ಕಗ್ಗತ್ತಲು
ಅದೇ ತಡಮೆ...
ಅದೇ ಹರಡಿಕೊಂಡ ಪಾದೆ ಕಲ್ಲು
ಪದ್ದು ಒಬ್ಬನೆ ಹೆಡ್ ಲೈಟ್ ಧರಿಸಿ ಪಾದೆಯ ಮೇಲೆ ಕುಳಿತಿದ್ದ.
ಕತ್ತಿ, ದೊಣ್ಣೆ ಯಾವುದೂ ಇಲ್ಲ.
ಕೈಯಲ್ಲಿ ರೈಫಲ್.
ರಘು, ಬಾಚು ಸಂಗಡ ಇಲ್ಲ.
ಪದ್ದು ‘ಗಿಜಿ, ಗಿಜಿಲ್’ ಗೆಜ್ಜೆಯ ನಾದಕ್ಕೆ ಕಿವಿಯಾನಿಸಿ ತಡಮೆಯ ಕಡೆ ಗುರಿ ಹಿಡಿದು ಕುಳಿತಿದ್ದ.
ಮುಂಚಿನ ದಿನ ರಾತ್ರಿ ಕಾದು ಮುಳ್ಳು ಹಂದಿ ಕಾಟ ಎಂದು ಅರಿತಿದ್ದ ಪದ್ದು ಮರು ದಿನ ಮಧ್ಯಾಹ್ನ ಮಿಲಿಟರಿ ರಿಟೈರ್ಡ್ ಅಬುಟನ ಮನೆಯಲ್ಲಿ ಹಾಜರಿದ್ದ.
ಹಂದಿ ಹಟ್ಟಿ ಬಳಿ ಇದ್ದ ಅಬುಟ ‘ಓ ಪದ್ದು... ಏನು ಮಧ್ಯಾಹ್ನ ಬಂದು ಬಿಟ್ಟೆ. ನಾಳೆ ಬಂದಿದ್ದರೆ ಕ್ರಿಸ್ಮಸ್ ಗೌಜಿ ಇತ್ತು ಮಾರಾಯಾ ಇಡ್ಲಿ, ಡುಕುರ್ ಮಾಸ್, ಕೇಕ್ ತಿನ್ಬಹುದಿತ್ತು’ ಎನ್ನುತ್ತಾ ಮಿಲಿಟ್ರಿ ಗತ್ತಿನಲ್ಲಿ ಸ್ವಾಗತಿಸಿದ್ದ.
‘ಏನಿಲ್ಲ ಅಬುಟಾಮ್ ಹೀಗೇ ಬಂದೆ’ ಅಂದ ಪದ್ದು..
‘ಏಯ್... ನೀನು ಸುಮ್ಮನೆ ಬರ‍್ಲಿಕ್ಕಿಲ್ಲ... ಅಂತೂ ಬಂದ್ಯಲ್ಲ.. ಮಾವನ ಜತೆ ಸಿಪಾಯಿಗಿರಿ ನಿಂತಿತಾ?. ತು ಉಸಾರ್ ಅಸ ಮಾರ್ಯಾ... ಮೂರಕ್ರೆ ಕೊನೆಗೂ ಪಡೆದುಕೊಂಡೆ. ನೋಡು ಅಲ್ಲಿ ಒಂದು ಈ ತರ ಡುಕ್ರು ಫಾರಂ ಮಾಡು. ಒಳ್ಳೆ ಲಾಭ ಇದೆ. ಹೇಗಂತ ನಾನು ಹೇಳಿಕೊಡ್ತೇನೆ' ಎಂದ ಅಬುಟ.
‘ಹೌದು ಮಾಮ್. ಕೊನೆಗೂ ದೈವ ಕೊಟ್ಟಿತು’ ಅಂದ ಪದ್ದು.
‘ಅದು ಸರಿ. ನಿಮ್ಮ ದೈವ ಉಂಟಲ್ಲಾ. ಅದರ ಮುಂದೆ ಕೋರ್ಟು, ಕಚೇರಿ ಕೂಡಾ ಇಲ್ಲ ಮಾರಾಯಾ...’ ಎಂದು ತಲೆ ದೂಗಿದ ಅಬುಟ.
