್ರಮುಖವಾಗಿದೆ

"ಮಾನಸಿಕ ಕಾಯಿಲೆಯು ಎಲ್ಲ ಕಾಯಿಲೆಗಳಿಗಿಂತ ಅತ್ಯಂತ ದೊಡ್ಡದಾಗಿದೆ" ಎಂದು ಬೆಂಗಳೂರಿನ ಜಯದೇವ ಆಸ್ಪತ್ರೆಯ ಆಡಳಿತದ ಮುಖ್ಯಸ್ಥರಾದ ಡಾ.ಮಂಜುನಾಥ ರವರು ಪದೇ ಪದೇ ಹೇಳುತ್ತಿರುತ್ತಾರೆ. ಆದ್ದರಿಂದ ಪ್ರತಿಯೊಬ್ಬರಿಗೂ ಈ ಕಾಯಿಲೆಯ ಬಗ್ಗೆ ಅರಿವಿರಬೇಕಾಗಿದ್ದು ಅವಶ್ಯಕ ವಾಗಿದೆ.

ಎಲ್ಲ ಮಕ್ಕಳ ಹುಟ್ಟು ಒಂದೇ ಆದರೂ ಬೆಳವಣಿಗೆಯಲ್ಲಿ ಯಾಕೆ ಈ ತರಹದ ಕಾಯಿಲೆ ಬರುತ್ತದೆ ಎನ್ನುವದು ತಿಳಿಯುವದೇ ಕಠಿಣ. ಬೆಳೆಯುವ ಪರಿಸರ, ಮಾನಸಿಕ ಚಿಂತನೆ, ಮನೆಯ ವಾತಾವರಣ, ಆನುವಂಶಿಕ ಇತಿಹಾಸ ಮತ್ತು ಮೆದುಳಿನ ರಾಸಾಯನಿಕ ಶಾಸ್ತ್ರ ಇದಕ್ಕೆಲ್ಲ ಕಾರಣವಾಗಬಹುದು.

ಮಾನಸಿಕವಾಗಿ ಆರೋಗ್ಯ ವಾಗಿದ್ದರೆ ಸರ್ವರೋಗಗಳನ್ನು ಧೈರ್ಯದಿಂದ ಎದುರಿಸಬಹುದು. “ಯಾವುದೇ ವ್ಯಕ್ತಿಯ ಪೂರ್ಣ ಆರೋಗ್ಯಕ್ಕೆ, ಸಾಮರ್ಥ್ಯ ಮತ್ತು ಸಾಧನೆಗಳಿಗೆ ಮನಸ್ಸೇ ತಾಯಿ. ಮನಸ್ಸು ನೆಮ್ಮದಿಯಿಂದ ಇದ್ದರೆ ಮಾತ್ರ ಎಲ್ಲವೂ ಸಾಧ್ಯ”. ಸಾಮಾನ್ಯ ವಾಗಿ ಒತ್ತಡವು ಎಲ್ಲರ ಮೇಲೆ ಪರಿಣಾಮ ಬೀರುತ್ತದೆ. ಆದರೆ ಇದು ಒಬ್ಬ ವ್ಯಕ್ತಿಗೆ ಸೌಮ್ಯ ವಾಗಿರುತ್ತದೆ ಮತ್ತು ಇನ್ನೊಬ್ಬರಿಗೆ ತೀವ್ರವಾಗಿರುತ್ತದೆ.

ಮಾನಸಿಕ ಕಾಯಿಲೆಗಳಲ್ಲಿ ವಿವಿಧ ಪ್ರಕಾರಗಳಿವೆ. ಅವುಗಳಲ್ಲಿ ಮುಖ್ಯವಾದವುಗಳೆಂದರೆ ವಿಚಿತ್ರ ನಡುವಳಿಕೆ, ಸಂಶಯ, ಆತ್ಮ ಹತ್ಯೆ ದುಃಖ/ ಖಿನ್ನತೆ, ವಯಸ್ಸಿಗೆ ತಕ್ಕ ಬೆಳವಣಿಗೆ ಇಲ್ಲದಿರುವುದು, ಸಂಶಯ, ದುಃಖ /ಖಿನ್ನತೆ, ಅಸಿಡಿಟಿ, ಅಜೀರ್ಣ, ಅತಿಯಾದ ಹೊಟ್ಟೆನೋವು, ಕಲಿಕೆಯ, ಅಸಮರ್ಥತೆ, ಇತರರಿಗೆ ಕೇಳಿಸದ ಶಬ್ದಗಳು ಕೇಳಿಸುವದು / ಇತರರಿಗೆ ಕಾಣಿಸದಿರುವ ದೃಶ್ಯಗಳು ಕಾಣಿಸುವುದು.

ಮಾನಸಿಕ ಅಸ್ವಸ್ಥತೆಯೆನ್ನುವದು ದುರ್ಬಲ ಮನಸ್ಸಿನ ಆರೋಗ್ಯ ಪರಿಸ್ಥಿತಿ. ಇದು ಸುಲಭವಾಗಿ ಗುರುತಿಸಲ್ಪಡುವದಿಲ್ಲ. ಖಿನ್ನತೆ ಮತ್ತು ಆತಂಕಕ್ಕೆ ಸಾಮಾನ್ಯವಾಗಿ ಯಾವುದೇ ಸ್ಪಷ್ಟ ಲಕ್ಷಣಗಳಿಲ್ಲ. ತಜ್ಞರ ಪ್ರಕಾರ ಕೆಲವೊಂದು ಪ್ರಮುಖ ಮಾನಸಿಕ ಆರೋಗ್ಯ ಸಮಸ್ಯೆಗಳು ಆತ್ಮ ಹತ್ಯೆಗೆ ಪ್ರಮುಖ ಕಾರಣವಾಗಿವೆ.

