24 ಮೂಲಿಗೆಗೆ ಮಕ್ಕಳಾಗುವುದೇ?

ಪೆದಂಬು ನರಮಾನಿ - ಕಾದಂಬರಿ ಭಾಗ -24

ProfileImg
20 Apr '25
4 min read


image

‘ಓ...’ ದೈವ ಅಬ್ಬರಿಸಿತು.

‘ಗುತ್ತಿನಾರೇ... ಮೂಲಿಗೆಗೆ ಮಕ್ಕಳಾಗುವುದೇ?’

ಗುತ್ತಿನಾರರು, ಮದ್ಯಸ್ಥರು ನಸುನಕ್ಕರು.

‘ಇಲ್ಲ ಮನುಷ್ಯ ಪ್ರಯತ್ನಕ್ಕೆ ದೈವ ಬಲ ಬೇಕು....’

‘ಎರಡು ಕಾಲು ಬಂದು ನಿಂತಾಗ ಮುಂದಿನ ಬಾರಿ ನಾಲ್ಕು ಕಾಲು ಮುಂದೆ ನಿಲ್ಲುತ್ತದೆ ಎಂದೆ. ನಿಜವಾಯಿತಾ? '

ದೈವ ಪಿಂಗಾರ  ಎತ್ತಿಕೊಟ್ಟಿತು.

ಮಧ್ಯಸ್ತರು ಲೆಕ್ಕ ಮಾಡಿ ಒಂದು ಎತ್ತಿ ತೋರಿಸಿ 'ಸರಿ' ಎಂದರು.

ಸಂಸಾರದಲ್ಲಿ ದೋಷವೇನೂ ಕಾಣುವುದಿಲ್ಲ. ಪ್ರಯತ್ನಕ್ಕೆ ತೊಂದರೆ ಆದಂತೆ ಕಾಣುತ್ತಿದೆ....’

ದೈವದ ಎದುರು ನಿಂತ ಪದ್ದು - ಸುಜ್ಜಾ ಪರಸ್ಪರ ಮುಖ ಮುಖ ನೋಡಿಕೊಂಡರು.

‘ಕಾಶೀ ಯಾತ್ರೆ ಬಲು ದೊಡ್ಡ ಯಾತ್ರೆ... ಅದು ಈಗ ಬೇಡ.

ತಿಮ್ಮಪ್ಪ ದೇವರ ಮೆಟ್ಟಲು ಹತ್ತಬಹುದಲ್ಲಾ? ಇಬ್ಬರೇ ಹೋಗಬೇಕು.

ಇದು ಮೂಲಿಗೆಗೆ ಮಾತ್ರ. ಎಲ್ಲವನ್ನೂ ದೈವ ಮಾಡುತ್ತದೆ ಎಂದು ಭಾವಿಸಬಾರದು. ಪ್ರಯತ್ನ ನರಮಾನಿಯೇ ಮಾಡಬೇಕು.

ಒಂದು ವರ್ಷದ ಒಳಗೆ ಫಲ ಸಿಗುತ್ತದೆ. ಹಿಡಿ ಬೂಳ್ಯ...

ಸುಜ್ಜಾ ಸೆರಗು ಹಿಡಿದಳು, ಪದ್ದು ಕೈಮುಗಿದು ನಿಂತ.

'ಗುತ್ತಿನಾರೇ... ಕಳೆದು ಹೋದ ಸಂಸಾರ ಮರಳಿ ಬಂದ ಮೇಲೆ ತಿಂಗಳಿಗೊಂದು ಬಾರಿ ಗುತ್ತಿನ ಬಲೆ ಕಸ ಹೊರಗೆ ಬಿದ್ದಿದೆ. ಗುತ್ತಿನಲ್ಲಿ ಅಸರ್ ಕೊಡುವ ಕೆಲಸ ಆಗುತ್ತಿದೆ. ಸೇವೆ ಹಾಗೆಯೇ ನಡೆದುಕೊಂಡು ಬರಲಿ. ನನಗೆ ಬೇಕಾದದ್ದು ಪಡೆದುಕೊಳ್ಳುತ್ತಿದ್ದೇನೆ. ಇನ್ನೂ ಪಡೆದುಕೊಳ್ಳುವುದಕ್ಕೆ ಇದೆ...'

