ದೀಪ ಆರಿಸಿ ಎಲ್ಲರೂ ನಿದ್ದೆ ಹೋದರು.
ಪದ್ದುವಿಗಿನ್ನೂ ನಿದ್ದೆ ಬಂದಿರಲಿಲ್ಲ.
ಸುಜ್ಜಾಳ ಮೇಲಿನ ಆಕ್ರಮಣ, ರೈಫಲ್ ಈಡು ತುಸು ಹೆಚ್ಚು ಕಡಿಮೆ ಆಗಿದ್ದರೂ ಅಕೆಯ ಪ್ರಾಣಕ್ಕೆ ಆಗುತ್ತಿದ್ದ ಕಂಟಕ ಅಡಿಗಡಿಗೆ ನೆನೆದು ನಡುಗುತ್ತಿದ್ದ.
'ನಾಳೆ ಪೊಲೀಸ್ ಕಂಪ್ಲೆಂಟ್ ಕೊಡುವುದೇ?..
ಹಾಗೆ ಮಾಡಿದರೆ ತನಿಖೆಯಲ್ಲಿ ಸುಜ್ಜಾಳಿಗೆ ಗುಂಡು ತಗಲಿದ್ದು ಗೊತ್ತಾಗಿ ಪಚೀತಿ ಆಗುತ್ತದೆ.
ವಿಷಯ ದೊಡ್ಡದಾದರೆ ಸುಜ್ಜಾಳ ಮರ್ಯಾದೆಯ ಪ್ರಶ್ನೆ
ಪಕ್ಕನಿಗೆ ಬುದ್ದಿ ಕಲಿಸುವುದು ಹೇಗೆ...?'. ಯೋಚಿಸುತ್ತಿದ್ದ.
ಎಲ್ಲರೂ ನಿದ್ರಿಸಿದ್ದನ್ನು ಖಚಿತ ಪಡಿಸಿದ ಪದ್ದು ಮೆಲ್ಲಗೆ ಎದ್ದು ಜೋರ ಏರಿ ಪದವಿನ ದಾರಿ ಹಿಡಿದ.
ಗಡಂಗಿನ ಹಿಂದಿನ ಮನೆಯ ಹಿಂಬಾಗಿಲ ಚಿಲಕ ತೆಗೆದು ಒಳಗೆ ಸೇರಿದ.
ಬಾಗಿಲು ಒಡೆಯಲು ಶಕ್ತಿ ಸಾಲದ ಪ್ರಕಾಶ ಅಮಲಿನಿಂದ ಮಲಗಿ ಗೊರಕೆ ಹೊಡೆಯುತ್ತಿದ್ದ.
ಪಕ್ಕದಲ್ಲಿದ್ದ ಸುಜ್ಜಳ ಶಾಲು ಎರಡು ಮಡಕೆ ಮಾಡಿ ಪ್ರಕಾಶನ ಮುಖವನ್ನು ಮುಚ್ಚಿ ಕಟ್ಟಿದ.
ಹೆಗಲ ವರೆಗೆ ಇಳಿ ಬಿದ್ದ ಆತನ ಕೂದಲನ್ನು ಹಿಡಿದು ಎಬ್ಬಿಸಿದ.
‘ಏಯ್... ಏಯ್... ಯಾರು... ಯಾರು?' ಎನ್ನುತ್ತಿದ್ದಂತೆ ಆತನ ಮೂಗೊಂದನ್ನು ಬಿಟ್ಟು ಮುಖ, ಗಲ್ಲ, ಹಣೆ, ಕಣ್ಣಿನ ಭಾಗಕ್ಕೆ ಮನಸೋ ಇಚ್ಚೆ ಗುದ್ದಿದ. ಪ್ರಕಾಶ ನೋವಿನಿಂದ ಕಿರುಚಾಡತೊಡಗಿದ.
ಅಪರಾತ್ರಿ ಆತನ ಕಿರುಚಾಟ ಕೇಳುವವರು ಯಾರೂ ಇರಲಿಲ್ಲ. ಗುದ್ದಿದ ರಭಸಕ್ಕೆ ಪದ್ದುವಿನ ಕೈ ಹುಳಿ ಬಂದು ನೋಯತೊಡಗಿತು. ಪ್ರಕಾಶನ ಕೂದಲು ಬಲವಾಗಿ ಹಿಡಿದು ಮುಖವನ್ನು ಗೋಡೆಗೆ ಎರಡು ಮೂರು ಬಾರಿ ಚಚ್ಚಿದ.