ಆರಂಭಿಕ ಲಕ್ಷಣಗಳನ್ನು ಗುರುತಿಸುವದು ಮತ್ತು ವೈದ್ಯರೊಂದಿಗೆ ಸಮಾಲೋಚಿಸುವ ಮೂಲಕ ಇಂತಹ ಸಮಸ್ಯೆಗಳಿಗೆ ತುತ್ತಾಗಿರುವವರ ಜೀವವನ್ನು ಉಳಿಸಬಹುದು.

ಮಾನಸಿಕ ಆರೋಗ್ಯ ಸ್ಥಿತಿಯನ್ನು ಅಳೆಯಲು ಕರುಳು ಮಾಪನವಿದ್ದಂತೆ. ಕರುಳು ಮತ್ತು ಮಿದುಳಿಗೆ ಆಳವಾದ ಸಂಪರ್ಕವಿದೆ. ಒಂದು ವೇಳೆ ದೇಹದಲ್ಲಿಯ ಪಚನ ಕ್ರಿಯೆಯಲ್ಲಿ ಏರುಪೇರು ಆದ ಚಿನ್ಹೆಗಳನ್ನು ನಿರ್ಲಕ್ಷಿಸಿದರೆ ದೇಹದ ಉಳಿದ ಭಾಗಗಳು ಶೀಘ್ರ ದಲ್ಲೇ ಪರಿಣಾಮಗಳನ್ನು ಅನುಭವಿಸುವವು.

ಪ್ರತಿ ಬಾರಿ ವ್ಯಕ್ತಿ ಆತಂಕಕ್ಕೊಳಗಾದಾಗ ಅಥವಾ ಒತ್ತಡಕ್ಕೊಳಗಾದಾಗ ಮೆದುಳು ಕರುಳಿನ ಕೆಲಸವನ್ನು ನಿಧಾನ ಗೊಳಿಸುತ್ತದೆ.ಮೆದುಳು ಜೀರ್ಣ ಕ್ರಿಯೆ ಯನ್ನು ತಡೆಯುತ್ತದೆ. ಹೀಗಾಗಿ ಹೊಟ್ಟೆಯಲ್ಲಿ ಆಮ್ಲಿಯತೆ (ಅಸಿಡಿಟಿ), ಅಜೀರ್ಣ ಉಂಟಾಗುತ್ತದೆ. ಇವು ಕೂಡಾ ಮಾನಸಿಕ ಅನಾರೋಗ್ಯದ ಲಕ್ಷಣ.

ಸಾಮಾನ್ಯವಾಗಿ ಕೆಲವು ಮಕ್ಕಳಲ್ಲಿ “ಕಲಿಕೆಯ ಅಸಮರ್ಥತೆ” (learning-disability) ಲಕ್ಷಣಗಳು ಕಂಡುಬರುತ್ತವೆ. ಈ ಸಮಸ್ಯೆ ಇರುವಾಗ ಮಕ್ಕಳು ಶಾಲೆಗೆ ಹೋಗಲು, ಓದಲು ಮತ್ತು ಬರೆಯಲು ಮನಸ್ಸು ಮಾಡುವುದಿಲ್ಲ. ಅವರಿಗೆ ಬೇರೊಂದು ವಿಷಯದಲ್ಲಿ ಆಸಕ್ತಿ ಇರುತ್ತದೆ. ಅದನ್ನು ಮುಖ್ಯವಾಗಿ ಪೋಷಕರು ಗುರುತಿಸಿ ಆಸಕ್ತಿ ಇದ್ದ ಕಡೆ ಕಲಿಯಲು ಸಹಕಾರ ಕೊಡಬೇಕು. ಇದಕ್ಕೆ ಶಿಕ್ಷಕರ ಸಹಾಯವೂ ಕೂಡಾ ಅವಶ್ಯಕ ವಾಗಿರುತ್ತದೆ. ನಮ್ಮ ಸಮಾಜ ಈ ರೀತಿ ಸಮಸ್ಯೆಯಿರುವ ಮಗುವನ್ನು ದಡ್ಡ ನೆಂದು ತಿಳಿದು ದಂಡಿಸುತ್ತಾರೆ. ಕೀಳೀರಿಮೆ ಬರುವ ಹಾಗೆ ಮಾಡುತ್ತಾರೆ.

ಕೇವಲ ಶಾಲೆಗೆ ಹೋಗಿ ಶಿಕ್ಷಣ ಕಲಿತರೆ ಮಾತ್ರ ಜಾಣರು ಎಂಬುದು ತಪ್ಪು ಕಲ್ಪನೆಯಾಗಿದೆ. ಶಿಕ್ಷಣ ಬೇಕು, ಆದರೆ ಕಲಿಯಲು ಅಸಮರ್ಥತೆ ಇದ್ದಲ್ಲಿ ಬೇರೆ ಉಳಿದ ಮಾರ್ಗಗಳನ್ನು ಹಿಡಿದು ಅದರಲ್ಲಿ ಯಶಸ್ಸು ಕಾಣುವ ದರಲ್ಲಿ ತಪ್ಪೇನಿಲ್ಲ.ಮಕ್ಕಳು ತಮಗೆ ಆಸಕ್ತಿ ಇದ್ದ ರಂಗಗಳಲ್ಲಿ ಸಾಧನೆ ಗೈದು ಆದರಲ್ಲಿ ಮಿಂಚುವ ಸಾಧ್ಯತೆಗಳಿವೆ. ಇದಕ್ಕೆ ಸಾಕಷ್ಟು ಪ್ರತಿಭಾವಂತರ ಉದಾಹರಣೆಗಳು ಇವೆ.

