ವ್ಯಾಕರಣದ ಅರ್ಥ, ವ್ಯಾಖ್ಯೆ, ಪ್ರಯೋಜನ

ವ್ಯಾಕರಣದ ಸ್ವರೂಪ, ಉಪಯೋಗ

ProfileImg
30 Jan '24
4 min read


image

ವ್ಯಾಕರಣದ ಅರ್ಥ, ವ್ಯಾಖ್ಯೆ, ಪ್ರಯೋಜನ:

  ಯಾವುದೇ ಒಂದು ಭಾಷೆಯನ್ನು ನಾವು ಅರ್ಥ ಮಾಡಿಕೊಳ್ಳಬೇಕಾದರೆ,ಆ ಭಾಷೆಯ ಮೂಲ ತಳಪಾಯವಾದ ವ್ಯಾಕರಣದ ಅರ್ಥವನ್ನು ಕುರಿತು ತಿಳಿಯಬೇಕಾದದ್ದು ಅತ್ಯವಶ್ಯ. ಸಾಮಾನ್ಯವಾಗಿ ವ್ಯಾಕರಣ ಎಂದರೆ, ಶುದ್ಧವಾಗಿ ಓದಲು,ಬರೆಯಲು ಹಾಗೂ ಉಚ್ಚರಿಸಲು ಕೆಲವು ನಿಯಮಗಳನ್ನು ಹೇಳುವ ಒಂದು ಶಾಸ್ತ್ರ. ಎಂದರೆ ವ್ಯಾಕರಣ ಎನ್ನುವುದು ಒಂದು ಭಾಷಾಶುದ್ಧೀಕರಣ ಪ್ರಕ್ರಿಯೆ. ನಾವು ಮಾತನಾಡುವ ಭಾಷೆ ಸುಂಬದ್ಧವಾಗಿರಬೇಕು ಎಂಬುದನ್ನು ವ್ಯಾಕರಣ ಒತ್ತಿ ಹೇಳುತ್ತದೆ. ನಾವು ಮಾತನಾಡುವ ಭಾಷೆ ಅಪಶಬ್ದಕ್ಕೆ ಎದೆಯಿಲ್ಲದಂತೆ ಇರಬೇಕು. ಅದು ಅತಿದೀರ್ಘವಾಗಿರಬಾರದು.ಅಲ್ಲದೆ, ಅದು ಸಂದಿಗಕ್ಕೆ ಒಳಗಾಗದ ಕ್ರಮವಾಗಿರಬೇಕು- ಎಂಬುದನ್ನು ವ್ಯಾಕರಣ ಒತ್ತಿ ಹೇಳುತ್ತದೆ. ಹೀಗಾಗಿ,ವಿ. ಶಿವಾನಂದ ಅವರು ಅಭಿಪ್ರಾಯ ಪಡುವಂತೆ, ಭಾಷೆಯ ರಚನೆ,ಅದರ ನೆಲೆ -ಬೆಲೆಗಳನ್ನು ಸಶಾಸ್ತ್ರೀಯವಾದ ತಳದಿಯ ಮೇಲೆ ನಿರುಪಿಸುವುದೇ ವ್ಯಾಕರಣ. ಎಂದರೆ, ಭಾಷೆಯ ರಚನಾತ್ಮಕ ವಿಧಾನವನ್ನು ಕೆಲವು ವಿಶಿಷ್ಟ ನಿಯಮಗಳ ತಳದಿಯ  ಮೇಲೆ ವಿವರಿಸುವುದೇ ವ್ಯಾಕರಣದ ಗುರಿ; ಅಥವಾ ವ್ಯಾಕರಣದ ಸ್ವರೂಪ. ಭಾಷೆಯ ಆಕರ - ಪರಿಕರಗಳನ್ನು ವಿವರಿಸಿ, ವಿಶ್ಲೇಷಿಸಿ ಸುವ್ಯವಸ್ಥಿತವಾದ  ಕ್ರಮದಲ್ಲಿ ಅಳವಡಿಸಿ ಹೇಳುವುದೇ ವ್ಯಾಕರಣದ ಕಾರ್ಯ.