‘ಏನಿಲ್ಲ. ಸ್ವಲ್ಪ ತೆಂಗಿನ ಗಿಡ ಇಟ್ಟಿದ್ದೇನೆ.. ರಾತ್ರಿ ಹೊತ್ತಿಗೆ ಅದೆಲ್ಲಾ ಬುಡ ಮೇಲು ಆಗ್ತಾ ಉಂಟು. ಬ್ಲೇಡಲ್ಲಿ ಗೀರಿದಂತೆ ಕಾಯಿಯ ಬೊಂಡು ಎಲ್ಲಾ ಹೊರಗೆ ಬರ‍್ತಾ ಉಂಟು.... ’ ಎಂದ ಪದ್ದು
‘ಹೋ... ಅದು ಸೂಳ್...ಮಾರ್ಯಾ. ನೀವು ಕನೆ ಪಂಜಿ ಅಂತೀರಲ್ಲ. ಅದು ಬಿಡುದೇ ಇಲ್ಲ. ಅದರ ಮಾಂಸದ ಪದಾರ್ಥ ಉಂಟಲ್ಲಾ ಅದು ಬಾರಿ ರುಚಿ. ಇವತ್ತು ಸಂಜೆ ಚರ್ಚ್ ಲ್ಲಿ ಪೂಜೆ ಉಂಟು, ಕ್ರಿಸ್ ಮಸ್ ಕಳೆಯಲಿ ನಾನೇ ಬರ‍್ತೇನೆ ಬೋಂಟೆ ಮಾಡುವ’ ಎಂದ ಅಬುಟ.
‘ಅಷ್ಟು ಹೊತ್ತಿಗೆ ಗಿಡ ಎಲ್ಲ ಖಾಲಿ ಆಗ್ತದೆ ಅಬುಟಾಮ್, ನೀವು ಬೆಡಿ ಒಂದು ಕೊಟ್ಟರೆ ನಾನೇ ಬೊಂಟೆ ಮಾಡ್ತಿದ್ದೆ...’ ಎಂದ ಪದ್ದು.
ಅಬುಟ ಪದ್ದುವಿನ ಮುಖವನ್ನು ಕ್ಷಣ ಕಾಲ ದಿಟ್ಟಿಸಿದ...
‘ಮೊದಲೇ ನಿನಗೂ ಮಾವನಿಗೂ ಲಡಾಯಿ ಮಾರಾಯ. ದೋಗಣ್ಣ ಏನಾದ್ರೂ ಹೇಳಿದ್ರೆ, ನೀನು ಅವರಿಗೆ ಈಡು ಇಟ್ರೆ... ಮತ್ತೆ ಪೊಲೀಸರು ಬಂದು ಏ ಮಿಲಿಟರಿ ರಿಟೈರ್ಡ್ ಪರ್ಸನ್ ಮಿಸ್ಟರ್ ಅಲ್ಬುಕರ್ಕ್ ನಿನಗೆ ಕಾಮನ್ ಸೆನ್ಸ್ ಇಲ್ವಾ. ರೈಫಲ್ ಲೈಸನ್ಸ್ ಕೊಟ್ಟದ್ದು ಲೈಫ್ ಲಾಸ್ ಮಾಡ್ಲಿಕ್ಕಾ ಅಂದ್ರೆ ಕಷ್ಟ’ ಎಂದ ಅಬುಟ..
‘ಇಲ್ಲ ಅಬುಟಾಮ್.. ನಮಗೆ ಈಗ ಸರಿ ಆಗಿದೆ. ನನ್ನ ಮೇಲೆ ನಂಬಿಕೆ ಇಲ್ವಾ.. ಕೊಟ್ಟರೆ ಉಪಕಾರ ಇತ್ತು. ಮತ್ತೆ ಮಾವನಿಗೆ ಈಡು ಮಾಡ್ಲಿಗೆ ನಿಮ್ಮ ಬೆಡಿಯೇ ಬೇಕಾ... ಮನೆಯಲ್ಲಿ ಕತ್ತಿ ದೊಣ್ಣೆ ಇಲ್ವಾ?’ ಪದ್ದು ನಗುತ್ತಾ ಹೇಳಿದ.