ಗಗ್ಗರ ಅಲ್ಲಾಡಿಸುತ್ತಾ, 'ಓ....' ಎಂದು ಅಬ್ಬರಿಸುತ್ತಾ ದೈವ ಪ್ರಸಾದ ಸೆರಗಿಗೆ ಹಾಕಿತು.

ಹೌದು...

ಪದ್ದು - ಸುಜ್ಜಾಳ ಜೀವನದ ಮೊದಲ ರಾತ್ರಿ...

ಆ ಮನೆಯಲ್ಲಿ ಅವರಿದ್ದ ರಾತ್ರಿಗಳು ಹಲವಾರು. ಆದರೂ, ಮದುವೆಯ ದಿನ ಒಂದೇ ಕೋಣೆಯೊಳಗೆ ಕೆಲವೇ ಕೆಲವು ಕ್ಷಣ ಕಳೆದ ಮೊದಲ ರಾತ್ರಿ.

ಸುಜ್ಜಾ ಹಾಲು ಹಿಡಿದು ಕೋಣೆ ಪ್ರವೇಶಿಸಿದ್ದಳು.

‘ಮಂಜೊಟ್ಟಿ ಗುತ್ತಿನ ರಾಣಿಗೆ ಸ್ವಾಗತ’ ಎಂದು ಪದ್ದು ಸ್ವಾಗತಿಸಿದ.

ಸುಜ್ಜಾಳ ಮುಖ ಪ್ರಶಾಂತವಾಗಿದ್ದರೂ. ಅಲ್ಲಿ ಆಯಾಸ, ನಿದ್ದೆಯ ಕುರುಹು. ಸ್ಪಷ್ಟವಾಗಿ ಪದ್ದು ಗಮನಿಸಿದ.

ಆಕೆ ನೀಡಿದ ಹಾಲು ಪಡೆದ...

‘ಪದ್ದು ನನಗೇನೂ ಕೂಡುವುದಿಲ್ಲ. ನಿದ್ದೆ ಬರುತ್ತಿದೆ. ಕೈಕಾಲು ಎಳೆಯುತ್ತಿದೆ...’ ಸುಜ್ಜಾ ನುಡಿದಳು.

‘ಮಲಗು’ ಎಂದ ಪದ್ದು.

ಹಾಸಿಗೆಗೆ ಬೆನ್ನು ಸೋಕಿದ ಕ್ಷಣದಲ್ಲೇ ಸುಜ್ಜಾಳಿಗೆ ನಿದ್ದೆ ಆವರಿಸಿತ್ತು.

ಅರ್ಧ ಲೋಟ ಹಾಲು ಕುಡಿದ ಪದ್ದು ಹಾಸಿಗೆಯಲ್ಲಿ ಕುಳಿತ. ಸೆಖೆಯಲ್ಲಿ ಬೆವರು. ಅಂಗಿ ಕಳಚಿದ. ಸುಜ್ಜಾಳ ಪಕ್ಕದಲ್ಲಿ ಮಲಗಿ ನಿದ್ರಿಸಲು ಯತ್ನಿಸಿದ. ಮನೆ ಅವನದೇ, ಆದರೂ ಆ ಕೋಣೆ ಅಂದು ಅವನಿಗೆ ಹೊಸ ಜಾಗ.

ಮೊಗಂಟೆಯ ಹಲಗೆಯ ಪಕ್ಕದ ನೆಲದಲ್ಲಿ ಚಾಪೆ, ತಲೆದಿಂಬು, ಹೊದಿಕೆ ಇದ್ದೋ ಇಲ್ಲದೆಯೋ ಮಲಗಿದಾಕ್ಷಣ ನಿದ್ದೆ ಆವರಿಸುತ್ತಿದ್ದ ಪದ್ದುವಿನಿಂದ ಅಷ್ಟು ಆಯಾಸ ಆಗಿದ್ದರೂ ನಿದ್ದೆ ಹಾರಿ ಹೋಗಿತ್ತು.

