ಮಧು-ಕೈಟಭರ ವಧೆ ಆಗುತ್ತಿದ್ದಂತೆ ವಾಸು ಎದ್ದ.
ಪದ್ದು ವಾಸ್ತವಕ್ಕೆ ಮರಳಿದ.
ಗಂಗಯಣ್ಣ ತಯಾರಾಗಿದ್ದಾರಾ ನೋಡುವಾ ಅಂದ ವಾಸುವಿನ ಜತೆ ನಡೆದ.
ಅದಾಗಲೇ ಬಣ್ಣ ಹಚ್ಚಿ ಎದ್ದು ನಿಂತ, ಪಟ್ಟಿ ಸುತ್ತಿಕೊಳ್ಳುತ್ತಿದ್ದ ಗಂಗಯ ಪದ್ದು-ವಾಸುವನ್ನು ನೋಡಿ ‘ಎಲ್ಲಿಂದ?’
ಎನ್ನುವಂತೆ ಸನ್ನೆ ಮಾಡಿದ.
ವಾಸು, ಪದ್ದು ಅರ್ಧ ಸಿದ್ದವಾಗಿದ್ದ ಮಹಿಷಾಸುರನ ಜತೆ ಮಹಿಷ ಸಾಗುವ ದಾರಿ ಬಗ್ಗೆ ಮಾತನಾಡತೊಡಗಿದರು.
ರಂಗಸ್ಥಳಕ್ಕೆ ಕೋಳ್ಯೂರುವಿನ ಮಾಲಿನಿ ಪ್ರವೇಶವಾಗಿತ್ತು.
ತನ್ನ ಅನಾರೋಗ್ಯವನ್ನೂ ಮರೆತು ಪೊಡಿಯ ಚೌಕಿ-ರಂಗಸ್ಥಳದ ನಡುವೆ ಪದೇ ಪದೇ ಸಂಚರಿಸುತ್ತಾ, ವೇಷಧಾರಿಗಳ ಸುಖಕಷ್ಟ ಮಾತನಾಡುತ್ತಾ ಉಲ್ಲಾಸದಿಂದ ಇದ್ದ.
ಮುಳಿ ಹುಲ್ಲಿನ ದೊಡ್ಡ ಕಟ್ಟವನ್ನೇ ಹೊತ್ತುಕೊಂಡು ಗುಳಿಗಜೋರದ ಬುಡದಲ್ಲಿ ಹರಡಿ ಅದರಿಂದ ಈಚೆಗೆ ಅಲ್ಲಲ್ಲಿ ಸಣ್ಣ ಸಣ್ಣ ಕುಪ್ಪೆಗಳನ್ನು ಮಾಡುತ್ತಿದ್ದ. ತೆಂಗಿನ ಗರಿಯ ತೂಟೆಯ ಕಟ್ಟವನ್ನೂ ತಾನೇ ಹೊತ್ತು ತಂದ. ಪದ್ದು, ವಾಸು ಪೊಡಿಯನ ಮಿಂಚಿನ ಚಟುವಟಿಕೆಯನ್ನು ಆಶ್ಚರ್ಯದಿಂದ ನೋಡಿದರು.
‘ಮಾವಾ. ನೀವು ಕುಳಿತು ಆಟ ನೋಡಿ ಅದನ್ನೆಲ್ಲಾ ನಾವು ಮಾಡುತ್ತೇವೆ. ನಿಮಗೆ ಹುಶಾರಿಲ್ಲವಲ್ಲಾ?’ ಎಂದರೂ ಕೇಳದೆ 'ಇದು ನನ್ನ ಆಟ ಅಲ್ಲವೇ? ನಾನು ದುಡಿಯದೆ ಇನ್ನಾರು ದುಡಿಯುವುದು. ತಾಯಿ ನನಗೆ ಒಳ್ಳೆದು ಮಾಡಿಲ್ವಾ?. ಅವಳ ಸೇವೆ ಅಷ್ಟೆ ಮತ್ತೆ ನಾಳೆ ಯಾರಿರುತ್ತಾರೆ ಅಂತ ಯಾರಿಗೆ ಗೊತ್ತು?’ ಎಂದು ಏದುಸಿರುಬಿಡುತ್ತಾ ನುಡಿದ.