ಪ್ರಕಾಶ ‘ಅಯ್ಯೋ ಸಾಯ್ತೇನೆ... ಬಿಡು... ಬಿಡು.. ಪ್ಲೀಸ್ ಕೂದಲು ಒಂದು ಬಿಡು 'ಎಂದು ಚೀರಾಡತೊಡಗಿದ.
ಪದ್ದು ಆತನ ಕೂದಲು ಹಿಡಿದು ಎಳೆದಾಡುತ್ತಿದ್ದಂತೆ ಅದು ಹರಿದು ಪದ್ದುವಿನ ಕೈಗೇ ಬಂದು ಬಿಟ್ಟಿತು.
ಪ್ರಕಾಶನ ಬೋಳು ನೆತ್ತಿ ಗೋಚರಿಸಿತು.
ಪ್ರಕಾಶನ ಟೋಪನ್ ಹಿಡಿದು ಹೊರಬಂದ ಪದ್ದು ಅದನ್ನು ಬೇಲಿಗೆ ಎಸೆದು ಮಂಜೊಟ್ಟಿಗುತ್ತಿನತ್ತ ರಾತ್ರಿ ಕತ್ತಲಲ್ಲಿ ಹೆಜ್ಜೆ ಹಾಕಿದ.
ತುಸು ಹೊತ್ತಿನ ನಂತರ ಸಾವರಿಸಿಕೊಂಡ ಪ್ರಕಾಶ ಕತ್ತಲೆಯಲ್ಲಿ ಪರದಾಡುತ್ತಾ ಮನೆ ಸೇರಿದ.
ಮನೆಯಲ್ಲಿ ಯಾವಾಗಲೋ ತಂದಿಟ್ಟ ಮಂಕಿ ಕ್ಯಾಪ್‌ನಲ್ಲಿ ಮುಖ ತಲೆ ಮುಚ್ಚಿಕೊಂಡು ಮರು ದಿನ ಮುಂಜಾನೆ ಬೆಳಕು ಹರಿಯುವ ಮೊದಲೇ ಸೆಲೂನಿ ಹೊರಗೆ ರಾಮಣ್ಣನಿಗಾಗಿ ಕಾದು ಕುಳಿತ.
ಹೊತ್ತು ಮಾರಿನಷ್ಟು ಏರಿದ ಮೇಲೆ ರಾಮಣ್ಣ ಬಂದು 'ಯಾರು? ಏನು?' ಎಂದು ವಿಚಾರಿಸಿದ.
'ನಾನು ಪ್ರಕಾಶ' ತಡವರಿಸುತ್ತಾ ನುಡಿದ.
'ಇದೆಂತ ಕಂಟ್ರಿ ಸೆಲೂನ್. ಸಮಕಟ್ಟಿನ ಒಂದು ಸ್ಪ್ರೇಯರ್, ಕತ್ತರಿ, ಚಾಚಣಿಗೆ ಕೂಡಾ ಇಲ್ಲ. ನನಗೆ ಬಾಲ್ ಆಗುದಿಲ್ಲ ಬ್ಲೇಡ್ ಬೇಕು' ಎಂದು ಹೀಗಳೆಯುತ್ತಿದ್ದ ಪಕ್ಕ ಈಗ ನನ್ನ ಸೆಲೂನ್ ಮುಂದೆ.. ರಾಮಣ್ಣ ಪ್ರಶ್ನಾರ್ಥಕವಾಗಿ ನೋಡುತ್ತಾ...
'ಓಹೋ ನೀನಾ ಬೆಳ್ಳಂಬೆಳಿಗ್ಗೆ ಇಲ್ಲೇನು ಮೂಸುತ್ತಿರುವೆ ಮಾರಾಯಾ?' ಎನ್ನುತ್ತಾ ನಗುತ್ತಾ ಅಂಗಡಿ ಬಾಗಿಲು ತೆರೆದ.