ಪಕ್ಕದಲ್ಲಿ ಸುಜ್ಜಾ ಗಾಢ ನಿದ್ದೆಗೆ ಶರಣಾಗಿದ್ದಳು.

ಪದ್ದು ಎದ್ದ. ದಿಂಬು ಹೊದಿಕೆ ಎತ್ತಿಕೊಂಡು ಚಾವಡಿ ದಾಟಿ ಮೊಗಂಟೆಗೆ ಬಂದ. ಹಲಗೆಯ ಮೇಲೆ ಶಂಭು ನಿದ್ರಿಸುತ್ತಿದ್ದ. ಹಲಗೆಯ ಪಕ್ಕ ನೆಲದಲ್ಲಿ ದಿಂಬು ಹೊದಿಕೆ ಇರಿಸಿದ. ಅಲ್ಲೇ ಮೈ ಚೆಲ್ಲಿದ. ಕ್ಷಣ ಮಾತ್ರದಲ್ಲಿ ನಿದ್ದೆ ಆವರಿಸಿಕೊಂಡುಬಿಟ್ಟಿತ್ತು.

ಮುಂಜಾನೆ ಕೋಳಿ ಕೂಗಿದಾಗ ಎದ್ದು ಮೊಗಂಟೆಗೆ ಬಂದ ದೇವಕಿ ಪದ್ದು ಮಲಗಿದ ಸ್ಥಿತಿ ಕಂಡು ಅವಕ್ಕಾದಳು.

ಅದಾಗಲೇ ಎದ್ದು ಮೈಮುರಿಯುತ್ತಾ ಹೊರಬಂದ ದೋಗಣ್ಣನ ಹೆಂಡತಿಯ ಬಳಿ ಹೋಗಿ ‘ಪದ್ದು ನೋಡಿಯಂತೆ. ಅಲ್ಲಿ ಮಲಗಿದ್ದು’ ಎಂದು ಪಿಸು ಮಾತಲ್ಲಿ ಹೇಳಿದಳು. ದೋಗಣ್ಣನ ಹೆಂಡತಿ ಸ್ತಂಭೀಭೂತಳಾದಳು.

ಇವರಿಬ್ಬರ ಸುಳಿವು ಪದ್ದುವನ್ನು ಎಚ್ಚರಿಸಿತು. ಆತನ ಎದ್ದು ಮೈಮುರಿಯುತ್ತಾ ಅಂಗಳ ಇಳಿದ...

‘ಏನು. ಪದ್ದು... ಏನಾಯ್ತು...?’ ದೇವಕಿ ತವಕದಿಂದ ಪ್ರಶ್ನಿಸಿದಳು.

‘ಯಾಕೆ, ಏನಾಯಿತು...?’ ಪದ್ದು ದೇವಕಿಯ ಆಶ್ಚರ್ಯವನ್ನೇ ಪ್ರಶ್ನಿಸಿದ.

ಆ ದಿನ ಇಡೀ ಯಕ್ಷಗಾದ ಗೌಜಿಯಲ್ಲಿ ದಿನ ಕಳೆದು ಹೋದರೂ ಪದ್ದು ರಾತ್ರಿ ಮೊಗಂಟೆಯಲ್ಲಿ ಮಲಗಿದ ಬಗ್ಗೆ ಪಿಸುಮಾತು ಮನೆಯ ಹೆಣ್ಣು ಮಕ್ಕಳು, ಹೆಂಗಸರೊಳಗೆ ನಡೆದಿತ್ತು. ಸುಜ್ಜಾಳನ್ನು ಅವರೆಲ್ಲಾ ಒಂದು ರೀತಿಯಲ್ಲಿ ನೋಡಿದರೂ ಆಕೆ ಸಹಜವಾಗಿಯೇ ಇದ್ದಳು.

ಅಂದು ರಾತ್ರಿ ಆಟದಲ್ಲಿ ಕಳೆದು ಹೋಯಿತು.

