ಆಯ್ರಾ ನಲ್ಲಿ ಟ್ರೆಂಡಿಂಗ್


ಸರ್ವರನ್ನೂ ಸಂಘಟಿಸುವ ಸಾರ್ವಜನಿಕ ಉತ್ಸವ
ಗಣೇಶ ಚತುರ್ಥಿಭಾರತದಾದ್ಯಂತ ಬಹಳ ವೈಭವದಿಂದ ದೇಶೀಯ ಹಬ್ಬವಾಗಿ ಆಚರಿಸಲ್ಪಡುವ ಹಬ್ಬ ಈ ಗಣೇಶ ಚತುರ್ಥಿ! ಭಾದ್ರಪದ ಮಾಸದ ಶುಕ್ಲಪಕ್ಷದ ಚೌತಿಯ ಅಂದರೆ ಚತುರ್ಥಿಯ ದಿನ ಈ ಹಬ್ಬವನ್ನು ದೇಶದೆಲ್ಲೆಡೆ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಹಬ್ಬದ ಸೌಂದರ್ಯವೇ ಹಾಗೆ ಯಾವ ಬೇಧ ಭಾವ ಮೇಲು ಕೀಳಿಲ್ಲದೆ ಎಲ್ಲರನ್ನೂ ಆಕರ್ಷಿಸುತ್ತಾ ಸಾರ್ವಜನಿಕವಾಗಿ ಆಚರಿಸಲ್ಪಡುತ್ತದೆ. ಗಣಪ ಎಂದರೆ ಹಿಂದೂಗಳಿಗೆ ಪ್ರೀತಿ ಮತ್ತು ಭಕ್ತಿಯ ಜೊತೆಗೆ ಒಂದು ರೀತಿಯ ಆತ್ಮೀಯ ಭಾವ ಹಾಗಾಗಿ ಗಣಪ ಪ್ರತಿಯೊಬ್ಬರ ಪ್ರೀತಿಯ ಆರಾಧ್ಯ ದೈವ. ಗಣೇಶನನ್ನು ಎಲ್ಲಾ ಅಡೆತಡೆಗಳನ್ನು ನಿವಾರಿಸುವ ವಿಘ್ನ ನಿವಾರಕ ಎಂದು ಕರೆಯುತ್ತೇವೆ. ಗಣೇಶನು ಪ್ರತಿ ವರ್ಷ ಸಮೃದ್ಧಿ ಮತ್ತು ಯಶಸ್ಸಿನೊಂದಿಗೆ ಬರುತ್ತಾನೆ ಎಂಬುದು ಎಲ್ಲರ ನಂಬಿಕೆ ಹಾಗಾಗಿ ಗಣೇಶ ಚತುರ್ಥಿ ಹಬ್ಬಕ್ಕಾಗಿ ಎಲ್ಲರೂ ಉತ್ಸಾಹ ಮತ್ತು ಕಾತರದಿಂದ ಕಾಯುತ್ತಾರೆ. ಅಲ್ಲದೆ ಈ ಹಬ್ಬದ ಮೂಲಕ ಮನೆಗಳಲ್ಲಿ ಗಣಪನನ್ನು ಪ್ರತಿಷ್ಠಾಪಿಸಿ ಆವನನ್ನು ಸ್ವಾಗತಿಸುತ್ತಾ ಬುದ್ಧಿವಂತಿಕೆ, ಸಮೃದ್ಧಿ, ಅದೃಷ್ಟ ವಿದ್ಯೆ ಮತ್ತು ಶುಭ ಫಲಕ್ಕಾಗಿ ಗಣಪನ ಆಶೀರ್ವಾದವನ್ನು ಕೋರಿ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ.! ಭಾರತದಲ್ಲಿ ಗಣೇಶ ಚತುರ್ಥಿ ಉತ್ಸವವು ಐತಿಹಾಸಿಕವಾಗಿಯೂ ಮಹತ್ವ ಪಡೆದುಕೊಂಡಿದ್ದು ಗಣೇಶ ಚತುರ್ಥಿಯನ್ನು ಶಿವಾಜಿಯ ಕಾಲದಿಂದಲೂ ಆಚರಿಸಲಾಗುತ್ತಿದೆ ಎಂದು ಇತಿಹಾಸ ಹೇಳುತ್ತದೆ. ಮರಾಠಾ ದೊರೆ ಶಿವಾಜಿ ಮೊಘಲರ ವಿರುದ್ಧ ಹೋರಾಡುತ್ತಿದ್ದ ಸಂಧರ್ಭದಲ್ಲಿ ತನ್ನ ಪ್ರಜೆಗಳಲ್ಲಿ ರಾಷ್ಟ್ರೀಯತಾವಾದಿ ಭಾವನೆಯನ್ನು ಉತ್ತೇಜಿಸಲು ಗಣೇಶ ಚತುರ್ಥಿಯ ಆಚರಣೆಯನ್ನು ಅಳವಡಿಸಿ ಕೊಂಡಾಗ ಗಣೇಶ ಚತುರ್ಥಿಯು ಸಾರ್ವಜನಿಕ ಆಚರಣೆಯ ಸ್ವರೂಪವನ್ನು ಪಡೆದುಕೊಂಡಿತು. 1893 ರಲ್ಲಿ, ಬ್ರಿಟಿಷರು ರಾಜಕೀಯ ಸಭೆಗಳನ್ನು ನಿಷೇಧಿಸಿದಾಗ, ಭಾರತೀಯ ರಾಷ್ಟ್ರೀಯವಾದಿ ನಾಯಕ ಬಾಲಗಂಗಾಧರ ತಿಲಕ್ ಅವರು ಈ ಉತ್ಸವವನ್ನು ಪುನರುಜ್ಜಿವನಗೊಳಿಸಿ ದೊಡ್ಡ ಸುಸಂಘಟಿತ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುವಂತೆ ನೋಡಿಕೊಂಡು ವಾರ್ಷಿಕ ದೇಶೀಯ ಹಬ್ಬವನ್ನಾಗಿ ಪ್ರೋತ್ಸಾಹಿಸಿದರು.