ಕೆಲವೊಮ್ಮೆ ಮಕ್ಕಳು ಮಂಕಾಗಿ ಕುಳಿತು ಏನೋ ಒಳಗೊಳಗೇ ವಿಚಾರ ಮಾಡುತ್ತ ಏಕಾಂತದಲ್ಲಿ ಇರಲು ಇಚ್ಚಿಸುತ್ತಾರೆ. ಆ ಸಮಯದಲ್ಲಿ ತಂದೆತಾಯಿ ಅವರನ್ನು ಪ್ರೀತಿಯಿಂದ ಮಾತನಾಡಿಸಿ ಅವರೊಳಗೆ ಏನು ಸಮಸ್ಯೆಯಿದೆ, ಯಾಕೆ ಹೀಗೆ ಮಂಕಾಗಿದ್ದಾರೆ ಎಂದು ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು. ಅಲಕ್ಷ ಮಾಡುವದು ಇಲ್ಲವೇ ಕೋಪದಿಂದ ದಂಡಿಸಿ ಕೇಳುವುದು, ಮಾಡಿದಲ್ಲಿ ಮಕ್ಕಳು ಭಯದಿಂದ ತಮಗಾದ ನೋವನ್ನು ಹೇಳಿಕೊಳ್ಳಲಾಗದೇ ಮನಸ್ಸಿನಲ್ಲಿಯೇ ಇಟ್ಟುಕೊಂಡು ಆತಂಕಕ್ಕೆ ಒಳಗಾಗುವ ಸಾಧ್ಯತೆಗಳಿರುತ್ತವೆ.

ಆದ್ದರಿಂದ ಪೋಷಕರ ಮತ್ತು ಮಕ್ಕಳ ನಡುವೆ ಸಲುಗೆ, ಪ್ರೀತಿ ಇರಲೇಬೇಕು. ಮಕ್ಕಳನ್ನು ಶಿಸ್ತಿನಿಂದ ಬೆಳೆಸಬೇಕು ಆದರೆ ಭಯ ಹುಟ್ಟಿಸುವ ತರಹ ಆಗಬಾರದು. ಇದು ಹದಿಹರೆಯದ ಮಕ್ಕಳಿಗೂ ಅನ್ವಯಿಸುತ್ತದೆ. ಇವೇ ಮೊದಲಾದವು ಮಾನಸಿಕ ಅಸ್ವಸ್ಥತೆಗೆ ಕಾರಣ ವಾಗಲೂಬಹುದು.

ನಮ್ಮ ದೇಶದ ಶಿಕ್ಷಣ ಪದ್ದತಿಯಲ್ಲಿ ಇವೆಲ್ಲದರ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡುವದು ಅವಶ್ಯವಾಗಿವೆ. ಮಾನಸಿಕ ರೋಗದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು.

ವಿದೇಶದಲ್ಲಿ ಪೋಷಕರು ಮಕ್ಕಳ ಆಸಕ್ತಿ ಯನ್ನು ಗಮನಿಸಿ ಅವರಿಗೆ ಪ್ರೋತ್ಸಾಹ ನೀಡುತ್ತಾರೆ. ಅವರು ಹೀಗಾಗಿ ಅವರು ದೊಡ್ಡವರಾದ ಮೇಲೂ ತಮಗೆ ಆಸಕ್ತಿ ಇದ್ದ ಕೆಲಸಗಳನ್ನೇ ಮನಸ್ಸಿನಿಂದ ಮತ್ತು ಶ್ರದ್ಧೆಯಿಂದ ಮಾಡುತ್ತಾರೆ. ಅದರಲ್ಲಿ ತೃಪ್ತಿ ಯನ್ನು ಪಡೆಯುತ್ತಾರೆ.

ನಮ್ಮಲ್ಲಿ ಹಾಗಾಗುವದು ಕಡಿಮೆಯೇ. ಕೆಲ ಪೋಷಕರು ಮಕ್ಕಳ ಆಸಕ್ತಿಯ ಕಡೆಗೆ ಗಮನ ಕೊಡದೇ ತಮಗೆ ಬೇಕಾದ ಹಾಗೆ ಕಲಿಯಲು ಒತ್ತಾಯ ಮಾಡುತ್ತಾರೆ. ಮಕ್ಕಳು ತಮಗಿಷ್ಟವಿಲ್ಲದಿದ್ದರೂ ಪೋಷಕರ ಒತ್ತಾಯಕ್ಕೆ ಮಣಿದು ಏನೋ ಒಂದು ಕಲಿಯುತ್ತಾರೆ. ಅತೃಪ್ತರಾಗಿ ವೇದನೆ ಅನುಭವಿಸುತ್ತಾರೆ. ಇವೇ ಮುಂದೆ ಸುಪ್ತ ವಾಗಿ ಮನಸ್ಸಿನಲ್ಲಿ ಕಾಡುತ್ತವೆ.ಈಗೀಗ ಇಂತಹ ವಿಷಯದಲ್ಲಿ ಸ್ವಲ್ಪ ಬದಲಾವಣೆ ಆಗುತ್ತಿರುವುದು ಒಂದು ಒಳ್ಳೆಯ ಬೆಳವಣಿಗೆಯೇ. ಪ್ರತಿಯೊಂದು ಮಗುವಿಗೂ ಅದರದೇ ಆದ ಪ್ರತಿಭೆ, ಜಾಣ್ಮೆ ಇದ್ದೇ ಇರುತ್ತದೆ. ತಿಳಿದುಕೊಳ್ಳುವ ಪ್ರಯತ್ನ ಬೇಕಷ್ಟೆ.