ಕುರ್ಚಿಯನ್ನು ಆಕ್ರಮಿಸಿಕೊಂಡು ಕುಳಿತ ಪ್ರಕಾಶ ಮಂಕಿ ಕ್ಯಾಪ್ ತೆಗೆದು, 'ತಲೆ ಎಲ್ಲಾ ಬೋಳಿಸಿ ಬಿಡಿ ರಾಮಣ್ಣಾ' ಎಂದ.
ಪ್ರಕಾಶನ ತಲೆ ನೋಡಿದ ರಾಮಣ್ಣ ಅವಕ್ಕಾದ..
.
‘ನನಗೆ ಮೊದಲೇ ಡೌಟು ಇತ್ತು. ಎಂತೆಂಥವರ ತಲೆ ಮೇಲೆ ಕೈ ಯಾಡಿಸಿದವ ನಾನು... ನೆತ್ತಿ ಪೂರಾ ಕಾಣುತ್ತಿದೆ.
ಅರೆ, ನಿನ್ನ ಮುಖಕ್ಕೇನಾಯಿತು ಮಾರಾಯಾ....? ಅಯ್ಯೋ ದೇವರೆ ಎಲ್ಲಾ ಕನೆದು ಕೆಂಪಾಗಿದೆ. ಏನಾಯ್ತು ಮಗ...’ ಎಂದ.
ಪ್ರಕಾಶ ನಾಚಿಕೆಯಿಂದ ತಲೆ ತಗ್ಗಿಸಿದ. 'ತಲೆಗೆ ಬಾಲು ಇಡುವುದು ಬಿಟ್ಟು ಇವನಿಗೇಕೆ ಅಧಿಕಪ್ರಸಂಗ..' ಅವಡುಗಚ್ಚಿದ.
‘ಅದು ನಿನ್ನ ರಾತ್ರಿ ಪಿಲಿಕುಂಡೆಲ್ ಕಚ್ಚಿದ್ದು ರಾಮಣ್ಣಾ’ ಎಂದ..
'ಏಯ್... ನೀನು ಯಾರಿಗೆ ಹೇಳುವುದು? ಪಿಲಿಕುಂಡೆಲ್ ಎಲ್ಲಿಯಾದರೂ ರಾತ್ರಿ ಏಳ್ತದಾ...? ಅದರ ಕಾರ್‌ಬಾರ್ ಹಗಲು ಹೊತ್ತಿಗೆ ಮಾತ್ರ. ಅದರ ಮೀಸೆ ಉಳಿದ್ರೆ ಸಾಯ್ತಿ ಮಾರಾಯ. ಅದು ಅಲ್ಲ.. ಎಲ್ಲಿಗೋ ಮೂಸಲಿಕ್ಕೆ ಹೋಗಿದ್ದಿ. ದೈವ ಬಡಿದ ಹಾಗೆ ಆಗಿದೆ ಮಾರಾಯ' ಅನ್ನುತ್ತಾ ತಲೆ ಬೋಳಿಸತೊಡಗಿದ.
‘ಅಂದ ಹಾಗೆ ಟೋಪನ್ ಚೆನ್ನಾಗಿತ್ತು. ಗೊತ್ತೇ ಆಗುತ್ತಿರಲಿಲ್ಲ ಮಾರಾಯಾ. ಎಷ್ಟು ಕೊಟ್ಟಿದ್ದಿ... ಅದು ಎಲ್ಲಿ ಹೋಯಿತು...?'
ರಾಮಣ್ಣನ ಪ್ರಶ್ನೆಗಳಿಗೆ ಪ್ರಕಾಶ ತುಟಿ ಪಿಟಿಕ್ ಅನ್ನದೆ ಮನಸ್ಸಿನಲ್ಲೇ ಎಕ್ಕಾಸಕ್ಕಾ ಬೈದ.
ಮೌನವಾಗಿ ತಲೆ ಬೋಳಿಸಿಕೊಂಡ ಪ್ರಕಾಶ ಎಲ್ಲರ ಕಣ್ಣು ತಪ್ಪಿಸುತ್ತಾ ನೇರ ಮನೆ ಸೇರಿದ.
ಮಧ್ಯಾಹ್ನ ಊಟ ಮಾಡುತ್ತಿದ್ದಂತೆ ಪದ್ದುವಿನ ರಾಜದೂತ್ ನ ಧ್ವನಿ ಕೇಳಿಸಿತು.
‘ಏ ಪ್ರಕಾಶ... ಹೊರಟಿದ್ದಿಯಾ ಹೇಗೆ? ಬಾ... ಬಾ.. ಸುರತ್ಕಲ್‌ನಲ್ಲಿ ಸ್ವಲ್ಪ ಸಾಮಾನು ತೆಗೊಳುದಕ್ಕುಂಟು ಬೊಂಬೈಗೆ ಶ್ಯಾಮಲ, ಶಂಭು ಕೆಲವೆಲ್ಲಾ ವಸ್ತು ತರ್‍ಲಿಕ್ಕೆ ಹೇಳಿದ್ದಾರೆ’ ಎನ್ನುತ್ತಾ ಪ್ರಕಾಶನ ಮನೆ ಪ್ರವೇಶಿಸಿದ ಪದ್ದು.
‘ಏ. ಇದೆಂತ ಮಾರಾಯಾ ಮಂಡೆ ಬೋರು.... ಮುಖಕ್ಕೆ ಯಾರು ಗುದ್ದಿದ್ದು? ಛೇ ಎಲ್ಲಾ ಕನೆದು ಹೋಗಿದೆ’ ಎಂದ.
‘ನಿನ್ನನ್ನು ಎರಡು ಗಂಟೆಗೆ ಬರ್‍ಲಿಕ್ಕೆ ಹೇಳಿದ್ದಲ್ಲಾ ಬಸ್ಸು ಮೂರು ಗಂಟೆಗೆ. ಇಷ್ಟು ಬೇಗ ಯಾಕೆ ಬಂದೆ...?’ ಪಕ್ಕ ಪ್ರಶ್ನೆಗೆ ಉತ್ತರ ನೀಡದೆ ವಿಷಯಾಂತರಿಸಿದ.
ಪ್ರಕಾಶನ ಮಾತನ್ನು ತುಂಡರಿಸಿ ‘ಬರುತ್ತಿಯಾದರೆ ಬಾ... ಇಲ್ಲದಿದ್ದರೆ ಮೂರು ಗಂಟೆಗೆ ಬಾ. ನಾನು ಅಲ್ಲಿ ಸಿಕ್ತೇನೆ. ಸಾಮಾನು ಎಲ್ಲಾ ಕೊಡ್ತೇನೆ ಬೊಂಬಾಯಲ್ಲಿ ಶಂಭು ಸಿಗ್ತಾನೆ. ಕೊಡು’ ಅಂದ ಪ್ರಕಾಶ.
ಪ್ರಕಾಶ ಅವಸವಸರವಾಗಿ ಹೊರಟ. ಮಂಕಿ ಕ್ಯಾಪ್‌ನಿಂದ ತಲೆ ಮುಖ ಮುಚ್ಚಿಕೊಂಡ. ಚಳಿಗಾಲದ ಮಧ್ಯಾಹ್ನದ ರಣ ಬಿಸಿಲ ಬೇಗೆಗೆ ಮುಖ ಉಬೆಯಲ್ಲಿ ಇಟ್ಟ ಹಲಸಿನ ಕಾಯಿಯಂತೆ ಬಿಸಿಯಾಗತೊಡಗಿತು.
ರಾಜದೂತ್ ಸುರತ್ಕಲ್ ದಾರಿ ಹಿಡಿಯಿತು. ನಡು ನಡುವೆ ಅಲ್ಲಲ್ಲಿ ಪರಿಚಯದ ಜನರಿದ್ದ ಕಡೆ ನಿಲ್ಲಿಸಿ 'ಇವನಿಗೆ ಏನಾಯ್ತು ಗೊತ್ತಾ? ರಾತ್ರಿ ಪಿಲಿಕುಂಡೆಲ್ ಕಚ್ಚಿದ್ದು, ಅವ ತಲೆ ಎಲ್ಲಾ ಬೋಳಿಸಿದ್ದು' ಎಂದು ಹೇಳುತ್ತಾ ಸಾಗಿದ. ಪ್ರಕಾಶನಿಗೆ ಇರಿಸು ಮುರಿಸಾಗತೊಡಗಿತು.