ನಂತರದ ದಿನಗಳು ಪೊಡಿಯನ ಮರಣದ ಶೋಕದ ದಿನಗಳು...

ರಾತ್ರಿ ಸುಜ್ಜಾ ಕೋಣೆ ಸೇರಿದರೆ, ಪದ್ದು ಹಲಗೆಯ ಜಗಲಿಯ ಬುಡದಲ್ಲಿ ಪವಡಿಸುತ್ತಿದ್ದ.

ಮುಂಬಾಯಿಯಿಂದ ಬಂದವರು ಹೊರಟು ಹೋಗಿದ್ದರು. ದೋಗಣ್ಣನ ಹೆಂಡತಿ ‘ಮಕ್ಕಳ ಬಳಿ ಸ್ವಲ್ಪ ಸಮಯ ಇದ್ದು ಬರುತ್ತೇನೆ’ ಎಂದು ಮಕ್ಕಳ ಜತೆ ಮುಂಬೈ ಬಸ್ಸಲ್ಲಿ ಕುಳಿತಳು.

‘ಇನ್ನು ಮಳೆ ಬಿದ್ದಾಗ ಕೆಲಸಕ್ಕೆ ಜನ ಬೇಕು. ಆಮೇಲೆ ಹೋಗು’ ಎಂದು ದೋಗಣ್ಣ ಹೇಳಿದರೂ ಕೇಳಲಿಲ್ಲ. ‘ಸುಜ್ಜಾ ಇದ್ದಾಳಲ್ಲ’ ಎಂದಳು. ‘ಅವಳು ಮೊದಲೂ ಇದ್ದಳಲ್ಲಾ?’ ದೋಗಣ್ಣನ ಪ್ರಶ್ನೆಗೆ ಉತ್ತರಿಸುವವರಿರಲಿಲ್ಲ.

ದೇವಕಿ ಪದ್ದುವನ್ನು ತರಾಟೆಗೆ ಎತ್ತಿಕೊಂಡಳು. ‘ನೀನು ಮದುವೆಯಾದದ್ದು ಯಾಕೆ? ನಿನಗೆ ದೇಹ ಮಾತ್ರ ಬೆಳೆದದ್ದು ಬುದ್ದಿ ಇನ್ನೂ ಬೆಳೆದಿಲ್ಲ. ಮದುವೆ ಆದಮೇಲೆಯಾದರೂ ನಿನ್ನ ಪೆದಂಬು ನಿಲ್ಲಿಸು ಮಾರಾಯಾ. ನಿನಗೆ ಕೋಣೆಯಲ್ಲಿ ಮಲಗುವುದಕ್ಕೆ ಏನು?’ ಎಂದೆಲ್ಲಾ ಪ್ರಶ್ನಿಸಿದಳು.

‘ಅಮ್ಮಾ.. ನಾನು ಮನೆಗೆ ಬರುವಾಗ ತಡವಾಗುತ್ತದಲ್ಲ. ಬೆಳಗ್ಗಿನಿಂದ ಸಂಜೆಯವರೆಗೆ ದುಡಿದು ಅವಳಿಗೆ ಸಾಕಾಗುತ್ತದೆ. ಅವಳು ಕೋಣೆಯಲ್ಲಿ ಮಲಗಲಿ ಬಿಡು. ಏನಾಯಿತು ಈಗ?’ ಎಂದು ಪ್ರಶ್ನಿಸಿದ.

ದೇವಕಿ ಸುಜ್ಜಾಳಲ್ಲಿಯೂ ತಗಾದೆ ತೆಗೆದಳು. ಆಕೆ ನಕ್ಕು ಸುಮ್ಮನಾದಳು.

ಬಾಲ್ಯದಿಂದ ಬಂದ ಸಲಿಗೆ, ಒಡನಾಟ. ಅದೇ ಅಂತರವನ್ನು ಕಾಪಾಡಿತ್ತು. ಅವರಿಬ್ಬರನ್ನು ಸೇರಲು ಬಿಡಲೇ ಇಲ್ಲ.