ಹೆಣ್ಣುಮಕ್ಕಳಲ್ಲಿ ಕಾಣುವ ಮಾನಸಿಕ ಅಸ್ವಸ್ಥತೆಗಳೆಂದರೆ ದೀರ್ಘ ಕಾಲದ ಖಿನ್ನತೆ, ಪ್ರಸವಪೂರ್ವ ಖಿನ್ನತೆ, ಪ್ರಸವದ ನಂತರದ ಖಿನ್ನತೆ, ಋತು ಚಕ್ರದ ಸಮಯದಲ್ಲಿ ದೇಹದಲ್ಲಿ ಹಾರ್ಮೋನ್ ಗಳಿಂದ ಆಗುವ ಏರುಪೇರುಗಳು, ಇಂತಹಪರಿಸ್ಥಿತಿ ಯಲ್ಲಿ ಅವರ ಮನಸ್ಥಿತಿ ಮಾನಸಿಕವಾಗಿ ಕುಂಠಿತ ಗೊಂಡಿರುತ್ತದೆ. ಅವರ ಮನಸ್ಸೇ ಅವರ ಹಿಡಿತದಲ್ಲಿ ಇರುವದಿಲ್ಲ. ಸಿಟ್ಟು, ಕೆರಳಿಕೆ ಮತ್ತು ಉದ್ರೇಕದ ಭಾವನೆಗಳ ತಾಕಲಾಟದ ಮನಸ್ಥಿತಿ ಅವರದಾಗಿರುತ್ತದೆ.

ಅವರಿಗೆ ಆ ಸಮಯದಲ್ಲಿ ವೈದ್ಯರ ಸಲಹೆ, ಕುಟುಂಬದ ಸದಸ್ಯರ ಮತ್ತು ಪತಿಯ ಸಹಕಾರ ಅತ್ಯಗತ್ಯ. ಗಂಡಸರು ಹೆಣ್ಣು ಮಕ್ಕಳ ಸಮಸ್ಯೆಗಳನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು. ಇಂದಿನ ಯುವ ಜನಾಂಗ ವಿದ್ಯಾ ವಂತರಾಗಿದ್ದರೂ ಇವೆಲ್ಲ ಸಮಸ್ಯೆಗಳ ಬಗ್ಗೆ ಇನ್ನೂ ಅರಿವಿಲ್ಲ ದವರಂತೆ ಇರುವದು ಒಂದು ಖೇದಕರ ಸಂಗತಿ ಎಂದರೆ ತಪ್ಪಾಗಲಾರದು.

ಸಾಮಾನ್ಯವಾಗಿ ಎಲ್ಲರೂ ದೈಹಿಕ ರೋಗಗಳಾದ ಮಧುಮೇಹ, ರಕ್ತದೊತ್ತಡ ಅಲ್ಸರ್, ಕ್ಯಾನ್ಸರ್, ಹೃದ್ರೋಗ ಮತ್ತು ಅಂಗಾಂಗ ಗಳಲ್ಲಿ ಸಮಸ್ಯೆ ಈ ತರಹ ಏನಾದರೂ ಬಂದರೆ ವೈದ್ಯರ ಹತ್ತಿರ ಸಲೀಸಾಗಿ ತಪಾಸಣೆಗೆ ಹೋಗುವರು. ತಮ್ಮ ತಮ್ಮ ಸಂಬಂಧಿಕರ ಮತ್ತು ಸ್ನೇಹಿತರ ಮುಂದೆ ತಮಗಾದ ನೋವುಗಳನ್ನು ಹೇಳಿಕೊಳ್ಳುವರು.

ಅದೇ ಮಾನಸಿಕ ಅಸ್ವಸ್ಥತೆಯ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿಗಳು ಯಾರ ಮುಂದೆಯೂ ಹೇಳಿಕೊಳ್ಳಲು ಮನಸ್ಸು ಮಾಡುವುದಿಲ್ಲ. ಅವರಿಗೆ ಏನೋ ಅಳುಕು, ಆತಂಕ. ವೈದ್ಯರ ಹತ್ತಿರ ತಪಾಸಣೆಗೆ ಹೋಗಲು ಸಹಿತ ಹಿಂಜರಿಕೆ. ತಮ್ಮನ್ನು ತಾವೇ ತಪ್ಪಿತಸ್ಥ ಎಂಬ ಭಾವನೆ ಮೂಡಿಸಿ ಕೊಂಡು ಬಿಟ್ಟಿರುತ್ತಾರೆ.

"ಹೊರಗೆ ಹೇಳಿಕೊಳ್ಳಲಾಗದೇ ಒಳಗೊಳಗೆಯೇ ನೊಂದು ಅವರ ಸ್ಥಿತಿ ಗೆದ್ದಲು ಹಿಡಿದ ಮರದಂತಾಗಿರುತ್ತದೆ ".

ಸಮಾಜದಲ್ಲಿನ ಜನರು ಅವರನ್ನು ಬೇರೆ ದೃಷ್ಟಿಯಿಂದ ನೋಡುತ್ತಾರೆ. ಇದೊಂದು ತಪ್ಪಾದ ದೃಷ್ಟಿಕೋನ. ಇದೂ ಒಂದು ಎಲ್ಲಾ ಕಾಯಿಲೆಯ ತರಹವೇ ಎಂಬ ಭಾವನೆ ಬರಬೇಕು. ಹೀಗಿರುವಾಗ ಮಾತ್ರ ಅದರಲ್ಲಿ ಒಳ್ಳೆಯ ಬೆಳವಣಿಗೆ ಕಾಣಬಹುದು.