‘ನೇರ ಬಸ್‌ಸ್ಟ್ಯಾಂಡಿಗೆ ಹೋಗು ಮಾರಾಯಾ’ ಎಂದ ಪ್ರಕಾಶ.
‘ಸ್ವಲ್ಪ ಇರು’ ಅನ್ನುತ್ತಾ ಬೈಕ್‌ನ್ನು ಮೀನು ಮಾರುಕಟ್ಟೆ ಬಳಿ ತಂದು ನಿಲ್ಲಿಸಿ ಮಾರುಕಟ್ಟೆ ಹೊಕ್ಕ. ಪ್ರಕಾಶ ತಲೆ ತಗ್ಗಿಸಿ ಹಿಂಬಾಲಿಸಿದ.
ಸ್ಟೀರಿಯೋ ವಾಯ್ಸ್ ಕಮಲಕ್ಕನ ಬಳಿ ಎಟ್ಟಿ ಪುಡಿ, ಒಣ ಕೊಲತ್ತರು, ನಂಗ್ ಮೀನು ಖರೀದಿಸುತ್ತಾ
‘ಇವ ಪ್ರಕಾಶ ಕಮಲಕ್ಕ ನಿನ್ನೆ ರಾತ್ರಿ ಪಿಲಿಕುಂಡೆಲ್ ಕಚ್ಚಿದ್ದಲ್ವಾ... ನೋಡಿ ಮಂಡೆ ಎಲ್ಲಾ ಬೋರು..’ ಎಂದ.
‘ಎಂತ ಅನೆ... ರಾತ್ರಿಯಾ...? ಪಿಲಿಕುಂಡೆಲಾ...? ನೀನು ಪಿಲಿಕುಂಡೆಲ್ ಯಾಕೆ ಮೂಸಲು ಹೋಗಿದ್ದು ಅನೆ’ ಎಂದು ಇಡೀ ಮಾರು ಕಟ್ಟೆಗೆ ಕೇಳುವಂತೆ ಲೌಡ್ ಸ್ಪೀಕರ್ ನಂತೆ ಹೇಳುತ್ತಾ ...
‘ಇಗೊಳೆ... ಇವನಿಗೆ ಪಿಲಿಕುಂಡೆಲ್ ಕಚ್ಚಿದ್ದಂತೆ... ಬಾಲೆ... ಮೊನ್ನೆ ಅಂಜಲ್ ಗೆ ರೇಟ್ ಮಾಡಿ ಬೂತಾಯಿ ಕೊಂಡು ಹೋಗಿದ್ದ...ಅಲ್ವಾ?' ಎನ್ನುತ್ತಾ ಆತನ ಮಂಕಿ ಕ್ಯಾಪ್ ಹಿಡಿದು ಎಳೆಯುತ್ತಾ... ಅನೆ...ಇದು ಏನು ಅನೆ... ರಾತ್ರಿ ಪಿಲಿಕುಂಡೆಲ್ ಕಚ್ಚುತ್ತಾ ಅನೆ..’ ಎನ್ನ ತೊಡಗಿದರು. ಮೀನು ಮಾರಾಟದ ಹೆಂಗಸರು ಗೊಳ್ಳೆಂದು ನಕ್ಕರು.
ಪ್ರಕಾಶನಿಗೆ ಜೀವಂತ ಸುಟ್ಟ ಅನುಭವವಾಯಿತು.
ಮನಸ್ಸಿನಲ್ಲೇ ಪದ್ದುವಿಗೆ ‘ಬೇ.... ಬೋ....’ ಎಂದೆಲ್ಲಾ ಬೈದ.
ಓಲೆ ಬೆಲ್ಲ, ಚಕ್ಕುಲಿ, ಹುಣಸೇ ಹುಳಿ, ಓಮಸತ್ವ ಎಂದೆಲ್ಲಾ ಇಡೀ ಮಾರುಕಟ್ಟೆ ಮೆರವಣಿಗೆ ಮಾಡಿದ ಪದ್ದು ಎಲ್ಲಾ ಕಡೆ ಪಿಲಿಕುಂಡೆಲ್ ಮೂಸಿದ ಪ್ರಕರಣವನ್ನು ಇಂಚು ಇಂಚಾಗಿ ವಿವರಿಸಿದ.