ಒಂದು ಪದದ ವ್ಯುತ್ಪತ್ತಿ , ಅದರ ಪ್ರಕೃತಿ ರೂಪ, ಅದರ ಸಾಧಿತ ರೂಪ ಹಾಗೂ ಅದರ ಪ್ರತ್ಯಯ ರೂಪಗಳನ್ನು ವ್ಯಾಕರಣ ವಿಂಗಡಿಸಿ ಹೇಳುತ್ತದೆ. ಯಾವುದೊಂದು ಭಾಷೆಯ ಅರ್ಥ ಮತ್ತು ಮೌಲ್ಯವನ್ನು , ಅದರ ಸ್ಪಷ್ಟತೆ ಮತ್ತು ಶಿಷ್ಟತೆಗಳನ್ನು ಕಾಯ್ದುಕೊಳ್ಳುವ ಬಹುತರ ಹೊಣೆಗಾರಿಕೆ ವ್ಯಾಕರಣದ್ದಾಗಿರುತ್ತದೆ. ಸಂದೇಹ, ಅಸ್ಪಷ್ಟತೆ, ಅಶ್ಲೀಲ, ಗ್ರಾಮ್ಯ, ಅಸಂಸ್ಕೃತ ಪದ ಪ್ರಯೋಗಗಳನ್ನು ನಿವಾರಿಸಿ ಭಾಷೆಯ ಸಮತೋಲನವನ್ನು, ಅದರ ಮೂಲತತ್ವಗಳನ್ನು ವ್ಯಾಕರಣ ಉಳಿಸಿಕೊಳ್ಳಬೇಕಾಗುತ್ತದೆ.

ಹೀಗೆ ಮಾಡುವಾಗ ಯಾವುದು ಶುದ್ದ ಪ್ರಯೋಗ? ಯಾವುದು ಅಶುದ್ಧ ಪ್ರಯೋಗ ?  ಎಂಬ  ನಿರ್ಣಯವನ್ನೂ ಕೂಡ ವ್ಯಾಕರಣ ಮಾಡಬೇಕಾಗುತ್ತದೆ. 

  ಒಟ್ಟಾರೆ, ವ್ಯಾಕರಣವೆನ್ನುವುದು  ಭಾಷೆಯ ಮೂಲಭೂತ ಪ್ರಕ್ರಿಯೆಗಳನ್ನೆಲ್ಲ  ಸೂತ್ರರೂಪದಲ್ಲಿ ಸಂಗ್ರಹಿಸಿ ಅಥವಾ ಕಲೆ ಹಾಕಿ ವಿವರಿಸುತ್ತದೆ. ಆದ್ದರಿಂದ, ವ್ಯಾಕರಣ  ಭಾಷೆಯ ನಿಯಮಗಳ ಹಾಗೂ ಅದನ್ನು ಕಾಯ್ದುಕೊಳ್ಳುವ ತತ್ವಗಳ ಅಭ್ಯಾಸವಾಗಿದೆ.

  "ಭಾಷೆಯ ಸ್ವರೂಪವನ್ನು,ಅದರ ಪ್ರಾಯೋಗಿಕ

ನಿಯಮಗಳನ್ನು ಸೂತ್ರಬದ್ಧವಾಗಿ ವಿವರಿಸಿ ಅದರ ಮರ್ಯಾದೆಯನ್ನು, ರಚನಾತ್ಮಕ ತಳದಿಯನ್ನು ಕಾಪಾಡಿಕೊಳ್ಳುವುದೇ ವ್ಯಾಕರಣದ ಕಾರ್ಯವಾಗಿದೆ "ಎನ್ನುತ್ತಾನೆ ಗ್ಲೀಸನ್.

  ಹೀಗಾಗಿ ವ್ಯಾಕರಣ ಎನ್ನುವುದು ಭಾಷೆಯ ರಚನಾತ್ಮಕ ವಿಧಾನವನ್ನು ಅದರ ಸುಸಂಬದ್ಧತೆಯನ್ನು ಶಾಸ್ತ್ರೀಯವಾಗಿ ನಿರೂಪಿಸುವ ಒಂದು ವಿಧಾನವಾಗಿದೆ.