ಮಾನಸಿಕ ಅಸ್ವಸ್ಥತೆಯ ವ್ಯಕ್ತಿಗಳು ಅಸ್ವಸ್ಥತೆಗೆ ಒಳಗಾಗಿಯೇ ಬಿಟ್ಟಿರುತ್ತಾರೆ. ಅವರಿಗೆ ಬೇರೆಯವರ ಬಗ್ಗೆ ಹೆಚ್ಚಿನ ಭಾವನೆಗಳೇ ಇರುವದಿಲ್ಲ. ಅವರು ತಮ್ಮದೇ ಆದ ಒಂದು ಕಲ್ಪನಾ ಲೋಕದಲ್ಲೇ ಮುಳುಗಿರುತ್ತಾರೆ. ಆದರೆ ಅವರನ್ನು ಆರೈಕೆ ಮಾಡುವವರ ಪಾಡಂತೂ ಊಹೆಗೂ ಮೀರಿದ್ದು. ಕೆಲವು ಮಕ್ಕಳಲ್ಲಿ ಈ ತರಹ ಅಸ್ವಸ್ಥತೆ ಇದ್ದಲ್ಲಿ ಪೋಷಕರು ತಮ್ಮ ಜೀವನದ ಪೂರ್ತಿ ಸಮಯವನ್ನು ಅವರ ಸಲುವಾಗಿಯೇ ಮೀಸಲಾಗಿಡಬೇಕಾಗುತ್ತದೆ. ಮಾನಸಿಕ ಅಸ್ವಸ್ಥತೆಯ ಯಿಂದ ಬಳಲುವ ಎಷ್ಟೋ ಮಕ್ಕಳು ತಮ್ಮ ಅತ್ಯಂತ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವ ಸ್ಥಿತಿಯಲ್ಲಿರುವದಿಲ್ಲ. ಎಲ್ಲದಕ್ಕೂ ಪೋಷಕರ ಮೇಲೇ ಅವಲಂಬಿತ ರಾಗಿರುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಪೋಷಕರು ಅಂತಹ ಮಕ್ಕಳನ್ನು ಬಿಟ್ಟು ಎಲ್ಲೂ ಹೋಗಲು ಬರುವದಿಲ್ಲ. ಪ್ರತಿ ಹಂತದಲ್ಲಿ ಅವರನ್ನು ಕಾಳಜಿಯಿಂದ ನೋಡಿಕೊಳ್ಳುವ ಜವಾಬ್ದಾರಿ ಇರುತ್ತದೆ.

ಯಾರು ಈ ತರಹ ಪರಿಸ್ಥಿತಿಯನ್ನು ಎದುರಿಸುತ್ತಾರೋ ಅವರಿಗೆ ಮಾತ್ರ ಕಷ್ಟ ತಿಳಿಯುತ್ತದೆ. ದುಡ್ಡಿನ ಅನುಕೂಲ ವಿದ್ದವರು ಮಾತ್ರ ಮಕ್ಕಳನ್ನು ನೋಡಿಕೊಳ್ಳುವ ಸಲುವಾಗಿ ಆರೈಕೆದಾರರನ್ನು ನೇಮಿಸಿಕೊಳ್ಳು ತ್ತಾರೆ. ಇದೂ ಎಲ್ಲರಿಗೂ ಸಾಧ್ಯವಾಗುವದಿಲ್ಲ . ಏನೇ ಆದರೂ ನಿಶ್ಚಿಂತೆಯಿಂದ ಇರಲು ಸಾಧ್ಯವೇ ಇಲ್ಲ.

ಸ್ಕಿಝೋಫ್ರೀನಿಯ ಮತ್ತು ಇತರೇ ಪ್ರಮುಖ ಮಾನಸಿಕ ಕಾಯಿಲೆಗಳಿದ್ದ ವ್ಯಕ್ತಿಗಳ ಆರೈಕೆದಾರರು ಬಹಳ ವೇದನೆ ಅನುಭವಿಸ ಬೇಕಾಗುತ್ತದೆ. ಸಂಗಾತಿಗಳಲ್ಲಿ ಯಾರಾದರೂ ಒಬ್ಬರು ಈ ಕಾಯಿಲೆಯಿಂದ ಬಳಲುತ್ತಿದ್ದರೆ, ಇನ್ನೊಬ್ಬರಿಗೆ ಇದರಿಂದ ವಿಪರೀತ ಸಮಸ್ಯೆಯಾಗುತ್ತದೆ.