ಗುಳಿಗ ಜೋರದ ಬುಡದಲ್ಲಿ ನಿಂತು ಗಂಗಯ್ಯ ಅಲಿಯಾಸ್ ಮಹಿಷಾಸುರ ಅಬ್ಬರಿಸಿತು.
ಸುತ್ತಲೂ ಮುಳಿಹುಲ್ಲಿನ ಬೆಂಕಿಯ ಉಂಡೆ. ತೂಟೆ ಬೆಳಕಿನ ಸಾಲಿನ ಮುಂದೆ ಪೊಡಿಯ. ಮಹಿಷಾಸುರನ ಲೆಕ್ಕತಪ್ಪದ ಹದವಾದ ಹೆಜ್ಜೆ, ಕೋಣವನ್ನೇ ಹೋಲುವ ಆರ್ಭಟ, ಗರ್ನಾಲು, ಬಿರುಸುಬಾಣ, ಮಾಲೆಪಟಾಕಿ ಅಬ್ಬರ, ಇಡೀ ಸಭೆಯೇ ಎದ್ದು ನಿಂತು ಮಹಿಷಾಸುರನನ್ನು ಸ್ವಾಗತಿಸಿತು. ರಂಗಸ್ಥಳ ಪ್ರವೇಶ ವೈಭವವನ್ನು ಅಚ್ಚರಿಯಿಂದ ವೀಕ್ಷಿಸಿತು. ಕುಷ್ಠ-ಗಂಗಯ್ಯರ ದೇವಿ-ಮಹಿಷಾಸುರ. ಚಂಡಮುಂಡ, ಶುಂಭನಾಗಿ ವಿಜೃಂಭಿಸಿದ ಬಣ್ಣದ ಮಾಲಿಂಗ, ರಕ್ತಬೀಜನಾಗಿ ಮೆರೆದ ಗುಡ್ಡಪ್ಪ.
ಬೆಳಕು ಹರಿದಾಗ ದೋಗಣ್ಣ ‘ಇಂತಹಾ ಆಟವನ್ನು ನಾನು ಜೀವಮಾನದಲ್ಲಿ ನೋಡಿಲ್ಲ’ ಎಂದ.
ಪೂರ್ವ ಕೆಂಪಾದಾಗ ಬಲಿಪರು ಮಂಗಳ ಪದ ಹಾಡಿದರು.
ಚೌಕಿಯಲ್ಲಿ ದೇವರ ಮುಂದೆ ಧನ್ಯತಾಭಾವದಿಂದ ಪತ್ನೀ ಸಮೇತನಾಗಿ ನಿಂತ ದೋಗಣ್ಣ, ಮಕ್ಕಳು ಅಳಿಯ ಪದ್ದು-ಸುಜ್ಜಾರ ಜತೆ ಪ್ರಸಾದ ಸ್ವೀಕರಿಸಿ ಬ್ರಹ್ಮಾರ್ಪಣೆ ಬಿಟ್ಟ.
ಸುಜ್ಜಾ ಪೊಡಿಯನಿಗಾಗಿ ಎಲ್ಲಾ ಕಡೆ ದೃಷ್ಟಿ ಹಾಯಿಸಿದಳು.
ಚೌಕಿಯಿಂದ ಹೊರಬಂದ ಸುಜ್ಜಾಳಿಗೆ ಬಾಕಿಮಾರು ಗದ್ದೆಯ ಮೂಲೆಯಲ್ಲಿ ಕುರ್ಚಿಗೆ ಒರಗಿ ಇನ್ನೊಂದು ಕುರ್ಚಿಯಲ್ಲಿ ಎರಡೂ ಕಾಲುಗಳನ್ನು ಇಟ್ಟು ನಿದ್ದೆ ಮಾಡುತ್ತಿದ್ದ ಪೊಡಿಯ ಕಾಣಿಸಿದ.