ಮದುವೆಯಾದ ಮರು ಸಂಕ್ರಮಣದ ಮುಂಜಾನೆ ಮಂಜೊಟ್ಟಿ ಗುತ್ತಿನ ಸಂಕ್ರಮಣ ಮುಗಿಸಿ ಪದ್ದು ಸುಜ್ಜಾಳನ್ನು ರಾಜದೂತ್‌ನಲ್ಲಿ ಕೂರಿಸಿಕೊಂಡು ಕಾರ್ಲದ ಸಂಪಾಯ್ ಗುತ್ತಿಗೆ ಕೈ ಮುಗಿಯುವುದಕ್ಕೆಂದು ಕರೆದೊಯ್ದ.

ಗುತ್ತಿಗೆ ಬಾಗಿಲು ಹಾಕಿತ್ತು. ಪಕ್ಕದ ಮನೆಯಲ್ಲಿ ವಿಚಾರಿಸಿದಾಗ 'ಹೂ ನೀರು ಇಡಲು ಭಟ್ರು ಮಧ್ಯಾಹ್ನ ಬರುವುದು. ನೀವು ಒಳಗೆ ಕುಳಿತುಕೊಳ್ಳಿ'  ಗುತ್ತಿನ ಉಸ್ತುವಾರಿ ನಾನು ಎಂದು ಹೇಳಿಕೊಳ್ಳುವ ಸುಂದರ ಬಾಗಿಲ ಬೀಗ ತೆಗೆದ.

ಒಳ ಪ್ರವೇಶಿಸಿದ ಸುಜ್ಜಾಳಿಗೆ ಚಾವಡಿ ಕೋಣೆಯ ಧೂಳು, ಬಲೆ, ಕಸ ಸ್ವಾಗತಿಸಿತು.

ಸುಜ್ಜಾ ಹಿಡಿಸೂಡಿ ಹುಡುಗಿ ತೆಗೆದಳು. ಎಲ್ಲವನ್ನೂ ಗುಡಿಸಿ ಸ್ವಚ್ಛಗೊಳಿಸಿದಳು.

ಚಾಕರಿಯವನೊಂದಿಗೆ ಭಟ್ರು ಬಂದಾಗ ಗುತ್ತಿನ ಬಾಗಿಲು ತೆಗೆದಿತ್ತು.

ಆಶ್ಚರ್ಯದಿಂದ ಒಳಗೆ ಪ್ರವೇಶಿಸಿದ ಅವರು ಚಾವಡಿಯ ಒಪ್ಪ ಓರಣ ಕಂಡು ಬೆರಗಾದರು.

‘ಇದು ನಿಜವಾಗಿ ಕುಟುಂಬದವರು ಮಾಡಬೇಕಾದ ಕೆಲಸ. ನೀನು ಒಳ್ಳೆಯ ಕೆಲಸ ಮಾಡಿದಿ ಬಾಲೆ... ಸಂಕ್ರಮಣಕ್ಕೆ ಬಂದವರಿಗೆ ಬಾಯಿಗೆ ನೀರು ಕೊಡುವ ಕೆಲಸ ಅಗಬೇಕು’ ಎಂದರು.

ದೈವದ ಪರಿಕರಗಳನ್ನು ಚಾಕರಿಯವ ಸ್ವಚ್ಛಗೊಳಿಸಿದ. ಅಕ್ಕ ಪಕ್ಕದ ಮನೆಯವರು, ಕುಟುಂಬದ ಕೆಲ ಸದಸ್ಯರು ಬಂದು ಸಂಕ್ರಾಂತಿ ಕಳೆದು ಭಟ್ರು ಹೊರಟಾಗ ಹೊತ್ತು ನೆತ್ತಿಗೇರಿತ್ತು.

‘ನೀನು ಪ್ರತಿ ಸಂಕ್ರಮಣಕ್ಕೆ ಬರಬೇಕು ಸುಜ್ಜಾ’ ಎಂದು ಪದ್ದು ನುಡಿದ.