"ರೋಗಿಯಂತೂ ರೋಗ ಬಂದು ರೋಗಿಯಾಗಿರುತ್ತಾನೆ. ಆದರೆ ಅವನ ಜೊತೆ ಇರುವವರು ರೋಗವಿಲ್ಲದಿದ್ದರೂ ರೋಗಿಯಗಿಂತಲೂ ಹೆಚ್ಚು ವೇದನೆ ಪಡುತ್ತಿರುತ್ತಾರೆ "

ದಿನ ಬೆಳಗಾದರೆ ಅವರ ಉಪಚಾರ, ಔಷಧಿ ಸರಿಯಾಗಿ ಕೊಡುವದು. ಒಂದೊಂದು ಸಲ ಅವರು ಔಷಧ ತೆಗೆದುಕೊಳ್ಳಲು ತಯಾರಿರುವದಿಲ್ಲ. ಆ ಸಮಯದಲ್ಲಿ ಹೇಗಾದರೂ ಮಾಡಿ ಆವರ ಮನವೊಲಿಸಿ ಔಷಧ ಕೊಡಬೇಕಾದ ಅನಿವಾರ್ಯತೆ ಇರುತ್ತದೆ. ಅವರು ಕೋಪಿಸಿಕೊಂಡಲ್ಲಿ ತಾವು ಸಮಾದಾನಿ ಯಾಗಿದ್ದುಕೊಂಡು, ಅವರನ್ನು ನಿಯಂತ್ರಿಸ ಬೇಕಾಗುತ್ತದೆ. ರೋಗಿಯ ಮನಸ್ಸು ನಿಯಂತ್ರಣವಿಲ್ಲ ದಿರುವಾಗ ಅವರು ಏನು ಮಾಡಲೂ ಹಿಂಜರಿಯುವದಿಲ್ಲ. ಸಂಗಾತಿಗೆ ದೈಹಿಕವಾಗಿಯೂ, ಮಾನಸಿಕ ವಾಗಿಯೂ ಹಿಂಸೆ ಕೊಡುತ್ತಿರುತ್ತಾರೆ. ಆ ಸಮಯದಲ್ಲಿ ಆರೈಕೆದಾರರ ಜೊತೆ ಯಾರಾದರೂ ಕುಟುಂಬದ ಸದಸ್ಯರು ಇರಬೇಕಾಗಿರುತ್ತದೆ. ಒಬ್ಬರೇ ಇದ್ದರೆ ಬಹಳ ಅನಾಹುತ ಬಂದೊದುಗುವ ಪರಿಸ್ಥಿತಿ ನಿರ್ಮಾಣ ವಾಗುವ ಸಾಧ್ಯ ತೆಗಳೇ ಹೆಚ್ಚು.

ಆರೈಕೆದಾರರು ಹೊರಗಿನ ಸಮಾಜಕ್ಕೆ ಈ ಕಾಯಿಲೆಯ ಬಗ್ಗೆ ಹೇಳಲು ಹಿಂಜರಿಕೆ ಮಾಡಿಕೊಂಡು ತಾವೊಬ್ಬರೇ ನರಕಯಾತನೆ ಅನುಭವಿಸುತ್ತ ಸೆಣಸಾಡುತ್ತಿರುತ್ತಾರೆ.

ಸ್ಕಿಝೋಫ್ರೀನಿಯಾದಂತಹ ಪ್ರಮುಖ ಕಾಯಿಲೆ ಗಳಿಂದ ಹೊರಬರುವ ಹೋರಾಟವು ವ್ಯಕ್ತಿಗಿಂತ ಅವರ ಆರೈಕೆದಾರರಿಗೆ ಹೆಚ್ಚಿನ ಕಷ್ಟದ ಸ್ಥಿತಿ. ವ್ಯಕ್ತಿಯ ವಿಚಿತ್ರ ವರ್ತನೆ, ಸ್ನೇಹಿತರನ್ನು, ಸಂಗಾತಿಯನ್ನು ಮತ್ತು ಕುಟುಂಬ ದವರನ್ನು ಅನುಮಾನಿಸುವದು, ವಿರೋಧಿಸುವ ಪ್ರಯತ್ನ ಆರೈಕೆದಾರರನ್ನು ಬಳಲುವಂತೆ ಮಾಡುತ್ತದೆ.

"ಬಿಸಿ ತುಪ್ಪದ ಹಾಗೆ ಅವರ ಸ್ಥಿತಿ , ಉಗುಳಲೂ ಬಾರದು , ನುಂಗಲೂ ಬಾರದು"

ಆರೈಕೆದಾರರು ವೈದ್ಯರೊಂದಿಗೆ ಸಂಪರ್ಕದಲ್ಲಿದ್ದು ಸಮಾಲೋಚಿಸಿ ರೋಗಿಯ ಆರೋಗ್ಯ ಬಗ್ಗೆ ಹೆಚ್ಚಿನ ಗಮನ ಕೊಡುವ ಜವಾಬ್ದಾರಿಯನ್ನು ನಿಭಾಯಿಸುತ್ತಿರುತ್ತಾರೆ.

ಮಾನಸಿಕ ಅಸ್ವಸ್ಥತೆಯ ಸಮಸ್ಯೆಯಿಂದ ಬಳಲುತ್ತಿರುವ ಜೊತೆ ಇರುವ ಆರೈಕೆದಾರರು ಬಹಳ ಸಹನೆ, ತಾಳ್ಮೆ ಇರಬೇಕಾಗಿರುವದು ಒಂದು ಪ್ರಮುಖ ಅಂಶವಾಗಿದೆ. ಅವರ ಸಹಕಾರ,ಪ್ರೀತಿ ಇಲ್ಲವಾದಲ್ಲಿ ವ್ಯಕ್ತಿಯ ಮಾನಸಿಕ ಅಸ್ವಸ್ಥತೆ ಇನ್ನೂ ಉಲ್ಬಣವಾಗುವ ಪ್ರಮೇಯವೇ ಹೆಚ್ಚು. ಆದ್ದರಿಂದ ಆರೈಕೆದಾರರ ಪಾತ್ರ ಬಹಳ ಹಿರಿದು ಎಂದರೆ ಅತಿಶಯೋಕ್ತಿ ಎನಿಸಲಾರದು .