‘ಪಾಪ, ಬೇಡ ಬೇಡ ಅಂದರೂ ರಾತ್ರಿ ತುಂಬಾ ಚಟುವಟಿಕೆಯಿಂದ ಇದ್ದರು. ಈಗ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಲಿ ಎಚ್ಚರಿಸಬೇಡ’ ಎಂದ ಪದ್ದು.
ಚೌಕಿ, ರಂಗಸ್ಥಳದ ಕಂಬ ಕದಲಿಸುವ ಕೆಲಸದಲ್ಲಿ ಆಳುಗಳು ತೊಡಗಿಕೊಂಡರು.
ಆಟದ ಬಟ್ಟೆ, ಸರಂಜಾಮು ಲಾರಿಗೆ ತುಂಬಿಸತೊಡಗಿದರು.
ಕುರ್ಚಿಗಳನ್ನು ತಂದವ ಎಲ್ಲಾ ಕಡೆಯ ಕುರ್ಚಿಗಳನ್ನು ಒಟ್ಟುಮಾಡಿ ಲೆಕ್ಕಹಾಕತೊಡಗಿದ.
ಎರಡು ಕುರ್ಚಿ ಕಡಿಮೆ ಇತ್ತು. ಪೊಡಿಯ ಮಲಗಿದ್ದಲ್ಲಿಗೆ ನಡೆದ.
ಮೆಲ್ಲಗೆ ಪೊಡಿಯನ ಹೆಗಲಿಗೆ ಕೈಹಾಕಿ ಎಚ್ಚರಿಸಲು ನೋಡಿದ.
ಹೆಗಲು ತಣ್ಣಗೆ ಮರಗಟ್ಟಿ ಹೋಗಿತ್ತು.
‘ಪೊಡಿಯಣ್ಣಾ... ಪೊಡಿಯಣ್ಣಾ...’ ಎನ್ನುತ್ತಾ ಗಾಬರಿಯಿಂದ ಮುಖಕ್ಕೆ ಕೈ ಹಾಕಿದ. ಪೊಡಿಯನ ಕುತ್ತಿಗೆ ಅಡ್ಡಬಿತ್ತು.
‘ಏನಾಯ್ತು... ಏನಾಯ್ತು. ಪದ್ದಣ್ಣಾ... ಒಮ್ಮೆ ಬನ್ನಿ...' ಕುರ್ಚಿಯವ ಬೊಬ್ಬೆ ಹಾಕಿದ.
ಪದ್ದು ಓಡಿ ಬಂದ. ಜತೆಗೆ ಸುಜ್ಜಾ, ರಘು, ಬಾಚು ಎಲ್ಲರೂ ಪೊಡಿಯನಿದ್ದ ಕಡೆಗೆ ಬಂದರು...
ಪೊಡಿಯ ಕುಳಿತಲ್ಲಿಯೇ ಗತಪ್ರಾಣನಾಗಿದ್ದ.
ಸುಜ್ಜಾ ಪೊಡಿಯನನ್ನು ತಬ್ಬಿ ಹಿಡಿದು, ಅಲುಗಾಡಿಸುತ್ತಾ ಪೊಪ್ಪಾ.. ಒಮ್ಮೆ ಕಣ್ಣು ಬಿಡಿ’ ಎನ್ನುತ್ತಾ ಬೊಬ್ಬೆ ಹಾಕತೊಡಗಿದಳು.
ದೋಗಣ್ಣ ಓಡು ನಡುಗೆಯಲ್ಲಿ ಬಂದ.