‘ಬಸ್ಸು ಬರ್‍ತದೆ ಮಾರಾಯ ಒಮ್ಮೆ ಹೋಗುವ’ ಪ್ರಕಾಶ ಅಂಗಲಾಚಿದ..
‘ಹೋಗುವ... ಹೋಗುವ’ ಎನ್ನುತ್ತಲೆ ಸಮಯ ಕಳೆದ ಪದ್ದು ಮೂರು ಗಂಟೆಗೆ ಹತ್ತು ನಿಮಿಷ ಇರುವಾಗ ಬಸ್ಸು ನಿಲ್ಲುವಲ್ಲಿಗೆ ಕರೆ ತಂದ.
‘ಮುಂದಿನ ಬಾರಿ ಬರುವಾಗ ಒಂದು ಮದುವೆಯಾಗಿ ಹೋಗು ಮಾರಾಯ ವ್ಯವಸ್ಥೆ ಎಲ್ಲಾ ನಾನೇ ಮಾಡ್ತೇನೆ’ ಎಂದ ಪದ್ದು.
‘ಮದುವೆಯಾ...? ಊರಲ್ಲಾ...? ಈ ಊರಿನ ಹುಡುಗಿಯರ ಹಿಂದೆ ಯಾರಿದ್ದಾರೆ ಅಂತಲೇ ಗೊತ್ತಾಗುವುದಿಲ್ಲ ಮಾರಾಯಾ... ಊರಿದ್ದು ಬೇಡವೇ ಬೇಡ...’ ಎಂದ ಪ್ರಕಾಶ.
‘ಊರಿನ ಹುಡುಗಿಯರ ಹಿಂದೆ ಯಾರು ಇಲ್ಲದೇ ಇದ್ದರೂ ದೈವ ಉಂಟು ಪ್ರಕಾಶ. ಅದು ಕೋಪಿಸಿಕೊಂಡರೆ ಈಗ ನಿನ್ನ ಮುಖ ಆಗಿದೆಯಲ್ಲಾ ಹಾಗೇ ಆಗುತ್ತದೆ...’ ಪದ್ದು ಅವುಡು ಕಚ್ಚಿ ಇನ್ನೂ ನೋಯುತ್ತಿದ್ದ ಮುಷ್ಠಿ ತಿರುಗಿಸುತ್ತಾ ನುಡಿಯುತ್ತಿದ್ದಂತೆ ಬಸ್ಸು ಬಂದು ನಿಂತಿತು.
ಸರಕ್ಕನೆ ಬಸ್ಸು ಏರಿದ ಪ್ರಕಾಶ ಪದ್ದುವಿಗೆ ಟಾಟಾ ಹೇಳುವುದನ್ನೇ ಮರೆತಿದ್ದ.
'ನಿಲ್ಲಿ ಮಾರ್ರೆ, ನಿಮಗೇನು ತುರ್ತ?' ಎಂದು ಬಸ್ ಕಂಡಕ್ಟರ್ ಪ್ರಕಾಶನನ್ನು ಕೆಕ್ಕರಿಸಿ ನೋಡಿ ಬೈದಾಡಿದ.
ಬಸ್ಸು ಹೊರಟು ಹೋಯಿತು.
ಎಟ್ಟಿಪುಡಿ, ಕೊಲ್ಲತರು, ಓಲೆ ಬೆಲ್ಲ, ಹುಣಸೇ ಹುಳಿ, ಓಮಸತ್ವದ ಕಟ್ಟು ಬೈಕ್ ಹ್ಯಾಂಡಲ್ ಗೆ ನೇತಾಡಿಸಿಕೊಂಡ ಪದ್ದು ಮನೆಯ ದಾರಿ ಹಿಡಿದ.
ಮುಂದಿನ ಭಾಗದಲ್ಲಿ : ಮೂಲದ ದಾರಿಯಲ್ಲಿ
0 Followers
0 Following