‘ಅದು ಹೌದು ಮತ್ತೆ. ನಿಮ್ಮ ಜಾತಿಯವರಿಗೆ ಪಿತ್ತ ಯಾವಾಗ ನೆತ್ತಿಗೇರ‍್ತದೆ ಅಂತ ಹೇಳ್ಲಿಕ್ಕೆ ಬರುದಿಲ್ಲ. ನಮ್ಮ ಜಾತಿಯೂ ಹಾಗೆಯೇ ಬಿಡು’ ಎನ್ನುತ್ತಾ ಮನೆಯ ಒಳಗಿನಿಂದ ರೈಫಲ್ ತಂದು 'ಸೂಳ್ ಗೆ ಇದು ಸಾಕು. ಒಮ್ಮೆಗೆ ಒಂದೇ ಪರೆಲ್. ಮತ್ತೊಂದು ದೊಡ್ದ ಬೆಡಿ, ಎಂಟು ಗೋಲಿದ್ದು. ಅದು ದೊಡ್ಡ ಡುಕೊರ್ ಗೆ. ನಿನಗೆ ಅದು ಬೇಡ.
ನೋಡು ಸೂಳ್ ಗೆ ಈಡು ಕಂತ ಇಡ್ಬೇಕು. ಹತ್ತು ಡಿಗ್ರಿ. ನೇರ ಇಡ್ಬೇಡ. ಗೋಲಿ ವೇಸ್ಟ್ ಆಗ್ತದೆ. ಅದು ಇರುವುದು ಒಂದೆರಡು ಫೀಟ್ ಎತ್ತರ. ಹೀಗೆ ಕಂತ ಅದರ ತಲೆಗೆ ಬೀಳುವ ಹಾಗೆ ಹಿಡಿಬೇಕು ನಿನಗೆ ಗೊತ್ತಲ್ಲಾ. ಒಂದರಡು ಸಲ ನಿನ್ನ ಈಡು ನೋಡಿದ್ದೇನೆ ಬಿಡು. ಈಡು ಬಿದ್ರೆ ಅದರ ಹಿಂದೆ ಒಟ್ಟಾರೆ ಓಡ್ಬೇಡ. ಕನೆ ಕಂತಿದರೆ ಮಹಾ ನಂಜು. ಮತ್ತೆ ನಾಳೆ ಕ್ರಿಸ್ಮಸ್. ಸೂಳ್ ಈಡಿಗೆ ಬಿದ್ದರೆ ಒಂದೆರಡು ಕಿಲೋ ಮಾಂಸ ನನಗೂ ಬೇಕು’ ಎಂದ ಅಬುಟ.
‘ಹಂದಿ ಈಡಿಗೆ ಸಿಕ್ಕರೆ ನಿಮಗೇ ಕೊಡ್ತೇನೆ ಅಬುಟಾಮ್’ ಎನ್ನುತ್ತಾ ಪದ್ದು ಕೋವಿ ಹಿಡಿದು ಮನೆಗೆ ನಡೆದ.
ರಾತ್ರಿ ಹತ್ತು ಗಂಟೆಯ ನಂತರ ಕಾಲು ದಾರಿಯ ತಡಮೆಯ ಬಳಿ ಹೊಂಚು ಹಾಕಿ ಕುಳಿತಿದ್ದ.
ರಾತ್ರಿಯ ಭೀಕರ ಕತ್ತಲಿನ ವಾತಾವರಣ.
ಹನ್ನೊಂದು ಗಂಟೆ ಕಳೆದಿದೆ. ಪದ್ದುವಿನ ಕಣ್ಣು, ಕಿವಿ, ರೈಫಲ್‌ನ ಗುರಿ ತಡಮೆಯ ಕಡೆಗೆ...
‘ಗಿಜಿ... ಗಿಜಿ...’ ಧ್ವನಿ.
'ಹೌದು...'