ಇನ್ನೂ ಈ ಹಬ್ಬವನ್ನು ಧಾರ್ಮಿಕ ನಂಬಿಕೆಯ ಪ್ರಕಾರ ನೋಡುವುದಾದರೆ ಶಿವ ಪುರಾಣದಲ್ಲಿ ಹೇಳಿರುವಂತೆ ಗಣೇಶನ ಜನ್ಮಕಥೆ ಇಂತಿದ್ದು ಕೈಲಾಸದಲ್ಲಿ ಪಾರ್ವತಿದೇವಿಯು ತನ್ನ ಸಖಿಯರ ಜೊತೆಯಲ್ಲಿರುವಾಗ ಅಲ್ಲಿಗೆ ಪರಶಿವನ ಆಗಮನವಾಗುತ್ತೆ. ದ್ವಾರವನ್ನು ಕಾಯಲು ಗಣವೊಂದು ಇಟ್ಟಿದ್ದರೂ ಕೂಡ ಈ ರೀತಿ ತನ್ನ ಪತಿಯೇ ಆಗಲಿ ಅನಪೇಕ್ಷಿತವಾಗಿ ಒಳಗೆ ಬಂದದ್ದು ಪಾರ್ವತಿಗೆ ಸ್ವಲ್ಪ ಅಸಮಧಾನವನ್ನು ಉಂಟು ಮಾಡಿತ್ತದೆ, ಇದಕ್ಕಾಗಿ ಪಾರ್ವತಿ ಸ್ನಾನಕ್ಕಾಗಿ ಹೋಗುವ ಮೊದಲು ತನ್ನ ಮೈಯಲ್ಲಿರುವ ಮಣ್ಣಿನಿಂದ ಮುದ್ದಾದ ಒಂದು ಮಗುವನ್ನು ನಿರ್ಮಿಸಿ, ಅದಕ್ಕೆ ಜೀವ ತುಂಬಿ ಅವನ ಕೈಯಲ್ಲಿ ದಂಡವೊಂದನ್ನು ಕೊಟ್ಟು ಸ್ನಾನಗೃಹದ ಬಾಗಿಲು ಕಾಯಲು ನೇಮಿಸಿ ಯಾರನ್ನೂ ಒಳಗೆ ಬಿಡಬೇಡ ಎಂದು ಹೇಳುತ್ತಾಳೆ. ಹೀಗಿದ್ದಾಗ ಕೈಲಾಸಪತಿ ಈಶ್ವರನ ಆಗಮನ ವಾಗುತ್ತದೆ ಆಗ ಈ ಪುಟ್ಟ ದ್ವಾರಪಾಲಕ ತನ್ನ ದಂಡವನ್ನು ಶಿವನ ಮುಂದೆ ಅಡ್ಡವಾಗಿಸಿ ಒಳಗೆ ಪ್ರವೇಶಿಸದಂತೆ ನಿರ್ಭಂಧಿಸುತ್ತಾನೆ ಇದೇನು ಯಾವನೋ ಹೊಸ ಹುಡುಗ ನನ್ನನ್ನು ತಡೆಯುತ್ತಿರುವನಲ್ಲ ಎಂದು ಕೋಪಿಸಿಗೊಂಡ ಶಿವ ಯಾರು ನೀನು? ಎಂದು ಕೇಳುತ್ತಾನೆ. ನಾನು ಪಾರ್ವತಿಯ ಮಗ, ಅವಳ ಸೇವಕ, ತಾಯಿಯ ಆಜ್ಞೆ ಮೇರೆಗೆ ಯಾರನ್ನು ಒಳ ಹೋಗಲು ಬಿಡಲು ಸಾಧ್ಯವಿಲ್ಲ. ಆದ್ದರಿಂದ ನಿನ್ನನ್ನು ಒಳಹೋಗಲು ಬಿಡುವುದಿಲ್ಲ ಎಂದು ಬಾಲಕ ಶಿವನಿಗೆ ಹೇಳುತ್ತಾನೆ. ಇದನ್ನು ಕೇಳಿ ರುದ್ರಗಣಗಳು ಸಿಟ್ಟಿನಿಂದ ಅವನ ಮೇಲೆ ಮುಗಿಬೀಳುತ್ತಾರೆ, ಆದರೆ ಆ ಬಾಲಕ ಒಬ್ಬೊಬ್ಬರನ್ನು ಥಳಿಸಿ ತನ್ನ ಪರಾಕ್ರಮವನ್ನು ತೋರುತ್ತಾನೆ. ಇದೆಲ್ಲವನ್ನು ನೋಡುತ್ತಿದ್ದ ಶಿವ ತನ್ನ ಗಣಗಳ ಸೋಲು ಮತ್ತು ಈ ಹುಡುಗನ ಉದ್ಧಟತನದಿಂದ ಕ್ರೋಧಿತನಾಗಿ ತನ್ನ ಶೂಲದಿಂದ ಅವನ ಶಿರವನ್ನು ಕತ್ತರಿಸುತ್ತಾನೆ. ತನ್ನ ಪತಿಯ ಈ ಕೃತ್ಯವನ್ನು ನೋಡಿದ ಪಾರ್ವತಿಯು ಪುತ್ರನ ಮರಣದಿಂದ ಶೋಕಿತಳಾಗಿ ರೋಧಿಸುತ್ತಾಳೆ. ಗೌರಿಯು ಕ್ಷಣಾರ್ಧದಲ್ಲಿ ದುರ್ಗೆಯಾಗಿ ಅನೇಕ ಮಹಾಶಕ್ತಿಗಳನ್ನು ಸೃಷ್ಟಿಸಿ ರುದ್ರಗಣಗಳ ಮೇಲೆ ಬಿಡುತ್ತಾಳೆ. ಇದರಿಂದ ಗಾಬರಿಗೊಂಡ ಗಣಗಳು ಶಿವನಲ್ಲಿ ಬಂದು ಪ್ರಾರ್ಥಿಸುತ್ತಾರೆ. ಪಾರ್ವತಿಯನ್ನು ಸಮಾಧಾನ ಪಡಿಸಲು ಶಿವನು ಬಾಲಕನನ್ನು ಬದುಕಿಸುವದಾಗಿ ಹೇಳಿ, ತನ್ನ ಭಟರಿಗೆ ಉತ್ತರ ದಿಕ್ಕಿಗೆ ಹೋಗಿ ಮೊದಲು ಸಿಗುವ ಪ್ರಾಣಿಯ ತಲೆಯನ್ನು ತರಲು ಆಜ್ಞಾಪಿಸುತ್ತಾನೆ, ಅಂತೆಯೇ ಉತ್ತರಕ್ಕೆ ತಲೆ ಹಾಕಿ ಮಲಗಿದ್ದ ಆನೆಯ ಶಿರವನ್ನು ಕತ್ತರಿಸಿಕೊಂಡು ತರುತ್ತಾರೆ. ಶಂಕರನು ಆ ಬಾಲಕನ ಮುಂಡಕ್ಕೆ ಆನೆಯ ತಲೆಯನ್ನು ಸರಿಯಾಗಿ ಜೋಡಿಸಿ, ಅವನನ್ನು ಪುನಃ ಬದುಕಿಸಿದನು. ಉಮೆಯು ಬಂದು ಆ ಬಾಲಕನನ್ನು ಮುದ್ದಿಸಿ ತನ್ನ ಮಗನಾದ ಗಜಮುಖನಿಗೆ ವರಗಳನ್ನು ದಯಪಾಲಿಸುವಂತೆ ಮಹೇಶ್ವರನನ್ನು ಕೇಳಿಕೊಂಡಳು. ಆಗ ಶಿವನು ಇಂದಿನಿಂದ ನೀನು ನನ್ನ ಕಿರಿಯ ಮಗನೆಂದೂ, ಸರ್ವಕಾರ್ಯಗಳಲ್ಲಿ ನೀನೆ ಪ್ರಥಮ ಪೂಜಿತನಾಗೆಂದೂ, ಸಕಲ ರುದ್ರಗಣಗಳ ಅಧಿಪತಿಯಾಗು ಎಂದು ಶಿವನು ಹರಸುತ್ತಾನೆ. ಹೀಗೆ ಶಿವ ಪಾರ್ವವತಿಯರ ಮಗನಾಗಿ ಗಣಪತಿಯು ಜಗತ್ಪ್ರಸಿದ್ಧನಾದನು.!ಗೌರಿ ಹಬ್ಬದ ಮಹತ್ವಗಣೇಶ ಚತುರ್ಥಿಗೆ ಒಂದು ದಿನ ಮೊದಲು ಗಣಪನ ಅಮ್ಮ ಗೌರಿಯನ್ನು ಮನೆ ಮನೆಗಳಲ್ಲಿ ಪ್ರತಿಷ್ಠಾಪಿಸಿ ಗೌರಿ ಹಬ್ಬವೆಂದು ಆಚರಿಸಲಾಗಿತ್ತದೆ ತದನಂತರ ಮರುದಿನ ಗಣೇಶನನ್ನು ಮನೆಗೆ ಆಹ್ವಾನಿಸಲಾಗುತ್ತದೆ.ಧಾರ್ಮಿಕ ನಂಬಿಕೆಗಳ ಪ್ರಕಾರ,ಗೌರಿ ಆದಿ ಶಕ್ತಿ ಮಹಾಮಾಯೆಯ ಅವತಾರ ಎಂದು ಹೇಳಲಾಗುತ್ತದೆ. ಅಲ್ಲದೆ ಆಕೆ ಶಿವನ ಶಕ್ತಿ ಕೂಡ ಭಾದ್ರ ಮಾಸದಲ್ಲಿ ಗೌರಿಯು ಇತರ ವಿವಾಹಿತ ಮಹಿಳೆಯಂತೆ ತನ್ನ ಹೆತ್ತವರ ಮನೆ ಭೂಲೋಕಕ್ಕೆ ಬರುತ್ತಾಳೆ ಎಂದು ನಂಬಲಾಗಿದೆ. ಆಕೆಯನ್ನು ಮತ್ತೆ ಕೈಲಾಸಕ್ಕೆ ಕರೆದುಕೊಂಡು ಹೋಗಲು ಅವಳ ಪುತ್ರನಾದ ಗಣೇಶನು ಭೂಮಿಗೆ ಬರುತ್ತಾನೆ ಎಂಬುದು ಪ್ರತೀತಿಗೌರಿ ಹಬ್ಬವನ್ನು ಮುಖ್ಯವಾಗಿ ಮಹಿಳೆಯರು ಆಚರಿಸುತ್ತಾರೆ. ಗೌರಿ ಅಂದರೆ ಪಾರ್ವತಿ ದೇವಿಯ ಅತ್ಯಂತ ಸುಂದರವಾದ ಮೈಬಣ್ಣದ ಅವತಾರವಾದ ಗೌರಿಯನ್ನು ಈ ದಿನದಂದು ಪೂಜಿಸಲಾಗುತ್ತದೆ ಮತ್ತು ಸಂತೋಷದ ದಾಂಪತ್ಯ ಜೀವನಕ್ಕಾಗಿ ಕಷ್ಟ ಕಾರ್ಪಣ್ಯಗಳ ನಿವಾರಣೆಗಾಗಿ ಗೌರಿ ದೇವಿಯ ಆಶೀರ್ವಾದವನ್ನು ಪಡೆಯಲು ಮಹಿಳೆಯರು ಸ್ವರ್ಣ ಗೌರಿ ವ್ರತವನ್ನಾಗಿ ಕೂಡ ಆಚರಿಸುತ್ತಾರೆ.