  ಪ್ರಪಂಚದ ಯಾವುದೇ ಭಾಷೆ ನಿಂತಿರುವುದು

ವ್ಯಾಕರಣದ ಅಡಿಪಾಯದ ಮೇಲೆಯೇ. ವ್ಯಾಕರಣವಿಲ್ಲದೆ ಪ್ರಪಂಚದ ಯಾವೊಂದು

ಭಾಷೆಯೂ ಇಲ್ಲ. ಪ್ರಪಂಚದ ಪ್ರತಿಯೊಂದು ಭಾಷೆ ತನ್ನದೇ ಆದ ವ್ಯಾಕರಣವನ್ನು ಹೊಂದಿರುತ್ತದೆ. ನಮ್ಮ ಪ್ರಾಚೀನ  ವೈಯಾಕರಣಿಗಳಿಗಂತೂ ಭಾಷೆಯ ಮೂಲ

ನಿಧಿಯೆಂದರೆ, ಈ ವ್ಯಾಕರಣವೇ. ನಮ್ಮ ಪಾರಂಪರಿಕ ವ್ಯಾಕರಣಕಾರರು ಭಾಷೆಯ ಸ್ವರೂಪವನ್ನು ವ್ಯಾಕರಣದ ಹಿನ್ನೆಲೆಯಲ್ಲಿ ಅರ್ಥೈಸಿಕೊಳ್ಳುವ ಪ್ರಯತ್ನ ಮಾಡುತ್ತಾ ಬಂದವರು. ಅಂತೆಯೇ, ಅವರ ದೃಷ್ಟಿಯಲ್ಲಿ ವ್ಯಾಕರಣವೆನ್ನುವುದು ಭಾಷೆಗೆ ಕಟ್ಟುಪಾಡಿನ ನಿಯಮ ಹೇಳುವುದಾಗಿದೆ. ಹೀಗಾಗಿ,ಭಾಷೆಗೆ ನಿಯಮಗಳನ್ನು ಹೇಳುವ ಅಥವಾ ಭಾಷೆಗೆ ಲಕ್ಷಣಗಳನ್ನು ಹೇಳುವ ಶಾಸ್ತ್ರವೇ 'ವ್ಯಾಕರಣ'. ವ್ಯಾಕರಣದ ಮುಖ್ಯ ಉದ್ದೇಶವೇ ಭಾಷೆಗೆ  ಲಕ್ಷಣಗಳನ್ನು ಹೇಳುವುದು ಅಥವಾ ನಿಯಮಗಳನ್ನು ವಿಧಿಸುವುದು.  ಹೀಗೆ, ಭಾಷೆ ಯನ್ನು ಕಟ್ಟುಪಾಡು ಅಥವಾ ನಿಯಮಗಳ ಹಿನ್ನೆಲೆಯಲ್ಲಿ ನೋಡುವುದೇ. ವ್ಯಾಕರಣದ ಸ್ವರೂಪವಾಗಿದೆ; ಗುರಿಯಾಗಿದೆ.

ವ್ಯಾಕಾರಣದ ಪ್ರಯೋಜನ:

  ವ್ಯಾಕರಣದಿಂದ ಹಲವಾರು ಪ್ರಯೋಜನಗಳುಂಟು. ನಾವು ಭಾಷೆಯನ್ನು ಸುಸಂಬದ್ಧವಾಗಿ  ಪ್ರಯೋಗಿಸಬೇಕಾದರೆ, ವ್ಯಾಕರಣ ಅತ್ಯವಶ್ಯ. ಬಾಷೆಯ ತಳಪಾಯವೇ ವ್ಯಾಕರಣವಾದದ್ದರಿಂದ.  ವ್ಯಾಕರಣದ ಪರಿಚಯ ನಮಗೆ ಇರಬೇಕಾದದ್ದು ಅತಿ ಮುಖ್ಯ. ಸ್ವತ: ಕೇಶಿರಾಜನೇ ತನ್ನ 'ಶಬ್ದಮಣಿದರ್ಪಣ'ದಲ್ಲಿ ವ್ಯಾಕರಣದ ಪ್ರಯೋಜನವನ್ನು ತುಂಬಾ ಮಾರ್ವಿಕವಾಗಿ ಹೇಳಿದ್ದಾನೆ. ಈ ಬಗೆಗಿನ ಆತನ ಸೂತ್ರ ಹೀಗಿದೆ:

 ವ್ಯಾಕರಣದಿಂದೆ ಪದಮಾ|

ವ್ಯಾಕಾರಣದ ಪದದಿನರ್ಥಮರ್ಥದೆ ತತ್ವಾ ||

ಲೋಕಂ ತತ್ವಾಲೋಕದಿ|

ನಾಕಾಂಕ್ಷಿಪ ಮುಕ್ತಿಯಕ್ಕುಮಿದೆ ಬುಧರ್ಗೆ ಫಲಂ ||

  ಎಂದರೆ  "ವ್ಯಾಕರಣದಿಂದ ಪದ ಸಿದ್ಧಿಸುತ್ತದೆ. ಪದಸಿದ್ಧಿಯಿಂದ ಅರ್ಥಜ್ಞಾನ ಲಭಿಸುತ್ತದೆ. ಅರ್ಥಜ್ಞಾನದಿಂದ ತತ್ವವಿಚಾರ  ಪ್ರಾಪ್ತವಾಗುತ್ತದೆ. ಆ ತತ್ವಜ್ಞಾನದಿಂದ ಮುಕ್ತಿ ದೊರಕುತ್ತದೆ "ಎಂದು ವ್ಯಾಕರಣದಿಂದಾಗುವ ಪರಮ ಪ್ರಯೋಜನಗಳನ್ನು  ತನ್ನ 'ಶಬ್ದಮಣಿ ದರ್ಪಣ' ವ್ಯಾಕರಣ ಗ್ರಂಥದಲ್ಲಿ ಬಹು ಮಾರ್ಮಿಕವಾಗಿ ಹೇಳಿದ್ದಾನೆ ಕೇಶಿರಾಜ. ಕೇವಲ ಕಾವ್ಯಾಸ್ವಾಧನೆಯಿಂದ  ಮಾತ್ರವಲ್ಲ, ಶಾಸ್ತ್ರಗ್ರಂಥದಿಂದಲೂ  ಸಹಿತ ಮುಕ್ತಿ ಲಭಿಸುತ್ತದೆ ಎನ್ನುವ ಕೇಶಿರಾಜ  ತನ್ನ ವ್ಯಾಕರಣ ಗ್ರಂಥದ ಓದಿನಿಂದ  ಆ ಮುಕ್ತಿ ಸಹಜವಾಗಿಯೇ ಸಿದ್ಧಿಸುತ್ತದೆ ಎಂದೂ ಹೇಳುತ್ತಾನೆ.

  ಅರ್ಥಕ್ಕೆ ಚ್ಯುತಿ ಬರದಂತೆ ಭಾಷೆಯನ್ನು ಬಳಸಬೇಕಾದದ್ದು ಅತ್ಯವಶ್ಯ. ಅಂತಹ ಸಂದರ್ಭದಲ್ಲಿ ವ್ಯಾಕರಣದ ಅವಶ್ಯಕತೆ ತುಂಬಾ ಇರುತ್ತದೆ. ಎಲ್ಲಿ ನಿಲ್ಲಬೇಕು? ಎಲ್ಲಿ ನಿಂತರೆ ಅರ್ಥಕ್ಕೆ ಭಂಗ ಬರುತ್ತದೆ? ಎಂಬುದನ್ನು ತಿಳಿಯದೆ ಉದ್ದಕ್ಕೂ ಓದಿಕೊಂಡು ಹೋದರೆ  ಅರ್ಥ ಅಪಾರ್ಥವಾಗುವ ಸಾಧ್ಯತೆ ಹೆಚ್ಚು. ಆದ್ದರಿಂದ, ಭಾಷಾಶುದ್ದೀಕರಣದ  ದೃಷ್ಟಿಯಿಂದ  ವ್ಯಾಕರಣದ  ಅಗತ್ಯ ತುಂಬಾ ಇದೆ.