ಮುಂದಿನ ಸಂಕ್ರಮಣಕ್ಕೆ ಸಂಪಾಯ್ ಗುತ್ತಿನಲ್ಲಿ ಒಪ್ಪ ಓರಣದ ಜತೆಗೆ ಬಂದವರಿಗೆ ಸರಳ ಊಟ, ಚಹಾ, ತಿಂಡಿ, ಪಾನೀಯ ವ್ಯವಸ್ಥೆಯೂ ಸುಜ್ಜಾಳಿಂದ ಆಗತೊಡಗಿತು.

ಪದ್ದು ಮಳೆಗಾಲದಲ್ಲಿ ಬೇಸಾಯ ಮುಗಿಸಿ ಮುಂಬೈಗೆ ಹೊರಟಾಗ ಸುಜ್ಜಾ ಬಸ್ಸು ಹಿಡಿದು ಕಾರ್ಲಕ್ಕೆ ಹೋಗಿ ಬರತೊಡಗಿದಳು. ಅಲ್ಲಿನ ಪ್ರತಿ ಕಾರ್ಯಕ್ರಮಕ್ಕೆ ‘ಸುಜ್ಜಾ ಎಲ್ಲಿ?’ ಎಂದು ಕೇಳುವಂತಾಯಿತು. ಭೂತ ಬಂಗಲೆಯಂತಿದ್ದ ಗುತ್ತಿಗೆ ದೂರವಾಗಿದ್ದ ಕುಟುಂಬದವರು ಹತ್ತಿರವಾತೊಡಗಿದರು. ಸುಜ್ಜಾಳ ಜತೆ ಮತ್ತೆ ಕೆಲವು ಕುಟುಂಬದ ಯುವಕ, ಯುವತಿ, ಹಿರಿಯರು ಸೇರಿಕೊಂಡರು. ಒಲೆಯಲ್ಲಿ ಬೆಂಕಿ ಹೊತ್ತಿಕೊಂಡಿತು. ಅನ್ನ ಬೇಯತೊಡಗಿತು.

ಮನೆಯಲ್ಲಿ ರಾತ್ರಿ ಆಗುತ್ತಿದ್ದ ಅಜನೆ ಇವರ ವರ್ಷದ ಕೆಲವು ದಿನಗಳ ರಾತ್ರಿ ವಾಸದಿಂದ ನಿಂತುಹೋಯಿತು.

ಮುಂದಿನ ಕೆಡ್ಡಸದ ಸಮಯದಲ್ಲಿ ಊರಿಗಿಳಿದ ಕುಟುಂಬದ ಮಂದಿ ಗುತ್ತಿನ ಸ್ಥಿತಿ ಕಂಡು ಸ್ತಂಭೀಭೂತರಾದರು.

ಕೆಡ್ಡಸದ ಮರು ದಿನ ನೇಮಕ್ಕೆ ಸುಜ್ಜಾ - ಪದ್ದುವಿನ ಜತೆ ದೇವಕಿ, ದೋಗಣ್ಣ ಹಾಜರಾಗಿದ್ದರು.

ದೈವ ಕಾರ್ಣಿಕದ ಬಗ್ಗೆ ಬಲವಾದ ನಂಬಿಕೆ ಇದ್ದ ದೇವಕಿ ದೈವದ ಮುಂದೆ ‘ಸುಜ್ಜಾಳಿಗೆ ಸಂತಾನ ಭಾಗ್ಯ ಬೇಕು’ ಎಂದು ಕೈಮುಗಿದು ನಿಂತಿದ್ದಳು.

'ಮಮತೆ, ವಾತ್ಸಲ್ಯ ಕಾಮವಾಗಿ ಬದಲಾಗುವುದು ಅಷ್ಟು ಸುಲಭವಲ್ಲ

ಸಂಸಾರಕ್ಕೆ ಗೋಚರ ಆಗುತ್ತದಲ್ಲವಾ?’

ದೈವ ನುಡಿಗೆ ಪದ್ದು - ಸುಜ್ಜಾ, ದೇವಕಿ, ದೋಗಣ್ಣ ತಲೆದೂಗಿದರು.