07 Sep '24
3 ನಿಮಿಷದ ಓದು
ಆಧ್ಯಾತ್ಮಿಕತೆ
ಸರ್ವರನ್ನೂ ಸಂಘಟಿಸುವ ಸಾರ್ವಜನಿಕ ಉತ್ಸವ
ಗಣಪ vs ಗಣಪ
ಶೀರ್ಷಿಕೆ : ಗಣಪ vs ಗಣಪ .....***ವಿಧಿ ಗರ್ಭ ಸಂಜಾತ ***.....ಕಾಡಿನ ಮಹಾರಾಜ ನಾನನ್ನಲ್ಲಿ ಗಣಪನ ಕಾಣುವಿರಿ ಹಬ್ಬವ ಆಚರಿಸುವಿರಿಕೃಪಾಶೀರ್ವಾದ ಪಡೆಯಲುಹುಡುಕಿ ಕೊಂಡು ಓಡೋಡಿ ಬರುವಿರಿನನ್ನಯ ಗುಡಿಗೆ ನೀಮಣ್ಣಿನ ಗಣಪನ ಕಂಡರೆ ಪೂಜಿಸುವಿರಿ ನಿಜ ಗಣಪನ ಕಂಡರೆದೂರನು ದಾಖಲಿಸುವಿರಿಮುಗಿಯದ ಬೇಡಿಕೆ ನಿಮ್ಮದು ತೀರದ ದಾಹ ನನ್ನದು ವರವ ಬಯಸುತ ಬರುವಿರಿ ನನ್ನ ಬಳಿ ನಾ ನಿಮ್ಮ ಜಮೀನಿಗೆ ಬಂದರೆ ಶಾಪ ಹಾಕುತ ಬಯ್ಯುವಿರಿದಸರಾ ಹಬ್ಬಕ್ಕೆ ನಾ ಬೇಕು ಮೃಗಾಲಯದಲ್ಲಿ ಮಾತ್ರ ನಾನಿರಬೇಕು ಅಲ್ಲವೇ ನಿಮ್ಮದು ಸ್ವಾತಂತ್ರ್ಯ ನನ್ನದು ಪರತಂತ್ರವೇ..?ಏ ಪ್ರಜಾ ಪ್ರಭುತ್ವದ ಮಹಾರಾಜಆಲಿಸಿ ಈ ಕಾಡಿನ ಮಹಾರಾಜನ ದೂರು ದುಮ್ಮಾನಪರಿಹರಿಸಿ ಕಾಡು ನಾಡಿನ ಸರಹದ್ದನನ್ನ ಸಾಮ್ರಾಜ್ಯದ ಗಡಿಗುರುತ ಪತ್ತೆ ಮಾಡುತಿರುವೆ ನಾಕಾಗದ ಪತ್ರಗಳಿಲ್ಲದೆನಕಾಶೆ ಗಡಿ ಕಲ್ಲು ಇಲ್ಲದೆBrain Map ಮುಖೇನಒತ್ತುವರಿ ಮಾಡಿಹೆನನ್ನಯ ಸಾಮ್ರಾಜ್ಯವ ನೀದೂರು ಕೊಡಬೇಕು ನಾಕಣ್ಣ ಬಟ್ಟೆ ಕಟ್ಟಿದನ್ಯಾಯ ದೇವತೆಯ ಎದುರು!ಪ್ರಜಾ ಪ್ರಭುತ್ವದ ಮಹಾರಾಜನ ಎದುರು!ನನ್ನ ಬಳಿ ವಕೀಲನಿಲ್ಲದೂರ ಅರ್ಜಿ ಇಲ್ಲನನ್ನ ನಿಟ್ಟುಸಿರೆ ನನ್ನಯ ವಾದನೀ ಆಲಿಸ ಬಲ್ಲೆಯ ಈ ವಾದಕೊಡುವಿರೆ ನನಗೆ ನ್ಯಾಯಎಂದಾದರೊಮ್ಮೆ ನಾನಿಮ್ಮಲ್ಲಿಗೆ ಬಂದರೆಬಂಧಿಸುವಿರಿ ನನ್ನಅದು ಕೂಡ ನನ್ನವರಿಂದಲೇ ನನ್ನಕಾಡುತಿಹುದು ನನಗೆನಾ Hero ನ ಇಲ್ಲ zero ನ ಎಂದುನಾ ಒಬ್ಬನೇ ಬಂದರೆ ಈ ಗತಿ ನಿಮ್ಮದು ಇನ್ನೂ ದಂಡನ್ನು ಕಟ್ಟಿ ಬಂದರೆ ನಿಮಗ್ಯಾರ ದಿಕ್ಕಿನ್ನು ನನ್ನ ಅಪ್ಪನೇ ಈಶ್ವರನು ನನ್ನ ಅಮ್ಮನೇ ಪಾರ್ವತಿಯು ಯಾರ ಬಳಿ ನೀವು ಹೋಗುವಿರಿ ಇಡೀ ಭೂಮಂಡಲವೇ ನನ್ನದಲ್ಲವೇ..!!!ಇಲ್ಲವೇ ನನ್ನೊಂದಿಗೆ ರಾಜಿ ಮಾಡಿಕೊಳ್ಳಿ ನನ್ನನ್ನೊಮ್ಮೆ ದತ್ತು ತೆಗೆದುಕೊಳ್ಳಿ ಸಮಸ್ಯೆ ಬಗೆಹರಿದೀತು....ಹ ... ಹಾ... ಹಾ...!?***ವಿಧಿ ಗರ್ಭ ಸಂಜಾತ ***
06 Sep '24
1 ನಿಮಿಷದ ಓದು
ತತ್ವಶಾಸ್ತ್ರ
ಗಣಪ vs ಗಣಪ
ಕಾಡಿನಲ್ಲಿ ನಾ ಕಳೆದ ದಿನಗಳು (1/7)