ಆರೈಕೆದಾರರು ಕೂಡಾ ಹೆಚ್ಚಿನ ಒತ್ತಡ ಹಾಗೂ ಭಾವನಾತ್ಮಕ ತೊಂದರೆಗಳಿಗೆ ಒಳಗಾಗುತ್ತಾರೆ. ಬಹುತೇಕವಾಗಿ ಮಹಿಳಾ ಆರೈಕೆದಾರರು ಪುರುಷರಿಗಿಂತಲೂ ಹೆಚ್ಚು ಒತ್ತಡ, ದಣಿವು ಮತ್ತು ತಲ್ಲಣಗಳನ್ನು ಅನುಭವಿಸುತ್ತಾರೆ. ಈ ಕಾರಣಗಳಿಗಾಗಿ ಅವರಲ್ಲಿ ಖಿನ್ನತೆ ಯುಂಟಾಗುವ ಅಪಾಯವಿದೆ. ಆರೈಕೆದಾರರು ಅವರ ಪ್ರೀತಿ ಪಾತ್ರ ರ ಆರೈಕೆಗೆ ಎಷ್ಟು ಕಾಳಜಿ ವಹಿಸಿರುತ್ತಾರೆಂದರೆ ಅವರ ಸ್ವಂತ ಜೀವನದ ಬಗ್ಗೆ ಲಕ್ಷ್ಯವಹಿಸುವುದನ್ನು ಮರೆತು ಬಿಡುತ್ತಾರೆ. ಆದ್ದರಿಂದ ಆರೈಕೆದಾರರು ದೈಹಿಕ ಹಾಗೂ ಮಾನಸಿಕ ಆರೋಗ್ಯದ ಕುರಿತಾಗಿ ಕಾಳಜಿ ತೆಗೆದುಕೊಳ್ಳುವದು ಅತೀ ಅವಶ್ಯ.

ಮಾನಸಿಕ ಅಸ್ವಸ್ಥತೆಯ ವ್ಯಕ್ತಿಯನ್ನು ಹೇಗೆ ನಿಭಾಯಿಸ ಬೇಕು ಎನ್ನುವ ಸಲುವಾಗಿ ಆರೈಕೆದಾರರು ಮನೋ ವೈದ್ಯರ ಹತ್ತಿರ ಸಮಾಲೋಚನೆ ಮಾಡಿ ಅವರಸಲಹೆ ತೆಗೆದುಕೊಳ್ಳ ಬೇಕಾಗುತ್ತದೆ.

ಪ್ರಮುಖ ಮಾನಸಿಕ ರೋಗಗಳಾದ ಸ್ಕಿಝೋಫ್ರೀನಿಯಾ, ಬೈಪೋಲಾರ ಮತ್ತು ಉನ್ಮಾದ ಕಾಯಿಲೆಗಳು ಜೀವನದ ಎಲ್ಲ ಅಂಶಗಳ ಮೇಲೆ ಅಪಾರ ಪರಿಣಾಮ ಬೀರುವವು. ನಿದ್ರಾಹೀನತೆ, ಮಾದಕ ವ್ಯಸನ, ಊಟದಲ್ಲಿ ಆಸಕ್ತಿ ಕಳೆದುಕೊಳ್ಳುವದು, ಉಸಿರಾಟದ ತೊಂದರೆ, ಚಡಪಡಿಕೆ ಹೃದಯ ಬಡಿತ, ತಪ್ಪಿತಸ್ಥ ಭಾವನೆ ಮತ್ತು ನಿರಂತರ ದುಃಖ. ಇವೂ ಸಹಿತ ಮಾನಸಿಕ ಅಸ್ವಸ್ಥತೆಯ ಗುಂಪಿಗೆ ಸೇರಿಸಲ್ಪಟ್ಟ ಸಮಸ್ಯೆಗಳೆ.

ಮುಪ್ಪಿನ ವಯಸ್ಸಿನಲ್ಲಿ ಬರುವ ಮರೆಗುಳಿತನ ಮತ್ತು (Alzheimer), ಸಂಗಾತಿಯನ್ನು ಕಳೆದುಕೊಂಡಿರುವದು, ಮಕ್ಕಳು ಜೊತೆಯಲ್ಲಿ ಇಲ್ಲದಿರುವುದರಿಂದ ಕಾಡುವ ಏಕಾಂಗಿತನ (Loneliness) ಇವೂ ಸಹಿತ ಮಾನಸಿಕ ಅಸ್ವಸ್ಥತೆಯ ರೂಪಗಳೇ. ಆ ಸಮಯದಲ್ಲಿ ಅವರನ್ನು ಪ್ರೀತಿಯಿಂದ, ಕಾಳಜಿಯಿಂದ ನೋಡಿಕೊಳ್ಳುವದೇ ಒಂದು ಔಷಧದಂತೆ. ಆದರೂ ವೈದ್ಯ ಕೀಯ ಚಿಕಿತ್ಸೆಯೂ ಬೇಕಾಗುತ್ತದೆ.