‘ಬೆಳಗಿನಿಂದಲೇ ಹೊಟ್ಟೆ ತುಂಬಾ ಕುಡಿಯುತ್ತಿದ್ದವನು ಮದುವೆ ನಿಶ್ಚಯವಾದಂದಿನಿಂದ ಎಲ್ಲವನ್ನೂ ಬಿಟ್ಟು ಬಿಟ್ಟ. ಅವನ ತಳಮಳ ನನಗೆ ಅರ್ಥವಾಗಿತ್ತು. ಸ್ವಲ್ಪವಾದರೂ ಕುಡಿ ಎಂದು ಹೇಳುವವನಿದ್ದೆ. ಬಿಟ್ಟವನಿಗೆ ಹಾಗೆ ಹೇಳುವುದು ಸಮ ಆಗುತ್ತದೆಯೇ? ಬಿಟ್ಟಾದರೂ ಬದುಕಿಯಾನು ಎಂದು ಭಾವಿಸಿದೆ. ಹಾಗೆಲ್ಲಾ ಒಮ್ಮೆಲೆ ಬಿಟ್ಟರೆ ಇದೇ ಪರಿಸ್ಥಿತಿ...
ಒಡ ಹುಟ್ಟಿದ ತಮ್ಮನಂತಿದ್ದೆ ಪೊಡಿಯಾ, ಒಳ್ಳೆಯ ಗಳಿಗೆಯಲ್ಲಿ ಅಮ್ಮನ ಸೇವೆ ನೋಡಿ ಹೋದೆಯಾ...?’ ಎನ್ನುತ್ತಾ ಶಾಲಿನಿಂದ ಕಣ್ಣೀರು ಒರಸಿಕೊಂಡ.
ಅಂದು ಸಂಜೆ ಪೊಡಿಯನ ಅಂತಿಮ ಸಂಸ್ಕಾರ ನಡೆದು ಹೋಯಿತು.
ಮರು ದಿನ ಬೆಳಗ್ಗೆ ಶ್ರೀಧರ ಬಟ್ಟೆಗಳನ್ನು ಬ್ಯಾಗ್‌ಗೆ ತುರುಕಿಸುತ್ತಿದ್ದ. ಪದ್ದು ಇನ್ನೂ ಮೊಗಂಟೆಯ ಹಲಗೆಯಲ್ಲಿ ಕುಳಿತಿದ್ದನ್ನು ನೋಡಿ ದೋಗಣ್ಣನ್ನು ಕರೆದ. ಶಂಕರ, ಶಂಭು, ವನಜ, ಯಶೋದ ಎಲ್ಲರೂ ಮನೆಯಲ್ಲಿದ್ದರು.
‘ಪೊಪ್ಪಾ... ಇನ್ನು ಗಡಂಗಿಗೆ ಜನ ಇಲ್ಲವಲ್ಲಾ ಏನು ಮಾಡ್ತೀರಿ...?’ ಎಂದ ಶ್ರೀಧರ.
‘ಏನು ಮಾಡುವುದು ಅದನ್ನು ಪದ್ದು....’
‘ಅದು ನನಗೆ ಬೇಕು... ಏನು ಮಾಡಬೇಕು ಅಂತ ತೀರ‍್ಮಾನ ಮಾಡುತ್ತೇನೆ...’ ಎಂದು ದೋಗಣ್ಣನ ಮಾತನ್ನು ಶ್ರೀಧರ ತುಂಡರಿಸಿದ.
ಪದ್ದು ಅವಕ್ಕಾದ. ಮಾವನನ್ನು ಗಂಗಸರ ಮಾರುವವ, ಸುಜ್ಜಾಳನ್ನು ಗಂಗಸರ ಮಾರುವವನ ಮಗಳು ಎನ್ನುತ್ತಿದ್ದ ಇವ ಮುಂಬಾಯಿ ಬಿಟ್ಟು ಇಲ್ಲಿ ಗಂಗಸರ ಮಾಡುವುದಕ್ಕೆ ಬರುತ್ತಾನಾ ಹೇಗೆ? ಎಂದು ಯೋಚಿಸಿ ಮುಗುಳು ನಗು ನಕ್ಕ.