  ಭಾಷೆಯ ವಿಷಯದಲ್ಲಿ  ತೀರ ಎಚ್ಚರಿಕೆ ವಹಿಸಬೇಕಾದದ್ದು ಅತ್ಯವಶ್ಯ. ಭಾಷೆ ಮೂಲತ: ಲೋಕೋಪಯೋಗಿ ಹಾಗೂ ನಿತ್ಯೋಪಯೋಗಿಯಾಗಿರುವುದರಿಂದ, ಹಲವಾರು ಜನರ ಜೊತೆ ದಿನನಿತ್ಯವೂ  ವ್ಯವಹರಿಸಬೇಕಾಗುತ್ತದೆ. ಹೀಗೆ ವ್ಯವಹರಿಸುವಾಗ 

ಭಾಷೆಯ ಅಥವಾ ಮಾತಿನ  ಮರ್ಮವನ್ನರಿತು ಎಚ್ಚರಿಕೆಯಿಂದ ನಡೆದುಕೊಳ್ಳಬೇಕಾಗುತ್ತದೆ.  ಇಲ್ಲದಿದ್ದರೆ ಕಾದಮನೆಗೆ ಕಲ್ಲು ಹೊಡೆಯಿತಯೆಂಬಂತೆ, ನಮ್ಮ ಮಾತು ನಮಗೇ ಮುಳುವಾಗಬಹುದು ; ನಗೆ ಹೋಗಿ ಹೊಗೆಯಾಗಬಹುದು. ಮಾತು ಮಾಣಿಕ್ಯವಾಗಬೇಕೇ ವಿನಾ: ಒಡೆದ ಮುತ್ತಾಗಬಾರದು.

 ಹೀಗೆ ಮಾತು ಮಾಣಿಕ್ಯವಾಗಬೇಕಾದರೆ, ಅದಕ್ಕೆ ವ್ಯಾಕರಣದ ಅಗತ್ಯ ತುಂಬಾ ಇದೆ. ಆಡುವ ಮಾತಿನ ಅರ್ಥವಾಗಬೇಕಾದರೆ ಭಾಷೆಯ ರಚನಾತ್ಮಕ ಸ್ವರೂಪವನ್ನು ತಿಳಿದಿರಕೇಕಾದದ್ದು  ಅತಿಮುಖ್ಯ. ಇದಕ್ಕೆ ವ್ಯಾಕರಣದ ಸಹಾಯ ತುಂಬಾ ಅಗತ್ಯವಿದೆ.

ನಾವಾಡುವ ಭಾಷೆಯ ವರ್ಣಕ್ರಮವನ್ನರಿತು, ಆ  ವರ್ಣಗಳನ್ನು  ಅರ್ಥವತ್ತಾಗಿ ವಾಕ್ಯರೂಪದಲ್ಲಿ ಪೋಣಿಸಬೇಕಾಗುತ್ತದೆ.  ಹೀಗೆ ಅರ್ಥವತ್ತಾದ ಪದಸಿದ್ಧಿ ಮಾಡಿಕೊಳ್ಳದೆ ಹೋದರೆ, ಭಾಷೆಯ  ಪೂರ್ವಾಪರವನ್ನರಿಯದೆ   ಹೋಗಬೇಕಾಗುತ್ತದೆ.  ಮಾತಿನ ಅಥವಾ ಭಾಷೆಯ ಪೂರ್ವಾಪರವನ್ನು ಅರಿಯದೆ ಹೋದರೆ ಭಾಷೆಯಲ್ಲಿ ಆಸ್ಪಷ್ಟತೆ, ಸಂದಿಗ್ದತೆ, ಅಪಾರ್ಥಗಳು  ಕಾಣಿಸಿಕೊಳ್ಳುವುದು ಸಹಜ. ಈ ದೃಷ್ಟಿಯಿಂದ ಪದ, ಪದರಚನೆ, ವಾಕ್ಯರಚನೆ - ಈ ಮುಂತಾದ ವ್ಯಾಕರಣಾಂಶಗಳನ್ನು  ತಿಳಿಯಬೇಕಾದದ್ದು  ಅತಿ ಅವಶ್ಯ.