ಖಚಿತ ಪಡಿಸಿಕೊಂಡ ಪದ್ದು ರೈಫಲ್ ಕುದುರೆ ಎಳೆದ...
‘ಡಿಶ್ಯೂ..... ’
ಸದ್ದು ಕಗ್ಗತ್ತಲನ್ನು ಬೇಧಿಸಿತು...
‘ಅಯ್ಯೋ ಅಮ್ಮಾ... ಸತ್ತೆ.... ನನ್ನ ಕಾಲು.....’
ಹುಡುಗಿಯ ಆರ್ತನಾದ...
ಪದ್ದು ಬೆಚ್ಚಿ ಬಿದ್ದ. ಹೆಡ್‌ಲೈಟ್ ಅದುಮಿದ....
ಸುಜ್ಜಾ ತಡಮೆಯ ಬಳಿ ಕಾಲು ಹಿಡಿದು ಕುಸಿದು ಬಿದ್ದಿದ್ದಳು.
ಪದ್ದು ತಡಮೆಯ ಬಳಿ ಓಡಿದ..
ಸುಜ್ಜಾಳ ಮೀನಖಂಡ ಸೀಳಿ ಹೋಗಿತ್ತು. ರಕ್ತ ಬಳ ಬಳನೆ ಹರಿಯುತ್ತಿತ್ತು... ಅಕೆಯ ಕಾಲಿನ ಗೆಜ್ಜೆ ಕೆಂಪಾಗಿತ್ತು.
‘ಸುಜ್ಜಾ... ನೀನು...!
ನೀನ್ಯಾಕೆ ಇಲ್ಲಿ ಬಂದೆ...?’ ಪದ್ದು ಬಡಬಡಿಸಿದ.
ಕೆಂಪು ಕೆಂಪು ರಕ್ತ ಕಂಡ ಸುಜ್ಜಾ ಉತ್ತರಿಸಲಾಗದೆ ಪ್ರಜ್ಞಾಶೂನ್ಯಳಾಗಿದ್ದಳು.
ಎರಡು ಅಕ್ಕಿಮುಡಿಗಳನ್ನು ಸಲೀಸಾಗಿ ಹೆಗಲಿಗೆ ಎತ್ತಿ ಸಾಗಿಸುತ್ತಿದ್ದ ಪದ್ದು ಆಕೆಯನ್ನು ಅನಾಮತ್ತಾಗಿ ಎತ್ತಿ ಹೆಗಲ ಮೇಲೆ ಹಾಕಿಕೊಂಡ. ಕೋವಿ ಹಿಡಿದು ಮಂಜೊಟ್ಟಿ ಗುತ್ತಿನ ಕಡೆಗೆ ಒಂದೇ ಉಸಿರಿಗೆ ಓಡಿದ.
ಏದುಸಿರು ಬಿಡುತ್ತಾ... ಬಾಗಿಲು ದೂಡಿ ಚಾವಡಿಯಲ್ಲಿ ಮಲಗಿಸಿ ಲೈಟ್ ಹಾಕಿದ.
ಚಾವಡಿಗೆ ರಕ್ತ ತೊಟ್ಟಿಕ್ಕತೊಡಗಿತು.
ಗದ್ದಲ ಕೇಳಿ ದೋಗಣ್ಣ, ಅವರ ಹೆಂಡತಿ, ದೇವಕಿ ಕಣ್ಣುಜ್ಜುತ್ತಾ ಬಂದು ಸುತ್ತ ಕುಳಿತರು.
ಮೀನಖಂಡದಿಂದ ರಕ್ತ ಒಂದೇ ಸಮನೆ ಹರಿಯುತ್ತಿತ್ತು.
ಅಡುಗೆ ಮನೆಗೆ ಹೋದ ದೇವಕಿ ಮುಕ್ಕಾಲಿಗೆ ತಂದು ಆಕೆಯ ಪಾದವನ್ನು ಎತ್ತರಿಸಿ ಅದರ ಮೇಲೆ ಇಟ್ಟರು.
‘ಏನಾಯಿತು? ಏನಾಯಿತು?’ ಎಂದು ಎಲ್ಲರೂ ಕೇಳುತ್ತಿದ್ದರು .
ಪದ್ದು ನಿರುತ್ತರನಾಗಿ ತಲೆ ಮೇಲೆ ಕೈ ಹೊತ್ತು ಕುಳಿತಿದ್ದ.
‘ಈ ಬೆಡಿ ಹಿಡಿದು ರಾತ್ರಿ ಗುಡ್ಡೆ ಸುತ್ತುವ ಕೆಲಸ ನಿನಗೆ ಯಾಕೆ? ಬೆಡಿ ಕೊಟ್ಟದ್ದು ಅಬುಟ. ನಾಳೆ ಸಿಗ್ಲಿ ಅವ. ಇವಳು ರಾತ್ರಿ ಹೊರಟದ್ದಾದರೂ ಎಲ್ಲಿಗೆ?’ ದೇವಕಿ, ದೋಗಣ್ಣ ಬೈಯ್ದಾಡತೊಡಗಿದ್ದರು.
ನೆತ್ತಿಗಿಂತ ಏತ್ತರಕ್ಕೆ ಮುಕ್ಕಾಲಿಗೆಯಲ್ಲಿಟ್ಟ ಕಾಲಿನ ಕಡೆ ನೆತ್ತರ ಹರಿವು ಕಡಿಮೆಯಾಗತೊಡಗಿತು. ಮೊಣಕಾಲ ಮೇಲೆ ಬಟ್ಟೆಯಿಂದ ಬಿಗಿದು ಕಟ್ಟಿದಾಗ ನೆತ್ತರ ಪ್ರವಾಹ ಕಡಿಮೆಯಾಗಿ ರಕ್ತ ಸೋರುವುದು ನಿಂತಿತು.
ಸುಜ್ಜಾ ಕಣ್ಣು ಬಿಟ್ಟಳು. ತನ್ನೆಲ್ಲಾ ಆತ್ಮೀಯರ ಮುಖ. ನೋವಿನಲ್ಲೂ ಆಕೆಯ ತುಟಿಯಲ್ಲಿ ನಗುವಿನ ಗೆರೆ.
‘ನೀನು ಗುಳಿಗ ಜೋರ ಯಾಕೆ ಇಳಿದೆ ಹೇಳು...?’ ಎಂದು ಪದ್ದು ಪ್ರಶ್ನಿಸಿದ.
ಪ್ರಕಾಶ ತನ್ನ ಮೇಲೆ ಎರಗಿದ್ದನ್ನು ಸುಜ್ಜಾ ಬಿಚ್ಚಿಟ್ಟಳು.
ಆತನಿಂದ ರಕ್ಷಿಸಿಕೊಳ್ಳಲು ಸುಜ್ಜಾ ಕಗ್ಗತ್ತಲ ರಾತ್ರಿ ಮಂಜೊಟ್ಟಿ ಗುತ್ತಿನತ್ತ ಓಡಿ ಬಂದಿದ್ದಳು.
ಆಕೆಯ ಗೆಜ್ಜೆಯ ಧ್ವನಿ ಕೇಳಿದ ಪದ್ದು ರೈಫಲ್ ಅದುಮಿದ್ದ.
ಪ್ರಕಾಶನ ಕತೆ ಕೇಳಿದ ಪದ್ದು ಕಟ ಕಟನೆ ಹಲ್ಲು ಕಡಿದ....
ಗಾಯದಿಂದ ರಕ್ತ ಸೋರುವುದು ನಿಂತಿತು. ಗುಂಡು ಆಕೆಯ ಮೀನಖಂಡದ ಮಾಂಸವನ್ನು ಸವರಿಕೊಂಡು ಹೋಗಿತ್ತು. ಎಲುಬು ಹೊಕ್ಕಿರಲಿಲ್ಲ. ಮನೆಯಲ್ಲಿದ್ದ ಔಷಧಿ ಹಚ್ಚಿ ಬಟ್ಟೆ ಕಟ್ಟಿದಳು ದೇವಕಿ.
ಮುಂದಿನ ಭಾಗದಲ್ಲಿ : ಪಿಲಿ ಕುಂಡೆಲ್
0 Followers
0 Following