ಕೊನೆಯದಾಗಿ ಹೇಳಬೇಕೆಂದರೆ ಚಿಕಿತ್ಸೆ ಪ್ರಕ್ರಿಯೆಯಲ್ಲಿ ಮಾನಸಿಕ ಅಸ್ವಸ್ಥತೆ ಇದೆ ಎಂಬುದನ್ನು ಸ್ವೀಕರಿಸುವುದು ಮೊದಲ ಮತ್ತು ಪ್ರಮುಖ ಹಂತವಾಗಿದೆ. ಮಾನಸಿಕ ಅಸ್ವಸ್ಥತೆಯ ವ್ಯಕ್ತಿಗೆ ತನ್ನ ಕಾಯಿಲೆಯ ಬಗ್ಗೆ ಅರಿವಿರಬೇಕು (Insight) ಹೀಗಿದ್ದಾಗ ಕಾಯಿಲೆಯ ನಿಯಂತ್ರಣ ಸುಲಭವಾಗುತ್ತದೆ. ಮಾನಸಿಕ ಆರೋಗ್ಯ ಸ್ಥಿತಿ ಸುಧಾರಣೆಗೆ ಪ್ರೀತಿ ಪಾತ್ರರ ಬೆಂಬಲ ಮತ್ತು ವೈದ್ಯಕೀಯ ನೆರವು ಬೇಕಾಗುತ್ತದೆ.ಅದನ್ನು ಚರ್ಚಿಸಲು ಭಯಪಡಬಾರದು, ನಾಚಿಕೆ ಪಡಬಾರದು. ಖಿನ್ನತೆ ಮತ್ತು ಆತಂಕದಂತಹ ಪರಿಸ್ಥಿತಿಗಳನ್ನು ಔಷಧಗಳು ಮತ್ತು ಚಿಕಿತ್ಸೆಯೊಂದಿಗೆ ನಿರ್ವಹಿಸಬಹುದು .

ಅಸ್ವಸ್ಥತೆಯ ತೀವ್ರತೆ ಅಥವಾ ವ್ಯಕ್ತಿಗಳು ಔಷಧಗಳನ್ನು ಸಹಿಸಿಕೊಳ್ಳುವ ಅಂಶಗಳ ಆಧಾರದ ಮೇಲೆ ವಿವಿಧ ರೀತಿಯ ಚಿಕಿತ್ಸಾ ವಿಧಾನಗಳನ್ನು ನಿರ್ದಿಷ್ಟ ಪಡಿಸಲಾಗುತ್ತಿದೆ. ಪಡೆಯುತ್ತಿರುವ ಔಷಧ ಇಲ್ಲವೇ ಥೆರಪಿಯನ್ನು ಅರ್ಧಕ್ಕೆ ನಿಲ್ಲಿಸಿದರೆ ಕಾಯಿಲೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ, ರೋಗ ಮರುಕಳಿಸುವ ಸಾಧ್ಯತೆಯು ಇರುತ್ತದೆ. ಇದು ವ್ಯಕ್ತಿಗಳಿಗೆ ತಿಳಿಯದೆಯೂ ಇರಬಹುದು. ಅಥವಾ ನಿಯಂತ್ರಣ ಸಾಧ್ಯ ವಾಗದೇ ಇರಬಹುದು.

"ದೈಹಿಕ ಮತ್ತು ಮಾನಸಿಕ ಕಾಯಿಲೆಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ".

ಇವೆರಡು ಚೆನ್ನಾಗಿರಬೇಕೆಂದರೆ ಸಮ ತೋಲನ ಆಹಾರ, ಸರಿಯಾದ ನಿದ್ರೆ, ಉತ್ತಮ ಹವ್ಯಾಸ , ಒಳ್ಳೆಯ ಸಂಗೀತ ಕೇಳುವದು, ಧ್ಯಾನ, ವ್ಯಾಯಾಮ ಮತ್ತು ಸಕಾರಾತ್ಮಕ ದೃಷ್ಟಿಕೋನ ಇವೆಲ್ಲದರ ಅವಶ್ಯಕತೆ ಇದೆ.

ಕುಟುಂಬ ಸದಸ್ಯರ ಮತ್ತು ಸ್ನೇಹಿತರೊಂದಿಗೆ ಮಾತನಾಡಿ ವೈದ್ಯಕೀಯ ಸಹಾಯ ಪಡೆದುಕೊಳ್ಳಬೇಕು. ಮಾನಸಿಕ ಆರೋಗ್ಯ, ಸಂಬಂಧಿತ ಅಸ್ವಸ್ಥತೆಗಳು, ಅವುಗಳ ಲಕ್ಷಣಗಳು ಮತ್ತು ಅವುಗಳಿಗೆ ಲಭ್ಯವಿರುವ ಚಿಕಿತ್ಸೆಗಳ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು.

ಬೇಗನೇ ಗುಣಮುಖರಾಗ ಬೇಕೆಂಬ ಫಲಿತಾಂಶಗಳ ಕಡೆಗೆ ನಿರೀಕ್ಷೆ ಬೇಡ. ಮಾನಸಿಕ ಅಸ್ವಸ್ಥತೆಯಿಂದ ಚೇತರಿಸಿಕೊಳ್ಳಲು ಕೆಲವರಿಗೆ ವಾರಗಳು ಮತ್ತು ಕೆಲವರಿಗೆ ವರ್ಷಗಳೇ ಬೇಕಾಗಬಹುದು. ಪ್ರತಿಯೊಂದು ಪ್ರಕರಣವು ತನ್ನದೇ ಆದ ಪ್ರಗತಿ ಮತ್ತು ಹಿನ್ನಡೆಗಳನ್ನು ಹೊಂದಿದೆ.

ಕುಟುಂಬದ ಬೆಂಬಲ ಮಾತ್ರ ಸದಾ ಬೇಕೇ ಬೇಕು…

Disclaimer: The views expressed in this article are solely those of the author and do not represent the views of Ayra or Ayra Technologies. The information provided has not been independently verified. It is not intended as medical advice. Readers should consult a healthcare professional or doctor before making any health or wellness decisions.
Category:Health and Wellness



ProfileImg

Written by Shobha Siddannavar