‘ಮತ್ತೆ ಗುತ್ತಿನ ಜಾಗ ಎಲ್ಲಾ ಪಾಲಾಗಬೇಕು. ಒಂದಷ್ಟು ಜಾಗ ಅವನಿಗೆ ಕೊಟ್ಟಿದ್ದೀರಲ್ಲಾ... ಉಳಿದದ್ದು ನನಗೆ ಬೇಕು ಗಂಡು ಮಕ್ಕಳಿಗೆ ಓದಿಸಿ ದಾರಿಗೆ ತಂದದ್ದು ನಾನು. ಹೆಣ್ಣು ಮಕ್ಕಳಿಗೆ ಮದುವೆ, ಮಸಿರಿ ಮಾಡಿಸಿದ್ದು ನಾನು. ಅವರಿಗೆ ಮನೆ ಕಟ್ಟುವುದಕ್ಕೆ ಅಷ್ಟೇ ಜಾಗ. ಉಳಿದದ್ದೆಲ್ಲಾ ನನಗೆ ಬೇಕು. ಹೇಗೂ ರಸ್ತೆ ಆಗಿದೆಯಲ್ಲಾ ಬೈಲು ಜಾಗವನ್ನು ಸಮತಟ್ಟು ಮಾಡುವ, ಹಣಕ್ಕೆ ಸ್ವಲ್ಪ ತಾಪತ್ರಯ ಉಂಟು ಒಂದೆರಡು ಎಕ್ರೆ ಮಾರುವ. ಎರಡು ತಿಂಗಳು ಕಳೆದು ಬರುತ್ತೇನೆ’ ಎಂದ.
ದೋಗಣ್ಣ ಬೆಕ್ಕಸ ಬೆರಗಾದ.
ಶ್ರೀಧರನ ಪಾಲು ಲೆಕ್ಕ ಕೇಳಿ ದೋಗಣ್ಣನ ಹೆಣ್ಣು, ಗಂಡು ಮಕ್ಕಳು ಮುಖ ಮುಖ ನೋಡಿಕೊಂಡರು.
‘ಮತ್ತೆ ಈ ಮನೆಯಲ್ಲಿ ಬೇರೆ ಯಾರು ಯಾರೋ ಇರುವುದು ಬೇಡ. ಮದುವೆ ಆಯ್ತಲ್ಲಾ... ಪಾಲು ಕೂಡಾ ಕೊಟ್ಟು ಆಗಿದೆ. ಅವರವರ ತಿಕನ ಅವರವರು ನೋಡಿಕೊಳ್ಳಲಿ. ಮನೆ ನನಗೆ ಬೇಕು. ಅದು ನನ್ನ ಹೆಸರಿಗೆ ಆಗಬೇಕು...’ ಪದ್ದುವಿನ ಕಡೆ ತೀಕ್ಷ್ಣ ನೋಟ ಬೀರುತ್ತಾ ಶ್ರೀಧರ ನುಡಿದ.
ದೋಗಣ್ಣ ಗಂಟಲು ಸರಿಪಡಿಸಿಕೊಂಡ...
‘ಮನೆ ಗುತ್ತಿನದ್ದು, ದೈವದ್ದು... ಅದು ನನ್ನ ನಂತರ ಕುಟುಂಬದ ಹೆಸರಿಗೆ ಆಗಬೇಕು ಮಗಾ.. ಹಿರಿಯರಿಂದ ಬಂದ ಮನೆಯಲ್ಲಿ ಆಟ ಆಡುವುದು ಬೇಡ. ನನ್ನ ನಂತರ ದೈವ ಚಾಕ್ರಿ ಮಾಡುವವರು ಈ ಮನೆಯಲ್ಲಿ ಇರುವುದು ವಾಡಿಕೆ. ಅವರಿಗೆ ಸ್ವಂತಕ್ಕೆ ಮಾಡ್ಲಿಕ್ಕೆ ಇಲ್ಲ. ನೀನು ಬಂದು ಇರುತ್ತಿಯಾದರೆ ಅಡ್ಡಿ ಇಲ್ಲ. ಆದರೆ ಹೂ ನೀರು ಇಡುವುದಕ್ಕೆ ನೀನು ಆಗುವುದಿಲ್ಲ. ಕುಟುಂಬದ ಜನ ಬೇಕಲ್ಲ... ಕ್ರಮ ತಪ್ಪುವುದಕ್ಕೆ ಆಗುತ್ತದಾ...?’ ದೋಗಣ್ಣ ದೃಢವಾಗಿ ನುಡಿದ.