ಕಾಡಿನಲ್ಲಿ ನಾ ಕಳೆದ ದಿನಗಳು (1/7)(ವೈಯಕ್ತಿಕ ಅನುಭವ)ಸಂಚಿಕೆ 1/6 ರ ಮುಂದುವರಿದ ಭಾಗ....ಬಹಳ ದಿನಗಳ ನಂತರ ನನಗೆ ಇಲಾಖಾ ವಾಹನದಲ್ಲಿ ಸಫಾರಿ ಮಾಡುವ ಅವಕಾಶ ಸಿಕ್ಕಿತ್ತು. ಅಂದು ನನ್ನೊಂದಿಗೆ ಇದ್ದವರು ಟೂರಿಸಂ ವಿಭಾಗದ ಸಿಂಹ ಧ್ವನಿಯ ಶ್ರೀನಿವಾಸ DyRfo ಮತ್ತು ಶಾಂತ ಸ್ವಭಾವದ ಫಾರೆಸ್ಟ ಗಾರ್ಡ್ ಶಿವಕುಮಾರ.ಮೊದಲ ದಿನ ನಾನು ನಾಗರಹೊಳೆಯ ಗಂಗೋತ್ರಿ ಅರಣ್ಯ ವಸತಿ ಗೃಹದಲ್ಲಿ ಉಳಿದಾಗ ಟೂರಿಸಂ ವಿಭಾಗದ ಶ್ರೀನಿವಾಸ DyRfo ಮತ್ತು ಫಾರೆಸ್ಟ ಗಾರ್ಡ್ ಶಿವಕುಮಾರ ರವರು ನನಗೆ ಪರಿಚಯ ಆದವರು . ಅವರ ಬಗ್ಗೆ ಸಣ್ಣ ಕಿರುಪರಿಚಯ ಮಾಡುವೆ. ಶ್ರೀನಿವಾಸ DyRfo ರವರದು ನೇರ ನುಡಿ ವ್ಯಕ್ತಿತ್ವ.ಇಲಾಖೆಯ ಒಳಹೊರಗು ಅರಿತ, ಅರಣ್ಯ ವೀಕ್ಷಕರ ಮತ್ತು ಅರಣ್ಯ ರಕ್ಷಕರ ಪರವಾಗಿ ಕೆಲಸ ಮಾಡಿದ ವ್ಯಕ್ತಿ. ಸಾಕಷ್ಟು ತಿಳುವಳಿಕೆಯುಳ್ಳ, ಅಷ್ಟೇ ಮುಂಗೋಪಿ ಸ್ವಭಾವದವ. ಇವರಲ್ಲಿ ನನ್ನನ್ನು ಹೆಚ್ಚು ಸೆಳೆದಿದ್ದು ಇವರು ವಾಕಿಟಾಕಿಯಲ್ಲಿ (ಅರಣ್ಯದಲ್ಲಿ ಸಂವಹನ ಮಾಡಲು ಬಳಸುವ ಉಪಕರಣ ) ಮಾತನಾಡುವ ಗತ್ತು. ಕೇಳಿದವರಿಗೆ ಮಾತ್ರವೇ ಗೊತ್ತು ಇದು ಸಿಂಹಧ್ವನಿ ಎಂದು.ಫಾರೆಸ್ಟ್ ಗಾರ್ಡ್ ಶಿವಕುಮಾರ್ ಈ ಹಿಂದೆ ಹುಲಿಕಲ್ ಗಸ್ತಿನಲ್ಲಿ ಕಳ್ಳಭೇಟೆ ತಡೆ ಶಿಬಿರ ದಲ್ಲಿ ಕೆಲಸ ಮಾಡಿದ್ದು ಇತ್ತೀಚಿಗೆ ಪ್ರವಾಸೋದ್ಯಮ ವಿಭಾಗಕ್ಕೆ ನಿಯೋಜನೆಗೊಂಡಿದ್ದರು. ನಾಗರಹೊಳೆ ಯಲ್ಲಿ ಉತ್ತಮ ಕೆಲಸಗಾರ ಎಂದು ಹೆಸರು ಸಹ ಮಾಡಿದ್ದರು. ಶಾಂತ ಸ್ವಭಾವದ ಸಂಭಾವಿತ ವ್ಯಕ್ತಿ.ಅಂದು ನಾಣ್ಣಚ್ಚಿ ಸಫಾರಿ ಗೇಟ್ ನಲ್ಲಿ ಸಫಾರಿಗೆ ಇಲಾಖೆ ವಾಹನದಲ್ಲಿ ಹೊರಟ ನಾವು ಸಿದ್ದಾಪುರ ಹಡ್ಲು - ನಾಗರಹೊಳೆ - ನಾಗಸರಕೆರೆ- ಕಾಯಿತೋಳೆಕೆರೆ - ಕುಂತುರು ಕೆರೆ- ನಾಗರಾಜಚೈನ್ ಗೇಟ್ ಮುಖೇನ ನಾಗರಹೊಳೆ ಶಾಖೆಯ ಬೈಸನ್ ರೋಡ್ -ಪಿಕಾಕ್ ಕೆರೆ - ದೊಡ್ಡ ಹಳ್ಳ ಭಾಗಗಳಲ್ಲಿ ಸುಮಾರು ಒಂದೂವರೆ ತಾಸು ಸುತ್ತಾಡಿದೆವು. ಮಳೆಯ ಸಿಂಚನ ಸಹ ನಮಗಾಗಿತ್ತು. ಸಾಕಷ್ಟು ಮರ ಗಿಡ ಪ್ರಾಣಿ ಪಕ್ಷಿ ಜಂತು ಗಳನ್ನು ಅವುಗಳು ಇರುವ ಸ್ಥಳದಲ್ಲೇ ನೋಡಿ ಖುಷಿ ಪಟ್ಟೆವು .ಅಂದಿನ ಪ್ರಕೃತಿ ನನಗೆ ಗೋಚರಿಸಿದಂತೆ ಮತ್ತು ನನ್ನಲ್ಲಿ ದರ್ಶನವಾದಂತೆ.... ಕಾವ್ಯದ ಪರಿಭಾಷೆ ಯಲ್ಲಿ.....ಕಾಡು ಚೆಂದ ನಾಡು ಚೆಂದಕಾಡಿದ್ದರೆ ನಾಡು ಇನ್ನು ಚೆಂದ ನಾವಿಲ್ಲದಿದ್ದರೆ ಕಾಡು ಇನ್ನೂ ಚೆಂದವೋ ಚೆಂದ ಚೆಂದಹೂವು ಚೆಂದ ಹಣ್ಣು ಚೆಂದ ಮರ ಗಿಡ ಬಳ್ಳಿ ಇನ್ನೂ ಚೆಂದ ಪ್ರಾಣಿ - ಪಕ್ಷಿ, ಕ್ರಿಮಿ -ಕೀಟಗಳಿದ್ದರೆ ಇನ್ನೂ ಚೆಂದವೋ ಚೆಂದ ಚೆಂದರವಿಯು ಚೆಂದ ಚಂದಿರನು ಚೆಂದನಕ್ಷತ್ರಗಳು ಇನ್ನೂ ಚೆಂದ ವಸುಂಧರೆಯ ಕಂದಮ್ಮಗಳು ಇನ್ನೂ ಚೆಂದವೋ ಚೆಂದ ಚೆಂದಇರುವೆಯು ಬೇಕು ಆನೆಯು ಬೇಕು ನಾಯಿಯು ಬೇಕು ನರಿಯು ಬೇಕು ಚಿಗರೆಯು ಬೇಕು ಚಿರತೆಯು ಬೇಕು ಗುಬ್ಬಿಯು ಬೇಕು ಗಿಡುಗನು ಬೇಕುಕೊನೆಗೊಮ್ಮೆ ಗೆದ್ದಲು ಹುಳು ಸಹ ಬೇಕೇ ಬೇಕು ಸಾಮರಸ್ಯದ ಪಾಠವ ಜಗಕ್ಕೆ ಸಾರಲು ಮನುಷ್ಯನಿಗೆ ಬುದ್ದಿ ಹೇಳಲುಅಂದು ಸಫಾರಿ ಮುಗಿಸಿ ಲಘುಬಗೆಯಲ್ಲಿ ಕ್ವಾಟ್ರಸ್ ಗೆ ಬಂದೆನು. ಅವರೊಂದಿಗೆ ಕಳೆದ ಆ ಕ್ಷಣಗಳು ನನಗೆ ಮರೆಯಲಾಗದ್ದು. ಮುಂದೊಂದು ದಿನ ಈ ಇಬ್ಬರೂ ವರ್ಗಾವಣೆಗೊಂಡು ಬೇರೆಡೆ ಹೋದರು. ಆದರೆ ಸ್ವಲ್ಪ ದಿನಗಳ ನಂತರ ಶ್ರೀನಿವಾಸ DyRfo ರವರು ಕಾಲನ ಕರೆಗೆ ಓಗೊಟ್ಟು ವಿಧಿವಶರಾದರು. ನಾನು ಈಗಲೂ ವಾಕಿಟಾಕಿಯಲ್ಲಿ ಆತನ ಗತ್ತಿನ ಸಂವಹನ ಶೈಲಿಯನ್ನು ನೆನೆಯುತ್ತಿರುತ್ತೀನಿ. ಆತ ತನಗೂ ತನ್ನ ಪ್ರೀತಿ ಪಾತ್ರದವರಿಗೂ ನೆನಪಿನ ಬುತ್ತಿ ಯನ್ನು ಕಟ್ಟಿಟ್ಟು ತಾನು ತಿನ್ನದೇ ಏಕಾಂಗಿಯಾಗಿ ತಿರುಗಿ ಬಾರದ ಊರಿಗೆ ಹೋಗಿಬಿಟ್ಟದ್ದೇ ವಿಪರ್ಯಾಸ. ******ಅದಾಗಲೇ ಮಳೆಗಾಲ ಮುಗಿದಿತ್ತು. ನನ್ನ ಗೋಣಿಗದ್ದೆ ಶಾಖೆ ಯಲ್ಲಿ 10 ಕಿ. ಮೀ. ಸಫಾರಿ ರೋಡ್ ಇದ್ದು ರಸ್ತೆಯ ಎರಡೂ ಬದಿ ಕಳೆ ತೆಗೆಯುವ ಕಾಮಗಾರಿ ಪ್ರಾರಂಭಗೊಂಡಿತ್ತು. ಇಲ್ಲಿ ಕೆಲಸ ಮಾಡುವವರು ಹಾಡಿ ( ಅರಣ್ಯದೊಳಗಿನ ಬುಡಕಟ್ಟು ಜನರ ವಸತಿ ಪ್ರದೇಶ ) ಜನರಾಗಿದ್ದರು. ಇಲಾಖೆ ನಿರ್ದೇಶನದ ಮೇಲೆ ಅವರು ಕಳೆ ತೆಗೆಯುತ್ತಲಿದ್ದರು. ಅವರಲ್ಲಿ ಒಬ್ಬಾಕೆ ಅಗ್ನಿಶಿಕೆ ಹೂ ಅನ್ನು ಮುಡಿದಿದ್ದು ನನ್ನ ಗಮನ ಸೆಳೆದಿತ್ತು. ಅದು ನಾಡಿನ ಹೂ ಆಗದೆ ಕಾಡಿನ ಹೂ ಆಗಿತ್ತು. ನಾನು ಆ ಕೆಲಸದ ಮೇಲ್ವಿಚಾರಣೆ ಮಾಡುತಲಿದ್ದೆ. ಅವರ ಬಗ್ಗೆ ಅರಿಯಲು ನನಗೆ ಒಂದು ಅವಕಾಶ ಒದಗಿ ಬಂದಿತ್ತು.(....ಮುಂದುವರಿಯುವುದು) *** ವಿಧಿ ಗರ್ಭ ಸಂಜಾತ***
03 Sep '24
2 ನಿಮಿಷದ ಓದು
ವೈಯಕ್ತಿಕ ಅಭಿಪ್ರಾಯ
ಕಾಡಿನಲ್ಲಿ ನಾ ಕಳೆದ ದಿನಗಳು (1/7)
ಕಾಡಿನಲ್ಲಿ ನಾ ಕಳೆದ ದಿನಗಳು (1/4)
ಕಾಡಿನಲ್ಲಿ ನಾ ಕಳೆದ ದಿನಗಳು (1/4)(ವೈಯಕ್ತಿಕ ಅನುಭವ)ಸಂಚಿಕೆ 1/3 ರ ಮುಂದುವರಿದ ಭಾಗ....ಅದೊಂದು ದಿನ ಮಧ್ಯಾಹ್ನ 3 ರ ಸಮಯ ಕಚೇರಿಯಿಂದ ನಮಗೆ ವಾಕಿಟಾಕಿಯಲ್ಲಿ ಕೋತೂರು ಭಾಗದಲ್ಲಿ ಹುಲಿಯೊಂದು ದನವನ್ನು ಕೊಂದಿದೆ ಎಂಬ ಸುದ್ದಿಯೊಂದಿಗೆ ಸ್ಥಳಕ್ಕೆ ಸಿಬ್ಬಂದಿರೊಂದಿಗೆ ತುರ್ತಾಗಿ ಹೋಗಲು ಕರೆಬಂದಿತ್ತು.