  ಈಗಾಗಲೇ ಹೇಳಿದಂತೆ ನಾವು ಸರಿಯಾಗಿ ಮಾತನಾಡಲು, ಬರೆಯಲು,ಉಚ್ಚರಿಸಲು ಕಲಿಯಬೇಕಾದರೆ ವ್ಯಾಕರಣ ಅತ್ಯಗತ್ಯ. ನಾವು ಮಾತನಾಡುವಲ್ಲಿ  ಸಶಕ್ತರಾಗಬೇಕಾದರೆ ವ್ಯಾಕರಣ ಬೇಕೇ ಬೇಕು. ನಾವು ಮಾತನಾಡುವಲ್ಲಿ ಸಶಕ್ತರಾಗದೆ ಹೋದರೆ, ಜೀವನದಲ್ಲಿ ಬಹು ಮುಖ್ಯವಾದುದನ್ನೇ ಕಳೆದುಕೊಳ್ಳಬೇಕಾಗುತ್ತದೆ. ಭಾಷೆ ಮಾನವನ ಸಮಸ್ತ ಅಭಿವ್ಯಕ್ತಿ ಸಾಧನ. ಅದು ಆತನ  ಭಾವನೆ  ಹಾಗೂ ವ್ಯಕ್ತಿತ್ವಗಳಿಗೆ  ಹಿಡಿದ ಕೈಗನ್ನಡಿ. ಆತನ ಮನಸ್ಸಿನ ದರ್ಪಣ. ಅದು ಆತನ ಮನೋ ಧರ್ಮವನ್ನು ಪ್ರತಿಬಿಂಬಸುವುದಷ್ಟೇ ಅಲ್ಲ, ಅದು   ಇಡೀ ಸಮಾಜದ ಜನತೆಯ ಸಂಸ್ಕಾರ, ಸಂಸ್ಕೃತಿಗಳನ್ನು ಅರಿಯಲು ಸಹಾಯ ಮಾಡುತ್ತದೆ. ಬಾಷೆ, ಸಮಾಜ, ಸಂಸ್ಕೃತಿ ಇವು ಮೂರೂ ಅವಿನಾಭಾವಿ ಸಂಬಂಧವನ್ನು ಹೊಂದಿದ್ದು, ಇವುಗಳ ಸ್ವರೂಪವನ್ನು ಅಧ್ಯಯನ ಮಾಡಲು ಭಾಷೆ ಅಗತ್ಯ ಸಾಧನವಾಗಿದೆ.

  ಭಾಷೆ ಮಾನವನ ಜೀವನದ ಒಂದು ಅವಿಭಾಜ್ಯ ಅಂಗವೆಂಬುದನ್ನು ಮರೆಯುವಂತಿಲ್ಲ. ಮನುಷ್ಯನ ಎಲ್ಲ ವ್ಯವಹಾರಿಗಳಿಗೂ ಅದೇ ಮೂಲ ತವನಿಧಿ. ಭಾಷೆ ಇಲ್ಲದೆ ಯಾವೊಂದು ವ್ಯವಹಾರವೂ ಸಾಧ್ಯವಿಲ್ಲ. ಅಂತಿಯೇ ದಂಡಿ ಭಾಷೆ ಎನ್ನುವ ಜ್ಯೋತಿ ಬೆಳಗದೆ ಹೋಗಿದ್ದರೆ ಇಡೀ ಪ್ರಪಂಚವೇ ಕತ್ತಲಮಯವಾಗುತ್ತಿತ್ತು ಎಂದು ಹೇಳಿರುವುದು ತುಂಬಾ ಅರ್ಥಪೂರ್ಣವಾದ ಮಾತಾಗಿದೆ. ದಂಡಿಯ ಈ ಮಾತು ಭಾಷೆಯ ಪ್ರಯೋಜನವನ್ನು ಹೇಳುವಲ್ಲಿ ತುಂಬಾ ಮಹತ್ವ ಪಾತ್ರವನ್ನು ವಹಿಸುತ್ತದೆ. ಒಟ್ಟಾರೆ ಮಾನವನ ಸಮರ್ಥ ಅಭಿವ್ಯಕ್ತಿ ಮಾಧ್ಯಮವಾದ ಭಾಷೆ ಬೆಳಗದೆ ಹೋದರೆ, ದಂಡಿ ಹೇಳುವಂತೆ ಇಡೀ ಜಗತ್ತೇ ಕತ್ತಲಮಯವಾಗುವುದರಲ್ಲಿ ಯಾವ ಸಂದೇಹವಿಲ್ಲ!        

 

Category:Literature



ProfileImg

Written by LS KADADEVARMATH

Lokayya Shivalingayya Kadadevarmath Education: M.A.In Kannada [1984-85] Karnataka University Dharwad Experience: Writing & DTP Published: Publication of about 60-70 works.