ವಿಷಯ ಅರಿತ ಶೇಖರ ಸುಜ್ಜಾ-ಪದ್ದುವನ್ನು ಹನಿಮೂನ್ ಎಂದು ಮುಂಬೈಗೆ ಕರೆಸಿಕೊಂಡ. ತಿರುಪತಿ ಯಾತ್ರೆಯ ವ್ಯವಸ್ಥೆ ಮಾಡಿಸಿಕೊಟ್ಟ. ಜತೆಯಾಗಿ ಮೆಟ್ಟಲು ಹತ್ತಿದ ಪದ್ದು - ಸುಜ್ಜಾ ಹತ್ತಿರವಾಗತೊಡಗಿದರು. ವಾರಗಳ ಕಾಲ ತಿರುಗಾಟದ ವ್ಯವಸ್ಥೆ ಮಾಡಿಸಿದ ಶೇಖರ ಮುಂದಿನ ಬಾರಿ ಮುಂಬೈಗೆ ಬರುವಾಗ ಮೂರು ಜನ ಇರಬೇಕು ಎಂದು ಸುಜ್ಜಾಳ ಕಿವಿ ಹಿಂಡಿದ. ಸುಜ್ಜಾ ನಾಚಿ ನೀರಾದಳು.

‘ಸುಜ್ಜಾಳಿಗೆ ಅಸೌಖ್ಯವಂತೆ...’ ಸುದ್ದಿ ಮುಂಬಯಿಯಲ್ಲಿ ಭದ್ರವಾಗಿ ಗೂಟ ಬಡಿದ ದೋಗಣ್ಣನ ಹೆಂಡತಿಯ ಕಿವಿಗೆ ಬಿತ್ತು. ಆಕೆಗೆ ಪುಟ್ಟ ಮಗು ಮೀಯಿಸುವ ತವಕ. ಬ್ಯಾಗು ತುಂಬಿಸಿ ‘ಊರಿಗೆ ಹೋಗಬೇಕು’ ಎಂದು ಶ್ರೀಧರನಿಗೆ ಹೇಳಿದಳು.

‘ನೀವ್ಯಾಕೆ ಹೋಗಬೇಕು? ಅವರು ಏನು ಬೇಕಾದರೂ ಮಾಡಿಕೊಳ್ಳಲಿ’ ಎಂದು ಬಿಟ್ಟ ಶ್ರೀಧರ.

ಶಂಭು ಆಕೆಯನ್ನು ಊರಿಗೆ ಕರೆ ತಂದು ಬಿಟ್ಟು ಹೋದ.

ಅದ್ದೂರಿಯಿಂದ ಸೀಮಂತ ನಡೆದು ಹೋಯಿತು.

ಗಂಡು ಮಗುವಿನ ಅಳು ಮಂಜೊಟ್ಟಿ ಗುತ್ತಿನಲ್ಲಿ ಕೇಳಿಸಿತು.

ದೋಗಣ್ಣನ ಹೆಂಡತಿ, ದೇವಕಿ ನಾಮುಂದು, ತಾಮುಂದು ಎಂದು ಸುಜ್ಜಾಳ, ಮಗುವಿನ ಆರೈಕೆ ಮಾಡತೊಡಗಿದರು.

ಮುಂದಿನ ಕೆಡ್ಡಸದ ಮರುದಿನ ನೇಮದಲ್ಲಿ ಸುಜ್ಜಾ ಪುಟ್ಟಮಗುವನ್ನು ಹಿಡಿದುಕೊಂಡು ದೈವದ ಮುಂದೆ ನಿಂತಳು.

ದೈವ ಹೆಮ್ಮೆಯಿಂದ ಬಲಗೈಯಿಂದ ಎದೆ ತಟ್ಟಿಕೊಂಡಿತು.

‘ನನ್ನ ಭಾಗ್ಯದ ಸೊತ್ತು....

ಓ...’ ಎಂದು ಅಬ್ಬರಿಸಿತು.

Category:Stories



ProfileImg

Written by Ravindra Shetty

0 Followers

0 Following