ಕೋತೂರು ಎಂಬುದು ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಕಾನೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ಒಂದು ಸಣ್ಣ ಗ್ರಾಮ. ಹಾಗೂ ನಾಗರಹೊಳೆ ಹುಲಿಸಂರಕ್ಷಿತ ಪ್ರದೇಶದ ಗೋಣಿಗದ್ದೆ ಶಾಖೆಯ ಬೇರುಕೊಲ್ಲಿ ಗಸ್ತಿನ ಕಾಡಂಚಿನ ಒಂದು ಗ್ರಾಮ.ಇಲ್ಲಿಯ ದೇವಯ್ಯ ಎಂಬುವರ ದನ ಒಂದನ್ನು ಮಾರಿಗುಡಿ ದೇವಸ್ಥಾನದ ಸಮೀಪ ಕೆರೆಯ ಬಳಿ ನೀರು ಕುಡಿಯುವ ಸಂದರ್ಭದಲ್ಲಿ ಹುಲಿಯೊಂದು ಧಾಳಿ ಮಾಡಿ ಹತ್ಯೆ ಮಾಡಿರುತ್ತದೆ.ಲಘುಬಗೆಯಲ್ಲಿ ನಾನು , ಬೇರುಕೊಲ್ಲಿ ಗಸ್ತಿನ ಅರಣ್ಯ ರಕ್ಷಕ ಕೃಷ್ಣಮೂರ್ತಿ (ನಿವೃತ್ತ ಸೇನಾನಿ) ಹಾಗೂ ಬೇರುಕೊಲ್ಲಿ ಗಸ್ತಿನ ಕಳ್ಳಬೇಟೆ ತಡೆಯ ಸಿಬ್ಬಂದಿಗಳು ಇಲಾಖಾ ವಾಹನದಲ್ಲಿ ಘಟನೆ ಆದ ಸ್ಥಳಕ್ಕೆ ಹೋದೆವು.ಅದಾಗಲೇ ಜನಸ್ತೋಮ ನೆರೆದಿತ್ತು. ಪರಿಸ್ಥಿತಿ ಬಿಗಡಾಯಿಸುವ ರೀತಿಯಲ್ಲಿತ್ತು. ಅಲ್ಲಿಗೆ ಮತ್ತೊಂದು ವಾಹನದಲ್ಲಿ ಬಂದ RFO ಅರವಿಂದ ಸರ್ ರವರು ದನದ ಮಾಲೀಕ ಹಾಗೂ ನೆರೆದಿದ್ದ ಜನರೊಂದಿಗೆ ಬಹಳ ಸಂಯಮದಿಂದ ಮಾತಾಡಿ ಸರಕಾರದ ವತಿಯಿಂದ ಪರಿಹಾರ ಧನ ಕೊಡಿಸುವ ಭರವಸೆ ಮತ್ತು ಹುಲಿ ಹಿಡಿಯುವ ಕಾರ್ಯಾಚರಣೆ ಮಾಡುತ್ತೇವೆಂದು ಜನರಿಗೆ ಮನವರಿಕೆ ಮಾಡಿಕೊಟ್ಟ ಮೇಲೆಯೇ ನಾವು ಮುಂದಿನ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗಿದ್ದು.ನಾನು ಈ ತರಹದ ಕೇಸ್ ಅನ್ನು ಜೀವನದಲ್ಲಿ ಮೊದಲ ಬಾರಿಗೆ ಎದುರುಗೊಂಡಿದ್ದೆ. ನಾನು ಮೂಕ ಪ್ರೇಕ್ಷಕನಾಗಿ ಪ್ರತಿಯೊಂದನ್ನು ಸೂಕ್ಷ್ಮವಾಗಿ ಅವಲೋಕನ ಮಾಡುತ್ತಿದ್ದೆ. ಕೃಷ್ಣಮೂರ್ತಿ ಅರಣ್ಯ ರಕ್ಷಕ (ನಿವೃತ್ತ ಸೇನಾನಿ) ರವರೇ ಎಲ್ಲವನ್ನೂ ಅಚ್ಚುಕಟ್ಟಾಗಿ ನಿಭಾಯಿಸಿದರು.ನಮ್ಮ ಜೊತೆ ಪೊನ್ನಂಪೇಟೆ ಪ್ರಾದೇಶಿಕ ಅರಣ್ಯದ ಸಿಬ್ಬಂದಿಗಳು ಸಹ ಕೈಜೋಡಿಸಿದರು.ಅಂದು ನಾವು ಕೈಗೊಂಡ ಕ್ರಮಗಳು1) ಘಟನೆಯ ಬಗ್ಗೆ ಮಾಹಿತಿ ಸಿಕ್ಕ ಕೂಡಲೇ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದು2) ಎಷ್ಟು ಸಾಧ್ಯವೋ ಅಷ್ಟೂ ಬೇಗನೆ ಘಟನೆ ಸ್ಥಳಕ್ಕೆ ಸಾಕಷ್ಟು ಸಿಬ್ಬಂದಿಗಳೊಂದಿಗೆ ಹೋಗಿದ್ದು3)RFO ರವರು ಸಮಾಧಾನಚಿತ್ತದೊಂದಿಗೆ ಜನರಿಗೆ ಪರಿಹಾರ ಹಾಗೂ ಹುಲಿ ಹಿಡಿಯುವ ಕಾರ್ಯಾಚರಣೆ ಮಾಡಿಸುವ ಭರವಸೆ ನೀಡಿದ್ದು4) ಪಶು ವೈದ್ಯಾಧಿಕಾರಿಗಳಿಂದ ಸತ್ತ ದನದ ಮರಣೋತ್ತರ ಪರೀಕ್ಷೆ ಮಾಡಿಸಿದ್ದು5) ಸತ್ತ ದನದ ಕಳೆಬರದ ಜಾಗದಲ್ಲಿ ಕ್ಯಾಮೆರಾಗಳನ್ನು