‘ನಾನು ಹೂ ನೀರು ಇಟ್ಟರೆ ದೈವಕ್ಕೆ ಬೇಡ ಅನ್ತದಾ? ಮನೆ ನನ್ನದು. ಆಗುದಿಲ್ಲ ಅಂತಾದ್ರೆ. ಹೂ ನೀರು ಇಡುವುದಕ್ಕೆ ಕುಟುಂಬದ ಯಾರನ್ನಾದರೂ ಸಂಬಳ ಕೊಟ್ಟು ನೇಮಿಸುವ. ಹಣ ಕೊಟ್ಟರೆ ಯಾರಾದರೂ ಸಿಗುತ್ತಾರೆ’ ಶ್ರೀಧರ ಕೋಪದಿಂದ ರಪ್ಪನೆ ಸೂಟ್ ಕೇಸ್ ಮುಚ್ಚಿದ.
‘ಅದೆಲ್ಲಾ ಆಗುವುದಿಲ್ಲ. ನನ್ನ ಹೆಣ ಈ ಮನೆಯಲ್ಲಿ ಇರುವವರೆಗೆ ಇದು ಕುಟುಂಬದ ಮನೆ. ಆನಂತರವೂ ಕುಟುಂಬದವರಿಗೇ ಸೇರಬೇಕು. ಇದು ನನ್ನ ಮಾತು. ನಾನು ಸತ್ತ ಮೇಲೆ ಬೇಕಾದರೆ ದೈವವನ್ನು ಹೊರಕ್ಕೆ ಎಸೆದು ನೀನು ಮನೆಗೆ ಬೀಗ ಹಾಕಿ ಹೋಗು’ ದೋಗಣ್ಣ ಅಬ್ಬರಿಸಿದ. ಅವನ ಮಾತಿನ ದಾಟಿ, ದೇಹದ ನಡುಕ ಕಂಡು ಶ್ರೀಧರ ಹೆದರಿದ.
ಕೆಲಸ ಕೆಟ್ಟಿತು. ಅಳಿಯ ಪದ್ದುವಿಗೆ ಗುಳಿಗ ಜೋರ ದಾನವಾಗಿ ಕೊಟ್ಟರೂ ಇನ್ನೂ ಅವನೇ ಮನೆಯಲ್ಲಿ ಇರಬೇಕು ಎಂದು ಅಪ್ಪ ಬಯಸುತ್ತಿದ್ದಾರಲ್ಲಾ? ನಾನು ಮಗ ಇವರಿಗೆ ಏನೂ ಅಲ್ಲವಾ? ಕಾಲ ಈಗ ಪಕ್ವವಾಗಿಲ್ಲ ಎಂದು ಯೋಚಿಸಿ ಸಮಾಧಾನಗೊಂಡವನಂತೆ ನಟಿಸಿದ.