ಅಳವಡಿಸಿದ್ದು6) ಒಂದು ವಾರದ ಅವಧಿಯ ವರೆಗೂ ಹಗಲು ಮತ್ತು ರಾತ್ರಿ ಈ ಭಾಗದಲ್ಲಿ ಸಿಬ್ಬಂದಿಗಳನ್ನು ನಿಯೋಜಿಸಿದ್ದು7) ಘಟನಾ ನಡೆದ ಪ್ರದೇಶದ ಸುತ್ತ ಮುತ್ತ ಕೂಂಬಿಂಗ್ ಕಾರ್ಯಾಚರಣೆ ಮಾಡಿದ್ದುಆ ಘಟನೆಯ ನಂತರ ಹುಲಿಯು ಮತ್ತೆ ಆ ಜಾಗಕ್ಕೆ ಬರಲಿಲ್ಲ ಹಾಗೂ ಕ್ಯಾಮೆರಾದಲ್ಲೂ ದಾಖಲಾಗಲಿಲ್ಲ. ಆದ್ದರಿಂದ ಹುಲಿ ಹಿಡಿಯಲು ಬೋನ್ ಅಳವಡಿಕೆ ಅಲ್ಲಿ ಮಾಡಲಿಲ್ಲ. ಆದರೆ ನನ್ನಲ್ಲಿ ಹುಲಿ ಅಲ್ಲಿಗೆ ಹೇಗೆ ಬಂದಿತು? ಏಕೆ ಜಾನುವಾರು ಅನ್ನು ಕೊಂದಿತು? ಮತ್ತೆ ಏಕೆ ಅಲ್ಲಿಗೆ ಪುನಹಃ ಬರಲಿಲ್ಲ?... ಎಂಬಿತ್ಯಾದಿ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದು ಬಿಟ್ಟವು.ಈ ಘಟನೆ ಮಾಸುವ ಮೊದಲೇ ಅಂದಿನ RFO ಅರವಿಂದ ಸರ್ ರವರು ಮತ್ತು ಕೃಷ್ಣಮೂರ್ತಿ ಅರಣ್ಯ ರಕ್ಷಕ (ನಿವೃತ್ತ ಸೇನಾನಿ) ರವರು ವರ್ಗಾವಣೆಗೊಂಡಿದ್ದರು .ಮತ್ತು ನನಗೆ ಪ್ರಭಾರ ವಹಿಸಿಕೊಟ್ಟ ರಾಮ್ ಸಿಂಗ್ ರವರು ಸಹ ನಿವೃತ್ತರಾಗಿದ್ದರು.ರಾಮ್ ಸಿಂಗ್ ರವರು ಸುಧೀರ್ಘ 15 ವರ್ಷಕ್ಕಿಂತಲೂ ಮೇಲ್ಪಟ್ಟು ನಾಗರಹೊಳೆಯಲ್ಲಿ ಕೆಲಸ ನಿರ್ವಹಿಸಿದ್ದ ಅಪಾರ ಅನುಭವಿಗಳು. ನಾನೂ ಸಹ ನಾಗರಹೊಳೆಯಲ್ಲಿನ ಕ್ವಾಟ್ರಸ್ ಖಾಲಿ ಮಾಡಿ ಕೃಷ್ಣಮೂರ್ತಿ ಅರಣ್ಯ ರಕ್ಷಕ ರವರು ವಾಸಿಸುತ್ತಿದ್ದ ಲಕ್ಕುಂದದ ಅರಣ್ಯ ಇಲಾಖಾ ಕ್ವಾಟ್ರಸ್ ಗೆ ವಾಸ್ತವ್ಯ ಬದಲಾಯಿಸಿದ್ದೆ.ಇಲ್ಲಿ ನನ್ನ ಅಡುಗೆಯನ್ನು ನಾನೇ ಮಾಡಿಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ಇತ್ತು.ಸುತ್ತ ಮುತ್ತ ಯಾವುದೇ ಹೋಟೆಲ್ ಸಹ ಇರಲಿಲ್ಲ. *******ಈ ಜಂಜಾಟ ಎಲ್ಲಾ ಮುಗಿಯುವುದರೊಳಗೆ ಸರಿಸುಮಾರು 1 ತಿಂಗಳು ಕಳೆದು ಹೋಗಿತ್ತು. ಮನೆಯವರೊಂದಿಗೆ ದಿನ ನಿತ್ಯ 2G ಕೀ ಪ್ಯಾಡ್ ನಲ್ಲೇ ಸಂವಹನ ನಡೆದಿತ್ತು.RFO ಅರವಿಂದ್ ಸರ್ ವರ್ಗಾವಣೆಯಾಗಿ ಹೋಗುವ ಮೊದಲು ನನಗೆ 4 ದಿನ ರಜೆಯನ್ನಿತ್ತರು. ಮೊದಲ ಬಾರಿಗೆ ಅಷ್ಟೊಂದು ದಿನಗಳನ್ನು ಮಡದಿ ಮಕ್ಕಳ ಮುಖನೋಡದೆ ಕಳೆದಿದ್ದೆ ನಾ ನನ್ನ ಜೀವಿತದಲ್ಲಿ. ಅವರನ್ನು ಕಾಣಲೇಬೇಕೆಂಬ ಉತ್ಕಟತೆ, ಮನದ ತುಡಿತ ಮೇರೆ ಮೀರಿತ್ತು ಅಂದು ನನಗೆ ...ನಾ ಹೊರಟಿದ್ದೆ ಊರಿಗೆ....!!!(....ಮುಂದುವರಿಯುವುದು) *** ವಿಧಿ ಗರ್ಭ ಸಂಜಾತ***
31 Aug '24
3 ನಿಮಿಷದ ಓದು
ವೈಯಕ್ತಿಕ ಅಭಿಪ್ರಾಯ
ಕಾಡಿನಲ್ಲಿ ನಾ ಕಳೆದ ದಿನಗಳು (1/4)

ಸಾಮಾಜಿಕ ಮಾಧ್ಯಮಗಳಲ್ಲಿ ಫಾಲೋ ಮಾಡಿ