‘ಪೊಪ್ಪಾ ನಾನು ಕುಶಾಲಿಗೆ ಹೇಳಿದ ಅಷ್ಟೆ. ಮನೆ ಮತ್ತು ಹೆಚ್ಚು ಪಾಲು ನನಗೆ ಬೇಕು ಅಷ್ಟೆ. ಎಲ್ಲದಕ್ಕೂ ಖರ್ಚು ಮಾಡಿದ್ದು ನಾನಲ್ವಾ? ನಾನು ಕೇಳುವುದು ನ್ಯಾಯ ಅಲ್ವಾ? ಮತ್ತೆ ನೀವು ಯಾರ‍್ಯಾರ ಹೆಸರಿಗೆ ಮನೆ ಜಮೀನು ಬರೆದರೆ ಕಷ್ಟ ಅಲ್ವಾ? ಅದಕ್ಕೆ ಹೇಳಿದೆ ಅಷ್ಟೆ. ಇಲ್ಲಿ ಸಿಪಾಯಿಗಿರಿ, ಮೋಸ ಮಾಡುವವರು ಸುತ್ತ ಇದ್ದಾರಲ್ಲಾ. ನೀವು ಸಮಾಧಾನ ಮಾಡಿಕೊಳ್ಳಿ, ಬೇಸರ ಮಾಡಬೇಡಿ...ನಿಮ್ಮ ಒಳ್ಳೆಯದಕ್ಕೆ ನಾನು ಹೇಳುತ್ತಿರುವುದು ಇನ್ನು ಅದಕ್ಕೆ ಇದಕ್ಕೆ ಅಂತ ಸೈನ್ ಕೊಡಬೇಡಿ’ ಎಂದು ಶ್ರೀಧರ ಪದ್ದುವಿನ ಕಡೆ ಬಾಣ ಎಸೆದ.
‘ಕಂದೊಡಿ, ಅಲ್ಲ ನೀನು ನೀರ‍್ಕಂದೊಡಿ. ಕಂದೊಡಿಗಾದರೂ ಒಂದು ರೋಷ ಅಂತ ಇದೆ. ಅಲೆದಾಡುವ ಹೇಡಿ ನೀರ‍್ಕಂದೊಡಿಗೆ ಅದೂ ಇಲ್ಲ. ನೀನು ಕುಶಾಲಿಗೆ ಹೇಳು ಅಥವಾ ನಿಜಕ್ಕಾದರೂ ಹೇಳು. ಗುಳಿಗಜೋರದ ರಸ್ತೆಯ ಜಾಗ ನನ್ನ ಹೆಸರಿನಲ್ಲಿ ಇರುವುದು. ನೀನು ಅದು ಹೇಗೆ ಬೈಲು ಸಮತಟ್ಟು ಮಾಡಿ ಮಾರ‍್ತಿ ಅಂತ ನೋಡುವಾ? ನಿನಗೆ ಮಂಜೊಟ್ಟಿ ಗುತ್ತಿಗೆ ಕಾಲಿಡುವುದಕ್ಕೆ ನನ್ನ ಜಮೀನಿನ ದಾರಿಬೇಕು....’ ಎಂದು ಮನಸ್ಸಿನಲ್ಲಿಯೇ ಯೋಚಿಸಿದ ಪದ್ದು.
‘ಮಾವಾ ಸಮಯ ಮೀರಿದೆ...
ಅವನಿಗೆ ಬಜಪೆಯಲ್ಲಿ ವಿಮಾನ ತಪ್ಪಿದರೆ ಕಷ್ಟ, ಮತ್ತೆ ಇಲ್ಲಿ ಗಂಗಸರ ಮಾರುತ್ತಾ ಕುಳಿತುಕೊಳ್ಳಬೇಕಾದೀತು’ ಎಂದು ಎಚ್ಚರಿಸಿದ.
ದೋಗಣ್ಣನ ಗಂಡು ಹೆಣ್ಣು ಮಕ್ಕಳು ಮುಸಿ ಮುಸಿ ನಕ್ಕರು.
ಬ್ಯಾಗ್ ಹಿಡಿದ ಶ್ರೀಧರ ಪದ್ದುವನ್ನು ಕೆಕ್ಕರಿಸಿ ನೋಡುತ್ತಾ ಅಂಗಳಕ್ಕೆ ಇಳಿದ.
ಮುಂದಿನ ವಾರಾಂತ್ಯದಲ್ಲಿ : ನಿರೀಕ್ಷಿಸಿ
0 Followers
0 Following